ದಿನದ ಸುದ್ದಿ
ನಾಡಿನೆಲ್ಲೆಡೆ ಗೌರಿ-ಗಣೇಶ ಸಂಭ್ರಮ
ಇಂದು ಗೌರಿ ಹಬ್ಬ. ರಾಜ್ಯದೆಲ್ಲೆಡೆ ಗೌರಿ-ಗಣೇಶ ಹಬ್ಬದ (Gauri Ganesh Festival ) ಸಂಭ್ರಮ ಕಂಡು ಬರುತ್ತಿದೆ. ವ್ಯಾಪಕ ಮಳೆ ಮತ್ತು ಪ್ರವಾಹದ ನಡುವೆಯೂ ಹಬ್ಬಕ್ಕಾಗಿ ಗೌರಿ ಮತ್ತು ಗಣೇಶ ಮೂರ್ತಿಗಳ ಖರೀದಿ ನಡೆಯುತ್ತಿದೆ. ವಿಶೇಷವಾಗಿ ಮಣ್ಣಿನ ಮತ್ತು ಪರಿಸರ ಸ್ನೇಹಿ ಮೂರ್ತಿಗಳ ಮಾರಾಟ ಹೆಚ್ಚಾಗಿದೆ. ಹಬ್ಬಕ್ಕೆ ಅಗತ್ಯವಾಗಿರುವ ವಸ್ತುಗಳ ಖರೀದಿ ಮತ್ತು ಮಾರಾಟ ಜೋರಾಗಿದೆ.
ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲಿ ಹಬ್ಬಕ್ಕಾಗಿ ಹೂವು, ಹಣ್ಣು ಮತ್ತಿತರ ವಸ್ತುಗಳ ಖರೀದಾಗಿ ಜನ ಮುಗಿ ಬಿದ್ದಿದ್ದಾರೆ. ಮಾರುಕಟ್ಟೆಯ ಗಿಜಿಗುಡುವ ವಾತಾವರಣದಲ್ಲಿ ಖರೀದಿ ಭರಾಟೆ ಜೋರಾಗಿದೆ. ಮಾರುಕಟ್ಟೆ ಆಸುಪಾಸಿನಲ್ಲಿ ಬೆಳಿಗ್ಗೆ 4 ಗಂಟೆಯಿಂದಲೇ ವಾಹನ ದಟ್ಟಣೆ ಕಂಡು ಬಂತು. ಮಲ್ಲೇಶ್ವರಂ, ಜಯನಗರ ಮತ್ತಿತರ ಪ್ರದೇಶಗಳಲ್ಲೂ ಸಹ ಹಬ್ಬದ ಸಡಗರ ಕಂಡು ಬಂದಿದೆ.
ಮೈಸೂರಿನಲ್ಲಿ ಕುಶಲ ಕರ್ಮಿಗಳು ಗೌರಿ ಹಬ್ಬದಂದು ಬಾಗಿನ ನೀಡಲು ಬಳಸುವ ’ಗೌರಿ ಮೊರ’ ತಯಾರಿಕೆಯಲ್ಲಿ ತೊಡಗಿದ್ದಾರೆ. ಹಬ್ಬದ ದಿನದಂದು ಗೌರಿ ಮೊರದಲ್ಲಿ ಧಾನ್ಯ, ಬೆಲ್ಲ ಇತ್ಯಾದಿ ವಸ್ತುಗಳನ್ನು ತುಂಬಿ ಬಾಗಿನ ಅರ್ಪಿಸುವ ಸಂಪ್ರದಾಯ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹೀಗಾಗಿ ಬಿದಿರಿನ ಮೊರಕ್ಕೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ.
ಕಾರ್ಮಿಕರಾದ ಪಾರ್ವತಿ, ಸುಮಾರು ೧೫ ವರ್ಷಗಳಿಂದ ಬುಟ್ಟಿ ಹೆಣೆಯುತ್ತಿದ್ದು, ಗೌರಿ ಹಬ್ಬ ಸಂದರ್ಭದಲ್ಲಿ ಉತ್ತಮ ಬೇಡಿಕೆ ಬರುತ್ತದೆ ಎಂದರು.
ಮತ್ತೋರ್ವ ಕಾರ್ಮಿಕರಾದ ಭಾಗ್ಯಮ್ಮ ಮಾತನಾಡಿ, ಗೌರಿಗೆ ಮೊರದಲ್ಲಿ ಬಾಗಿನ ಅರ್ಪಿಸುವುದರಿಂದ ಈ ಹಬ್ಬದ ವೇಳೆ ಬೇಡಿಕೆ ಹೆಚ್ಚಾಗಿದೆ ಎಂದರು.
ಗ್ರಾಹಕರಾದ ಮೋನಿಕಾ ಈಗಲೂ ಸಂಪ್ರದಾಯಬದ್ಧವಾಗಿ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ. ಹಬ್ಬದ ವೇಳೆ ವಿವಿಧ ಬುಟ್ಟಿಗಳ ಮೂಲಕ ಬಾಗಿನ ಅರ್ಪಿಸುತ್ತೇವೆ ಎಂದರು.
ಶುಭ ಎಂಬವರು ಮಾತನಾಡಿ, ಗೌರಿ-ಗಣೇಶ ಹಬ್ಬದಂದು ಬಿದಿರಿನ ಬುಟ್ಟಿಗಳನ್ನು ಬಳಕೆ ಮಾಡಲಾಗುತ್ತದೆ. ಹೀಗಾಗಿ ಗೌರಿ ಮೊರವನ್ನು ಖರೀದಿಸುತ್ತಿದ್ದೇವೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಪಾದಕೀಯ | ಚುನಾವಣೆಗಳಲ್ಲಿ ಹಣ ಮತ್ತು ಜಾತಿ
~ಗೋವರ್ಧನ ನವಿಲೇಹಾಳು
ಭಾರತದ ಪ್ರಜಾಪ್ರಭುತ್ವವು ವಿಶ್ವದ ಅತಿದೊಡ್ಡ ಚುನಾವಣಾ ಪ್ರಯೋಗಶಾಲೆಯಾಗಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಕೋಟಿಗಟ್ಟಲೆ ಮತದಾರರು ತಮಗೆ ಅರ್ಹವೆನಿಸಿದ ಪ್ರತಿನಿಧಿಯನ್ನು ಆಯ್ಕೆಯನ್ನು ಮಾಡುತ್ತಾರೆ. ಹಾಗೆಯೇ ಪ್ರಜಾ ಪ್ರಭುತ್ವದ ಪ್ರಯೋಗಶಾಲೆಯಾದ ಭಾರತದ ಚುನಾವಣೆಗಳನ್ನು ಹಣ ಮತ್ತು ಜಾತಿಗಳು ನಿಯಂತ್ರಿಸುತ್ತಿವೆ ಎಂಬುದು ಕರಾಳ ಸತ್ಯ.
ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತವೆ ಮತ್ತು ಖರೀದಿಸುತ್ತಿವೆ. ಇದು ಕೇವಲ ಒಂದು ತಾತ್ಕಾಲಿಕ ಸಮಸ್ಯೆಯಲ್ಲ; ಇದು ಪ್ರಜಾಪ್ರಭುತ್ವದ ಮೂಲ ತತ್ತ್ವಗಳನ್ನೇ ಕೊಲ್ಲುತ್ತಿರುವ ದೀರ್ಘಕಾಲಿಕ ಕ್ಯಾನ್ಸರ್. ಒಂದು ದಿನಪತ್ರಿಕೆಯ ಸಂಪಾದಕನಾದ ನಾನು ಈ ಸಂಪಾದಕೀಯದ ಮೂಲಕ ಹಣ ಮತ್ತು ಜಾತಿ ಎಂಬ ಎರಡು ಶಕ್ತಿಗಳು ಹಾಗೂ ದೌರ್ಬಲ್ಯಗಳನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಲು ಬಯಸುತ್ತೇನೆ. ಇದು ಕೇವಲ ಟೀಕೆಯಲ್ಲ; ಎಚ್ಚರಿಕೆಯೂ ಹೌದು.
ಭಾರತದ ಚುನಾವಣೆಗಳ ವೆಚ್ಚವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. 2019ರ ಲೋಕಸಭಾ ಚುನಾವಣೆಗೆ ಸರ್ಕಾರಿ ಲೆಕ್ಕದ ಪ್ರಕಾರ 60,000 ಕೋಟಿ ರುಪಾಯಿ ವೆಚ್ಚವಾಗಿದ್ದರೆ, 2024ರ ಚುನಾವಣೆಯಲ್ಲಿ ಇದು ಒಂದು ಲಕ್ಷ ಕೋಟಿ ರುಪಾಯಿಗಳನ್ನು ಮೀರಿದೆ ಎಂದು ಅಂಕಿಅಂಶಗಳು ಹೇಳುತ್ತವೆ. ಆದರೆ ನಿಜವಾದ ವೆಚ್ಚ ಇನ್ನೂ ಹೆಚ್ಚು. ಪ್ರತಿ ಅಭ್ಯರ್ಥಿಯು ಒಂದು ಕ್ಷೇತ್ರದಲ್ಲಿ ಕನಿಷ್ಠ 10-20 ಕೋಟಿ ರುಪಾಯಿ ಖರ್ಚು ಮಾಡುತ್ತಾನೆ. ಇದಕ್ಕೆ ಕಾರಣ ಸರಳವಾಗಿದೆ, ಮತದಾರರನ್ನು ‘ಕೊಳ್ಳುವುದು’. ಚುನಾವಣಾ ಆಯೋಗದ ನಿಯಮಗಳು ಎಷ್ಟೇ ಕಟ್ಟುನಿಟ್ಟಾಗಿದ್ದರೂ, ಕಪ್ಪು ಹಣದ ಪ್ರವಾಹವನ್ನು ತಡೆಯಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಎಲೆಕ್ಟ್ರಾಲ್ ಬಾಂಡ್‌ಗಳು ತಾತ್ಕಾಲಿಕವಾಗಿ ಪಾರದರ್ಶಕತೆಯ ಮುಸುಕು ಹಾಕಿದ್ದಾವೆ. ಆದರೆ ಸುಪ್ರೀಂ ಕೋರ್ಟ್ ಅವುಗಳನ್ನು ಅಸಂವಿಧಾನಿಕ ಎಂದು ತೀರ್ಪು ನೀಡಿದ ನಂತರವೂ, ಕಾರ್ಪೊರೇಟ್‌ಗಳು ಮತ್ತು ಉದ್ಯಮಪತಿಗಳು ಬೇರೆ ಬೇರೆ ಮಾರ್ಗಗಳ ಮೂಲಕ ಹಣ ಸುರಿಸುತ್ತಲೇ ಇದ್ದಾರೆ. ಫಲಿತಾಂಶ? ಶ್ರೀಮಂತ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮಾತ್ರ ಸ್ಪರ್ಧಿಸುತ್ತಾರೆ. 2024ರ ಲೋಕಸಭೆಯಲ್ಲಿ ಸರಾಸರಿ ಅಭ್ಯರ್ಥಿಯ ಆಸ್ತಿ 5 ಕೋಟಿ ರುಪಾಯಿಗಳಿಗಿಂತ ಹೆಚ್ಚಿತ್ತು.
ಜನಪ್ರತಿನಿಧಿಯಾಗುವುದು ಇಂದು ಉದ್ಯೋಗವಾಗಿದೆ, ಸೇವೆಯಲ್ಲ. ಹಣವು ಕೇವಲ ವೆಚ್ಚವಲ್ಲ; ಅದು ಅಧಿಕಾರದ ಹಂಚಿಕೆಯನ್ನೂ ನಿರ್ಧರಿಸುತ್ತದೆ. ಪಕ್ಷಗಳು ‘ಕ್ಯಾಷ್ ಫಾರ್ ವೋಟ್’ ಯೋಜನೆಗಳನ್ನು ಅನುಸರಿಸುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಒಂದು ಮನೆಗೆ 500 ರಿಂದ 2000 ರುಪಾಯಿ, ನಗರಗಳಲ್ಲಿ ಮೊಬೈಲ್ ರೀಚಾರ್ಜ್, ಸೈಕಲ್, ಟಿವಿ – ಇವೆಲ್ಲವೂ ಹಣದ ರೂಪದಲ್ಲಿ ಹಂಚಿಕೆಯಾಗುತ್ತವೆ. ಚುನಾವಣಾ ಆಯೋಗವು ರೇಡ್ ನಡೆಸುತ್ತದೆ, ಆದರೆ ಹಣದ ಹರಿವು ನಿಲ್ಲುವುದಿಲ್ಲ. ಇದರ ಫಲಿತಾಂಶವಾಗಿ ಜನರ ಸಮಸ್ಯೆಗಳು – ಬಡತನ, ಉದ್ಯೋಗ, ಶಿಕ್ಷಣ – ಮರೆಯುತ್ತವೆ. ಅಭ್ಯರ್ಥಿಯು ‘ನಾನು ಏನು ಮಾಡುತ್ತೇನೆ’ ಎಂದು ಹೇಳುವ ಬದಲು ‘ನಾನು ಎಷ್ಟು ಕೊಡುತ್ತೇನೆ’ ಎಂದು ಪ್ರಚಾರ ಮಾಡುತ್ತಾನೆ. ಇದು ಜನತಂತ್ರವಲ್ಲ; ಇದು ಹಣತಂತ್ರ.
ಇನ್ನು ಜಾತಿಯ ಸುಳಿಯನ್ನು ಚರ್ಚಿಸುವುದಾದರೆ, ಭಾರತದಲ್ಲಿ ಜಾತಿ ಎಂದರೆ ಕೇವಲ ಸಾಮಾಜಿಕ ವ್ಯವಸ್ಥೆಯಲ್ಲ; ಅದು ರಾಜಕೀಯ ಗಣಿತದ ಮೂಲಭೂತ ಸೂತ್ರ. ಕರ್ನಾಟಕದಲ್ಲಿ ಮಾತ್ರವಲ್ಲ, ಉತ್ತರ ಪ್ರದೇಶ, ಬಿಹಾರ, ತಮಿಳುನಾಡು – ಎಲ್ಲೆಡೆ ಜಾತಿ ಸಮೀಕ್ಷೆಗಳು, ಜಾತಿ ಆಧಾರಿತ ಟಿಕೆಟ್ ಹಂಚಿಕೆ ಮತ್ತು ಜಾತಿ ಬ್ಯಾಂಕ್‌ಗಳು ಚುನಾವಣೆಗಳನ್ನು ನಿರ್ಧರಿಸುತ್ತವೆ.
ಕರ್ನಾಟಕದಲ್ಲಿ ಲಿಂಗಾಯತ, ಒಕ್ಕಲಿಗ, ದಲಿತ, ಮುಸ್ಲಿಂ – ಈ ಜಾತಿ ಬ್ಲಾಕ್‌ಗಳನ್ನು ಲೆಕ್ಕ ಹಾಕದೆ ಯಾವುದೇ ಪಕ್ಷ ಗೆಲ್ಲಲಾರದು. ಪಕ್ಷಗಳು ಜಾತಿ ನಾಯಕರನ್ನು ‘ಖರೀದಿಸುತ್ತವೆ’. ಒಂದು ಜಾತಿಯ ನಾಯಕನಿಗೆ ಟಿಕೆಟ್ ಕೊಟ್ಟರೆ ಆ ಜಾತಿಯ 70-80% ಮತಗಳು ಬರುತ್ತವೆ ಎಂಬ ಲೆಕ್ಕ. ಇದು ಜನರನ್ನು ವ್ಯಕ್ತಿಗಳಾಗಿ ನೋಡುವುದಿಲ್ಲ; ಅವರನ್ನು ಜಾತಿ ಬ್ಯಾಂಕ್‌ಗಳಾಗಿ ಪರಿವರ್ತಿಸುತ್ತದೆ.
ಜಾತಿ ರಾಜಕಾರಣವು ಮೀಸಲಾತಿಯನ್ನು ದುರುಪಯೋಗಪಡಿಸಿಕೊಂಡಿದೆ. ಸಂವಿಧಾನದಲ್ಲಿ ಮೀಸಲಾತಿ ಸಾಮಾಜಿಕ ನ್ಯಾಯಕ್ಕಾಗಿ ಇದೆ. ಆದರೆ ಇಂದು ಅದು ಅಧಿಕಾರದ ಲಾಭಕ್ಕಾಗಿ ಬಳಸಲಾಗುತ್ತಿದೆ. ಜಾತಿ ಸಮೀಕ್ಷೆಯ ಬೇಡಿಕೆಗಳು ಹೆಚ್ಚುತ್ತಿವೆ. ಕರ್ನಾಟಕದಲ್ಲಿ ಕೂಡ ಜಾತಿ ಸಮೀಕ್ಷೆಯ ವಿವಾದ ಎಲ್ಲರಿಗೂ ತಿಳಿದಿದೆ. ಇದು ನಿಜವಾಗಿಯೂ ಸಾಮಾಜಿಕ ನ್ಯಾಯವೇ? ಅಥವಾ ಹೆಚ್ಚು ಮೀಸಲಾತಿ ಬೇಡುವ ಮೂಲಕ ಅಧಿಕಾರ ಹಂಚಿಕೊಳ್ಳುವ ರಾಜಕೀಯ ತಂತ್ರವೇ? ಜಾತಿ ಆಧಾರಿತ ರಾಜಕಾರಣವು ಮೆರಿಟ್ ಅನ್ನು ಕೊಲ್ಲುತ್ತದೆ. ಯೋಗ್ಯರಾದ ಯುವಕರು ಅಥವಾ ಮಹಿಳೆಯರು ಜಾತಿ ಲೆಕ್ಕವಿಲ್ಲದೆ ಅವಕಾಶ ಪಡೆಯುವುದಿಲ್ಲ. ಇದು ದೇಶದ ಅಭಿವೃದ್ಧಿಯನ್ನು ಹಿಂದಕ್ಕೆ ಎಳೆಯುತ್ತದೆ.
ಹಣ ಮತ್ತು ಜಾತಿ ಒಂದರೊಂದು ಪೂರಕವಾಗಿ ಕೆಲಸ ಮಾಡುತ್ತವೆ. ಹಣವು ಜಾತಿ ನಾಯಕರನ್ನು ಖರೀದಿಸುತ್ತದೆ. ಜಾತಿ ನಾಯಕರು ಹಣದಿಂದ ಮತಗಳನ್ನು ಖರೀದಿಸುತ್ತಾರೆ. ಒಂದು ಸಣ್ಣ ಗುಂಪು ಅಧಿಕಾರವನ್ನು ತನ್ನ ಕೈಯಲ್ಲಿ ಇಟ್ಟುಕೊಳ್ಳುತ್ತದೆ. ಸಾಮಾನ್ಯ ಜನರು ಕೇವಲ ಮತದಾರರಾಗಿ ಉಳಿಯುತ್ತಾರೆ, ನಿರ್ಣಾಯಕರಾಗುವುದಿಲ್ಲ. ಇದರಿಂದಾಗಿ ಭ್ರಷ್ಟಾಚಾರ ಹೆಚ್ಚುತ್ತದೆ. ಅಧಿಕಾರಕ್ಕೆ ಬಂದವರು ತಮ್ಮ ಹೂಡಿಕೆಯನ್ನು ತಿರುಗಿಸಿಕೊಳ್ಳುತ್ತಾರೆ. ರಸ್ತೆಗಳು, ಆಸ್ಪತ್ರೆಗಳು, ಶಾಲೆಗಳು – ಇವುಗಳ ಬದಲು ಅಭಿವೃದ್ಧಿ ಕೇವಲ ಫೋಟೋ ,ವಿಡಿಯೋಗಳಲ್ಲಿ ಉಳಿಯುತ್ತವೆ
ಈ ಸಮಸ್ಯೆಯನ್ನು ತೊಡೆದುಹಾಕಲು ಏನು ಮಾಡಬಹುದು? ಮೊದಲು ಚುನಾವಣಾ ಆಯೋಗವು ಹೆಚ್ಚು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಎಲ್ಲಾ ಅಭ್ಯರ್ಥಿಗಳ ಆಸ್ತಿ ಮತ್ತು ವೆಚ್ಚದ ಪಾರದರ್ಶಕ ಲೆಕ್ಕಪತ್ರವನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಬೇಕು. ರಾಜ್ಯ ಆರ್ಥಿಕ ನೆರವು (ಸ್ಟೇಟ್ ಫಂಡಿಂಗ್ ಆಫ್ ಎಲೆಕ್ಷನ್ಸ್) ಅನ್ನು ಜಾರಿಗೊಳಿಸಬೇಕು. ಕಾರ್ಪೊರೇಟ್ ದಾನಗಳಿಗೆ ಕಟ್ಟುಪಾಡು ಬೇಕು. ಜಾತಿ ರಾಜಕಾರಣಕ್ಕೆ ಎದುರಾಗಿ ‘ಜಾತಿ-ಮುಕ್ತ’ ಅಭ್ಯರ್ಥಿ ಆಯ್ಕೆಯನ್ನು ಪ್ರೋತ್ಸಾಹಿಸಬೇಕು. ಜಾತಿ ಸಮೀಕ್ಷೆಗಳು ನಡೆಯಬೇಕು, ಆದರೆ ಅದನ್ನು ಅಧಿಕಾರದ ಲಾಭಕ್ಕಾಗಿ ಬಳಸಬಾರದು. ಶಿಕ್ಷಣ ಮತ್ತು ಆರ್ಥಿಕ ಸಬಲೀಕರಣದ ಮೂಲಕ ಜಾತಿ ಆಧಾರಿತ ರಾಜಕಾರಣವನ್ನು ಕ್ರಮೇಣ ಕಡಿಮೆ ಮಾಡಬೇಕು.
ಜನರು ಈಗ ಎಚ್ಚರಗೊಳ್ಳಬೇಕು. ಮತವನ್ನು ಹಣಕ್ಕಾಗಿ ಅಥವಾ ಜಾತಿಗಾಗಿ ಮಾರಾಟ ಮಾಡುವುದು ಸ್ವಯಂ ವಿನಾಶಕ್ಕೆ ದಾರಿ. ಪ್ರಜಾಪ್ರಭುತ್ವವು ಜನರ ಕೈಯಲ್ಲಿದೆ. ಅದನ್ನು ಹಣ ಮತ್ತು ಜಾತಿಯ ಕೈಗೆ ಬಿಟ್ಟರೆ ನಾವು ನಮ್ಮ ಭವಿಷ್ಯವನ್ನೇ ಮಾರಿಕೊಳ್ಳುತ್ತೇವೆ. ಪತ್ರಿಕೆಗಳು, ಸಾಮಾಜಿಕ ಮಾಧ್ಯಮಗಳು ಮತ್ತು ನಾಗರಿಕ ಸಂಘಟನೆಗಳು ಈ ವಿಷಯವನ್ನು ಸತತವಾಗಿ ಚರ್ಚಿಸಬೇಕು. ಚುನಾವಣೆಗಳು ಕೇವಲ ಅಧಿಕಾರದ ಬದಲಾವಣೆಯಲ್ಲ; ಅವು ನಮ್ಮ ಸಮಾಜದ ದರ್ಶನವನ್ನು ನಿರ್ಧರಿಸುತ್ತವೆ.
ಇಂದು ನಾವು ಎದುರಿಸುತ್ತಿರುವುದು ಕೇವಲ ಒಂದು ಚುನಾವಣಾ ಸಮಸ್ಯೆಯಲ್ಲ; ಇದು ಭಾರತದ ಆತ್ಮದ ಸಮಸ್ಯೆ. ಹಣ ಮತ್ತು ಜಾತಿಯನ್ನು ಮೀರಿ ನಿಲ್ಲುವ ನಾಯಕರು ಬರಬೇಕು. ಅವರು ಜನರ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅಲ್ಲಿಯವರೆಗೂ ನಮ್ಮ ಪ್ರಜಾಪ್ರಭುತ್ವವು ಕೇವಲ ಹೆಸರಿನಲ್ಲಿ ಮಾತ್ರ ಉಳಿಯುತ್ತದೆ. ಜನತೆ ಎಚ್ಚರದಿಂದಿರಲಿ. ಇದು ನಮ್ಮ ದೇಶ, ನಮ್ಮ ಭವಿಷ್ಯ.
ಸುದ್ದಿದಿನ | ವಾಟ್ಸಾಪ್ | 9980346243

ದಿನದ ಸುದ್ದಿ
ಉಪಚುನಾವಣೆ | ಕಾಂಗ್ರೆಸ್ ಗೆ ನಿರೀಕ್ಷೆಗೂ ಮೀರಿ ಜನಬೆಂಬಲ : ಸಿಎಂ ಸಿದ್ದರಾಮಯ್ಯ
ಸುದ್ದಿದಿನ,ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಜನಸ್ಪಂದನೆ ದೊರೆಯುತ್ತಿದ್ದು, ಅಭಿವೃದ್ಧಿ ಮಾಡದ ಬಿಜೆಪಿಯ ಸತ್ಯವನ್ನು ಜನರು ಅರಿತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ದಾವಣಗೆರೆಯ ಎಂ.ಬಿ.ಎ ಕಾಲೇಜು ಆವರಣ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಜನಸ್ಪಂದನೆ ದೊರೆಯುತ್ತಿದೆ. ಬಿಜೆಪಿಯವರು ನಾಲ್ಕು ವರ್ಷದಲ್ಲಿ ಯಾವ ಅಭಿವೃದ್ಧಿಯನ್ನು ಮಾಡದೇ, ರಾಜ್ಯವನ್ನು ಲೂಟಿ ಮಾಡಿದ್ದಾರೆ ಎಂಬ ಸತ್ಯವನ್ನು ಜನರು ಅರಿತಿದ್ದಾರೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜಾರಿಯಾಗುತ್ತಿದ್ದು, ಬಿಜೆಪಿಯವರ ಸುಳ್ಳುಗಳ ನಡುವೆಯೂ ಜನ ನಮ್ಮನ್ನು ನಂಬಿದ್ದಾರೆ. ರಾಜ್ಯದಲ್ಲಿ ಯಾವುದೇ ಚುನಾವಣೆಯ ನಂತರ ಗ್ಯಾರಂಟಿಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಬಿಜೆಪಿಯವರು ಅಪಪ್ರಚಾರ ಮಾಡಿದರೂ, ನಮ್ಮ ಗ್ಯಾರಂಟಿಗಳು ನಿರಂತರವಾಗಿ ಮುಂದುವರಿದಿದೆ. ಇದಕ್ಕಾಗಿ 52000 ಕೋಟಿ ಮೀಸಲಿಟ್ಟಿದ್ದು, ಇದುವರೆಗೆ 1,31,000 ಕೋಟಿ ರೂಗಳನ್ನು ವೆಚ್ಚ ಮಾಡಲಾಗಿದೆ ಎಂದರು.
ಕೇಂದ್ರದಿಂದ ರಾಜ್ಯಕ್ಕೆ ನ್ಯಾಯಬದ್ಧ ಅನುದಾನ ದೊರೆತಿಲ್ಲ
ಸಾಲದ ರಾಮಯ್ಯ ಎಂದು ತನ್ನನ್ನು ಟೀಕೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ರಾಜ್ಯ ಸರ್ಕಾರ ಮಿತಿಯೊಳಗೆ ಸಾಲ ಮಾಡಬೇಕು. ಆರ್ಥಿಕ ಹೊಣೆಗಾರಿಕೆ ಕಾಯ್ದೆಯ ಮಾನದಂಡದಂತೆ, ರಾಜ್ಯದ ಜಿಡಿಪಿಯ ಶೇ. 25 ರ ಮಿತಿಯೊಳಗೆ ಸಾಲದ ಮೊತ್ತವಿದೆ. ನಮ್ಮ ವಿತ್ತೀಯ ಕೊರತೆ 2.95 ರಷ್ಟಿದೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ನ್ಯಾಯಬದ್ಧ ಅನುದಾನಗಳು ಬರದ ಕಾರಣ, ರೆವಿನ್ಯೂ ಸರ್ಪ್ಲಸ್ ಸಾಧಿಸಲು ಸಾಧ್ಯವಾಗಲಿಲ್ಲ. ಬಿಹಾರ ಚುನಾವಣೆಯ ಸಂಬಂಧ ಜಿಎಸ್ ಟಿ ದರವನ್ನು ಕಡಿತಗೊಳಿಸಿದರು. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ 10,000 ಕೋಟಿ ನಷ್ಟವಾಗಿದೆ. ಜಿಎಸ್ ಟಿ ಕಡಿತದ ಮುಂಚೆ 10% ಇದ್ದ ಜಿಎಸ್ ಟಿ ಬೆಳವಣಿಗೆ ಈಗ ಶೇ. 4 ಕ್ಕೆ ಕುಸಿದಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಜಿಎಸ್ ಟಿ ಪರಿಹಾರವನ್ನು ಮತ್ತು ವಿಶೇಷ ಅನುದಾನಗಳನ್ನು ನೀಡದ ಕಾರಣ ಬಜೆಟ್ ರೆವಿನ್ಯೂ ಸರ್ಪ್ಲಸ್ ಆಗಲು ಸಾಧ್ಯವಾಗಿಲ್ಲ. ಆರ್ಥಿಕತೆಗೆ ಶ್ವೇತಪತ್ರ ಮಂಡಿಸಬೇಕು ಎಂದು ಹೇಳುವ ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ರವರು ಈ ಎಲ್ಲ ಅಂಶಗಳನ್ನು ಪರಿಶೀಲಿಸದೇ, ಕೇವಲ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.
ಗ್ಯಾರಂಟಿಗಳಲ್ಲಿ ಭ್ರಷ್ಠಾಚಾರಕ್ಕೆ ಆಸ್ಪದವಿಲ್ಲ
ಮಾಜಿ ಸಿಎಂ ಬೊಮ್ಮಾಯಿಯವರು ರಾಜ್ಯದ ಸಾಲದ ದಾಖಲೆಗಳನ್ನು ಸರ್ಕಾರ ನೀಡಲೆಂದು ಹೇಳಿರುವ ಬಗ್ಗೆ ಉತ್ತರಿಸಿ, ಆರ್ಥಿಕತೆಯ ಸ್ಥಿತಿಗತಿಗಳ ಎಲ್ಲ ಅಂಶಗಳ ದಾಖಲೆಗಳನ್ನು ಬಜೆಟ್ ನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಬಿಜೆಪಿಯವರ ಅವಧಿಯಲ್ಲಿ 530000 ಕೋಟಿ ಸಾಲ ಮಾಡಲಾಗಿದೆ. ಗ್ಯಾರಂಟಿ ಯೋಜನೆಯು ನೇರವಾಗಿ ಫಲಾನುಭವಿಗಳ ಖಾತೆಗೆ ತಲುಪಿ , ಇದರಲ್ಲಿ ಭ್ರಷ್ಠಾಚಾರಕ್ಕೆ ಆಸ್ಪದವಿಲ್ಲ ಎಂದರು.
ಬಾಕಿ ಬಿಲ್ಲು ಪಾವತಿಸಲಾಗುತ್ತಿದೆಗುತ್ತಿಗೆದಾರರ
ಗುತ್ತಿಗೆದಾರರಿಗೆ ಬಾಕಿ ಪಾವತಿ ಆಗದಿರುವ ಬಗ್ಗೆ ಪ್ರತಿಕ್ರಿಯೆಗಳು ಎದ್ದಿರುವ ಬಗ್ಗೆ ಉತ್ತರಿಸಿ, ಬಿಜೆಪಿಯವರ ಅವಧಿಯಲ್ಲಿ ಗುತ್ತಿಗೆದಾರರ 29ಸಾವಿರ ಕೋಟಿಯಷ್ಟು ಬಾಕಿ ಉಳಿಸಲಾಗಿತ್ತು. ಅದರಲ್ಲಿ 24 ಸಾವಿರ ಕೋಟಿ ಬಾಕಿ ಬಿಲ್ಲು ಪಾವತಿಸಲಾಗಿದೆ. ಈ ಬಗ್ಗೆ ದಾಖಲಾತಿಯ ಆಧಾರದಲ್ಲಿ ಸ್ಪಷ್ಟ ಉತ್ತರವನ್ನು ಅಧಿವೇಶನದಲ್ಲಿ ನೀಡಲಾಗಿದೆ ಎಂದರು.
ಬೆಲೆಏರಿಕೆ ನಿಯಂತ್ರಿಸುವುದು ಕೇಂದ್ರದ ಹೊಣೆಗಾರಿಕೆ
ಇರಾನ್ ಯುದ್ಧ ಪರಿಣಾಮ ಬೆಲೆಏರಿಕೆಗೆ ರಾಜ್ಯಸರ್ಕಾರದ ಸಿದ್ದತೆಗಳ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಬೆಲೆ ಏರಿಕೆಯನ್ನು ನಿಯಂತ್ರಿಸುವ ಹೊಣೆಗಾರಿಕೆ ಕೇಂದ್ರ ಸರ್ಕಾರಕ್ಕೆ ಸೇರಿದ್ದು. ಕೇಂದ್ರ ಪೂರೈಸುವ ಗ್ಯಾಸ್ ಪೆಟ್ರೋಲ್ ಡೀಸೆಲ್ಗಳನ್ನು ವಿತರಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ನೆರೆರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಬೆಲೆಗಳು ಕಡಿಮೆಯಿದೆ ಎಂದರು.
ಒಳಮೀಸಲಾತಿ ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ
ಒಳಮೀಸಲಾತಿ ಬಗ್ಗೆ ಸರ್ಕಾರದ ಕ್ರಮಗಳ ಬಗ್ಗೆ ಉತ್ತರಿಸಿ, ರಾಜ್ಯದಲ್ಲಿ ಒಳಮೀಸಲಾತಿಯನ್ನು ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ. ಅಹಿಂದ ಮತಗಳು ಬಿಜೆಪಿಗೆ ಬರಲಿವೆ ಎಂಬ ಬಿಜೆಪಿಯವರ ಹೇಳಿಕೆಗೆ ಪ್ರತಿಕ್ರಯಿಸಿ, ಬಿಜೆಪಿಯವರಿಗೆ ಅಹಿಂದ ವರ್ಗಗಳ ಮೇಲೆ ಕಾಳಜಿಯಿಲ್ಲ.ಬಿಜೆಪಿಯವರು ಎಂದಿಗೂ ಶ್ರೀಮಂತರ ಪರ. ನಮ್ಮ ಸರ್ಕಾರ ಯೂನಿವರ್ಸಲ್ ಬೇಸಿಕ್ ಇನ್ಕಂ ತತ್ವದಂತೆ ನಡೆದು, ತಳಸಮುದಾಯದವರಿಗೆ ಅನುಕೂಲ ಕಲ್ಪಿಸುತ್ತಿದೆ. ನಮ್ಮ ಸರ್ಕಾರ ಬಿಜೆಪಿ ಬೆಂಬಲಿಗ ಮತದಾರರನ್ನು ಸೇರಿಸಿ, ಸರ್ವರಿಗೂ ಗ್ಯಾರಂಟಿ ಯೋಜನೆಗಳನ್ನು ನೀಡಲಾಗುತ್ತಿದೆ. ಬಡತನ ರೇಖೆಗಿಂತ ಕೆಳಗಿನ ಜನರನ್ನು ಸಬಲೀಕರಣಗೊಳಿಸಲು ಇವುಗಳು ನೆರವಾಗುತ್ತವೆ ಎಂದರು.
ಹಂತಹಂತವಾಗಿ ಖಾಲಿ ಹುದ್ದೆಗಳ ಭರ್ತಿ
ಖಾಲಿ ಹುದ್ದೆಗಳ ನೇಮಕಾತಿ ಬಗ್ಗೆ ಸರ್ಕಾರದ ಕ್ರಮಗಳ ಬಗ್ಗೆ ಉತ್ತರಿಸಿ, ಈ ವರ್ಷ 56432 ಹುದ್ದೆಗಳ ನೇಮಕಾತಿ ಮಾಡಲಿದ್ದು, ಹೀಗೆ ಹಂತ ಹಂತವಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಜನಸ್ಪಂದನೆ ದೊರೆಯುತ್ತಿದೆ. ಬಿಜೆಪಿಯವರು ನಾಲ್ಕು ವರ್ಷದಲ್ಲಿ ಯಾವ ಅಭಿವೃದ್ಧಿಯನ್ನು ಮಾಡದೇ, ರಾಜ್ಯವನ್ನು ಲೂಟಿ ಮಾಡಿದ್ದಾರೆ ಎಂಬ ಸತ್ಯವನ್ನು ಜನರು ಅರಿತಿದ್ದಾರೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜಾರಿಯಾಗುತ್ತಿದ್ದು, ಬಿಜೆಪಿಯವರ ಸುಳ್ಳುಗಳ ನಡುವೆಯೂ ಜನ ನಮ್ಮನ್ನು ನಂಬಿದ್ದಾರೆ.
ರಾಜ್ಯದಲ್ಲಿ ಪ್ರತಿ ಚುನಾವಣೆಯ ನಂತರ ಗ್ಯಾರಂಟಿಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡಿದರೂ, ನಮ್ಮ ಗ್ಯಾರಂಟಿಗಳು ನಿರಂತರವಾಗಿ ಮುಂದುವರಿದಿದೆ. ಇದಕ್ಕಾಗಿ ₹52,000 ಕೋಟಿ ಮೀಸಲಿಟ್ಟಿದ್ದು, ಇದುವರೆಗೆ ₹1,31,000 ಕೋಟಿ ವೆಚ್ಚ ಮಾಡಲಾಗಿದೆ.
ರಾಜ್ಯ ಸರ್ಕಾರ ಮಿತಿಯೊಳಗೆ ಸಾಲ ಮಾಡಬೇಕು. ಆರ್ಥಿಕ ಹೊಣೆಗಾರಿಕೆ ಕಾಯ್ದೆಯ ಮಾನದಂಡದಂತೆ, ರಾಜ್ಯದ ಜಿಡಿಪಿಯ ಶೇ. 25 ರ ಮಿತಿಯೊಳಗೆ ಸಾಲದ ಮೊತ್ತವಿದೆ. ನಮ್ಮ ವಿತ್ತೀಯ ಕೊರತೆ 2.95 ರಷ್ಟಿದೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ನ್ಯಾಯಬದ್ಧ ಅನುದಾನಗಳು ಬರದ ಕಾರಣ, ರೆವಿನ್ಯೂ ಸರ್ಪ್ಲಸ್ ಸಾಧಿಸಲು ಸಾಧ್ಯವಾಗಲಿಲ್ಲ. ಬಿಹಾರ ಚುನಾವಣೆಯ ಸಂಬಂಧ ಜಿಎಸ್‌ಟಿ ದರವನ್ನು ಕಡಿತಗೊಳಿಸಿದರು. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ ₹10,000 ಕೋಟಿ ನಷ್ಟವಾಗಿದೆ. ಜಿಎಸ್‌ಟಿ ಕಡಿತದ ಮುಂಚೆ 10% ಇದ್ದ ಜಿಎಸ್‌ಟಿ ಬೆಳವಣಿಗೆ ಈಗ ಶೇ. 4 ಕ್ಕೆ ಕುಸಿದಿದೆ.
ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಜಿಎಸ್‌ಟಿ ಪರಿಹಾರವನ್ನು ಮತ್ತು ವಿಶೇಷ ಅನುದಾನಗಳನ್ನು ನೀಡದ ಕಾರಣ ಬಜೆಟ್ ರೆವಿನ್ಯೂ ಸರ್ಪ್ಲಸ್ ಆಗಲು ಸಾಧ್ಯವಾಗಿಲ್ಲ. ಆರ್ಥಿಕತೆಗೆ ಶ್ವೇತಪತ್ರ ಮಂಡಿಸಬೇಕು ಎಂದು ಹೇಳುವ ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರರವರು ಈ ಎಲ್ಲ ಅಂಶಗಳನ್ನು ಪರಿಶೀಲಿಸದೇ, ಕೇವಲ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಎಸ್ ಎಸ್ ಹಾದಿಯಲ್ಲಿ ಸಮರ್ಥ್ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ
ಸುದ್ದಿದಿನ,ದಾವಣಗೆರೆ: ಜನರು ಹೆಚ್ಚಿನ ನಿರೀಕ್ಷೆಯೊಂದಿಗೆ ಮತದಾನಕ್ಕೆ ಸಜ್ಜಾಗಿದ್ದಾರೆ. ಅಪ್ಪಾಜಿ ಅವರು ಜಾತಿ, ಮತ, ಪಕ್ಷ ಮತ್ತು ಧರ್ಮ ಬೇಧವಿಲ್ಲದೆ ಎಲ್ಲರನ್ನು ಸಮಾನವಾಗಿ ನೋಡುತ್ತಿದ್ದ ಅಜಾತ ಶತ್ರುಗಳಾಗಿದ್ದರು. ಅದೇ ನಿಟ್ಟಿನಲ್ಲಿ ಸಮರ್ಥ್ ಕೂಡ ನಡೆಯುತ್ತಾರೆ ಎಂದು ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ದಾವಣಗೆರೆಯ ಕೆಬಿ ಬಡಾವಣೆಯಲ್ಲಿ ಮತಪ್ರಚಾರ ನಡೆಸಿ ಮಾತನಾಡಿದ ಅವರು ಈ ಚುನಾವಣೆಯು ಶಾಮನೂರು ಶಿವಶಂಕರಪ್ಪಾಜಿಯವರ ಅಗಲಿಕೆಯಿಂದ ನಡೆಯುತ್ತಿದೆ. ಜನರು ನೀಡಿದ 5 ವರ್ಷದ ಅಧಿಕಾರಾವಧಿಯಲ್ಲಿ ಉಳಿದಿರುವ ಎರಡು ವರ್ಷಗಳನ್ನು ಸಮರ್ಥವಾಗಿ ನಿಭಾಯಿಸಲು ಪಕ್ಷವು ಸಮರ್ಥ್ ಅವರಿಗೆ ಅವಕಾಶ ನೀಡಿದೆ ಎಂದರು.
ನಮ್ಮ ಕಾಂಗ್ರೆಸ್ ಪಕ್ಷ ನೀಡಿದ 5 ಗ್ಯಾರಂಟಿ ಯೋಜನೆಗಳು ಬಡ ಜನರಿಗೆ ತಲುಪಿದ್ದು, ದಿನನಿತ್ಯದ ಬಳಕೆಯ ವಸ್ತುಗಳ ಖರೀದಿಗೆ ಈ ಯೋಜನೆಗಳು ಸಹಕಾರಿಯಾಗಿವೆ. ಸರ್ಕಾರ ಜನಪರ ಕೆಲಸಗಳಲ್ಲಿ ಸಾಕಷ್ಟು ಸಾಧನೆ ಮಾಡಿದೆ.ಜನರು ಕೂಡ ಈ ಸಂದರ್ಭದಲ್ಲಿ ಯಾರು ತಮ್ಮ ಪರ ನಿಂತಿದ್ದಾರೆ ಎಂಬುದನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ. ಒಳ್ಳೆಯ ರಾಜಕಾರಣಿ ಎಂದರೆ ಜನರ ಕಷ್ಟಗಳಿಗೆ ಸ್ಪಂದಿಸುವುದಾಗಿದೆ.
ಸಮರ್ಥ್ ಅವರು ತಮ್ಮ ತಾತನ ಕೆಲಸಗಳು,ಜನಸೇವೆ ನೋಡಿದ್ದಾರೆ. ಅಪ್ಪಾಜಿಯವರು ಆರು ಬಾರಿ ಆಯ್ಕೆಯಾದ ಅವಧಿಯಲ್ಲಿ ಮಾಡಿದ ಕೆಲಸಗಳನ್ನು ನೇರವಾಗಿ ನೋಡಿದ ಅನುಭವ ಸಮರ್ಥ್ ಅವರಿಗಿದೆ ಹಾಗೂ ಜನರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಸಮರ್ಥ್ ಪ್ರತಿಯೊಂದು ಮನೆಗೂ ಭೇಟಿ ನೀಡಿದಾಗ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಜನ ತಮ್ಮ ಸಮಸ್ಯೆಗಳನ್ನು ಸಮರ್ಥ್ ಎದುರಿಗೆ ಹೇಳಿಕೊಳ್ಳುತ್ತಿದ್ದಾರೆಂದರು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಜನರು ಸಮರ್ಥ್ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.
ನಂತರ ಕೆಬಿ ಬಡಾವಣೆಯ ದೀಕ್ಷಿತ್ ರಸ್ತೆಯಲ್ಲಿರುವ ಶ್ರೀ ಗುರು ರಾಘವೇಂದ್ರ ರಾಯರ ಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ1 day agoಸಂಪಾದಕೀಯ | ಕುಟುಂಬ ಉತ್ತರಾಧಿಕಾರ vs ಬದಲಾವಣೆಯ ಗಾಳಿ: ಉಪಚುನಾವಣೆಯ ಸವಾಲು
-
ದಿನದ ಸುದ್ದಿ23 hours agoಎಸ್ ಎಸ್ ಹಾದಿಯಲ್ಲಿ ಸಮರ್ಥ್ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ
-
ದಿನದ ಸುದ್ದಿ23 hours agoಉಪಚುನಾವಣೆ | ಕಾಂಗ್ರೆಸ್ ಗೆ ನಿರೀಕ್ಷೆಗೂ ಮೀರಿ ಜನಬೆಂಬಲ : ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ3 hours agoಸಂಪಾದಕೀಯ | ಚುನಾವಣೆಗಳಲ್ಲಿ ಹಣ ಮತ್ತು ಜಾತಿ

