ದಿನದ ಸುದ್ದಿ
ವಿಶ್ವ ಮೊಸಳೆಗಳ ದಿನ ; ಮೊಸಳೆ ಬಗ್ಗೆ ನಿಮಗಿಷ್ಟು ತಿಳಿದಿರಲಿ
- ಸಂಜಯ್ ಹೊಯ್ಸಳ
ಪ್ರತಿ ವರ್ಷದ ಜೂನ್ 17 ನ್ನು ವಿಶ್ವ ಮೊಸಳೆ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವದಲ್ಲಿ ಪ್ರಮುಖವಾಗಿ 24 ಜಾತಿಯ ಮೊಸಳೆಗಳಿದ್ದು, ಭಾರತದಲ್ಲಿ ಸದ್ಯಕ್ಕೆ 3 ಪ್ರಬೇಧದ ಮೊಸಳೆ ಸಂತತಿಗಳಿವೆ. ಅವುಗಳೆಂದರೆ..
ಉಪ್ಪು ನೀರಿನ ಮೊಸಳೆ (Saltwater crocodile)
ಮಗ್ಗರ್/ಮಾರ್ಷ್ (Mugger)
ಘಾರಿಯಲ್ (Gharial)
ಇವುಗಳಲ್ಲಿ ಕರ್ನಾಟಕದಲ್ಲಿನ ನದಿಗಳಲ್ಲಿ, ಕೆಲವು ದೊಡ್ಡ ಕೆರೆಗಳಲ್ಲಿ ಕಂಡುಬರುವ ಮೊಸಳೆಗಳು ಮಗ್ಗರ್/ಮಾರ್ಷ್ ಮೊಸಳೆಗಳಾಗಿವೆ. ಕರ್ನಾಟಕದಲ್ಲಿ ಮೊಸಳೆಗಳು ಹೆಚ್ಚಾಗಿ ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿ ಪಾತ್ರದಲ್ಲಿ ಕಂಡುಬರುತ್ತವೆ. ಇತ್ತೀಚೆಗೆ ಮೊಸಳೆಯ ದವಣೆಗೆ ಸಿಲುಕಿ ಕೆಲವು ಸಾವು ನೋವಿನ ಪ್ರಕರಣಗಳು ಆ ಭಾಗದಲ್ಲಿ ವರದಿಯಾಗಿವೆ.
ಇನ್ನು ಉತ್ತರ ಕರ್ನಾಟಕದ ಭಾಗದ ಕೆಲವು ಪ್ರಮುಖ ನದಿಗಳ ಪಾತ್ರದಲ್ಲೂ ಮೊಸಳೆಗಳು ಆಗಾಗ್ಗೆ ಕಂಡುಬರುತ್ತವೆ. ನಾನು ನೋಡಿದಂತೆ ಉತ್ತರ ಕರ್ನಾಟಕ ಭಾಗಕ್ಕೆ ಹೋಲಿಸಿದರೆ ದಕ್ಷಿಣ ಕರ್ನಾಟಕ ಭಾಗದಲ್ಲಿ ಮೊಸಳೆಗಳ ದಾಳಿ ಪ್ರಕರಣಗಳು ತುಂಬಾ ಕಡಿಮೆ ಎನ್ನಬಹುದು. ಈ ಭಾಗದ ನದಿಗಳಲ್ಲಿ ಮೊಸಳೆಗಳ ಸಂಖ್ಯೆ ಕಡಿಮೆ ಇರುವುದು ಇದಕ್ಕೆ ಕಾರ ಇರಬಹುದು.
ಕಾವೇರಿ ನದಿಯಲ್ಲಿ ಅತಿಹೆಚ್ಚು ಮೊಸಳೆಗಳು ಕಂಡು ಬರುವುದು ಮಂಡ್ಯದ ಶ್ರೀರಂಗಪಟ್ಟಣ ತಾಲ್ಲೂಕಿನ ವಿಶ್ವವಿಖ್ಯಾತ ಪಕ್ಷಿ ಧಾಮವಾದ ರಂಗನತಿಟ್ಟು ಪಕ್ಷಿಧಾಮದಲ್ಲಿ. ಹಿಂದೆ ಪಂಚತಂತ್ರದಲ್ಲಿ ಮೊಸಳೆ ಮತ್ತು ಕೋತಿಕತೆಯಲ್ಲಿ ಮೊಸಳೆಯ ಹೆಂಡತಿಗೆ ಕೋತಿ ನೇರಳೆ ಹಣ್ಣುಗಳನ್ನು ಹೊತ್ತೊಯ್ಯುವ ಕತೆಯಲ್ಲಿ ಗಂಡ ಮತ್ತು ಹೆಂಡತಿ ಮೊಸಳೆಯನ್ನು ಕಲ್ಪಿಸಿಕೊಂಡು ಮಾತ್ರ ನಾನು ಮೊದಲು ಅವುಗಳ ಸಹಜ ಆವಾಸಸ್ಥಾನದಲ್ಲಿ ಮೊಸಳೆಯನ್ನು ನೋಡಿದ್ದು ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಹರಿಯುವ ಲಕ್ಷ್ಮಣತೀರ್ಥ ನದಿಯಲ್ಲಿ. ನಂತರ ಬಂಡೀಪುರ ದಟ್ಟಡವಿಯಲ್ಲಿ ಹರಿಯುವ ಮೂಲೆಹೊಳೆ/ ನುಗು ನದಿಯಲ್ಲಿ… ನಂತರದ ದಿನಗಳಲ್ಲಿ ಕಬಿನಿ, ಪಾಲರ್ ಸೇರಿ ಬಹಳಷ್ಟು ಕಡೆ ಬಹಳಷ್ಟು ಮೊಸಳೆಗಳನ್ನು ನೋಡುವ ಅವಕಾಶ ಸಿಕ್ಕಿತು.
ಘಾರಿಯಲ್ ಗಳು ತುಂಬಾ ಅಪರೂಪದ ಮೊಸಳೆ ಸಂತತಿಗಳಾಗಿದ್ದು, ಸದ್ಯ ಉತ್ತರ ಭಾರತದ ಕೆಲವು ನದಿಗಳು ಹಾಗೂ ನೇಪಾಳದಲ್ಲಿ ಮಾತ್ರ ಇವು ಕಾಣಸಿಗುತ್ತಿವೆ. ಇವುಳನ್ನು IUCN red list ಗೆ ಸೇರಿಸಿದ್ದು, ಇವುಗಳ ಸಂರಕ್ಷಣೆಗೆ ವಿಶೇಷ ಗಮನ ನೀಡಲಾಗಿದೆ.
ನಮಗೆಲ್ಲಾ ಗೊತ್ತಿರುವಂತೆ ಜೀವವೈವಿಧ್ಯತೆಯ ರಕ್ಷಣೆಯಲ್ಲಿ ಎಲ್ಲಾ ಜೀವಿಗಳ ಇರುವಿಕೆ ಬಹಳ ಮುಖ್ಯ. ಜಲಚರಗಳಲ್ಲಿ ಅಗ್ರ ಪರಪಕ್ಷಕಗಳಲ್ಲಿ ಒಂದೆನಿಸಿದ ಮೊಸಳೆ ಜಲಚರ ಜೀವಿಗಳ ಸಮತೋಲನ ಸಾಧಿಸಿ ಅಲ್ಲಿನ ಜೀವವೈವಿಧ್ಯ ಕಾಪಾಡುವಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ನಾವು ಮೊಸಳೆಗಳನ್ನು ಕೂಡ ಇತರ ಪ್ರಾಣಿಗಳಂತೆ ರಕ್ಷಿಸಬೇಕು.
ಮುಖ್ಯವಾಗಿ ಅವುಗಳ ಆವಾಸಸ್ಥಾನವಾದ ನದಿ, ಸರೋವರದಂತಹ ಜಲಮೂಲಗಳನ್ನು ಸಂರಕ್ಷಿಸಬೇಕು. ಅಲ್ಲಿ ಅಕ್ರಮ ಮರಳುಗಾರಿಗೆ ತಡೆದು, ಜಲಮಾಲಿನ್ಯ ನಿಯಂತ್ರಣ ಮಾಡಬೇಕು. ಹಾಗೆ ಪ್ಲಾಸ್ಟಿಕ್ ತ್ಯಾಜ್ಯಗಳು ನದಿ, ಸರೋವರಗಳನ್ನು ಸೇರದಂತೆ ಕ್ರಮವಹಿಸಬೇಕು. ಹಾಗೆಯೇ ಎಲ್ಲಾದರೂ ಮೊಸಳೆಗಳು ಕಂಡುಬಂದರೆ ಗಾಬರಿಯಾಗದೆ ತಕ್ಷಣ ಅರಣ್ಯ ಇಲಾಖೆಯ ಗಮನಕ್ಕೆ ತರಬೇಕು. (ಬರಹ:ಸಂಜಯ್ ಹೊಯ್ಸಳ,ಫೇಸ್ ಬುಕ್ ನಿಂದ)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಹಳೆ ಪಿಂಚಣಿ ಪದ್ಧತಿ ಮರುಜಾರಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ನಿರ್ಣಯ
ಸುದ್ದಿದಿನಡೆಸ್ಕ್:ಹಳೆ ಪಿಂಚಣಿ ಪದ್ಧತಿ ಮರು ಜಾರಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ವಿವಿಧ ಹಂತಗಳಲ್ಲಿ ಹೋರಾಟ ಸೇರಿದಂತೆ ಇನ್ನಿತರೆ ನಿರ್ಣಯಗಳಿಗೆ ಬೆಂಬಲ ಸೂಚಿಸಲು ದಾವಣಗೆರೆಯಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸಭೆ ನಿರ್ಧರಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ತಿಳಿಸಿದ್ದಾರೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗದು ರಹಿತ ಚಿಕಿತ್ಸೆ ಯೋಜನೆಯ ತ್ವರಿತ ಜಾರಿಗೆ ಒತ್ತಾಯಿಸುವುದು, 2026ಕ್ಕೆ ಕೇಂದ್ರ ಸರ್ಕಾರದ ಮಾದರಿ ವೇತನಕ್ಕಾಗಿ ಹೋರಾಟ ರೂಪಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಿ ಆಂಡ್ ಆರ್ ನಿಯಮಕ್ಕೆ ತಿದ್ದುಪಡಿ ತರುವಂತೆ ಆಗ್ರಹಿಸಿ, ನಡೆಸಲಾಗುವ ಹೋರಾಟವನ್ನು ಬೆಂಬಲಿಸುವುದು, ವೈದ್ಯಕೀಯ ವೆಚ್ಚ ಮರುಪಾವತಿ ಬಿಲ್‌ಗಳಿಗೆ ಶೀಘ್ರವೇ ಹಣ ಬಿಡುಗಡೆ ಮಾಡಿಸುವ ನಿರ್ಣಯಗಳನ್ನು ಕೈಗೊಳ್ಳಲಾಯಿತು ಎಂದು ಸಿ.ಎಸ್.ಷಡಕ್ಷರಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಬೈಲಹೊಂಗಲದಲ್ಲಿ ಚಾಲನೆ
ಸುದ್ದಿದಿನಡೆಸ್ಕ್:ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ-2025ಕ್ಕೆ ಇಂದು ಮುಂಜಾನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ರಾಯಣ್ಣನ ಜನ್ಮಸ್ಥಳ ಸಂಗೊಳ್ಳಿಯಲ್ಲಿ ಅದ್ದೂರಿ ಚಾಲನೆ ನೀಡಲಾಯಿತು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಲಾಗಿರುವ ಉತ್ಸವವು ಪ್ರತಿವರ್ಷದಂತೆ ಸಾಂಪ್ರದಾಯಿಕವಾಗಿ ಆರಂಭಗೊಂಡಿದೆ. ಸಂಗೊಳ್ಳಿಯ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಹಿರೇಮಠದ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಪ್ರಾತಃಕಾಲದ ಪೂಜೆ ಸಲ್ಲಿಸಲಾಯಿತು.
ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಜ್ಯೋತಿಯನ್ನು ಸ್ವಾಗತಿಸಿದರು. ಉಪ ವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪುರ, ಸಂಗೊಳ್ಳಿ ರಾಯಣ್ಣ ಸ್ಮಾರಕ ಭವನದ ಆವರಣದಲ್ಲಿ ಕಿತ್ತೂರು ಸಂಸ್ಥಾನದ ಧ್ವಜಾರೋಹಣ ನೆರವೇರಿಸಿದರು. ಬಳಿಕ ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ, ಜಾನಪದ ಕಲಾವಾಹಿನಿಗೆ ಚಾಲನೆ ನೀಡಿದರು.
ಪೂರ್ಣ ಕುಂಭ ಹೊತ್ತ ಮಹಿಳೆಯರು, ಪೂಜಾ ಕುಣಿತ, ನಂದಿಕೋಲು, ವೀರಗಾಸೆ, ಡೊಳ್ಳು, ಬೊಂಬೆ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಉತ್ಸವಕ್ಕೆ ಮೆರುಗು ತಂದಿತು. ಸಂಗೊಳ್ಳಿ ರಾಯಣ್ಣ ಸ್ಮಾರಕದ ಬಳಿಯಿಂದ ಆರಂಭಗೊಂಡ ಕಲಾವಾಹಿನಿಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಇಂದು ಸಂಜೆ 8 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉತ್ಸವದ ಅಧಿಕೃತ ಉದ್ಘಾಟನೆ ನೆರವೇರಿಸಲಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕಾರ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ನಾಳೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ವೀರರ ಸ್ಮರಣಾರ್ಥ ದೀಪೋತ್ಸವ, ರಾಯಣ್ಣನ ಕುರಿತಾದ ವಿಚಾರ ಸಂಕಿರಣ, ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಸೇರಿದಂತೆ ಇತರೆ ಸ್ಪರ್ಧೆಗಳು ನಡೆಯಲಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ನಾಳೆಯಿಂದ ಜಗಳೂರಿನಲ್ಲಿ ಜಿಲ್ಲಾ 14 ನೇ ಕನ್ನಡ ಸಾಹಿತ್ಯ ಸಮ್ಮೇಳನ
ಸುದ್ದಿದಿನ,ದಾವಣಗೆರೆ:ಜಗಳೂರು ಪಟ್ಟಣದಲ್ಲಿ ಜನವರಿ 11 ಮತ್ತು 12 ರಂದು ಜಗಳೂರು ಪಟ್ಟಣದ ಬಯಲು ರಂಗಮಂದಿರದಲ್ಲಿ ಜಿಲ್ಲಾ 14 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಜನವರಿ 11 ರಂದು ಬೆಳಿಗ್ಗೆ 8 ಗಂಟೆಗೆ ಅಪರ ಜಿಲ್ಲಾಧಿಕಾರಿ ಪಿ ಎನ್ ಲೋಕೇಶ್ ರಾಷ್ಟ್ರ ಧ್ವಜಾರೋಹಣ ನೆರೆವೇರಿಸುವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ. ವಾಮದೇವಪ್ಪ ಪರಿಷತ್ತಿನ ಧ್ವಜಾರೋಹಣ ನೆರೆವೇರಿಸುವರು.ಜಗಳೂರು ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ನಾಡ ಧ್ವಜಾರೋಹಣ ನೆರೆವೇರಿಸುವರು. ನವಚೇತನ ಶಾಲೆಯ ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆ, ನಾಡಗೀತೆ ಹಾಡುವರು.
ಅಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ತಾಯಿ ಭುವನೇಶ್ವರಿ ಮತ್ತು ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡುವರು.
ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಚಂದ್ರ, ಪಟ್ಟಣ ಪಂಚಾಯಿತಿಯ ಉಪಾಧ್ಯಕ್ಷರಾದ ಲೋಕಮ್ಮ ಜೆ ಸಿ ಓಬಣ್ಣ, ಡಿ.ಡಿ.ಪಿ.ಯು ಕರಿಸಿದ್ದಪ್ಪ ಎಸ್.ಜಿ, ಡಿ.ಡಿ.ಪಿ.ಐ ಕೋಟ್ರೇಶ್.ಜಿ, ಜಗಳೂರು ವೃತ್ತ ನಿರೀಕ್ಷಕರು ಶ್ರೀನಿವಾಸರಾವ್, ತಾಲ್ಲೂಕು ಪಂಚಾಯಿತಿ, ಸಿ.ಇ.ಓ ಕೆಂಚಪ್ಪ, ಜಗಳೂರು ಬಿ.ಇ.ಓ ಹಾಲಮೂರ್ತಿ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಬೀರೇಂದ್ರ ಕುಮಾರ್ ಭಾಗವಹಿಸುವರು. ಮೆರವಣಿಗೆ ತಾಲೂಕು ಕಚೇರಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತ, ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಿಂದ ಬಯಲು ರಂಗಮಂದಿರವರೆಗೆ ತಾಯಿ ಭುವನೇಶ್ವರಿ ಮೆರವಣಿಗೆ ನಡೆಯುತ್ತದೆ.
ಡೊಳ್ಳು ಕುಣಿತ,ಹಗಲುವೇಷ, ಬೊಂಬೆ ಮೇಳ, ಉರುಮೆ, ತಪ್ಪಡಿ, ಕಹಳೆ, ವೀರಗಾಸೆ, ಕರಡಿ ಮಜಲು, ನಂದಿಧ್ವಜ, ಭಜನೆ, ಕೋಲಾಟ, ಎತ್ತಿನಗಾಡಿಗಳ ಮೆರವಣಿಗೆ, ಮಹಿಳೆಯರಿಂದ ಪೂರ್ಣಕುಂಭ, ಇಲಾಖೆಗಳ ಸ್ತಬ್ಧ ಚಿತ್ರಗಳು ಇತ್ಯಾದಿ.
ಬೆಳಿಗ್ಗೆ 11 ಗಂಟೆಗೆ ಸಮ್ಮೇಳನದ ಉದ್ಘಾಟನಾ ಸಮಾರಂಭವನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಸಾಹಿತಿಗಳಾದ ಡಾ.ಪುರುಷೋತ್ತಮ ಬಿಳಿಮಲೆ ಉದ್ಘಾಟಿಸುವರು. ಜಗಳೂರು ಶಾಸಕರಾದ ಬಿ.ದೇವೆಂದ್ರಪ್ಪ ಅಧ್ಯಕ್ಷತೆ ವಹಿಸುವರು.
ಸಂಸ್ಕøತಿ ಚಿಂತಕರು ಸಾಹಿತಿಗಳಾದ ಡಾ.ಎ.ಬಿ.ರಾಮಚಂದ್ರಪ್ಪ ಸಮ್ಮೇಳನಾಧ್ಯಕ್ಷರಾಗಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ವಾಮದೇವಪ್ಪ ಆಶಯ ನುಡಿಗಳಾನ್ನಾಡುವರು. ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಮಹಲಿಂಗರಂಗ ವೇದಿಕೆಯನ್ನು ಉದ್ಘಾಟಿಸುವರು. ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಚಿನ್ನಹಗರಿಯ ನುಡಿ ತೇರು ಸ್ಮರಣ ಸಂಚಿಕೆಯ ಲೋಕಾರ್ಪಣೆ ಮಾಡುವರು. ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ ಜೆ.ಎಂ ಇಮಾಮ್ ಮಹಾದ್ವಾರವನ್ನು ಉದ್ಘಾಟಿಸುವರು.
ಕ.ಸಾ.ಪ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಅವರು ವಿದ್ಯಾರತ್ನ ಡಾ.ಟಿ.ತಿಪ್ಪೇಸ್ವಾಮಿ ಸಭಾಂಗಣವನ್ನು ಉದ್ಘಾಟಿಸುವರು. ನಿಕಟ ಪೂರ್ವ ಸಮ್ಮೇಳಧ್ಯಕ್ಷರಾದ ಪ್ರೊ.ಸಿ.ವಿ ಪಾಟೀಲ್ ಕನ್ನಡ ಧ್ವಜ ಹಸ್ತಾಂತರ ಮಾಡುವರು. ಜಗಳೂರು ಕ್ಷೇತ್ರದ ಮಾಜಿ ಶಾಸಕರಾದ ಟಿ.ಗುರುಸಿದ್ದನಗೌಡ, ಎಸ್.ವಿ ರಾಮಚಂದ್ರಪ್ಫ, ಹೆಚ್.ಪಿ.ರಾಜೇಶ್ ಕೃತಿಗಳ ಲೋಕಾರ್ಪಣೆ ಮಾಡುವರು.
ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್ ಪ್ರೊ.ಎಸ್.ಬಿ ರಂಗನಾಥ್ ಪುಸ್ತಕ ಮಳಿಗೆ ಉದ್ಘಾಟಿಸುವರು. ಜಗಳೂರು ಪಟ್ಟಣದ ಅಧ್ಯಕ್ಷರಾದ ಕೆ.ಎಸ್ ನವೀನ್ ಕುಮಾರ್ ಡಾ.ಎಂ.ಜಿ.ಈಶ್ವರಪ್ಪ ವಸ್ತು ಪ್ರದರ್ಶನ ಮಳಿಗೆ ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ, ಹೊನ್ನಾಳಿ ಶಾಸಕರಾದ ಡಿ.ಜಿ.ಶಾಂತನಗೌಡ, ಹರಿಹರ ಶಾಸಕರಾಧ ಬಿ.ಪಿ ಹರೀಶ್, ಚನ್ನಗಿರಿ ಶಾಸಕರಾದ ಬಸವರಾಜ ವಿ. ಶಿವಗಂಗ, ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಅಸಗೋಡು ಜಯಸಿಂಹ, ತಾಂಡ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಎನ್ ಜಯದೇವ ನಾಯ್ಕ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್ ನವೀನ್, ನಾ.ರವಿಕುಮಾರ, ಡಿ.ಟಿ.ಶ್ರೀನಿವಾಸ್, ಡಾ.ಚಿದಾನಂದ ಎಂ.ಗೌಡ, ಜಿ.ಸ.ನೌ ಸಂಘದ ಅಧ್ಯಕ್ಷರಾದ ವೀರೇಶ್ ಎಸ್ ಒಡೇನಪುರ, ಜಿಲ್ಲಾ ವರದಿಗಾರರ ಕೂಟ ನಾಗರಾಜ್.ಎಸ್ ಬಡದಾಳ್, ಯುವ ಮುಖಂಡರಾದ ಕೆ.ಪಿ ಪಾಲಯ್ಯ, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಮಂಜುನಾಥ ಕುರ್ಕಿ, ತಾ.ಸ.ನೌ ಸಂಘದ ಎ.ಎಲ್ ತಿಪ್ಪೇಸ್ವಾಮಿ, ಕಾರ್ಯಕಾರಿ ಸಮಿಯಿಯ ಅಧ್ಯಕ್ಷರಾದ ಜಿ.ರುದ್ರಯ್ಯ, ಪ್ರಗತಿಪರ ಕೃಷಿಕರು ಕಲ್ಲೇರುದ್ರೇಶ್ ಪಾಲ್ಗೋಳ್ಳುವರು.
ಮಧ್ಯಾಹ್ನ 2 ಗಂಟೆಗೆ ಗೋಷ್ಠಿ-1ರಲ್ಲಿ. ಸಾಹಿತ್ಯ ಮತ್ತು ಸಾಮಾಜಿಕ ನೆಲೆಗಳು, ಮಧ್ಯಾಹ್ನ 3:45 ಕ್ಕೆ ಗೋಷ್ಠಿ -2ರಲ್ಲಿ ಸೌಹಾರ್ದತೆ- ಸಮಾನತೆ-ಸಾಮಾಜಿಕ ನ್ಯಾಯ, ಗೋಷ್ಠಿ-3ರಲ್ಲಿ ಸಂಜೆ 5.30ಕ್ಕೆ ದಾವಣಗೆರೆ ಜಿಲ್ಲೆಯ ಐತಿಹಾಸಿಕ ನೆಲೆಗಳು, ಗೋಷ್ಠಿಗಳು ನಡೆಸಲಾಗುವುದು.
ಸಂಜೆ 6:15 ಗಂಟೆಗೆ ಜಗಳೂರು ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನ ಕಾರ್ಯಕ್ರಮ ಇರುತ್ತದೆ. ನಂತರ ಡಾ. ಶುಭಾ ಮರವಂತೆ, ಗಂಗಾವತಿ ಪ್ರಾಣೇಶ್ ಮತ್ತು ತಂಡದವರಿಂದ ಹಾಸ್ಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ವಿಜಯನಗರ | ನಿಲ್ಲದ ಅಕ್ರಮ ಕಲ್ಲು ಗಣಿಗಾರಿಕೆ ; ಕಣ್ಣುಮುಚ್ಚಿಕುಳಿತ ಅಧಿಕಾರಿಗಳು
-
ದಿನದ ಸುದ್ದಿ6 days ago
ಸಂತೇಬೆನ್ನೂರು | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ವಿಶ್ವಮಾನವ ದಿನಾಚರಣೆ’
-
ದಿನದ ಸುದ್ದಿ3 days ago
ನಾಳೆಯಿಂದ ಜಗಳೂರಿನಲ್ಲಿ ಜಿಲ್ಲಾ 14 ನೇ ಕನ್ನಡ ಸಾಹಿತ್ಯ ಸಮ್ಮೇಳನ
-
ದಿನದ ಸುದ್ದಿ24 hours ago
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಬೈಲಹೊಂಗಲದಲ್ಲಿ ಚಾಲನೆ
-
ದಿನದ ಸುದ್ದಿ23 hours ago
ಹಳೆ ಪಿಂಚಣಿ ಪದ್ಧತಿ ಮರುಜಾರಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ನಿರ್ಣಯ