Connect with us

ದಿನದ ಸುದ್ದಿ

ಮಕ್ಕಳ ಕೈಗೆ ವಾಹನ ಕೊಡುವ ಮುನ್ನ ನೂರು ಬಾರಿ ಯೋಚಿಸಿ !

Published

on

ಪುಣೆ | ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಪೋರ್ಷೆ ಕಾರ್
  • ಶರೀಫ್ ಎ ಎ, ವಕೀಲರು

ದಿನೆಂಟು ವರ್ಷ ತುಂಬದ ಮತ್ತು ಚಾಲನಾ ಪರವಾನಗಿ ಪಡೆಯದ ಮಕ್ಕಳ ಕೈಗೆ ಮೋಟಾರು ವಾಹನ ಕೊಡುವ ಮತ್ತು ತಮ್ಮ ಮಕ್ಕಳ ವಾಹನ ಚಾಲನಾ ಕೌಶಲ್ಯದ ಬಗ್ಗೆ ಹೆಮ್ಮೆಯಿಂದ ಬೀಗುವ ಪೋಷಕರನ್ನು ಬಹಳ ನೋಡಿದ್ದೇನೆ. ಕೇವಲ ಶ್ರೀಮಂತರ ನಡುವೆ ಮಾತ್ರ ಅಲ್ಲ, ಮಧ್ಯಮ ಮತ್ತು ಬಡ ವರ್ಗದಲ್ಲೂ ಸಹ ಇಂತಹ ಹೊಣೆಗೇಡಿ ಪೋಷಕರು ಇದ್ದಾರೆ. ಇಂತವರ ಬೇಜವಾಬ್ದಾರಿತನ ತಂದೊಡ್ದುವ ಅನಾಹುತ ಮತ್ತು ಪರಿಣಾಮಗಳ ಬಗ್ಗೆ ಸ್ವಲ್ಪ ನೋಡೋಣ.

ಬಾಲ ನ್ಯಾಯ ಮಂಡಳಿಯ ಪ್ರಧಾನ ನ್ಯಾಯಿಕ ದಂಡಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಧರ್ಬದಲ್ಲಿ ಹಲವು ರಸ್ತೆ ಅಪಘಾತ ಪ್ರಕರಣಗಳು ನನ್ನ ಮುಂದೆ ವಿಚಾರಣೆಗೆ ಬಂದಿದ್ದವು. ಹದಿನೆಂಟು ವರ್ಷ ತುಂಬದ ಮಕ್ಕಳು ಅಜಾಗರೂಕತೆ ಅಥವಾ ನಿರ್ಲಕ್ಷ್ಯತನದಿಂದ ಬೈಕ್, ಕಾರು ಮುಂತಾದ ವಾಹನ ಚಲಾಯಿಸಿ ಯಾರೋ ನತದೃಷ್ಟರ ಜೀವ ತೆಗೆದ ಅಪರಾಧಕ್ಕೆ ಅಥವಾ ಗಂಭೀರವಾಗಿ ಗಾಯಪಡಿಸಿದಕ್ಕೆ ದಾಖಲಾದ ಪ್ರಕರಣಗಳವು. ಅಂತಹ ಪ್ರಕರಣಗಳಲ್ಲಿ ಸಾಮಾನ್ಯವಾಗಿ ವಾಹನ ಚಲಾಯಿಸಿದ ಬಾಲಕನನ್ನು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಎಂದು ಪರಿಗಣಿಸಿ ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರು ಪಡಿಸಲಾಗುತ್ತದೆ. ಬಾಲಕನ ಪೋಷಕರ ವಿರುದ್ಧ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 199A ರ ಅಡಿಯಲ್ಲಿ ಮೂರು ವರ್ಷಗಳವರೆಗೆ ವಿಸ್ತರಿಸ ಬಹುದಾದ ಕಾರಾಗೃಹ ವಾಸದಿಂದ ಮತ್ತು ಇಪ್ಪತೈದು ಸಾವಿರ ರೂಪಾಯಿ ಜುಲ್ಮಾನೆಯ ಶಿಕ್ಷೆಗೆ ಗುರಿಪಡಿಸ ಬಹುದಾದ ಅಪರಾಧಕ್ಕೆ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗುತ್ತದೆ.

ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 199A ರ ಅಡಿಯಲ್ಲಿ ವಾಹನ ಚಾಲನೆಗೆ ಸಂಬಂಧಿಸಿದಂತೆ ಅಪ್ರಾಪ್ತರು ಎಸಗುವ ಅಪರಾಧಗಳಿಗೆ ಪೋಷಕರೇ ನೇರ ಹೊಣೆಗಾರರು ಎಂದು ಪರಿಭಾವಿಸಲಾಗುತ್ತದೆ. ಹಾಗಾಗಿ ಬಾಲ ನ್ಯಾಯ ಮಂಡಳಿಯ ಮುಂದಿರುವ ಪ್ರಕರಣದಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಆಪ್ತ ಸಮಾಲೋಚನೆಗೆ ಒಳಪಡಿಸಿ ದಂಡ ವಿಧಿಸಿ ಕಳುಹಿಸಿದರೂ ಕಾನೂನು ಕುಣಿಕೆಯಿಂದ ತಪ್ಪಿಸಿ ಕೊಳ್ಳಲು ಪೋಷಕರಿಗೆ ಸಾಧ್ಯವಿರುವುದಿಲ್ಲ. ಜೆ .ಎಂ. ಎಫ್. ಸಿ ನ್ಯಾಯಾಲಯದಲ್ಲಿ ದಂಡ ಮತ್ತು ಜೈಲು ಶಿಕ್ಷೆಯ ತೂಗುಗತ್ತಿ ಒಂದೆಡೆಯಾದರೆ ಮೋಟಾರು ವಾಹನ ಅಪಘಾತ ವಿಮಾ ಪರಿಹಾರ ನ್ಯಾಯಾಧಿಕರಣದ ಮುಂದೆ ಸಂತ್ರಸ್ತರು ಅಥವಾ ಗಾಯಾಳು ವಿಮಾ ಪರಿಹಾರ ಕೋರಿ ದಾಖಲಿಸುವ ಪ್ರಕರಣ ಮತ್ತೊಂದೆಡೆ.

ಅಪ್ರಾಪ್ತ ವಯಸ್ಕರ ಕೈಗೆ ವಾಹನ ಕೊಡುವುದು, ಚಾಲನಾ ಪರವಾನಗಿ ಇಲ್ಲದೆ ವಾಹನ ಚಲಾಯಿಸುವುದು ಇವೆಲ್ಲವೂ ವಿಮಾ ಷರತ್ತಿನ ಉಲ್ಲಂಘನೆ. ಹಾಗಾಗಿ ಅಪಘಾತದಲ್ಲಿ ಮೃತಪಟ್ಟವರ ವಾರಸುದಾರರು ಅಥವಾ ಗಾಯಾಳು ಅಪ್ರಾಪ್ತ ವಯಸ್ಕ ಚಾಲನೆ ಮಾಡಿದ ವಾಹನದ ವಿಮಾ ಕಂಪನಿಯಿಂದ ಪರಿಹಾರ ಪಡೆಯಲು ಸಾಧ್ಯವಾಗುವುದಿಲ್ಲ. ಅಂತಹ ಪ್ರಕರಣಗಳಲ್ಲಿ ಪರಿಹಾರ ನೀಡುವ ಸಂಪೂರ್ಣ ಹೊಣೆ ವಾಹನ ಮಾಲೀಕ ಅಥವಾ ಅಪ್ರಾಪ್ತನ ಪೋಷಕರ ಮೇಲೆ ಬೀಳಲಿದೆ. ನ್ಯಾಯಾಧಿಕರಣ ಆದೇಶಿಸುವ ಪರಿಹಾರದ ಮೊತ್ತ ಮೃತರ ಅಥವಾ ಗಾಯಾಳುಗಳ ವೃತ್ತಿ, ಆದಾಯ ಮತ್ತು ಪ್ರಾಯವನ್ನು ಆಧರಿಸಿ ಲಕ್ಷಾಂತರ ರೂಪಾಯಿಗಳವರೆಗೂ ಬರಬಹುದು, ಕೋಟಿ ರೂಪಾಯಿ ಮೊತ್ತ ದಾಟಲೂ ಬಹುದು.

ಮೋಟಾರು ವಾಹನ ಅಪಘಾತ ವಿಮಾ ಪರಿಹಾರ ನ್ಯಾಯಾಧಿಕರಣದ ಪೀಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ನನ್ನ ಮುಂದೆ ಬಂದ ಒಂದು ಪ್ರಕರಣದ ಘಟನೆ ಹೀಗಿತ್ತು. 15 ವರ್ಷದ ಹುಡುಗ ಬೈಕ್ ಚಾಲನೆ ಮಾಡಿ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರಿಗೆ ಡಿಕ್ಕಿ ಪಡಿಸಿ ಆ ಸಾಫ್ಟ್ವೇರ್ ಇಂಜಿನಿಯರ್ ಸಾವಿಗೆ ಕಾರಣಕರ್ತನಾಗುತ್ತಾನೆ. ಆ ಪ್ರಕರಣದಲ್ಲಿ ಮೃತನ ವಾರಸುದಾರರಿಗೆ ಎಂಬತ್ತು ಲಕ್ಷ ಹಣ ಪಾವತಿಸಲು ನ್ಯಾಯಾಧಿಕರಣದಿಂದ ಆದೇಶವಾಗುತ್ತದೆ. ಅಪಘಾತಕ್ಕೆ ಕಾರಣಕರ್ತ ನಾದ ಬಾಲಕನ ತಂದೆ ಶಾಲಾ ಶಿಕ್ಷಕ.

ಹಣ ಪಾವತಿಸಲು ಯಾವುದೇ ದಾರಿ ಕಾಣದೆ ಕೊನೆಗೆ ಜೈಲಿಗೆ ಹೋಗುವುದು ಖಚಿತವಾದಾಗ ವಾಸವಿದ್ದ ಮನೆ ಮಾರಿ ಹಣ ತಂದು ನ್ಯಾಯಾಲಯದಲ್ಲಿ ಕಟ್ಟುತ್ತಾರೆ. ಅಪ್ರಾಪ್ತ ಬಾಲಕರು ಮಾಡುವ ತಪ್ಪಿನಿಂದ ಪೋಷಕರು ದಂಡ ತೆರಬೇಕಾಗಿ ಬಂದ ಇಂತಹ ಹಲವು ಪ್ರಕರಣಗಳನ್ನು ನನ್ನ ವೃತ್ತಿ ಜೀವನದಲ್ಲಿ ನೋಡಿದ್ದೇನೆ. ಮೊನ್ನೆ ಮೇ 19 ರಂದು ಪುಣೆಯಲ್ಲಿ 17 ವರ್ಷದ ಅಪ್ರಾಪ್ತ ಬಾಲಕನೊಬ್ಬ ಮದ್ಯದ ಅಮಲಿನಲ್ಲಿ ಪೋರ್ಷೆ ಕಾರ್ ಚಲಾಯಿಸಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಪಡಿಸಿ ಅನೀಶ್ ಅವಧಿಯಾ ಮತ್ತು ಅಶ್ವಿನಿ ಕೋಷ್ಟಾ ಎಂಬ ಇಬ್ಬರು ಸಾಫ್ಟ್ವೇರ್ ಉದ್ಯೋಗಿಗಳು ಸಾವನ್ನಪ್ಪಿದ ದುರಂತ ಘಟನೆ ನಮ್ಮ ಕಣ್ಣ ಮುಂದೆಯೇ ಇದೆ. (ಕೃಪೆ : ಶಫೀರ್ ಎ .ಎ ಫೇಸ್ ಬುಕ್ ಪೇಜ್ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಡಾಕ್ಟರ್ ಓದಿದವರು ಕೂಡ ಮೌಡ್ಯಾಚರಣೆ ಬಿಟ್ಟಿಲ್ಲ : ಸಿಎಂ ಸಿದ್ದರಾಮಯ್ಯ ಅಸಮಾಧಾನ

Published

on

ಸುದ್ದಿದಿನ,ಬೆಂಗಳೂರು:ವಿದ್ಯಾವಂತರಲ್ಲೇ ಜಾತಿಪ್ರಜ್ಞೆ ಹೆಚ್ಚಾಗುತ್ತಿದೆ. ಡಾಕ್ಟರ್ ಓದಿದವರು ಇನ್ನೂ ಮೌಡ್ಯ ಬಿಟ್ಟಿಲ್ಲ. ಓದಿದವರೇ ಇನ್ನೂ ಹಣೆಬರಹದಲ್ಲಿ, ಕರ್ಮ ಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೊಂಡಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಬಾಲ್ಯದಿಂದಲೇ ಇಂಥಾ ಮೌಡ್ಯದಲ್ಲಿ ನಂಬಿಕೆ ಇಡಬಾರದು ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಂಯುಕ್ತಾಶ್ರಯದಲ್ಲಿ ಇಂದು ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು

ಸರ್ಕಾರಿ ವಸತಿ ಶಾಲೆಗಳ ಮಕ್ಕಳು ಈ ಬಾರಿ ಶೇ96 ರಷ್ಟು ಫಲಿತಾಂಶ ಪಡೆದಿದ್ದಾರೆ. ಮುಂದಿನ ಬಾರಿ ಶೇ100 ರಷ್ಟು ಅಂಕ ಪಡೆಯಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಪ್ರಯತ್ನಗಳು ಸಾಗಲಿ ಎಂದರು.

ದಲಿತ ಸಂಘರ್ಷ ಸಮಿತಿ ರಾಜ್ಯದಲ್ಲಿ ನಡೆಸಿದ, “ನಮಗೆ ಸರಾಯಿ ಅಂಗಡಿ ಬೇಡ, ವಸತಿ ಶಾಲೆ ಬೇಕು” ಎನ್ನುವ ಹೋರಾಟದಿಂದ ಪ್ರೇರಿತನಾಗಿ ಮೊದಲ ಬಜೆಟ್ ಮಂಡಿಸುವ ವೇಳೆ ಗ್ರಾಮೀಣ ಭಾಗದಲ್ಲಿ ಮೊರಾರ್ಜಿ ಶಾಲೆಗಳನ್ನು ಆರಂಭಿಸಿದೆ. ಅವತ್ತಿನಿಂದ ನಿರಂತರವಾಗಿ ಮೊರಾರ್ಜಿ ವಸತಿ ಶಾಲೆಗಳನ್ನು ತೆರೆಯುತ್ತಲೇ ಇದ್ದೇನೆ. ಸದ್ಯ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ 833 ವಸತಿ ಶಾಲೆಗಳಿವೆ. ಅಲ್ಪ ಸಂಖ್ಯಾತ ಇಲಾಖೆಯಡಿಯಲ್ಲಿರುವುದೂ ಸೇರಿ ಒಟ್ಟು 946 ವಸತಿ ಶಾಲೆಗಳಿವೆ.

ಕೆಲವು ಹೋಬಳಿಯಲ್ಲಿ ಒಂದಕ್ಕಿಂತ ಹೆಚ್ಚು ವಸತಿ ಶಾಲೆಗಳಿವೆ. ಆದ್ದರಿಂದ ಕೆಲವು ಹೋಬಳಿಗಳಲ್ಲಿ ಇಲ್ಲವಾಗಿತ್ತು. ಹೀಗಾಗಿ ಈ ವರ್ಷ 20 ವಸತಿ ಶಾಲೆಗಳನ್ನು ಆರಂಭಿಸಲು ಅನುಮತಿ ನೀಡಿದ್ದೇನೆ. ಹೋಬಳಿಗೊಂದು ವಸತಿ ಶಾಲೆ ನನ್ನ ಗುರಿ ಮತ್ತು ಉದ್ದೇಶವಾಗಿದೆ.

ಗ್ರಾಮೀಣ ಭಾಗದಲ್ಲಿ ಸರ್ವರಿಗೂ ಗುಣಮಟ್ಟದ ವೈಚಾರಿಕತೆ, ವೈಜ್ಞಾನಿಕತೆಯಿಂದ ಕೂಡಿದ ಶಿಕ್ಷಣ ದೊರೆಯಬೇಕು. ಎಲ್ಲಾ ಜಾತಿ, ವರ್ಗದ ಮಕ್ಕಳಿಗೆ ಓದುವ ಅವಕಾಶ ಕಲ್ಪಿಸಿದ್ದು ನಮ್ಮ ಸಂವಿಧಾನ.

ಜಾತಿ ವ್ಯವಸ್ಥೆ ಕಾರಣದಿಂದ ಸಮಾಜದಲ್ಲಿ ಅಸಮಾನತೆ ಸೃಷ್ಟಿಯಾಗಿದೆ.‌ ಇದನ್ನು ಹೋಗಲಾಡಿಸಬೇಕಾಗಿದೆ. ನನಗೆ ಶಿಕ್ಷಣ ಸಿಕ್ಕಿದ್ದರಿಂದಲೇ ಮುಖ್ಯಮಂತ್ರಿ ಆಗುವ ಅವಕಾಶ ದೊರೆಯಿತು. ಇಲ್ಲದಿದ್ದರೆ ನಾನೂ ಎಮ್ಮೆ, ಹಸು ಮೇಯಿಸುತ್ತಾ ಅಷ್ಟಕ್ಕೇ ಸೀಮಿತ ಆಗಬೇಕಾಗಿತ್ತು.

ಬುದ್ದ, ಬಸವಣ್ಣ ಎಂಟು ಶತಮಾನಗಳ ಹಿಂದೆ ಜಾತಿ ವ್ಯವಸ್ಥೆ ಅಳಿಸಲು ಶ್ರಮಿಸಿದರು. ಆದರೆ ವಿದ್ಯಾವಂತರಲ್ಲೇ ಜಾತಿಪ್ರಜ್ಞೆ ಹೆಚ್ಚಾಗುತ್ತಿದೆ ಎಂಬುದು ವಿಪರ್ಯಾಸ. ಮಕ್ಕಳಿಗೆ ಜಾತಿ, ಧರ್ಮದ ತಾರತಮ್ಯ ಕಲಿಸುವವರೇ ನಾವು. ಆದ್ದರಿಂದ ಪೋಷಕರು, ಶಿಕ್ಷಕರು ಮೊದಲು ಕಂದಾಚಾರ,‌ ಮೌಡ್ಯದಿಂದ ಹೊರಗೆ ಬರಬೇಕು. ಆಗ ಮಕ್ಕಳೂ ವೈಜ್ಞಾನಿಕವಾಗಿ ಬೆಳೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತಾರೆ.

ಹುಟ್ಟುವಾಗ ಎಲ್ಲಾ ಮಕ್ಕಳೂ ವಿಶ್ವ ಮಾನವರಾಗಿ ಹುಟ್ಟಿ ಬೆಳೆಯುತ್ತಾ ಅಲ್ಪ ಮಾನವರಾಗುತ್ತಾರೆ ಎನ್ನುವ ಕುವೆಂಪು ಅವರ ಮಾತು ಇಂದಿಗೂ ಸತ್ಯವಾಗಿದೆ. ಮಕ್ಕಳು ಅಲ್ಪ ಮಾನವರಾಗದಂತೆ ಕಾಪಾಡುವ ಜವಾಬ್ದಾರಿ ಶಿಕ್ಷಕರು, ಪೋಷಕರ ಮೇಲಿದೆ.

ಬಸವಣ್ಣನವರು 12ನೇ ಶತಮಾನದಲ್ಲೇ ದಲಿತರು ಮತ್ತು ಬ್ರಾಹ್ಮಣರ ನಡುವೆ ಅಂತರ್ಜಾತಿ ವಿವಾಹ ಮಾಡಿಸಿ ಗೆದ್ದರು. ಜಾತಿ ವ್ಯವಸ್ಥೆ ಶಿಥಿಲವಾಗಬೇಕಾದರೆ ದಲಿತರು, ಹಿಂದುಳಿದವರಿಗೆ ಆರ್ಥಿಕ‌ ಶಕ್ತಿ ಬರಬೇಕು, ಸಾಮಾಜಿಕವಾಗಿಯೂ ಶಕ್ತಿ ಬರಬೇಕು. ಈ ಬಗ್ಗೆ ಅಂಬೇಡ್ಕರ್ ಅವರು ಸಂವಿಧಾನ ಸಭೆಯಲ್ಲಿ ಆಡಿದ ಮಾತುಗಳು ಇವತ್ತಿಗೂ ಬಹಳ ಪ್ರಸ್ತುತವಾಗಿದೆ.

ಹಿಂದೆ ಮುಂದುವರೆದ ಜಾತಿಯ ಹೆಣ್ಣು ಮಕ್ಕಳಿಗೂ ಶಿಕ್ಷಣ ಕಲಿಯುವ ಅವಕಾಶ ಇರಲಿಲ್ಲ. ಎಲ್ಲಾ ಜಾತಿಯ ಹೆಣ್ಣುಮಕ್ಕಳೂ ಶಿಕ್ಷಣದ ವಿಚಾರದಲ್ಲಿ ಶೋಷಿತರಾಗಿದ್ದವರೇ. ಈಗ ಹೆಣ್ಣು ಮಕ್ಕಳೇ ಶಿಕ್ಷಣದಲ್ಲಿ ಮುಂದಿರುವುದು ನೋಡಿದರೆ ಖುಷಿ ಆಗುತ್ತದೆ. ಇದಕ್ಕೆ ಕಾರಣವಾದ ನಮ್ಮ ಸಂವಿಧಾನಕ್ಕೆ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಕೋಟಿ ಪ್ರಣಾಮಗಳು ಎಂದು ಭಾವುಕರಾದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕ್ರೀಡಾ ಇಲಾಖೆಯಲ್ಲಿ ಟೆಂಡರ್ ಇಲ್ಲದೇ ಕಾಮಗಾರಿ ಮಂಜೂರಾತಿ ಇಲ್ಲ

Published

on

ಸುದ್ದಿದಿನಡೆಸ್ಕ್:ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಎಲ್ಲಾ ಕಾಮಗಾರಿಗಳನ್ನು ಟೆಂಡರ್ ಆಹ್ವಾನಿಸಿಯೇ ಅನುಷ್ಠಾನಗೊಳಿಸುವಂತೆ ಅವರು ಸೂಚಿಸಿದರು.

174 ಕೋಚ್‌ಗಳ ನೇಮಕಕ್ಕೆ ಸರ್ಕಾರ ಅನುಮೋದನೆ ನೀಡಿದ್ದು, ವೃಂದ ಮತ್ತು ನೇಮಕಾತಿ ನಿಯಮ ಅಂತಿಮಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

1 ಸಾವಿರದ 486 ಕ್ರೀಡಾಪಟುಗಳಿಗೆ ಕ್ರೀಡಾ ಪ್ರೋತ್ಸಾಹಧನ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಕಂಠೀರವ ಕ್ರೀಡಾಂಗಣದಲ್ಲಿ ವಸ್ತುಸಂಗ್ರಹಾಲಯ ನಿರ್ಮಾಣ ಕಾರ್ಯದಲ್ಲಿ ಯಾವುದೇ ಪ್ರಗತಿ ಇಲ್ಲದಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿಯವರು ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ಸೂಚಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸರ್ಕಾರಿ ನೌಕರರ ವಿವರ ಸಲ್ಲಿಸಲು ಸಂಘಕ್ಕೆ ಕರೆ

Published

on

ಸುದ್ದಿದಿನ,ದಾವಣಗೆರೆ : ಪ್ರತಿ ವರ್ಷ ಜನವರಿ ಅಥವಾ ಫೆಬ್ರವರಿ 2024ನೇ ಮಾಹೆಯಲ್ಲಿ ಎಲ್ಲಾ ಇಲಾಖಾ ನೌಕರರಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ವಾರ್ಷಿಕ ಸದಸ್ಯತ್ವ ಶುಲ್ಕ ರೂ.200/- (ಎರಡು ನೂರು ರೂಪಾಯಿ) ಗಳನ್ನು ಕಟಾಯಿಸಿರುವ ನೌಕರರ ವಿವರವನ್ನು ನೀಡಲು ತಿಳಿಸಿರುತ್ತಾರೆ.

ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿ ಚುನಾವಣೆ ನಡೆಸಲು ಅರ್ಹ ಮತದಾರರನ್ನು ನಿಗಧಿತ ನಮೂನೆಯಲ್ಲಿ ತಮ್ಮ ಇಲಾಖೆ ಹಾಗೂ ಆಧೀನ ಕಛೇರಿಗಳಲ್ಲಿ (ದಾವಣಗೆರೆ ತಾಲ್ಲೂಕು ವ್ಯಾಪ್ತಿಗೆ ಸಂಬಂಧಿಸಿದಂತೆ ಅರ್ಹ ಮತದಾರರ ಪಟ್ಟಿ ತಯಾರಿಸಲು ವಿವರವಾದ ಮಾಹಿತಿಯನ್ನು) ಭರ್ತಿ ಮಾಡಿ ಪ್ರತಿಯನ್ನು ಜಿಲ್ಲಾ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನ, ನಿಜಲಿಂಗಪ್ಪ ಬಡಾವಣೆ, ರಿಂಗ್ ರೋಡ್ ಸರ್ಕಲ್, ದಾವಣಗೆರೆ ಜೂನ್ 21 ರೊಳಗಾಗಿ ಕಳುಹಿಸಬೇಕೆಂದು ಕ.ರಾ.ಸ.ನೌ.ಸಂಘದ ಜಿಲ್ಲಾಧ್ಯಕ್ಷರದ ವಿರೇಶ್.ಎಸ್.ಒಡೆಯನಪುರ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending