ನೆಲದನಿ
ನೆಲಮೂಲ ಸಂಸ್ಕೃತಿಯ ಜಾಗೃತ ದನಿಯಾದ ವೈಚಾರಿಕ ಚಿಂತಕ ‘ಡಾ.ಕೆ.ಎಸ್.ಭಗವಾನ್’
- ಡಾ.ಕೆ.ಎ.ಓಬಳೇಶ್
ಭಾರತದ ನೆಲದಲ್ಲಿ ಸಾಮಾಜಿಕ ಅಸಮಾನತೆಯನ್ನು ಪ್ರತಿಭಟಿಸಿ, ಸಮಾನತೆಯನ್ನು ಪ್ರತಿಪಾದಿಸುವ ನೆಲೆಯಲ್ಲಿ ಹಲವಾರು ದಾರ್ಶನಿಕರು ಜೀವತಳೆದಿದ್ದಾರೆ. ಇಂತಹ ದಾರ್ಶನಿಕರಲ್ಲಿ ಬುದ್ಧ, ಬಸವ, ಕನಕ, ಫುಲೆ, ವಿವೇಕಾನಂದ, ಅಂಬೇಡ್ಕರ್, ಪೆರಿಯಾರ್ ಹಾಗೂ ಮುಂದಾದವರು ಪ್ರಮುಖರಾಗಿದ್ದಾರೆ. ಇವರೆಲ್ಲರೂ ಭಾರತದ ನೆಲದಲ್ಲಿ ಸನಾತನವಾದಿಗಳು ರೂಪಿಸಿದ ಜಾತಿ, ಲಿಂಗ ತಾರತಮ್ಯದ ಕಟ್ಟುಪಾಡುಗಳನ್ನು ಮಾನವೀಯ ನೆಲೆಯಲ್ಲಿ ಮೀರುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಇಂತಹ ದಾರ್ಶನಿಕ ಚಿಂತನಧಾರೆಗಳನ್ನು ಸಮಕಾಲೀನ ತುರ್ತಿಗೆ ಪೂರಕವಾಗಿ ಅನುಸಂಧಾಗೊಳಿಸುವ ಮೂಲಕ ಸಮಸಮಾಜದ ಕನಸೊತ್ತ ಹಲವಾರು ವಿಚಾರವಾದಿಗಳು ನಮ್ಮ ಮುಂದಿದ್ದಾರೆ. ಇಂತಹ ವಿಚಾರವಾದಿಗಳಲ್ಲಿ ಡಾ.ಕೆ.ಎಸ್.ಭಗವಾನರು ಪ್ರಮುಖರಾಗಿದ್ದಾರೆ. ಸಾವಿರಾರು ವರ್ಷಗಳಿಂದಲೂ ಸನತನವಾದಿಗಳು ಧರ್ಮ ಮತ್ತು ದೇವರ ಹೆಸರಿನಲ್ಲಿ ಈ ನೆಲದ ಮೂಲವಾಸಿಗಳನ್ನು ಗುಲಾಮರಾಗಿಸಿಕೊಂಡ ಬಗೆಯನ್ನು ತನ್ನ ವೈಚಾರಿಕ ನಿಲುವುಗಳ ಮೂಲಕ, ಶೋಷಿತ ಸಮುದಾಯಗಳಿಗೆ ಜಾಗೃತಿ ಮೂಡಿಸುತ್ತ ಬಂದಿರುವ ಡಾ.ಕೆ.ಎಸ್.ಭಗವಾನರ ಜೀವನ ಹಾಗೂ ಚಿಂತನೆಗಳ ಮೇಲೆ ಸಂಕ್ಷಿಪ್ತವಾಗಿ ಬೆಳಕು ಚೆಲ್ಲುವುದು ಪ್ರಸ್ತುತ ಲೇಖನದ ಆಶಯವಾಗಿದೆ.
ಶ್ರೀಯುತರು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕಲ್ಲಳ್ಳಿ ಗ್ರಾಮದಲ್ಲಿ ಶ್ರೀಯುತ ಸಣ್ಣೆಗೌಡ ಕೆಂಪಾಮ್ಮ ದಂಪತಿಗಳ ಮಗನಾಗಿ ದಿನಾಂಕ 14 ಜುಲೈ 1945 ರಂದು ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕಲ್ಲಳ್ಳಿ, ಮಾಧ್ಯಮಿಕ ಶಿಕ್ಷಣವನ್ನು ಪಕ್ಕದ ಗ್ರಾಮವಾದ ಹರವಿ, ಪ್ರೌಢ ಶಿಕ್ಷಣ ಮತ್ತು ಪದವಿಪೂರ್ವ ಶಿಕ್ಷಣವನ್ನು ಹಾಸನ ಜಿಲ್ಲೆಯ ಹರಕಲಗೋಡು, ಪದವಿ ಶಿಕ್ಷಣವನ್ನು ಮೈಸೂರಿನ ಮಹಾರಾಜ ಕಾಲೇಜು ಹಾಗೂ ಆಂಗ್ಲ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ಪೂರೈಸಿದರು.
ನಂತರದಲ್ಲಿ ಕೊಡಗು ಹಾಗೂ ಮೈಸೂರಿನಲ್ಲಿ ಕೆಲವು ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸಿ, 1973 ರಿಂದ 2005ರವರೆಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಕೆ.ಎಸ್.ಭಗವಾನರು ತಮ್ಮ ಹೈಸ್ಕೂಲ್ ಹಂತದಲ್ಲಿಯೇ ಸಾಹಿತ್ಯದ ಆಸಕ್ತಿಯನ್ನು ಮೈಗೂಡಿಸಿಕೊಂಡವರು.
ಇವರ ಸಾಹಿತ್ಯಾಸಕ್ತಿಗೆ ಪ್ರೇರಣೆಯಾಗಿದ್ದು ಕುವೆಂಪು ಅವರ ವ್ಯಕ್ತಿತ್ವ. ಭಗವಾನರು ಒಮ್ಮೆ ತಮ್ಮ ಸ್ನೇಹಿತನ ಬಳ್ಳಿಯಿದ್ದ ಕೃತಿಯೊಂದರಲ್ಲಿನ ಪ್ರಬಂಧದಲ್ಲಿ ಕುವೆಂಪು ಅವರು ತಮ್ಮ ಹೈಸ್ಕೂಲ್ ಹಂತದ ವೇಳೆಗೆ ಕವಿತೆಗಳನ್ನು ರಚಿಸಿ, ಕವನ ಸಂಕಲನವನ್ನು ಪ್ರಕಟಿಸಿರುವ ಲೇಖನವನ್ನು ಓದಿ ನಾನು ಕೂಡ ಹೈಸ್ಕೂಲ್ ವಿದ್ಯಾರ್ಥಿ. ಆದ ಕಾರಣ ನಾನು ಯಾಕೆ ಬರೆಯಬಾರದು ಎಂದು ಕವಿತೆ ಬರೆಯುವ ಗೀಳಿಗೆ ಒಳಗಾಗಿದ್ದರು.
ಆಗ ಕುವೆಂಪು ಯಾರು ಎಂಬ ವಿಚಾರವು ಭಗವಾನರಿಗೆ ತಿಳಿದಿರಲಿಲ್ಲ. ಈ ಸಂದರ್ಭದಲ್ಲಿ ಕಾವ್ಯ ರಚನೆಗೆ ಮುಂದಾದ ಭಗವಾನರಿಗೆ ಹಲವಾರು ತೊಡಕುಗಳು ಎದುರಾದವು. ಆಗ ಇವರು ತಿಳಿದುಕೊಂಡ ವಿಚಾರವೆಂದರೆ ಕಾವ್ಯ ರಚನೆ ಮಾಡಬೇಕಾದರೆ ಸಾಕಷ್ಟು ಓದು ಮತ್ತು ಜ್ಞಾನದ ಅಗತ್ಯವಿದೆ ಎಂಬುದು.
ಹೀಗಾಗಿ ಸಾಕಷ್ಟು ಕೃತಿಗಳನ್ನು ಓದುವ ಮೂಲಕ ಕಾವ್ಯ ರಚನೆ ಮಾಡುವ ಹವ್ಯಾಸವನ್ನು ರೂಢಿಸಿಕೊಂಡು ಹೈಸ್ಕೂಲ್ ಹಾಗೂ ಪದವಿಪೂರ್ವ ಹಂತದಲ್ಲಿಯೇ ಶಾಲೆಯ ಹಲವಾರು ಸಂಚಿಕೆಗಳಲ್ಲಿ ಇವರು ತಮ್ಮ ಕವಿತೆಗಳನ್ನು ಪ್ರಕಟಿಸಿ ಹಲವರ ಮೆಚ್ಚುಗೆಗೂ ಪಾತ್ರರಾಗಿದ್ದರು.
ಭಗವಾನರು ಪದವಿ ಶಿಕ್ಷಣಕ್ಕೆ ಪ್ರವೇಶ ಪಡೆದ ತರುವಾಯದಲ್ಲಿ ಇಂಗ್ಲೀಷ್ ಕಲಿಯುವ ಆಸಕ್ತಿಯನ್ನು ಮೈಗೂಡಿಸಿಕೊಂಡು ಕವಿತೆಯ ಬಗೆಗಿನ ಗೀಳನ್ನು ದೂರ ಮಾಡಿಕೊಂಡರು. ನಂತರ ಆಂಗ್ಲ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ತರುವಾಯದಲ್ಲಿ ಸಾಹಿತ್ಯದಲ್ಲಿ ಆಸಕ್ತಿಯನ್ನು ಮೈಗೂಡಿಸಿಕೊಂಡು ತಮ್ಮ ಬರವಣಿಗೆಯನ್ನು ಮುಂದುವರೆಸಿದರು.
ಆದರೆ ಅದು ಅಷ್ಟೊಂದು ಗಟ್ಟಿತನ ಹಾಗೂ ಮೌಲ್ಯಯುತವಾಗಿರಲಿಲ್ಲ. ಈ ಹಂತದಲ್ಲಿ ತಾವು ಗಳಿಸಿದ ಆಂಗ್ಲಭಾಷೆಯ ಪಾಂಡಿತ್ಯದಿಂದ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಲಿಯೋ ಟಾಲ್‍ಸ್ಟಾಯ್ ಹಾಗೂ ಮುಂತಾದವರ ಕತೆಗಳನ್ನು ಕನ್ನಡಕ್ಕೆ ಅನುವಾದಿಸುವ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡರು.
ಇದಾದ ನಂತರ ಶೇಕ್ಸ್‍ಪಿಯರ್‍ನ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸುವ ಕಾರ್ಯಕ್ಕೆ ಮುಂದಾದರು. ಆಂಗ್ಲ ನಾಟಕಗಳಲ್ಲಿನ ರಸ ಸನ್ನಿವೇಶಗಳನ್ನು ಕನ್ನಡಕ್ಕೆ ಕಟ್ಟಿಕೊಡುವಲ್ಲಿ ತಮಗೆ ಎದುರಾದ ಗೊಂದಲಗಳನ್ನು ನಿವಾರಿಸಿಕೊಳ್ಳಲು ತಮ್ಮ ಶ್ರೀಮತಿಯವರ ಮುಂದೆ ಅನುವಾದಿತ ನಾಟಕಗಳನ್ನು ಓದಿ, ಅವರು ಅದಕ್ಕೆ ಪ್ರತಿಕ್ರಿಯಿಸಿದ ತರುವಾಯದಲ್ಲಿ ಇದು ಕನ್ನಡಿಗರ ಮನೆಯಂಗಳನ್ನು ಪ್ರವೇಶಿಸುತ್ತದೆ ಎಂಬ ಬಲವಾದ ನಂಬಿಕೆಯೊಂದಿಗೆ ಸುಮಾರು 11 ನಾಟಕಗಳನ್ನು ಅನುವಾದಿಸುವ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಕೀರ್ತಿ ಭಗವಾನರಿಗೆ ಸಲ್ಲುತ್ತದೆ.
ಶ್ರೀಯುತರ ಆಂಗ್ಲ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಅಮೇರಿಕಾದ ‘ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯ’ವು ಡಿ.ಲಿಟ್ (ಡಾಕ್ಟರ್ ಆಫ್ ಲಿಟರೇಚರ್) ಪದವಿಯನ್ನು ನೀಡಿ ಗೌರವಿಸಿದೆ.
ಶ್ರೀಯುತ ಕೆ.ಎಸ್.ಭಗವಾನ್ ಅವರು ತಮ್ಮಲ್ಲಿ ಬಾಲ್ಯದಿಂದಲೂ ಅಂತರ್ಗತವಾಗಿ ನೆಲೆಯೂರಿದ್ದ ಸಾಹಿತ್ಯದ ಬಗ್ಗೆ ವಿಶೇಷವಾದ ಕಾಳಜಿಯನ್ನು ಮೈಗೂಡಿಸಿಕೊಂಡವರು.
ಸಾಹಿತ್ಯದ ಮೂಲಕವಾಗಿ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಹಂಬಲ ಹೊಂದಿದ್ದರು. ಹೀಗಾಗಿ ವೈಚಾರಿಕ ಚಿಂತನೆಯುಳ್ಳ ವಿಮರ್ಶಾ ಸಾಹಿತ್ಯಕ್ಕೆ ಮುಂದಾದ ಸಂದರ್ಭದಲ್ಲಿ ಹಲವಾರು ತೊಡಕುಗಳು ಇವರ ಮುಂದೆ ಸೃಷ್ಟಿಯಾದವು. ಇಂತಹ ಸಂದರ್ಭದಲ್ಲಿ ಕುವೆಂಪು ಅವರ ಭಾಷಣದ ಪ್ರತಿರೂಪವಾಗಿ ಮೂಡಿಬಂದ ಲೇಖನದಿಂದ ಪ್ರಭಾವಿತರಾದವರು.
ಕುವೆಂಪು ಅವರು ಮಹಾರಾಜ ಕಾಲೇಜಿನ ತಮ್ಮ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಆ ಲೇಖನದಲ್ಲಿ ‘ತತ್ವಶಾಸ್ತ್ರ, ಮನಶಾಸ್ತ್ರ, ಇತಿಹಾಸ ಹಾಗೂ ಇತರೆ ಮಾನವೀಕ ಶಾಸ್ತ್ರಗಳನ್ನು ಆಳವಾಗಿ ಅಧ್ಯಯನ ಮಾಡದೆ ವಿಮರ್ಶೆ ಮಾಡುವ ಬರಹವೆಲ್ಲ ಬುರುಬುರು ನೊರೆ’ ಎಂಬುದಾಗಿ ಉಲ್ಲೇಖಿಸುತ್ತಾರೆ. ಈ ಮಾತಿನಿಂದ ಪ್ರೇರಿತರಾದ ಭಗವಾನರು ಸ್ವಲ್ಪ ದಿನಗಳ ಕಾಲ ಸಾಹಿತ್ಯದ ಬರವಣಿಗೆಯನ್ನು ನಿಲ್ಲಿಸಿ ತತ್ವಶಾಸ್ತ್ರ, ಮಾನವಶಾಸ್ತ್ರ, ಧರ್ಮ, ವಿಜ್ಞಾನ, ಇತಿಹಾಸ ಮುಂತಾದ ಪ್ರಕಾರಗಳನ್ನು ಅಧ್ಯಯನಕ್ಕೆ ಒಳಪಡಿಸುತ್ತಾರೆ.
ಹಲವಾರು ವಿಷಯಗಳಲ್ಲಿ ಪಾಂಡಿತ್ಯವನ್ನು ಗಳಿಸಿದ ತರುವಾಯದಲ್ಲಿ ವೈಚಾರಿಕ ಸಾಹಿತ್ಯದ ಮೂಲಕ ಸಾಮಾಜಿಕ ಕಟ್ಟುಪಾಡುಗಳಲ್ಲಿ ಅಂತರ್ಗತವಾಗಿರುವ ಮೂಲಭೂತವಾದಿ ಧೋರಣೆಗಳನ್ನು ಎಳೆಎಳೆಯಾಗಿ ಬಿಡಿಸಿ ಜನತೆಯಲ್ಲಿ ಜಾಗೃತ ಪ್ರಜ್ಞೆಯನ್ನು ಮೂಡಿಸುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.
ಶ್ರೀಯುತ ಕೆ.ಎಸ್.ಭಗವಾನರು ಈ ನೆಲದ ಶೋಷಿತ ಸಮುದಾಯಗಳ ದನಿಯಾಗಿ ನಿಂತು ಸನಾತನವಾದಿಗಳು ಧರ್ಮದ ಹೆಸರಿನಲ್ಲಿ ರೂಢಿಸಿಕೊಂಡು ಬಂದ ತತ್ವ ಸಿದ್ಧಾಂತಗಳನ್ನು ಪ್ರತಿರೋಧಿಸಿದ್ದಾರೆ.
ಭಾರತದ ನೆಲದಲ್ಲಿ ಸಮಾನತೆಯ ಹರಿಕಾರನಾಗಿ ಜನ್ಮತಳೆದ ಬುದ್ಧನ ತತ್ವ ಸಿದ್ಧಾಂತಗಳನ್ನು ಸಮಕಾಲೀನ ತುರ್ತಿಗೆ ಪೂರಕವಾದ ನೆಲೆಯಲ್ಲಿ ಅನುಸಂಧಾನಗೊಳಿಸುವ ಮೂಲಕ, ಸಾಮಾನ್ಯ ಜನರ ಬದುಕಿನ ಭಾಗವಾಗಿ ಬೆರೆತು ಹೋಗಿರುವ ಬೌದ್ಧ ಚಿಂತನೆಗಳು ಹಾಗೂ ಬೌದ್ಧ ಕುರುಹುಗಳನ್ನು ಅನಾವರಣಗೊಳಿಸುತ್ತ ಬಂದಿದ್ದಾರೆ.
ಭಾರತದ ಮೂಲನಿವಾಸಿಗಳ ಸ್ವಾಭಿಮಾನದ ಪ್ರತೀಕವಾದ ಬುದ್ಧನ ಧಮ್ಮ ಹಾಗೂ ಬೌದ್ಧ ಅನುಯಾಯಿಗಳು ಸನಾತನವಾದಿಗಳ ಕ್ರೌರ್ಯಕ್ಕೆ ಗುರಿಯಾದ ಬಗೆಯನ್ನು ತಮ್ಮ ‘ಶಂಕರಾಚಾರ್ಯ ಮತ್ತು ಪ್ರತಿಗಾಮಿತನ’ ಎಂಬ ಕೃತಿಯಲ್ಲಿ ಸವಿವರವಾಗಿ ಕಟ್ಟಿಕೊಟ್ಟಿದ್ದಾರೆ. ಹಾಗೆಯೇ ಭಾರತೀಯರಿಗೆ ಬುದ್ಧ ಆದರ್ಶನಾಗಬೇಕೆ ಹೋರತು ರಾಮನಲ್ಲ ಎಂಬುದನ್ನು ಧಾರ್ಮಿಕ ಪಠ್ಯಗಳ ಹಿನ್ನೆಲೆಯಲ್ಲಿ ಸಾಬೀತುಪಡಿಸುತ್ತ ಬಂದಿದ್ದಾರೆ.
ಇದನ್ನು ಇವರ ‘ರಾಮ ಮಂದಿರ ಯಾಕೆ ಬೇಡ?’ ಎಂಬ ಕೃತಿಯಲ್ಲಿ ಸಮಗ್ರವಾಗಿ ಕಾಣಬಹುದಾಗಿದೆ. ಹಾಗೆಯೇ ಸನಾತನವಾದಿಗಳು ತಮ್ಮ ಅಸ್ತಿತ್ವದ ಉಳಿವಿಗಾಗಿ ಈ ನೆಲದ ಶೂದ್ರಾತಿ ಶೂದ್ರ ವರ್ಗವನ್ನು ಶೋಷಣೆಗೆ ಒಳಪಡಿಸಿ, ಈ ಸಮುದಾಯಗಳ ಅಸ್ಮಿತೆಯ ಭಾಗವಾದ ಬುದ್ಧನ ಧಮ್ಮವನ್ನು ಭಾರತದ ನೆಲದಿಂದ ಕಣ್ಮರೆಯಾಗಿಸಿದ ಬಗೆಯನ್ನು ‘ಹಿಂದೂ ಸಾಮ್ರಾಜ್ಯಶಾಹಿಯ ಇತಿಹಾಸ’ ಎಂಬ ಕೃತಿಯ ಮೂಲಕ ಶೋಷಿತ ಸಮುದಾಯಗಳ ಚಾರಿತ್ರಿಕ ಅಸ್ಮಿತೆಯನ್ನು ತೆರೆದಿಟ್ಟಿದ್ದಾರೆ.
ಶ್ರೀಯುತ ಕೆ.ಎಸ್.ಭಗವಾನರು ಬುದ್ಧ, ಬಸವ, ವಿವೇಕಾನಂದ, ಅಂಬೇಡ್ಕರ್, ಕುವೆಂಪು ಹಾಗೂ ಪಾಶ್ಚಿಮಾತ್ಯ ದಾರ್ಶನಿಕರಾದ ಬರ್ಟನ್ ರೆಸಲ್, ಮಿಲ್ಲೆಟ್, ಡಾಂಟೆ, ಶೇಕ್ಸ್‍ಪಿಯರ್ ಮುಂತಾದವರ ಚಿಂತನಧಾರೆಗಳಿಂದ ಪ್ರಭಾವಿತರಾದವರು. ಇವರ ತತ್ವ ಚಿಂತನೆಗಳಲ್ಲಿನ ಮಾನವೀಯ ಅಂಶಗಳನ್ನು ಮೈಗೂಡಿಸಿಕೊಂಡು ಸದಾ ಜೀವಪರವಾದ ಚಿಂತನೆಗಳನ್ನು ಪ್ರತಿಪಾದಿಸುತ್ತ ಬಂದಿದ್ದಾರೆ.
ಸುಮಾರು ನಾಲ್ಕು ದಶಕಗಳಿಂದಲೂ ದಲಿತಪರ, ರೈತಪರ, ಮಹಿಳಾಪರ, ಭಾಷಾಪರ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತಮ್ಮ ವೈಚಾರಿಕ ಚಿಂತನೆಗಳ ಮೂಲಕ ಸಮಸಮಾಜದ ಕನಸು ಕಾಣುತ್ತ ಬಂದಿರುವ ಕೆ.ಎಸ್.ಭಗವಾನರು ಈ ನೆಲದ ಶೋಷಿತರ ದನಿಯಾಗಿ ನಿಂತವರು. ಶ್ರೀಯುತರ ವೈಚಾರಿಕ ಚಿಂತನೆಗಳಿಂದ ಭಯಗ್ರಸ್ತರಾದ ಸನಾತನವಾದಿಗಳು ತಮ್ಮ ಅಸ್ತಿತ್ವದ ಉಳಿವಿಗಾಗಿ ಇವರ ಮೇಲೆ ಮಾರಾಣಾಂತಿಕ ಹಲ್ಲೆಯಂತಹ ಅಮಾನವೀಯ ಕೃತ್ಯಕ್ಕೂ ಮುಂದಾಗಿದ್ದಾರೆ. ತಮ್ಮ ಜೀವದ ಹಂಗನ್ನು ತೊರೆದ ಭಗವಾನರು ಸತ್ಯದ ಪರವಾಗಿ ನಿರಂತರವಾಗಿ ಮುನ್ನೆಡೆಯುತ್ತಿದ್ದಾರೆ.
ಹನ್ನೊಂದು ಆಂಗ್ಲ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ‘ಅನನ್ಯತೆ’, ‘ಆಂತರ್ಯ’, ‘ಕುವೆಂಪು’, ‘ಬದಲಾವಣೆ’ ಹಾಗೂ ‘ಕಣಿಗಲೆ’ ಎಂಬ ವಿಮರ್ಶಾ ಕೃತಿಗಳನ್ನು, ವಿಚಾರ ಸಾಹಿತ್ಯಕ್ಕೆ ಸಂಬಂಧಿಸಿದಂತೆ ‘ಭಾಷೆ ಮತ್ತು ಸಂಸ್ಕೃತಿ, ‘ಗಾಂಧಿಯನ್ನು ಗೂಡ್ಸೆ ಏಕೆ ಕೊಂದ?’, ‘ಬುದ್ಧ ಮತ್ತು ಕಾರ್ಲ್‍ಮಾಕ್ರ್ಸ್’, ‘ಶಂಕರಾಚಾರ್ಯ ಮತ್ತು ಪ್ರತಿಗಾಮಿತನ’, ಹಾಗೆಯೇ ಚರಿತ್ರೆಗೆ ಪೂರಕವಾಗಿ ‘ಇತಿಹಾಸ ಚಕ್ರ’, ‘ಇತಿಹಾಸದ ಪಾಠಗಳು’, ಹಾಗೂ ‘ಹಿಂದೂ ಸಾಮ್ರಾಜ್ಯಶಾಹಿಯ ಇತಿಹಾಸ’ ಮತ್ತು ಮಕ್ಕಳ ಸಾಹಿತ್ಯ, ಸಂಪಾದನೆ, ಅನುವಾದ ಕ್ಷೇತ್ರದಲ್ಲಿ ಹಲವಾರು ಕೃತಿಗಳನ್ನು ಕನ್ನಡ ಸಾಹಿತ್ಯ ವಲಯಕ್ಕೆ ಸಮರ್ಪಿಸಿದ್ದಾರೆ.
ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಸಾಹಿತ್ಯದ ಮೂಲಕ ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವ್ಯಕ್ತಪಡಿಸುವ ಎದೆಗಾರಿಕೆಯನ್ನು ಹೊಂದಿರುವ ಶ್ರೀಯುತರಿಗೆ ಕರ್ನಾಟಕ ಸರ್ಕಾರವು ‘ರಾಜ್ಯೋತ್ಸವ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ. ಇದರೊಂದಿಗೆ ಹಲವಾರು ಸಂಘ ಸಂಸ್ಥೆಗಳಿಂದ ವಿಶೇಷವಾದ ಗೌರವ ಮತ್ತು ಪುರಸ್ಕಾರಕ್ಕೆ ಭಾಜನರಾದ ಶ್ರೀಯುತರಿಗೆ ಸುದ್ಧಿದಿನ ಪತ್ರಿಕಾ ಬಳಗದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.
(-ಡಾ.ಕೆ.ಎ.ಓಬಳೇಶ್
9591420216)
ಸುದ್ದಿದಿನ.ಕಾಂ|ವಾಟ್ಸಾಪ್|9980346243