ದಿನದ ಸುದ್ದಿ
ನೀವ್ ಕಾರಣ ನೀವೇ ಪ್ರೇರಣಾ..!
- ಹ.ರಾ.ಮಹಿಶ
“ಅಕ್ಟೋವರ್ 9″ ಬಹುಜನ ನಾಯಕ ದಾದಾಸಾಹೇಬ್ ಕಾನ್ಷಿರಾಂಜಿಯವರು ಪರಿನಿಬ್ಬಾಣ ಹೊಂದಿದ ದುಃಖದ ದಿನ.ಭಾರತದ ಜಾಗೃತಗೊಂಡ ಬಹುಜನ ಸಮಾಜವು ಇತರರನ್ನೂ ಜಾಗೃತಗೊಳಿಸಿತ್ತಾ ಅವರ ಮಾರ್ಗವನ್ನು ಚಾಚೂತಪ್ಪದೆ ಅನುಸರಿಸಿ ನಡೆಯುತ್ತೇವೆಂದು ಶಪಥ ಮಾಡಬೇಕಾದ ಸಂಕಲ್ಪದಿನ.
ಕಳೆದ ಹನ್ನೆರಡು ವರ್ಷಗಳ ಹಿಂದೆ ದಾದಾಸಾಹೇಬರು ದೇಹ ತ್ಯಜಿಸಿದ ಈ ದಿನ ಬಹುಜನ ಚಳವಳಿಯ ಪ್ರಮುಖರು ಮೈಸೂರಿನ ಗಂಗೋತ್ರಿಯ ಗಾಂಧಿಭವನದಲ್ಲಿ ಸೇರಿಕೊಂಡೆವು (ಮಾನ್ಯ ಮಹೇಶಣ್ಣ ಮುಂತಾದವರು ಉತ್ತರಪ್ರದೇಶದ ಲಕ್ನೊ ಗೆ ಹೊರಟರು) ಇನ್ನುಳಿದವರು ಸೇರಿ ಸಂತಾಪ ಸಭೆ ಮಾಡಿದೆವು. ಆಕಾಶವೇ ಕಳಚಿಬಿದ್ದಂತೆ ದಿಕ್ಕುಗಾಣದಂತಾಗಿತ್ತು ಎಲ್ಲರ ಮುಖದಲ್ಲಿಯೂ ದುಗುಡ ದುಃಖ ದುಮ್ಮಾನಗಳು ಮಡುಗಟ್ಟಿತ್ತು.
ಗಾಢಮೌನ ಮೆಲುದನಿಯ ಕಡಿಮೆ ಮಾತುಗಳಲ್ಲೇ ಸಭೆ ಮುಕ್ತಾಯವಾಗಿ ಮುಂದಿನ ಭಾನುವಾರ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ರಾಜ್ಯಮಟ್ಟದ ಸಂತಾಪ ಸಮಾರಂಭ ಏರ್ಪಡಿಸುವ ಬಗ್ಗೆ ಭಾಗವಹಿಸುವವರ ಬಗ್ಗೆ ಕಾರ್ಯಕ್ರಮದ ರೂಪರೇಷೆಯ ಬಗ್ಗೆ ಚರ್ಚಿಸಲಾಯಿತು.
ಇನ್ನೇನು ಸಭೆ ಮುಗಿಯುವಂತಿತ್ತು… ಹನಸೋಗೆ ಸೋಮಣ್ಣ ಹಿಂದೆಂದಿಗಿಂತ ತುಸು ಹೆಚ್ಚು ಗಂಭೀರವಾಗಿ ಕುಳಿತಿದ್ದರು.. ಕೈಯಲ್ಲೊಂದು ಹಾಡು ಬರೆದ ಹಾಳೆಯಿತ್ತು. ಅವರ ಪಕ್ಕದಲ್ಲೇ ಕುಳಿತಿದ್ದ ನಾನು ಅವರ ಮುಖನೋಡಿ ಸೋಮಣ್ಣ ಹೊಸ ಹಾಡು ಬರ್ದಿದ್ದೀರ ಸಾಹೇಬರ ಕುರಿತು ಎಂದೆ “ತಮಟೆ ತಗೊಳ್ಳಿ ನುಡಿಸಿ ಈಗ ಹಾಡುತ್ತೇನೆ” ಎಂದರು ನಾನು ತಮಟೆಯನ್ನು ಎದೆಗೊರಗಿಸಿಕೊಂಡು ಸಿದ್ದವಾಗಿ ಕೂತು… ಸೋಮಣ್ಣ ಹೊಸ ಹಾಡು ಹಾಡುತ್ತಾರೆ ಎಲ್ಲರೂ ಕೇಳಿಸಿಕೊಂಡು ದನಿಗೂಡಿಸೋಣ ಎಂದು ಸಭೆಗೆ ಹೇಳಿದೆ…. ಎಲ್ಲರೂ ಆ ದುಃಖದಲ್ಲಿಯೂ ಕುತೂಹಲದಿಂದ ಆಲಿಸಲಣಿಯಾಗಿ ಕುಳಿತರು…. ಸೋಮಣ್ಣ ಮೊಟ್ಟಮೊದಲಿಗೆ ಆ ಹಾಡು ಹಾಡಲು ಶುರುಮಾಡಿದರು ನಾನು ಕಣ್ಮುಚ್ಚಿ ದನಿಗೂಡಿಸಿ ತಮಟೆ ನುಡಿಸುತ್ತಾ ಹೋದೆ… ಅಬ್ಬಬ್ಬಾ ಅದೇನು ಸಾಹಿತ್ಯ ಅದೆಂಥ ಪದಜೋಡನೆ ಎಂಥಾ ಭಾವತುಂಬಿದ ರಾಗ ಸೋಮಣ್ಣನ ವಿಶೇಷ ಧನಿಯಲ್ಲಿ…..
” ನೀವ್ ಕಾರಣ ನೀವೇ ಪ್ರೇರಣ…
ಜೈಭೀಮನ ತುಂಬಿ ಮನ
ಮೇಲೇಳಲು ಕೂಡಿ ಬಾಳಲು
ಈ ದೇಶ ನಾವೆ ಆಳಲು…..
ಎಲ್ಲರ ಕಣ್ಣುಗಳೂ ತೇವವಾದವು…. ದನಿ ಜೋರಾಯಿತು..
ನಮನ ಭಾವ ನಮನ ದಾದಾಕಾನ್ಷಿರಾಮಜಿ
ನಮನ ಭೀಮ ನಮನ ದಾದಾಕಾನ್ಷಿರಾಂಜಿ
ನಮನ ಹೃದಯ ನಮನ ದಾದಾ ಕಾನ್ಷಿರಾಮಜಿ…
ಎಲ್ಲರ ದನಿ ತಾರಕಕ್ಕೇರಿ ಹಾಡಿ ಹಾಡಿ ಹಾಡಿ ಇಡೀ ಗಂಗೋತ್ರಿಯೇ ಧ್ಯಾನಸ್ಥವಾದಂತೆ ಅನುರಣಿಸಿತು
ಆ ನಮ್ಮ ಹಾಡಿನ ಕೂಗು ದೂರದ ಉತ್ತರಪ್ರದೇಶದಲ್ಲಿ ತಣ್ಣಗೆ ಮಲಗಿದ್ದ ದಾದಾಸಾಹೇಬರಿಗೂ ಕೇಳಿ… ಅಲ್ಲಿಂದಲೇ ನಮ್ಮ ಕಂಡು ಹತ್ತಿರ ಬಂದು ಮೆಲ್ಲಗೆ ನಮ್ಮೆದೆಯೊಳಗಿಳಿದು ಹೃದಯದ ತುಂಬಿಕೊಂಡಂತೆ ಎದೆಭಾರವಾಯಿತು…
ಈಗಲೂ ದಾದಾಸಾಹೇಬ್ ಕಾನ್ಷಿರಾಂಜಿ ಎಂದರೆ ನೆನಪಾಗೋದು ಸೋಮಣ್ಣ ಬರೆದ “ಭೀಮಬಂದರು ಜೈಭೀಮ ಬಂದರು” ಹಾಗೂ ನೀವ್ ಕಾರಣ ನೀವೇ ಪ್ರೇರಣಾ ಹಾಡುಗಳು…
ಥ್ಯಾಂಕ್ಯು ಸೋ ಮಚ್ ಸೋಮಣ್ಣ… ಜೈ ಭೀಮ್ ನಮೋ ಬುದ್ಧಾಯ..
ಸುದ್ದಿದಿನ.ಕಾಂ|ವಾಟ್ಸಾಪ್|9980346243