ನೆಲದನಿ

ನಮ್ಮ ಶಿವಮೊಗ್ಗ – ನಮ್ಮ ಹೆಮ್ಮೆ : ಕೊಡಚಾದ್ರಿ

Published

on

ಕೊಡಚಾದ್ರಿ ಬೆಟ್ಟ

ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಕಂಡು ಬರುವ ಗಿರಿ ಶಿಖರಗಳು ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದ ತಾಣ. ಇಂತಹ ರಮಣೀಯ ಸ್ಥಳಗಳಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕೊಡಚಾದ್ರಿ ಬೆಟ್ಟವು ಕೂಡ ಒಂದು. ಕೊಡಚಾದ್ರಿ ಬೆಟ್ಟ ಚಾರಣ ಪ್ರಿಯರಿಗೆ ಬಹು ಪರಿಚಿತ ಸ್ಥಳ. ಇಲ್ಲಿ ಶಂಕರಾಚಾರ್ಯರು ತಪಸ್ಸು ಮಾಡಿದ ಬಗ್ಗೆ ಪ್ರತೀತಿ ಇದೆ.

ಇಲ್ಲಿರುವ ಸರ್ವಜ್ಞ ಪೀಠ ಶಂಕರಾಚಾರ್ಯರು ಪ್ರತಿಷ್ಠಾಪಿಸಿದ ಪೀಠ ಎನ್ನಲಾಗುತ್ತದೆ. ಈ ಬೆಟ್ಟದಿಂದ ಸೂರ್ಯೋದಯ ನೋಡುವುದೇ ಒಂದು ಅದ್ಭುತ ದೃಶ್ಯ. ಇಲ್ಲಿನ ಚಿತ್ರ ಮೂಲವೆಂಬ ಬೆಟ್ಟ ಕೂಡ ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಇದು ಆಯುರ್ವೇದ ಗಿಡಮೂಲಿಕೆಗಳ ಆಗರ. ಇಲ್ಲಿ ಹಲವು ಗುಹೆಗಳಿವೆ. ಅಲ್ಲದೇ ಇಲ್ಲಿನ ರಾಮತೀರ್ಥ ಎಂಬ ಸ್ಥಳದಲ್ಲಿ ಹರಿಯುವ ನೀರಿನ ಮಧ್ಯೆ ಈಶ್ವರಲಿಂಗದ ರಚನೆಯನ್ನು ಕಾಣಬಹುದು.

ಕೊಡಚಾದ್ರಿಗೆ ಪುರಾತನ ಕಾಲದಿಂದಲೂ ಜನರು ಯಾತ್ರೆ ಹೋಗುತ್ತಿದ್ದರು. ಇಲ್ಲಿಗೆ ಹತ್ತಿರದ ಸ್ಥಳವಾದ ನಿಲಸಕಲ್ಲು ಎಂಬಲ್ಲಿ ನವ ಶಿಲಾಯುಗದ ಕಾಲದ ನಿಲುವುಗಲ್ಲುಗಳ ಸಾಲುಗಳನ್ನು ಗಮನಿಸಿದರೆ, ಈ ಸುತ್ತಲಿನ ಪ್ರದೇಶದಲ್ಲಿ ಕನಿಷ್ಟ ಮೂರು ಸಾವಿರ ವರ್ಷಗಳ ಹಿಂದೆ ಜನ ವಸತಿ ಇದ್ದಿರಬೇಕು ಎಂದೆನಿಸುತ್ತದೆ.

ಕೊಡಚಾದ್ರಿಯಲ್ಲಿ ಪುರಾತನ ಜನವಸತಿ ಇದ್ದ ಕುರುಹುಗಳು ಇನ್ನೂ ಪತ್ತೆಯಾಗಿಲ್ಲವಾದರೂ, ಕ್ರಿ.ಶ ಏಳನೆಯ ಶತಮಾನದಲ್ಲಿ ಶಂಕರಾಚಾರ್ಯರು ಕೊಡಚಾದ್ರಿಗೆ ಬೇಟಿ ಕೊಟ್ಟಿದ್ದು, ಇಲ್ಲಿದ್ದ ಮೂಲ ಮೂಕಾಂಬಿಕೆಯನ್ನು ಪರ್ವತದ ತಳದಲ್ಲಿರುವ ಕೊಲ್ಲೂರಿನಲ್ಲಿ ಪ್ರತಿಷ್ಟೆ ಮಾಡಿದರು ಎಂದು ಕೊಲ್ಲೂರಿನ ಸ್ಥಳಪುರಾಣ ಹೇಳುತ್ತದೆ. ಶಿಖರದ ಹತ್ತಿರವಿರುವ ಮೂಲ ಮೂಕಾಂಬಿಕೆ ದೇವಾಲಯವೂ ಸಹ ಪುರಾತನವಾದುದ್ದು. ಈ ದೇವಾಲಯದ ಬಳಿ ಸುಮಾರು 40 ಅಡಿ ಎತ್ತರದ ಕಬ್ಬಿಣದ ಕಂಬವಿದ್ದು, ಇದನ್ನು ಮೂಕಾಸುರನನ್ನು ವಧಿಸಲು ದೇವಿ ಉಪಯೋಗಿಸಿದ ತ್ರಿಶೂಲ ಎಂದು ಸ್ಥಳೀಯರು ಹೇಳುತ್ತಾರೆ.

ಕೊಡಚಾದ್ರಿಯ ಸುತ್ತ ಮುತ್ತ ಇರುವುದು ಸಹ್ಯಾದ್ರಿಯ ನಿತ್ಯ ಹರಿದ್ವರ್ಣ ಕಾಡು. ಭಾರತದ ಅತಿ ಹೆಚ್ಚು ಮಳೆ ಬೀಳುವ ಈ ಪರ್ವತ ಶ್ರೇಣಿಯಲ್ಲಿ ಬೆಳೆದಿರುವ ಈ ಕಾಡುಗಳು ತನ್ನದೇ ಆದ ವಿಶಿಷ್ಟ ಶಕ್ತಿಯನ್ನು ಹೊಂದಿದೆ. ಕೊಡಚಾದ್ರಿಯ ತುದಿಯಲ್ಲಿ ನಿಂತು ನೋಡಿದರೆ ನಾಲ್ಕೂ ದಿಕ್ಕಿನಲ್ಲಿ ನಿಬಿಡಾರಣ್ಯವು ಅಲೆ ಅಲೆಯಂತೆ ಹರಡಿರುವ ದೃಶ್ಯ ಕಾಣುತ್ತದೆ.

ಇದೇ ನಾಡಿನಲ್ಲಿ ಹುಟ್ಟಿ ಬೆಳೆದ ರಾಷ್ಟ್ರಕವಿ ಕುವೆಂಪುರವರ ಕವಿತೆಯ ಒಂದು ಸಾಲಾಗಿರುವ “ಹಸುರಿತ್ತಲ್, ಹಸುರತ್ತಲ್, ಹಸುರೆತ್ತಲ್ ಕಡಲಿನಲಿ” ಎನ್ನುವ ಸಾಲು ನೆನಪಾಗುವಂತಹ ತಾಣ ಕೊಡಚಾದ್ರಿ. ಅಲ್ಲದೇ ಇಲ್ಲಿಯ ಸೂರ್ಯಾಸ್ತ ಅಪರೂಪದ ದೃಶ್ಯವಾಗಿದ್ದು, ಈ ರಮ್ಯ ಮನೋಹರ ದೃಶ್ಯವನ್ನು ಆಸ್ವಾದಿಸಲು ದೇಶದ ಎಲ್ಲಾ ಕಡೆಗಳಿಂದಲೂ ಜನರು ಬರುತ್ತಾರೆ.

ಇದು ಹೊಸನಗರ ತಾಲ್ಲೂಕು ಕೇಂದ್ರದಿಂದ 30 ಕಿ.ಮೀ ಮತ್ತು ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ಸುಮಾರು 100 ಕಿ.ಮೀ ಅಂತರದಲ್ಲಿದೆ.

ಹೆಚ್ಚಿನ ಮಾಹಿತಿಗಾಗಿ

ಪರಾಮರ್ಶನ

https://kn.wikipedia.org

ಕೃಪೆ : dipr shimoga

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version