ಬಹಿರಂಗ

“ಅಂಕುಶಗಳ ವಿರುದ್ಧ ಸಿಡಿದೆದ್ದ ರಸಋಷಿ ಕುವೆಂಪುಗೆ ನಮಸ್ಕಾರ”

Published

on

  • ಪಿ.ಲಂಕೇಶ್

ಸುಮಾರು ಏಳುನೂರು ವರ್ಷಗಳ ಕಾಲ ಕನ್ನಡ ನುಡಿಗಟ್ಟನ್ನೇ ಸರಿಯಾಗಿ ಬಳಸದ ಕನ್ನಡನಾಡಿನ ಹಳ್ಳಿಯಲ್ಲಿ ಒಬ್ಬ ಹುಟ್ಟಿ ಸುತ್ತ ನೋಡಿದಾಗ ಏನಾಯಿತು? ಅವನ ಸುತ್ತ ವಿದ್ಯೆ, ಅಧ್ಯಯನ, ವಿಚಾರವಂತ ಆರೋಗ್ಯಕರ ಬದುಕಿಗೆ ಬದಲು ಆತ ಕಂಡಿದ್ದು ಅಜ್ಞಾನ, ಅಂಧಕಾರದಲ್ಲಿ ಮುಳುಗಿ ಕೊಳೆತು ಹೋಗುತ್ತಿದ್ದ ಜನಸಾಮಾನ್ಯರ ತಂಡ.

ಅಲ್ಲಿದ್ದುದ್ದು ಅಜ್ಞಾನ, ಮೂಢನಂಬಿಕೆ, ಜಾತೀಯತೆ ಎಂದು ಕಂಡುಕೊಳ್ಳುವುದಕ್ಕೆ ಕೂಡ ಈ ಮುಗ್ಧ ಹಳ್ಳಿಯ ಹುಡುಗ ಅಧ್ಯಯನ ನಡೆಸಬೇಕಾಗಿತ್ತು; ತನ್ನಲ್ಲೇ ಇದ್ದ ಪರಿಸರ ನೀಡಿದ ಕೊಳಕನ್ನು ತೊಳೆದುಕೊಳ್ಳುವುದು ಅಗತ್ಯವಾಗಿತ್ತು. ಗ್ರಹಿಕೆಯ ಜೊತೆಗೇ ಗ್ರಹಿಸಿದ್ದರ ಒಳಿತು ಕೆಡುಕುಗಳ ಮಂಥನವನ್ನು ಕೂಡ ಮಾಡಬೇಕಿತ್ತು.

ಈ ಘಟ್ಟದಲ್ಲಿ ಯೋಚಿಸಿ, ಹಳ್ಳಿಯ ಹುಡುಗನೊಬ್ಬ ನಿಜಕ್ಕೂ ನೋಡತೊಡಗುವುದು, ಬೆಳಯತೊಡಗುವುದು ಮಾನಸಿಕ, ಸಾಮಾಜಿಕ ಎರಡೂ ಸವಾಲುಗಳನ್ನು ಒಟ್ಟಿಗೆ ಎತ್ತಿಕೊಳ್ಳುವ ಒಂದು ಸಾಹಸ. ಕಲೆ, ಹತಾರ, ಕಲ್ಲು ಮೂರನ್ನೂ ಪಡೆದುಕೊಳ್ಳುವ ಶಿಲ್ಪಿಯ ಕಾರ್ಯಕ್ಕೆ ಇದನ್ನು ಹೋಲಿಸಬಹುದು. ಕುವೆಂಪು ಅವರ ಸಾಹಿತ್ಯದ ವೈಚಿತ್ರ್ಯವನ್ನು ಕೂಡ ಇದು ತೋರುತ್ತದೆ. ಒಂದು ಕಡೆ ಹತಾರ, ತಂತ್ರವನ್ನೆಲ್ಲ ಆಗಲೇ ಪಡೆದು ಸಿದ್ಧವಾದ ಮೇಲ್ಜಾತಿಯವರ ಸ್ಪರ್ಧೆ, ಇನ್ನೊಂದು ಕಡೆ ತಮ್ಮ ಅಸ್ತಿತ್ವದ ಬಗ್ಗೆ ಎಂದೂ ಯೋಚಿಸದ, ತಮ್ಮ ಸುತ್ತಣ ನಿಸರ್ಗವನ್ನು ಕೂಡ ನೋಡದ ಜನಸಮೂಹ.

ಕುವೆಂಪು ಸಾಹಿತ್ಯ ರಚಿಸುತ್ತಿರುವಂತೆಯೇ ಈ ರಚನೆಯನ್ನೇ ಒಂದು ಮಾನಸಿಕ ಹೋರಾಟವನ್ನಾಗಿ ಮಾಡಿಕೊಂಡರು ಎಂದು ನೋಡಿದಾಗಲೇ ಇವರ ‘ನಿರಂಕುಶಮತಿಗಳಾಗಿ’ ಎಂಬ ಗರ್ಜನೆ ಆತ್ಮಗತ ಪಿಸುಮಾತು ಕೂಡ ಆಗುತ್ತದೆ; ಇವರ ಜ್ಞಾನದಾಹ, ವಸ್ತುನಿಷ್ಠೆಯ ಕಾತರ ಆತ್ಮಾಭಿವೃದ್ಧಿಯ ಸೆಲೆಯಾಗುವಂತೆಯೇ ಭಾರತ ತನ್ನ ಅತ್ಯುನ್ನತ ತಿಳುವಳಿಕೆಯ ಸಮಯದಲ್ಲಿ ಪಡೆಯಲೆತ್ನಿಸಿದ ಜೀವನ ಫಲದ ಆಕಾಂಕ್ಷೆ ಕೂಡ ಆಗುತ್ತದೆ. ಕುವೆಂಪು ಜನರನ್ನು ಎಚ್ಚರಿಸಿದರು ಎಂದು ಹೇಳುವಷ್ಟೇ ಮುಖ್ಯ ಕುವೆಂಪು ಎಚ್ಚರಗೊಂಡರು ಎಂಬುದೂ ಆಗುವುದರಿಂದಲೇ ಕುವೆಂಪು ಎಂಬುದೊಂದು ಅರ್ಥಪೂರ್ಣ ಸ್ಥಿತಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version