ದಿನದ ಸುದ್ದಿ
ಲಾರಿ, ಟ್ರಾಕ್ಟರ್ ಗಳಿಗೆ ಟ್ರಿಪ್ ಚೀಟಿ ಇಲ್ಲದೆ ಅಕ್ರಮ ಸಾಗಾಣಿಕೆ ; ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಶಾಮೀಲು..!?
ಡಾ. ಗಿರೀಶ್ ಕುಮಾರ್ ಗೌಡ ಬಳ್ಳಾರಿ
ಸುದ್ದಿದಿನ,ಬಳ್ಳಾರಿ:ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ನಾಪತ್ತೆ. ಲಾರಿಗಳ ಮಾಲೀಕರೊಂದಿಗೆ ಶ್ಯಾಮಿಲು. ಲಾರಿ, ಟ್ರಾಕ್ಟರ್ ಗಳಿಗೆ ಟ್ರಿಪ್ ಚೀಟಿ ಇಲ್ಲದೇ, ಅಕ್ರಮ ಕೆಂಪು ಮಣ್ಣು, ಜಲ್ಲಿ, ಕಲ್ಲು ಸಾಗಾಣಿಕೆ, ಸರ್ಕಾರಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ ಎನ್ನುವ ಬಹು ದೊಡ್ಡ ಆರೋಪ ಕೇಳಿಬಂದಿದೆ.
ಬಳ್ಳಾರಿ ನಗರದ ಹೊರವಲಯದ ಕಪ್ಪಗಲ್ಲು ರಸ್ತೆಯಲ್ಲಿನ ಲೇಔಟ್ ಮನೆ ನಿರ್ಮಾಣಕ್ಕೆ ಅಕ್ರಮ ಕೆಂಪು ಮಣ್ಣು ಸಾಗಾಣಿಕೆ ಮಾಡುತ್ತಿರುವ ದೃಶ್ಯ ಕಂಡುಬಂದಿದೆ.
ಇನ್ನು ಲಾರಿಯಲ್ಲಿ ಅಕ್ರಮವಾಗಿ ಕೆಂಪು ಮಣ್ಣು ಸಾಗಾಣಿಕೆ ಮಾಡುತ್ತಿದ್ದು ಹೊನ್ನಳ್ಳಿ ತಾಂಡಾದ ತರುಣ್ ಎನ್ನುವ ಮಾಲೀಕರಿಗೆ ಸೇರಿದ ಲಾರಿಯಾಗಿದ್ದು. ಲಾರಿ ನಂಬರ್ ಕೆ.ಎ 35 ಸಿ 2813 ಆಗಿದೆ. ಸಂಜೆ 5 ಗಂಟೆ 30 ನಿಮಿಷಕ್ಕೆ ಕಪ್ಪಗಲ್ಲು ರಸ್ತೆಯಲ್ಲಿನ ಲೇಔಟ್ ಮನೆ ನಿರ್ಮಾಣಕ್ಕೆ ಅಕ್ರಮ ಕೆಂಪು ಮಣ್ಣು ಲಾರಿಯಲ್ಲಿ ಸಾಗಾಣಿಕೆ ಮಾಡಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಹೊಂದಾಣಿಕೆ
ನಾವು ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಯಾವುದೇ ಟ್ರಿಪ್ ಚೀಟಿ ಇಲ್ಲದೆ ಕೆಂಪು ಮಣ್ಣು ಲಾರಿಗಳಲ್ಲಿ ಸಾಗಾಟ ಮಾಡುತ್ತೆವೆ ಎಂದರು.
ಇನ್ನು ಲಾರಿ ಚಾಲಕನಿಗೆ ಟ್ರಿಪ್ ಚೀಟಿ ಕೇಳಿದರೆ ಇಲ್ಲ ಸಾರ್ ನಾವು ಒಂದು ಟ್ರಿಪ್ ಚೀಟಿ ಪಡೆದು ಎರಡು ಮೂರು ಕೆಂಪು ಮಣ್ಣು, ಜಲ್ಲಿ, ಕಲ್ಲು ಹೊಡೆಯುತ್ತೆವೆ ಎಂದು ವ್ಯಕ್ತಿ ಮತ್ತೊಂದು ಬಾರಿ ಟ್ರಿಪ್ ಚೀಟಿ ತೋರಿಸಿ ನೋಡೋಣ ಎಂದರೆ ಲಾರಿ ಮಾಲೀಕ ತರುಣ್ ಗೆ ಪೋನ್ ಕೊಟ್ಟಿದ್ದಾನೆ. ಮಾಲೀಕ ತರುಣ್ ಇಲ್ಲ ಸಾರ್ ನಾವು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಾಗಾಣಿಕೆ ಮಾಡುತ್ತೇವೆ ಎಂದರು. ಯಾವುದೇ ಟ್ರಿಪ್ ಚೀಟಿ ಪಡೆಯಲ್ಲ ಎಂದರು.
ಇನ್ನು ಬಳ್ಳಾರಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಈ ರೀತಿಯಾಗಿ ಅಕ್ರಮ ಕೆಂಪು ಮಣ್ಣು, ಜಲ್ಲಿ, ಕಲ್ಲು ಬಿಂಚೆ ಸರ್ಕಾರಕ್ಕೆ ತೆರಿಗೆ ಪಾವತಿ ಮಾಡದೇ ನಷ್ಟ ಉಂಟು ಮಾಡುತ್ತಿದ್ದಾರೆ.
ಬಳ್ಳಾರಿ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಮೂರಂ , ಕಲ್ಲು, ಬಿಂಚೆ, ಕೆಂಪು ಮಣ್ಣು ಸಾಗಾಣಿಕೆ ಮಾಡುತ್ತಿರುವ ಲಾರಿಗಳನ್ನು ಹಿಡಿಯದೆ ತಿಂಗಳಿಗೆ ಲಕ್ಷಾಂತರ ರೂಪಾಯಿ ಲಂಚ ಪಡೆದ, ಲಾರಿ ಮಾಲೀಕರಿಗೆ ಸಹಕಾರಿ ನೀಡಿ, ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಮಾಡುತ್ತಿದ್ದಾರೆ ಎನ್ನುವ ಬಹು ದೊಡ್ಡ ಆರೋಪ ಸಹ ಕೇಳಿ ಬಂದಿದೆ.
ಫೀಲ್ಡ್ ವರ್ಕ್ ಮಾಡದೆ ಅಧಿಕಾರಿಗಳು ನಿದ್ದೆಗೆ ಜಾರಿದ್ದಾರೆ:
ಬಳ್ಳಾರಿ ಜಿಲ್ಲೆಯ ಬಳ್ಳಾರಿ ನಗರ, ಗ್ರಾಮಾಂತರ , ಸಿರುಗುಪ್ಪ, ಕಂಪ್ಲಿ, ಕುರುಗೋಡು ತಾಲೂಕಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಫೀಲ್ಡ್ ವರ್ಕ್ ಮಾಡದೆ ನಿದ್ದೆಗೆ ಜಾರಿದ್ದಾರೆ. ಅವರು ಸರ್ಕಾರಕ್ಕೆ ತೆರಿಗೆ ಪಾವತಿ ಮಾಡಿಸದೇ ನಷ್ಟ ಉಂಟು ಮಾಡುತ್ತಿದ್ದಾರೆ.
ಬಳ್ಳಾರಿ ನಗರದ ಬಂಡಿಹಟ್ಟಿ, ಹೊನ್ನಳ್ಳಿ, ಹೊನ್ನಳ್ಳಿ ತಾಂಡಾ, ಮೋಕಾ, ಸಂಗನಕಲ್ಲು, ಸಿರವಾರ, ಕಪ್ಪಗಲ್ಲು ಸಿಂದಾವಾಳ, ಕಂಪ್ಲಿ, ಸಿರುಗುಪ್ಪ, ಕಂಪ್ಲಿ, ಕುರುಗೋಡು ತಾಲೂಕಿನಲ್ಲಿ ಈ ಕಲ್ಲು, ಬಿಂಚೆ, ಕೆಂಪು ಮಣ್ಣು, ಮರಂ ಅಕ್ರಮವಾಗಿ ಲಾರಿಗಳಲ್ಲಿ ಯಾವುದೇ ಟ್ರಿಪ್ ಚೀಟಿ ಇಲ್ಲದೇ ಸಾಗಾಣಿಕೆ ಮಾಡುತ್ತಿರುವ ದುರಂತವಾಗಿದೆ. ಇನ್ನು ಕಪ್ಪಗಲ್ಲು ಸಿರವಾರ ರಸ್ತೆಯಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೆಗೆ ಲಾರಿಗಳಲ್ಲಿ ಯಾವುದೇ ಟ್ರಿಪ್ ಚೀಟಿ ಇಲ್ಲದೇ ಕಲ್ಲು ಬಿಂಚೆ ಕೆಂಪು ಮಣ್ಣು ಸಾಗಾಣಿಕೆ ಮಾಡುತ್ತಿದ್ದಾರೆ. ಅಧಿಕಾರಿಗಳು ಮಾತ್ರ ನಾಪತ್ತೆ.
ಶಾಸಕರ, ಸಂಸದರ ಪ್ರೊತ್ಸಾಹ
ಇನ್ನು ಈ ಲಾರಿಗಳಲ್ಲಿ ಯಾವುದೇ ಟ್ರಿಪ್ ಚೀಟಿ ಇಲ್ಲದೇ ಅಕ್ರಮ ಗಣಿಗಾರಿಕೆಯ ಕಲ್ಲು ಬಿಂಚೆ ಕೆಂಪು ಮಣ್ಣು ಸಾಗಾಣಿಕೆ ಮಾಡುತ್ತಿರುವ ಬಳ್ಳಾರಿ ಜಿಲ್ಲೆಯ ವಿವಿಧ ತಾಲೂಕಿನ ಶಾಸಕರು ಹಾಗೂ ಸಂಸದರು ಮತ್ತು ಅವರ ಬೆಂಬಲಿಗರ ಪ್ರೊತ್ಸಾಹ ನೀಡುತ್ತಿದ್ದಾರೆ ಎನ್ನುವ ಬಹು ದೊಡ್ಡ ಆರೋಪ ಸಹ ಇದೆ.
ಒಟ್ಟಾರೆಯಾಗಿ ಜಿಲ್ಲಾಧಿಕಾರಿ ನಾಗೇಂದ್ರ ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿಚಾರಣೆ ಮಾಡಿ ಶಿಸ್ತು ಕ್ರಮ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಆಯುರ್ವೇದ ಆರೋಗ್ಯಕರ ಜೀವನ ಶೈಲಿ
ಸುದ್ದಿದಿನ,ದಾವಣಗೆರೆ:ಭಾರತದ ವೈದ್ಯಕೀಯ ಪರಂಪರೆಯು ಅತ್ಯಂತ ಪ್ರಾಚೀನ ಹಾಗೂ ಸಮೃದ್ಧವಾದುದಾಗಿದೆ. ಆಯುರ್ವೇದವು ಕೇವಲ ರೋಗಗಳಿಗೆ ಚಿಕಿತ್ಸೆ ನೀಡುವ ವಿಜ್ಞಾನವಲ್ಲ, ಅದೊಂದು ಆರೋಗ್ಯಕರ ಜೀವನ ಶೈಲಿಯಾಗಿದೆ ಎಂದು ಘನವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದರು.
ಅವರು ಶನಿವಾರ ತಪೋವನ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಸಂಸ್ಥೆಯು ಏರ್ಪಡಿಸಿದ್ದ ದ್ವಿತೀಯ ಘಟಿಕೋತ್ಸವ ಸಮಾರಂಭವನ್ನು ಉದ್ಪಾಟಿಸಿ ಮಾತನಾಡಿದರು.
ಈಗಿನ ದಿನಮಾನಗಳಲ್ಲಿ ಇಡೀ ಜಗತ್ತು ಮಾನಸಿಕ ಒತ್ತಡ ಹಾಗೂ ಪರಿಸರ ಸವಾಲುಗಳನ್ನು ಎದುರಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಆಯುರ್ವೇದ, ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ಪದ್ಧತಿಗಳ ಪ್ರಸ್ತುತತೆ ಹಾಗೂ ಮಹತ್ವ ಮತ್ತಷ್ಟು ಹೆಚ್ಚಾಗಿದೆ, ವೈದ್ಯರು ತಮ್ಮ ವೃತ್ತಿ ಜೀವನದಲ್ಲಿ ಮಾನವೀಯ ಮೌಲ್ಯಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ತಿಳಿಸಿದರು.
ಭಾರತದ ವೈದ್ಯಕೀಯ ಪರಂಪರೆಯು ಅತ್ಯಂತ ಪ್ರಾಚೀನ ಹಾಗೂ ಸಮೃದ್ಧವಾದುದಾಗಿದೆ. ಆಯುರ್ವೇದವು ಕೇವಲ ರೋಗಗಳಿಗೆ ಚಿಕಿತ್ಸೆ ನೀಡುವ ವಿಜ್ಞಾನವಲ್ಲ, ಅದೊಂದು ಆರೋಗ್ಯಕರ ಜೀವನ ಶೈಲಿಯಾಗಿದೆ. ಜಗತ್ತು ಮಾನಸಿಕ ಒತ್ತಡ ಹಾಗೂ ಪರಿಸರ ಸವಾಲುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಆಯುರ್ವೇದ, ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ಪದ್ಧತಿಗಳ ಪ್ರಸ್ತುತತೆ ಹಾಗೂ ಮಹತ್ವ ಮತ್ತಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು.
ಆಧುನಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI) ಮತ್ತು ಡಿಜಿಟಲ್ ಆರೋಗ್ಯ ಸೇವೆಗಳು ಇಂದಿನ ವೈದ್ಯಕೀಯ ಕ್ಷೇತ್ರದ ಚಿತ್ರಣವನ್ನೇ ಸಂಪೂರ್ಣವಾಗಿ ಬದಲಾಯಿಸುತ್ತಿವೆ. ಇಂತಹ ತಾಂತ್ರಿಕ ಕ್ರಾಂತಿಯ ಯುಗದಲ್ಲಿ ಪದವಿ ಪಡೆದು ಹೊರಬರುತ್ತಿರುವ ನೂತನ ವೈದ್ಯರು ಕೇವಲ ಸಾಂಪ್ರದಾಯಿಕ ವೈದ್ಯಕೀಯ ಜ್ಞಾನಕ್ಕೆ ಸೀಮಿತವಾಗದೆ, ಆಧುನಿಕ ವಿಜ್ಞಾನದ ನೂತನ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಉಭಯ ಕ್ಷೇತ್ರಗಳ ನಡುವೆ ಬಲವಾದ ಸೇತುವೆಯಾಗಿ ಕೆಲಸ ಮಾಡಬೇಕಾದ ತುರ್ತು ಅಗತ್ಯವಿದೆ ಎಂದರು.
ಕೃತಕ ಬುದ್ಧಿಮತ್ತೆಯು ರೋಗನಿರ್ಣಯವನ್ನು ಹೆಚ್ಚು ನಿಖರ ಹಾಗೂ ವೇಗವಾಗಿಸಲು ನೆರವಾದರೆ, ಡಿಜಿಟಲ್ ಆರೋಗ್ಯ ಸೇವೆಗಳು ದೂರದ ಊರುಗಳಿಗೂ ಚಿಕಿತ್ಸೆಯನ್ನು ತಲುಪಿಸಲು ಸಹಕಾರಿಯಾಗಿವೆ. ಆದ್ದರಿಂದ, ಹೊಸ ತಲೆಮಾರಿನ ವೈದ್ಯರು ಕೇವಲ ದಿನನಿತ್ಯದ ಕ್ಲಿನಿಕ್ ಅಥವಾ ಆಸ್ಪತ್ರೆಯ ಚಿಕಿತ್ಸೆಗೆ ಸೀಮಿತವಾಗದೆ, ತಂತ್ರಜ್ಞಾನದ ದತ್ತಾಂಶಗಳನ್ನು ಬಳಸಿಕೊಂಡು ಹೊಸ ರೋಗಗಳಿಗೆ ಪರಿಹಾರ ಕಂಡುಕೊಳ್ಳುವ ಉತ್ತಮ ಸಂಶೋಧಕರಾಗಬೇಕು. ಇದರೊಂದಿಗೆ, ಸಮಾಜದಲ್ಲಿ ತಂತ್ರಜ್ಞಾನ ಮತ್ತು ಆರೋಗ್ಯದ ಕುರಿತು ಇರುವ ತಪ್ಪು ಕಲ್ಪನೆಗಳನ್ನು ದೂರಾಗಿಸಿ, ಮಾನವೀಯ ಕಾಳಜಿಯೊಂದಿಗೆ ಜನರನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ನೈಜ ಮಾರ್ಗದರ್ಶಕರಾಗಿ ಹೊರಹೊಮ್ಮಬೇಕಿದೆ ಎಂದು ತಿಳಿಸಿದರು.
ವೈದ್ಯಕೀಯ ಸೇವೆಯು ಅತ್ಯಂತ ಪವಿತ್ರವಾದ ಮಾನವೀಯ ಸೇವೆಯಾಗಿದೆ. ರೋಗಿಗಳಿಗೆ ಔಷಧಿಗಿಂತ ಮುಂಚಿತವಾಗಿ ವೈದ್ಯರ ಪ್ರೀತಿಯ ನುಡಿಗಳು ಹಾಗೂ ಸಕಾರಾತ್ಮಕ ನಡವಳಿಕೆಯ ಅಗತ್ಯವಿರುತ್ತದೆ. ಆದ್ದರಿಂದ ವೈದ್ಯರು ತಮ್ಮ ವೃತ್ತಿ ಜೀವನದಲ್ಲಿ ಮಾನವೀಯ ಮೌಲ್ಯಗಳಿಗೆ ಮೊದಲ ಆದ್ಯತೆ ನೀಡಬೇಕು. ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯವು ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಗುಜರಾತ್‌ನ ಜಾಮ್‌ನಗರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಗ್ಲೋಬಲ್ ಟ್ರೆಡಿಷನಲ್ ಮೆಡಿಸಿನ್ ಸೆಂಟರ್’ ಸ್ಥಾಪಿಸುತ್ತಿದೆ ಎಂದು ತಿಳಿಸಿದರು.
ರಾಜ್ಯಸಭಾ ಸದಸ್ಯರಾದ ಶ್ರೀ ನಾರಾಯಣಸಾ ಭಾಂಡಗೆ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮಾಜಿ ಡೀನ್ ಡಾ: ಶ್ರೀನಿವಾಸ್ ಬನ್ನಿಗೊಳ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಎಸ್.ವಿ.ಹಲಸೆ, ತಪೋವನ ಸಂಸ್ಥೆಯ ಅಧ್ಯಕ್ಷ ಡಾ. ಶಶಿಕುಮಾರ್ ವಿ.ಎಂ, ಆಯುರ್ವೇದ ಕಾಲೇಜಿನ ಪ್ರಾಚಾರ್ಯರಾದ ಡಾ. ಅಶ್ವಿನಿ ಕೆ.ಆರ್., ಡಾ.ಸುಮನ ಭಟ್ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
ಸುದ್ದಿದಿನ,ದಾವಣಗೆರೆ: ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಜೂನ್ 15 ಮತ್ತು 16 ರಂದು ಆಯೋಜಿಸಲಾಗಿದೆ.
ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕು. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂ.ಸಂ: 08192-233787 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ವಸತಿ ಯೋಜನೆಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ: ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ವಸತಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಜೂನ್ 12 ಕೊನೆಯ ದಿನವಾಗಿರುತ್ತದೆ.
ಈ ಯೋಜನೆಯಡಿ ಸೌಲಭ್ಯ ಒದಗಿಸಲು ನಿಗಧಿತ ಅರ್ಜಿ ನಮೂನೆಯಲ್ಲಿ ಅವಶ್ಯಕ ದಾಖಲಾತಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಗ್ರೇಡ್-1ರವರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಚನ್ನಗಿರಿ ಕಚೇರಿಯನ್ನು ಸಂಪರ್ಕಿಸಬಹುದೆಂದು ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


