ಭಾಮಿನಿ

ಒಂಟಿತನಕ್ಕೂ ಬದುಕುಂಟು..!

Published

on

“ಯಾರನ್ನು ಬಿಟ್ಟು ಬದುಕುವುದಿಲ್ಲ ಅಂದುಕೊಂಡಿರುತ್ತೇವೇಯೋ ಅದೆಲ್ಲವನ್ನು ಮೀರಿ ಬೆಳೆದು ಬಿಡುತ್ತದೆ ಬದುಕು”…

ಪದ್ಮಮ್ಮ ವೃತ್ತಿಯಲ್ಲಿ ನರ್ಸ್, ಆಗಿನ ಕಾಲಕ್ಕೆ ಆ ಹಳ್ಳಿಗರ ಪಾಲಿನ ಆಪದ್ಭಂದು. ಯಾವುದೇ ಹೆರಿಗೆಗಾಗಿರಲಿ,ಯಾರಿಗೆ ಜ್ವರ ಬರಲಿ ಎಲ್ಲರೂ ಪದ್ಮಮ್ಮನ ಮನೆ ಕದ ತಟ್ಟುತ್ತಿದ್ದವರೇ. ಸರಿರಾತ್ರಿಯಲ್ಲಿ ಕೂಡ ಯಾರೇ ಬಂದೂ ಕರೆದರೂ ಇಲ್ಲ ಎನ್ನದೇ ಹೋಗಿ ಚಿಕಿತ್ಸೆ ಮಾಡಿ ತನ್ನ ವೃತ್ತಿನಿಷ್ಠೆ ಮೆರೆದ ಪದ್ಮಮ್ಮ ತುಂಬಾ ಚಿಕ್ಕ ವಯಸ್ಸಿಗೆ ವಿಧವೆ ಪಟ್ಟವನ್ನು ಯಮರಾಯನಿಂದ ಬಳುವಳಿಯಾಗಿ ಪಡೆದವರು. ಆ ಊರಿನಾಚೆಯ ಸ್ವಚ್ಛಂದ ಪರಿಸರದಲ್ಲಿ ಒಬ್ಬಳೇ ಬದುಕುತ್ತಿರುವ, ಒಂಟಿತನವನ್ನು ಶಪಿಸದೇ ಗಿಡ, ಮರ, ಬಳ್ಳಿಗಳೊಂದಿಗೆ, ಝುಳು-ಝುಳು ಹರಿವ ನದಿತೊರೆಗಳ ನಡುವೆ ದಿನಕ್ಕೆ 10 ಬಾರಿಯಾದರೂ ಕೂಗುವ ರೈಲಿನ ಶಬ್ಧದೊಂದಿಗೆ ತಮ್ಮ ಒಂಟಿತನದ ಬದುಕನ್ನು ಪರಿಸರದೊಂದಿಗೆ ಸವಿದುಂಡು ಸವೆಸುತ್ತಿರುವವರು. ಮಕ್ಕಳೊಂದಿಗೆ ಹೋಗಿ ದೂರದ ಸಿಟಿಯಲ್ಲಿ ಇರಬಹುದಲ್ಲಾ ಎಂದರೆ, ನಗುತ್ತಾ ಗಿಡಕ್ಕೆ ನೀರು ಹಾಕಲು ಅಣಿಯಾಗುವ ಆ ಒಂದು ನಗು ಅವರ ಆ ಒಂಟಿತನದ ಬದುಕಿನ ಖುಷಿಯ ಹಾಗೂ ಬೇರೆಯವರಿಗೆ ಹೊರೆಯಾಗದಂತೆ ಬದುಕಬೇಕೆಂಬ ಸ್ವಾಭಿಮಾನದ ಪ್ರತಿಬಿಂಬವೇ ಸರಿ.

ಕೆಲವೊಮ್ಮೆ ಬಾಳ ದಾರಿಯಲ್ಲಿ ಎದುರಾಗುವ ಅನಿರೀಕ್ಷಿತ ಆಘಾತಗಳು ನಮ್ಮವರನ್ನೆಲ್ಲಾ ನಮ್ಮಿಂದ ದೂರವಾಗಿಸಿ ಒಂಟಿತನ ನಮ್ಮ ಬಂಧುವಾಗಿ ಬಿಡುತ್ತೆ. ಯಾರನ್ನು ಬಿಟ್ಟು ಬದುಕುವುದೇ ಇಲ್ಲ
ಅಂದುಕೊಂಡಿರುತ್ತೇವೆಯೋ ಅದೆಲ್ಲವನ್ನು ಮೀರಿಸಿ ಬದುಕುವಂತೆ ಮಾಡಿ ಬಿಡುತ್ತದೆ. ಕೆಲವರು ತಾವಾಗೇ ಅದನ್ನು ಆರಿಸಿಕೊಂಡರೆ ಇನ್ನೂ ಕೆಲವರು ಅನಿವಾರ್ಯವಾಗಿ ಒಂಟಿಯಾದವರು. ಕೆಲವರಿಗೆ ಶಾಪವಾದರೆ ಮತ್ತೆ ಕೆಲವರು ಆ ಒಂಟಿತನದಲ್ಲೇ ಜೀವನದ ಖುಷಿಯನ್ನು ಬಗೆದು ತೆಗೆದವರು ಪದ್ಮಮ್ಮನ ಥರ.

ಶೃತಿಗೆ ಮದುವೆಯಾದಾಗ ಬರೀ 20 ವರ್ಷ. ಮದುವೆಯಾಗಿ ವರ್ಷ ತುಂಬುವುದರೊಳಗೆ ವಿಧಿಯಾಟಕ್ಕೆ ಬಲಿಯಾಗಿ ಕುಂಕುಮಭಾಗ್ಯ ಕೈ ಜಾರಿತು. ಆದರೆ, ಅವಳು ಬದುಕುತ್ತಿರುವ ಬದುಕು ಮಾತ್ರ ಅಚ್ಚರಿ ಮೂಡಿಸುತ್ತದೆ. ಪ್ರೀತಿಯ ಗಂಡನನ್ನು ಕಳೆದುಕೊಂಡಾಗ ಅವಳ ಮಗ ಇನ್ನೂ ಈ ಪ್ರಪಂಚವನ್ನು ಕಣ್ಬಿಟ್ಟು ನೋಡದೇ ಅವಳ ಹೊಟ್ಟೆಯಲ್ಲಿ ಬೆಚ್ಚಗೆ ಮಲಗಿದ್ದ. ಜೀವನಸಂಗಾತಿಯ ಅಗಲಿಕೆಯಿಂದ ಅಗಾಧ ನೋವುಂಡ ಅವಳಿಗೆ ಜೀವಸಂಗಾತಿಯಾಗಿದ್ದು ತನ್ನ ಪ್ರೀತಿಯ ಮಗ. ಗಂಡ ತೀರಿಕೊಂಡಾಗ, ನಿನಗಿನ್ನು ಚಿಕ್ಕವಯಸ್ಸು 2 ನೇ ಮದುವೆ ಮಾಡಿಕೋ ಎಂದು ನೀಡಿದ ಸಲಹೆಗೆ ಸೊಪ್ಪು ಹಾಕದೇ ನನ್ನ ಗಂಡನ ಪ್ರೇಮದ ಕಾಣಿಕೆಯಾಗಿ ನನ್ನ ಮಗನಿದ್ದಾನೆ. ಅವನಿಗಾಗಿಯೇ ನನ್ನ ಬದುಕು ಎಂದು ದಿಟ್ಟ ನಿರ್ಧಾರ ಮಾಡಿ ತನ್ನ ಸರ್ವಸುಖಗಳನ್ನು ತ್ಯಾಗ ಮಾಡಿ ಮಗನ ಪ್ರತೀ ಹೆಜ್ಜೆಯಲ್ಲೂ ಬದುಕಿನ ಸಂತೋಷ ಕಂಡುಕೊಂಡಿದ್ದಾಳೆ. ಅವಳನ್ನು ಮೊದಮೊದಲು ಕಂಡಾಗೆಲ್ಲಾ ಕರುಣೆ ಬರುತ್ತಿತ್ತು. ಈಗೀಗ ಹೆಮ್ಮೆ ಅನಿಸುತ್ತೆ. ಏಕೆಂದರೆ ತನ್ನ ಮಗನನ್ನು ಡಾಕ್ಟರ್ ಓದಿಸುವ ಆಸೆಯೊಂದಿಗೆ ಪ್ರತಿಷ್ಠಿತ ಸ್ಕೂಲ್‍ವೊಂದರಲ್ಲಿ ಮಗನನ್ನು ಸೇರಿಸಿ, ಅದೇ ಸ್ಕೂಲ್‍ನ ನೌಕರರ ಮಕ್ಕಳಿಗೆ ಯಾವುದೇ ಫೀಸ್ ಇಲ್ಲ ಎನ್ನುವ ಕಾರಣಕ್ಕೆ ತಾನೂ ಅದೇ ಸ್ಕೂಲ್‍ನಲ್ಲಿ ಅಟೆಂಡರ್ ಆಗಿ ಕೆಲಸ ಮಾಡ್ತಿದ್ದಾಳೆ. ಅಷ್ಟೇ ಅಲ್ಲ ಸ್ಕೂಲ್ ಕೆಲಸ ಮುಗಿದ ನಂತರ ರಾತ್ರಿ 8 ಗಂಟೆವರೆಗೆ ಟೈಲರ್ ಶಾಪ್‍ವೊಂದರಲ್ಲಿ ಕೆಲಸ ಮಾಡಿ ರಾತ್ರಿ ಗಡಿಬಿಡಿಯಲ್ಲೇ ಮನೆಗೆ ಹೊರಡುವ ಅವಳು ಮಗನನ್ನು ಪಕ್ಕದ ಮನೆಯವರಿಗೆ ನೋಡಿಕೊಳ್ಳಲು ಹೇಳಿ ಬಿಟ್ಟು ಬಂದಿರುತ್ತಾಳೆ. ಎಷ್ಟೊತ್ತಿಗೆ ಮನೆಗೆ ಹೋಗಿ ಮಗನ ನೋಡ್ತಿನಿ ಅಂತ ಮನೆ ತಲುಪುವವರೆಗೆ ತವಕಿಸುವ ಆ ತಾಯಿಕರುಳು ಒಂಟಿತನದಲ್ಲೇ ಸಾರ್ಥಕತೆ ಮೆರೆಯುತ್ತಿರುವುದನ್ನು ಕಂಡಾಗ ಶೃತಿ ನಿಜಕ್ಕೂ ಮನಸ್ಸಿನಲ್ಲಿ ಅರಿವಿಲ್ಲದೇ ಎತ್ತರದ ಸ್ಥಾನ ಗಿಟ್ಟಿಸಿಕೊಂಡು ಬಿಡುತ್ತಾಳೆ.

ಇನ್ನು ನಮ್ಮ ಸರೋಜಮ್ಮ ಬದುಕಿನ ಎಲ್ಲಾ ಘಟ್ಟಗಳನ್ನು ದಾಟಿ, ಅಂದರೆ ಮಗಳಾಗಿ, ಹೆಂಡ್ತಿಯಾಗಿ, ಅಮ್ಮನಾಗಿ, ಅಜ್ಜಿ ಪೋಸ್ಟ್ ಗೆ ಕೂಡ ಪ್ರಮೋಶನ್ ತಗೊಂಡು ಸದ್ಯ ರಿಟೈರ್ಡ್ ಆಗಿ ಆರಾಮಾಗಿದ್ದಾರೆ. ಏನೇ ಸರೋಜಾ, ಸುಮ್ನೆ ಮಗಳ ಜೊತೆ ಹೋಗಿ ಇರೋದ್ ತಾನೇ? ಅಂತ ಯಾರೋ ಪುಕ್ಕಟ್ಟೆ ಸಲಹೆ ಕೊಟ್ರೆ ಅಯ್ಯೋ ನನಗೇನೆ ಆಗಿದೆ ಮಹಾರಾಣಿ ಥರ ಇದೀನಿ, ಆಳು ಕಾಳಿಲ್ಲ ಅಷ್ಟೇ ಅಂತ ನಕ್ಕುಬಿಡ್ತಾರೆ. ಮದುವೆ ಆದಾಗಿನಿಂದ ಗಂಡ ಅತ್ತೆ- ಮಾವ ಮಕ್ಕಳು, ನೆಂಟ್ರು ಅವ್ರು ಇವ್ರು ಅಂತ ಬದುಕಿದ್ದೇ ಆಯ್ತು.ಸಂಸಾರ ಅನ್ನೋ ಪಂಜರದಲ್ಲಿ ನನ್ನನ್ನು ನಾನೇ ಬಂಧಿಸಿಕೊಂಡಿದ್ದೆ. ಈಗ ಜವಾಬ್ದಾರಿಗಳೆಲ್ಲಾ ಮುಗಿದಿದೆ. ಆಗಿನ ಥರ ಎಲ್ಲೇ ಹೋದ್ರೂ ಬೇಗ ಹೋಗ್ಬೇಕು, ಯಜಮಾನ್ರು ಬರ್ತಾರೆ, ಮಕ್ಕಳು ಸ್ಕೂಲಿಂದ ಬರ್ತಾರೆ ಅನ್ನೋ ಅರ್ಜೆಂಟ್ ಇಲ್ಲ.ಇಷ್ಟ ಬಂದಷ್ಟು ಹೊತ್ತು ದೇವಸ್ಥಾನದಲ್ಲಿ ಕೂರಬಹುದು. ಯೌವ್ವನದಲ್ಲಿ ಸಂಗೀತವನ್ನೇ ಉಸಿರಾಗಿಸಿಕೊಂಡು, ಮದುವೆಯಾದ ನಂತರ ಸಂಸಾರದಲ್ಲೇ ಉಸಿರುಗಟ್ಟಿಸಿಕೊಂಡಿದ್ದ ನನಗೆ ಈಗ ಎಲ್ಲೇ ಸಂಗೀತ ಕಛೇರಿ ಇದ್ರೂ ಮನಸ್ಸಿಗೆ ತೃಪ್ತಿಯಾಗೋವರೆಗೂ ಕೇಳಿ ಬರ್ತಿನಿ ಎನ್ನುವ ಅವರು, ಜೀವನ ಯಾವಾಗಲೂ ಅಂದುಕೊಂಡಂತೆ ಇರಲ್ಲ,ಎಲ್ಲಾದಕ್ಕೂ ಹೊಂದಿಕೊಂಡು ಹೋಗ್ಬೇಕು. ಕಳ್ಕೊಂಡಿದ್ದರ ಕುರಿತು ಕೊರಗೋದ್ರಿಂದ ಏನೂ ಪ್ರಯೋಜನವಿಲ್ಲ,ಇರೋದ್ರಲ್ಲೇ ಖುಷಿ ಹುಡುಕ್‍ಬೇಕು ಎಂದು ಕೆನ್ನೆ ಸವರಿ ಇಳಿಸಂಜೆಯಲ್ಲಿ ತಂಗಾಳಿಯಂತೆ ಸುಳಿದು ಮರೆಯಾದಾಗ ಮನಸ್ಸಿಗೆ ಹಗುರವೆನಿಸುವ ಭಾವ ಅಂಟಿದಂತಿತ್ತು.

ಅನಿವಾರ್ಯತೆಯಿಂದ ಒಂಟಿತನವನ್ನು ಒಪ್ಪಿಕೊಂಡವರು ಇವರಾದರೆ, ಡಾ.ಜಗದಾಂಬ ಒಂಟಿತನವನ್ನು ತಾವೇ ಆಯ್ಕೆ ಮಾಡಿಕೊಂಡವರು. ಡಾ. ಆಗಿ ಎಂದಿಗೂ ವೃತ್ತಿಧರ್ಮವನ್ನು,ಸ್ವಾಭಿಮಾನವನ್ನು ಬಿಟ್ಟುಕೊಡದ ಛಲವಂತೆ. ಸಂಸಾರ ನೌಕೆ ಬಿರುಗಾಳಿಗೆ ಸಿಲುಕಿದಾಗ ನಲುಗದೇ ಆ ನೌಕೆಯಿಂದ ಇಳಿದು ಒಬ್ಬರೇ ಮುಂದೆ ನಡೆದವರು. ವೈದ್ಯರಾಗಿ ಅದೆಷ್ಟೋ ರೋಗಿಗಳ ಪಾಲಿಗೆ ಸಂಜೀವಿನಿಯಾಗಿದ್ದಲ್ಲದೇ,ಅದೆಷ್ಟೋ ಜನರ ಕಷ್ಟಗಳಿಗೆ ಸಹಾಯ ಹಸ್ತ ನೀಡಿ ಸಾರ್ಥಕತೆ ಮೆರೆದವರು, ಸಂಸಾರವೆಂಬ ಬಟ್ಟೆ ಹರಿದಾಗ ಅದಕ್ಕೆ ತೇಪೆ ಹಾಕುವ ಬದಲು, ಅದನ್ನು ಬಿಸಾಡಿ ಒಂಟಿತನವೆಂಬ ಹೊಸಬಟ್ಟೆ ತೊಡುವುದು ಒಳ್ಳೆಯದು ಎಂಬ ಸಿದ್ದಾಂತವನ್ನು ಅನುಸರಿಸಿದವರು. ಅವರು ಹೇಳುವ ಹಾಗೇ ಬಲವಂತವಾಗಿ ನಮ್ಮ ತನವನ್ನು ತೊರೆದು ಬದುಕುವುದಕ್ಕಿಂತ ಒಂಟಿಯಾಗಿ ಬದುಕುವುದು ಲೇಸು ಅನ್ನೋ ಮಾತು ಕೆಲವು ಸಂದರ್ಭಗಳಲ್ಲಿ ಇಷ್ಟವಾಗುತ್ತೆ.

ಬದುಕಿನ ಆಕಸ್ಮಿಕವೋ ಅನಿವಾರ್ಯತೆಯೋ, ನೈಸ್ ರೋಡಿನಂತಿದ್ದ ಜೀವನ ಗುಂಡಿಬಿದ್ದ ರಸ್ತೆಯಂತಾಗಿ ಬಿಡುತ್ತದೆ. ಆಗ ಎದೆಗುಂದದೇ ಬಂದ ಪರಿಸ್ಥಿತಿಯನ್ನು,ಅನಿವಾರ್ಯ ಉಂಟಾದಾಗ ಒಂಟಿತನವನ್ನು ಒಪ್ಪಿಕೊಂಡು ಅಪ್ಪಿಕೊಳ್ಳುವುದು ತಪ್ಪಲ್ಲ. ಅಥವಾ ಅದೇ ಅಂತಿಮವೂ ಅಲ್ಲ. ಏಕೆಂದರೆ ಒಂಟಿತನ ಶಾಪವಲ್ಲ, ಒಳಹೊಕ್ಕು ನೋಡಿದರೆ ಅದರಲ್ಲೂ ಒಂದು ಬಗೆಯ ಸುಖವುಂಟು, ಒಂಟಿತನಕ್ಕೂ ಬದುಕುಂಟು, ಬದುಕಿದಾಗ ಮಾತ್ರ.

– ಆಕಾಶಪ್ರಿಯ
ಪತ್ರಕರ್ತೆ
ಬೆಂಗಳೂರು

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version