ಲೋಕಾರೂಢಿ

ಮದ್ಯ ಮಾರಾಟ ನಿಷೇಧಿಸಲು ಇದು ಸಕಾಲ

Published

on

  • ಡಾ. ಶಿವಶಂಕರ್. ವಿ.ಟಿ

ಡೀ ಜಗತ್ತಿನಾದ್ಯಂತ ಕೋವಿಡ್19 ಆವರಿಸಿಕೊಂಡು ಮನುಷ್ಯನ ಬದುಕನ್ನ ಅಕ್ಷರಶಃ ಬಂಧಿಯಾಗಿಸಿದೆ. ಅಭಿವೃದ್ಧಿಯ ಅಮಲನ್ನ ಏರಿಸಿಕೊಂಡು ಅನಗತ್ಯ ಸ್ಪರ್ಧೆಗೆಳಿದಿದ್ದ ಅದೆಷ್ಟೋ ದೇಶಗಳು ಜನರ ಜೀವ ಉಳಿದರೆ ಸಾಕು ಎನ್ನುವಷ್ಟರ ಮಟ್ಟಕ್ಕೆ ಬಂದು ನಿಂತಿವೆ. ಜಾಗತಿಕ ಮಟ್ಟದಲ್ಲಿ ಎಲ್ಲ ದೇಶಗಳ ಎಲ್ಲ ರೀತಿಯ ವಹಿವಾಟುಗಳು ಬಹುಪಾಲು ಸ್ಥಗಿತ ಗೊಂಡಿವೆ. ಎಲ್ಲ ಜನರು ಒಂದಲ್ಲ ಒಂದು ರೀತಿಯಲ್ಲಿ ತೊಂದರೆಗಳನ್ನ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ದೇಶದಲ್ಲಿಯೂ ಕೂಡ ಹಲವಾರು ಸೋಂಕು ತಡೆಗಟ್ಟುವ ಕ್ರಮಗಳನ್ನ ಕೇಂದ್ರಮತ್ತು ರಾಜ್ಯ ಸರ್ಕಾರಗಳು ಕೈಗೊಂಡಿವೆ.

ಇಡೀ ಪ್ರಪಂಚದ ಎಲ್ಲ ಜನಗಳು ಕೋವಿಡ್ ನಿಂದಾಗಿತೊಂದರೆ ಅನುಭವಿ ಸುತ್ತಿರುವ ಹೊತ್ತಿನಲ್ಲೇ ಮದ್ಯ ಮಾರಾಟ ನಿಷೇಧದಿಂದಾಗಿ ಅದೆಷ್ಟೋ ಕುಟುಂಬಗಳು ಇಂದು ಕೋವಿಡ್ 19 ಗೆ ಧನ್ಯವಾದ ಹೇಳುತ್ತಿವೆ.ಮದ್ಯವ್ಯಸನಿಗಳಿಂದ ಅಕ್ಷರಶಃ ಮೂರಾಬಟ್ಟೆಯಾಗಿದ್ದ ಕುಟುಂಬಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿವೆ. ಪ್ರತಿನಿತ್ಯ ಅನುಭವಿಸುತ್ತಿದ್ದ ನರಕಯಾತನೆಗೆ ತಾತ್ಕಾಲಿಕವಾಗಿ ವಿರಾಮ ಸಿಕ್ಕಿದೆ.

ಕೋವಿಡ್ 19 ಹರಡುವಿಕೆ ತಡೆಗಟ್ಟುವಿಕೆಗಾಗಿ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಲಾಕ್ ಡೌನ್ ನಿಂದಾಗಿ ಮದ್ಯ ಮಾರಾಟವನ್ನು ಸಹ ನಿಲ್ಲಿಸಲಾಗಿದೆ. ಹೀಗಾಗಿ ಮದ್ಯ ಸಿಗದೇ ಕೆಲವರು ಆತ್ಮಹತ್ಯೆ ಮಾಡಿಕೊಂಡ ಸುದ್ದಿಗಳು ಬಂದರೂ ಕೂಡ ಅದರಿಂದ ಅನುಕೂಲವಾಗಿರುವ ಕುಟುಂಬಗಳೇ ಹೆಚ್ಚು. ಕೋವಿಡ್ ಎನ್ನುವುದು ಜಗತ್ತು ಎದುರಿಸುತ್ತಿರುವ ಇಂದಿನ ಸಮಸ್ಯೆಯಾದರೆ, ಮದ್ಯಪಾನ ಎನ್ನುವುದು ಅದೆಷ್ಟೋ ಮಹಿಳೆಯರು, ಮಕ್ಕಳು, ವೃದ್ದರು ದಿನನಿತ್ಯ ಎದುರಿಸುತ್ತಿರುವ ಕಣ್ಣೀರಿನ ಕಥೆ.

ಇಡೀ ದೇಶಕ್ಕೆ, ರಾಜ್ಯಕ್ಕೆ ಮತ್ತು ಜನಗಳಿಗೆ ಕೋವಿಡ್ 19 ಬಹಳಷ್ಟು ಪಾಠಗಳನ್ನ ಹೇಳಿಕೊಟ್ಟಿದೆ. ಮದ್ಯಪಾನ ಮಾಡದೇ ಇರಲು ಸಾಧ್ಯವಿಲ್ಲ ಎನ್ನುವ ವ್ಯಸನಿಗಳಿಗೆ ಮದ್ಯಪಾನ ಮಾಡದೆಯೂ ಬದುಕಬಹುದು ಎನ್ನುವುದನ್ನ ಈ ಲಾಕ್ ಡೌನ್ ಅವಧಿಯಲ್ಲಿ ಹೇಳಿಕೊಟ್ಟಿದೆ. ಬಹುಪಾಲು ಮದ್ಯ ವ್ಯಸನಿಗಳು ಕುಡಿತದಿಂದ ಮುಕ್ತಿ ಹೊಂದಿ ಮದ್ಯಪಾನ ಮುಕ್ತ ಜೀವನಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಇದೇ ರೀತಿ ಮದ್ಯ ಮಾರಾಟ ಮುಂದೆಯೂ ನಿಷೇಧವಾಗಿದ್ದೇ ಆದರೆ ಖಂಡಿತವಾಗಿಯೂ ಅವರು ಉತ್ತಮ ಜೀವನವನ್ನು ಕಟ್ಟಿಕೊಂಡು ಸಮಾಜದ ಸ್ವಾಸ್ಥ್ಯ ನಾಗರಿಕರಾಗಿ ಬದುಕುತ್ತಾರೆ. ಮತ್ತೆ ಮದ್ಯ ಮಾರಾಟವನ್ನು ಆರಂಭಿಸಿದರೆ ಅವರು ವ್ಯಸನಿಗಳಾಗುವದರಲ್ಲಿ ಯಾವುದೇ ಸಂದೇಹವಿಲ್ಲ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದೆ ನಿಟ್ಟಿನಲ್ಲಿ ಮದ್ಯಮಾರಾಟವನ್ನು ನಿಷೇಧ ಮಾಡಲು ಇದು ಸಕಾಲ ಎನ್ನುವುದು ನನ್ನ ಭಾವನೆ.

ಮದ್ಯ ಮಾರಾಟವು ಅಬಕಾರಿ ಇಲಾಖೆಯ ಮುಖಾಂತರ ಸರ್ಕಾರಗಳಿಗೆ ಆದಾಯ ತಂದುಕೊಡುವ ಬಹುದೊಡ್ಡ ಆದಾಯದ ಮೂಲ ನಿಜ. ಇನ್ನೊಂದು ಕಡೆ ಅದು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವದು ಅಷ್ಟೇ ಕಟು ಸತ್ಯ. ಯಾವುದೇ ಆದಾಯ ಇಲ್ಲದಿದ್ದರೂ ಜೀವನ ನಡೆಸಬಹುದು ಎನ್ನುವ ಪಾಠವನ್ನ ಕೋವಿಡ್ 19 ನಿಂದಾಗಿ ಸಾಬೀತುಪಡಿಸಿದೆ. ಕೇವಲ ಆದಾಯ ತರುವ ಒಂದೇ ಕಾರಣದಿಂದ ಸಮಾಜದ ಬಹುದೊಡ್ಡ ಪಿಡುಗಾಗಿರುವ ಮದ್ಯವನ್ನು ಮಾರಾಟ ಮಾಡುವುದು ಮುಂದುವರೆಸಿದರೆ ಹಲವಾರು ಕುಟುಂಬಗಳ ನೆಮ್ಮದಿಯನ್ನ, ಅವರ ಹಿತವನ್ನ ಬಲಿಕೊಟ್ಟು ಇನ್ನೊಂದು ಕಡೆ ಉತ್ತಮ ಸಮಾಜವನ್ನ ಕಟ್ಟಲು ಪ್ರಯತ್ನ ಮಾಡಿದಂತೆ ಆಗುತ್ತದೆ. ಎಷ್ಟೋ ದೊಡ್ಡ ದೊಡ್ಡ ಕಟ್ಟಡಗಳನ್ನ ನಿರ್ಮಾಣ ಮಾಡುತ್ತಿರುವ ಕೂಲಿ ಕಾರ್ಮಿಕರ ಕುಟುಂಬಗಳು ಮದ್ಯಪಾನ ದಿಂದಾಗಿ ಇಂದಿಗೂ ಸುಧಾರಣೆ ಕಾಣದೆ ಬೀದಿಗೆ ಬಿದ್ದಿವೆ.

ಸಮಾಜದ ಎಷ್ಟೋ ಕುಟುಂಬಗಳ ಹೆಣ್ಣು ಮಕ್ಕಳ ಕಣ್ಣೀರಿಗೆ ಮದ್ಯಪಾನ ಕಾರಣವಾಗಿದೆ. ಇಂದಿನ ಯುವಜನತೆ ಮದ್ಯವ್ಯಸನಿಗಳಾಗಿ ಜವಾಬ್ಧಾರಿ ಅರಿಯದೆ ಅಲೆದಾಡುತ್ತಿದ್ದಾರೆ. ಹೀಗೆ ಸಮಾಜದ ಸ್ವಾಸ್ಥ್ಯವನ್ನ ಹಾಳು ಮಾಡುತ್ತಿರುವ ಮದ್ಯ ಮಾರಾಟವನ್ನು ನಿಷೇಧಿಸುವ ಒಂದು ಗಟ್ಟಿ ನಿರ್ಧಾರವನ್ನು ಇಂದಿನ ಸರ್ಕಾರಗಳು ತೆಗೆದುಕೊಳ್ಳಬೇಕಿದೆ. ಮದ್ಯಮಾರಾಟದಿಂದ ಬರುವ ಆದಾಯಕ್ಕೆ ಪರ್ಯಾಯ ಮಾರ್ಗೋಪಾಯಗಳ ಬಗ್ಗೆ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಚಿಂತಿಸಬೇಕಿದೆ. ಕೋವಿಡ್ 19 ನಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಮದ್ಯಮಾರಾಟವನ್ನು ಶಾಶ್ವತವಾಗಿ ನಿಲ್ಲಿಸಿ ಭಗವಾನ್ ಬುದ್ಧ ಮತ್ತು ಗಾಂಧೀಜಿಯವರು ಕಂಡ ಮದ್ಯಪಾನ ಮುಕ್ತ ಸ್ವಾಸ್ಥ್ಯ ಸಮಾಜ ನಿರ್ಮಾಣದ ಕನಸನ್ನ ನನಸು ಮಾಡಬೇಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version