ಅಂತರಂಗ

ಗಾಂಧೀಜಿ ಎಂಬ ಧೀಶಕ್ತಿ..!

Published

on

ಲೇಖನ : ಎಂ.ಪಿ. ಕುಮಾರಸ್ವಾಮಿ ಶಾಸಕರು, ಮೂಡಿಗೆರೆ ವಿಧಾನಸಭಾ ಕ್ಷೇತ್ರ

 

  • ಎಂ.ಪಿ. ಕುಮಾರಸ್ವಾಮಿ
    ಶಾಸಕರು, ಮೂಡಿಗೆರೆ ವಿಧಾನಸಭಾ ಕ್ಷೇತ್ರ

ಇಂದು, ಜಗತ್ತಿನ ಶ್ರೇಷ್ಠ ಮಹಾಪುರುಷ ಮಹಾತ್ಮ ಗಾಂಧೀಜಿಯವರ ಜನ್ಮದಿನ. ಈ ವಿಶೇಷ ದಿನವನ್ನು ಅಹಿಂಸಾ ದಿನ, ಸತ್ಯಾಗ್ರಹ ದಿನ, ಸರಳತೆಯ ದಿನ ಎಂದು ಆಚರಿಸಲೂಬಹುದು. ಭಾರತದ ಜೀವವೇ ಆಗಿರುವ ಇವರನ್ನು ಸದಾ ನೆನಪಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಕೂಡ. ಗಾಂಧೀಜಿಯವರ ಜೀವಿತದ ಪ್ರತಿ ಸಂದರ್ಭಗಳು ವೈಶಿಷ್ಟ್ಯಪೂರ್ಣವೂ ಅದ್ವಿತೀಯವೂ ಆದರ್ಶವೂ ಆಗಿದೆ.

ಸ್ವಾತಂತ್ರ್ಯಕ್ಕಾಗಿ ನೂರಾರು ವರ್ಷಗಳಿಂದ ಹಲವಾರು ಕ್ರಾಂತಿಗಳನ್ನು ಮಾಡಿ ನಿರಾಯುಧರಾಗಿದ್ದ ಭಾರತೀಯರ ಮುಂದೆ ಗಾಂಧೀಜಿಯವರ ‘ಸತ್ಯ’ ಮತ್ತು ‘ಅಹಿಂಸಾ’ ಎಂಬ ಆತ್ಮಶಕ್ತಿಯ ಆಯುಧಗಳು ಭಾರತೀಯರನ್ನು ಬ್ರಿಟೀಷರ ಸಂಕೋಲೆಯಿಂದ ಬಿಡುಗಡೆ ಮಾಡುವಂತೆ ಮಾಡಿದ್ದು ನಮ್ಮ ದೇಶದ ಮಹಾಪಲ್ಲಟ ಹಾಗೂ ಮಹತ್ವಪೂರ್ವ ಘಟನೆ.

ಗಾಂಧೀಜಿಯವರು ‘ನನ್ನ ಸತ್ಯಾನ್ವೇಷಣೆ’ಯಲ್ಲಿ ಹೀಗೆ ಮುನ್ನುಡಿಯುತ್ತಾರೆ; “ನಾನು ಹೇಳಬಯಸುವ ಸತ್ಯಶೋಧನೆಯ ನನ್ನ ಅನೇಕ ಪ್ರಯೋಗಗಳ ಕಥೆಯನ್ನು ಮಾತ್ರ. ನನ್ನ ಜೀವನ ಈ ಪ್ರಯೋಗಗಳ ಹೊರತು ಮತ್ತೇನೂ ಅಲ್ಲ.”- ಹೀಗೆ ತಮ್ಮ ಬದುಕನ್ನೇ ಪ್ರಯೋಗಶಾಲೆ ಮಾಡಿಕೊಂಡು ಯಶಸ್ವಿಯಾಗಿ ಮಹಾನ್ ಸಾಧಕರಾದ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ಜನಾಂಗ ಪಕ್ಷಪಾತ ಹಾಗೂ ವರ್ಣಭೇದ ನೀತಿಯ ವಿರುದ್ಧ ನಡೆಸಿದ ಹೋರಾಟದಲ್ಲಿ ‘ಸತ್ಯಾಗ್ರಹ’ ಎಂಬ ಕರ‍್ಯತತ್ವವನ್ನು ರೂಪಿಸಿಕೊಂಡಿದ್ದರು.

ಈ ಮೂಲಕ ಸತ್ಯಾಗ್ರಹವನ್ನು ‘ಆತ್ಮಶಕ್ತಿ’ ಅಥವಾ ‘ಪ್ರೇಮಶಕ್ತಿ’ ಎಂದು ಸೂಚಿಸಿ, ಈ ಶಕ್ತಿಯನ್ನು ಸ್ವಾತಂತ್ರ ಸಂಗ್ರಾಮದ ಆಯುಧವನ್ನಾಗಿ ಬಳಸಿದರು. ಸತ್ಯವನ್ನೇ ತಮ್ಮ ಶಕ್ತಿಯಾಗಿ ಮಾಡಿಕೊಂಡ ಗಾಂಧೀಜಿಯವರಿಗೆ ಸತ್ಯದ ಮೇಲೆ ಬಹಳ ಒಲವು ಇತ್ತು. ಹಾಗೆಯೇ ಅವರ ವಿಚಾರಗಳು ತುಂಬಾ ಭಿನ್ನವಾಗಿದ್ದವು. ಪ್ರಸಿದ್ಧ ಆಂಗ್ಲ ಕವಿ ಕೀಟ್ಸ್ ‘ಸೌಂರ‍್ಯವೇ ಸತ್ಯ’ ಎಂದನು. ಆದರೆ ಗಾಂಧೀಜಿ ‘ಸತ್ಯವೇ ಸೌಂರ‍್ಯ’ ಎಂದರು. ಬಾಹ್ಯರೂಪದಲ್ಲಿ ಅಷ್ಟೇನು ಚೆನ್ನಾಗಿ ಕಾಣದ ಪ್ರಾಚೀನ ಗ್ರೀಕ್ ತತ್ವಜ್ಞಾನಿ ಸಾಕ್ರೇಟಿಸ್‌ನನ್ನು ‘‘A Beautiful soul’
ಎಂದು ಕರೆದು ಆತ್ಮಶುದ್ಧಿಗೆ ಹೆಚ್ಚು ಮಹತ್ವಕೊಟ್ಟರು.

ಸರಳತೆಗೆ ಸಾಹುಕಾರರಾದ ಗಾಂಧೀಜಿಯವರಿಗೆ ಜೀವನವೇ ಒಂದು ಐಶ್ರ‍್ಯ. “ಯಾವ ದೇಶದಲ್ಲಿ ಉದಾತ್ತ ಮನಸ್ಕರೂ ನೆಮ್ಮದಿಯಿಂದ ಬಾಳುವವರೂ ಆದ ವ್ಯಕ್ತಿಗಳು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಇರುವರೋ ಆ ದೇಶ ಜಗತ್ತಿನಲ್ಲಿಯೇ ಅತ್ಯಂತ ಶ್ರೀಮಂತವಾದುದು. ಹಾಗೆಯೇ ಯಾವ ಮನುಷ್ಯ ಜೀವನದಲ್ಲಿ ತನ್ನೆಲ್ಲಾ ಕರ್ತವ್ಯಗಳನ್ನು ಪರಿಪೂರ್ಣಗೊಳಿಸುವುದಲ್ಲದೆ ಇತರರ ಬಾಳ್ವೆಯ ಮೇಲೂ ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಸಹಾಯವಾಗಬಲ್ಲ ಪ್ರಭಾವ ಬೀರುವನೋ ಅವನು ಮಿಕ್ಕೆಲ್ಲರಿಗಿಂತ ಶ್ರೀಮಂತನೆನ್ನಬೇಕು” ಎಂಬ ಅವರ ಮಾತಿನ ಹಿನ್ನೆಲೆಯಲ್ಲಿ ಅವರ ಬದುಕಿನ ಸತ್ಯಾನ್ವೇಷಣೆ ಅಡಗಿರುವುದು ಪ್ರಯೋಗಾತ್ಮಕ ಸಂಗತಿಯಾಗಿದೆ.

ಗಾಂಧೀಜಿ ತಮ್ಮನ್ನು ಸನಾತನೀ ಹಿಂದೂ ಎಂದು ಕರೆದುಕೊಂಡು, ಗೋವಿಗೆ ಹೆಚ್ಚಿನ ಮಹತ್ವಕೊಟ್ಟಿದ್ದಾರೆ. ಗೋ ಸೇವೆಯನ್ನು ಹಿಂದೂ ಧರ್ಮದ ತಿರುಳೆಂದು ತಿಳಿದು ‘ಕರುಣೆಯ ಕಾವ್ಯ’ ಎನ್ನುವಷ್ಟರ ಮಟ್ಟಿಗೆ ಗೋವನ್ನು ತಾಯಿ, ಸತ್ವಶಕ್ತಿಯ ಅವತಾರ ಎಂದು ಕರೆದಿದ್ದಾರೆ. ಹೀಗೆ ಭಾವನಾತ್ಮಕವಾಗಿ ಯೋಚಿಸುವುದರ ಜೊತೆಗೆ ಹಿಂದೂ ಸಮಾಜದಲ್ಲಿರುವ ಪಾಪಕೃತ್ಯಗಳಾದ ದೇವದಾಸಿ ಪದ್ಧತಿ, ಪ್ರಾಣಿಹತ್ಯೆ, ಮದ್ಯಪಾನ, ಜೂಜು, ಅಸ್ಪೃಶ್ಯತೆ, ಮಲಿನತೆ ಇವುಗಳನ್ನು ಸುಧಾರಿಸಲು ಯತ್ನಿಸಿದ್ದಾರೆ. ಜತೆಗೆ ಸರ್ವಧರ್ಮ ಸಮಭಾವವನ್ನೂ ಬೋಧಿಸಿದ್ದಾರೆ.

ಗಾಂಧೀಜಿಯವರ ಮಾನವೀಯ ಗುಣ ಎಲ್ಲರನ್ನು ಆಕರ್ಷಿಸುವಂತಹುದು. ಮನುಷ್ಯನಿಗೆ ಮನುಷ್ಯನಾಗಿಯೇ ಒಂದು ಮೌಲ್ಯವಿದೆ. ಈ ಮೌಲ್ಯ ಎಲ್ಲ ಬಂಧನಗಳನ್ನು ಮೀರಿದ್ದು. ಪ್ರತಿಯೊಬ್ಬ ಮಾನವನಿಗೂ ಮಾನವನೇ ಆಗಬೇಕು. ಮಾನವನನ್ನು ಪ್ರೀತಿಸುವುದನ್ನು ‘ಮಾನವೀಯತೆಯ ಹಕ್ಕು’ ಎಂದು ಪ್ರತಿಪಾದಿಸಿದರು.

ಬಡತನದ ಪ್ರತೀಕವಾಗಿ ಒಬ್ಬ ಹೆಂಗಸು ತನ್ನಲ್ಲಿದ್ದ ಒಂದೇ ಸೀರೆಯ ಅರ್ಧಭಾಗವನ್ನು ಉಟ್ಟು ಇನ್ನರ್ಧ ಸೀರೆಯನ್ನು ತೊಳೆದು ದಿನಕಳೆಯುತ್ತಿದ್ದ ಪರಿಸ್ಥಿತಿಯನ್ನು ನೋಡಿ, ತಾನು ಸೂಟುಬೂಟನ್ನು ಧಿಕ್ಕರಿಸಿ, ತನ್ನ ಕೊನೆಗಾಲದ ತನಕ ಸರಳ ಉಡುಪಿಗೆ ಬದ್ಧರಾಗಿದ್ದ ಗಾಂಧೀಜಿಯ ಇಂಥ ಮೌಲ್ಯಯುತ ಜೀವನವು ನಮಗೆ ಆದರ್ಶ ಮಾದರಿ.

ಇಂತಹ ಸರಳತೆಯ ಸ್ವಚ್ಛತೆಯ ದೈವತ್ವದ ‘ಗಾಂಧಿ ಮಾದರಿ’ ಈ ಕಾಲಕ್ಕೆ ತೀರ ಆವಶ್ಯವಾಗಿದೆ. ಇವರ ಹೋರಾಟಗಳು ಜಗತ್ತಿನಲ್ಲಿ ಅತ್ಯಂತ ಪರಿಶುದ್ಧವಾಗಿವೆ ಮತ್ತು ದಾರಿ ದೀಪವಾಗಿವೆ. ಸ್ವಾತಂತ್ರö್ಯ ಹೋರಾಟವು ರಕ್ತಪಾತದಿಂದ ಕೊನೆಗೊಂಡು ಅಲ್ಪಾಯುಷ್ಯ ಹೊಂದಬಾರದು ಎಂದು ಮನಗಂಡು, ತಾತ್ವಿಕ ಹೋರಾಟಕ್ಕೆ ಕೊಂಡೊಯ್ಯಬಲ್ಲ ಅಹಿಂಸಾತ್ಮಕ ಹೋರಾಟಕ್ಕೆ ಗಾಂಧೀಜಿ ಮುನ್ನುಡಿ ಬರೆದರು.

ಇವರ ಹೋರಾಟದಲ್ಲಿ ಅಳವಡಿಸಿಕೊಂಡ ಮಹಾವೀರನ ಅಹಿಂಸೆ, ಬುದ್ಧನ ಶಾಂತಿ, ಯೇಸುವಿನ ಪ್ರೀತಿ ಇಂತಹ ಮಾರ್ಗಗಳ ಮೂಲಕ ಸತ್ಯಾಗ್ರಹ, ಮೌನ ಪ್ರತಿಭಟನೆ, ಅಸಹಕಾರದಂತಹ ಹರಿತ ಅಸ್ತçಗಳನ್ನು ಮಾನವ ಜನಾಂಗಕ್ಕೆ ಪರಿಚಯಿಸಿದ ಅವತಾರ ಪುರುಷ. ಇದೇ ಹಾದಿಯಲ್ಲಿ ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ, ಅಂಗ್‌ಸಾನ್ ಸೂ ಕೀ ಇವರು ಯಶಸ್ವಿಯಾಗಿರುವುದು ನಮ್ಮ ಕಣ್ಣ ಮುಂದೆ ಇದೆ.

23-02-1922 ರ‘ಯಂಗ್ ಇಂಡಿಯಾ’ ದ ಅಗ್ರಲೇಖನ ‘ಷೇರಿಂಗ್ ದಿ ಮೆನ್ಸ್’ನಲ್ಲಿ ಗಾಂಧೀಜಿ ಹೀಗೆ ಬರೆಯುತ್ತಾರೆ; “ಅಧಿಕಾರವೆಂಬ ಮದ್ಯ ಹಾಗೂ ಬಡಜನಾಂಗಗಳಿಂದ ಮಾಡಿದ ಕೊಳ್ಳೆಗಳಿಂದ ಮತ್ತೇರಿರುವ ಯಾವ ಸಾಮ್ರಾಜ್ಯ ಈ ಜಗತ್ತಿನಲ್ಲಿ ಬಹುಕಾಲ ಬಾಳಲ್ಲ.” ಇಂತಹ ಪ್ರತಿಮಾ ವಿಧಾನದ ಮಾತು ಕೇವಲ ಬ್ರಿಟೀಷರಿಗೆ ಮಾತ್ರ ಸೀಮಿತವಾಗುವುದಿಲ್ಲ.

ಪ್ರತಿಯೊಬ್ಬರ ಆತ್ಮೋದ್ಧಾರವನ್ನು, ಲೋಕದ ಹಿತವನ್ನು ಸಾಧಿಸಬೇಕಾದರೆ ಈ ಸಂದರ್ಭದಲ್ಲಿ ‘ಸರ್ವೋದಯ’ ಪ್ರತಿಜ್ಞೆಯನ್ನು ಪ್ರತಿಯೊಬ್ಬರೂ ಕೈಗೊಳ್ಳುವುದಕ್ಕೆ ಈ ವರ್ಷ ಪ್ರೇರಕವಾಗಲಿ ಎಂದು ಬಯಸಿ, ಗಾಂಧೀಜಿಯವರ ಬಗ್ಗೆ ಆಲ್ಬರ್ಟ್ ಐನ್‌ಸ್ಟೀನ್ ಮಾತನ್ನು ನೆನೆಯುತ್ತೇನೆ; “ಇಂತಹ ವ್ಯಕ್ತಿಯೊಬ್ಬ ದೇಹಧಾರಿಯಾಗಿ ಈ ನೆಲದ ಮೇಲೆ ನಡೆದಾಡಿದನು ಎಂಬುದನ್ನು ಮುಂದಿನ ಪೀಳಿಗೆಗಳು ನಂಬುವುದು ವಿರಳ.” ಈ ನಂಬಿಕೆಯ ವಿರಳತೆಯನ್ನು ನಾವು ಬಹುಳ ಮಾಡಬೇಕಾಗಿರುವುದು ನಮ್ಮೆಲ್ಲರ ಧೀಶಕ್ತಿಯ ಸಂಕಲ್ಪವಾಗಬೇಕು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version