ಬಹಿರಂಗ

ಮಹಿಷ ಅಸುರನಲ್ಲ, ಅವನು ‘ಮಹಿಷ ಮಂಡಲ’ದ ಒಬ್ಬ ನಾಯಕ..!

Published

on

ಫೋಟೋ : ನವ್ಯ ಕಡಮೆ
  • ಹರ್ಷಕುಮಾರ್ ಕುಗ್ವೆ

ಹಿಷಾಸುರ ಎಂದು ಹೇಳುವಾಗ ಅದರಲ್ಲಿರುವ “ಅಸುರ” ಎಂಬ ಪದದ ಬಗ್ಗೆ ದ್ರಾವಿಡ ಯುವ ಚಿಂತಕರು ಎಚ್ಚರ ವಹಿಸುವ ಅಗತ್ಯವಿದೆ. ಕೆಲವು ಸ್ನೇಹಿತರು “ಅಸುರ” ಎಂಬ ಪದವನ್ನು ತಮ್ಮ ಸರ್ ನೇಮ್ ಆಗಿ ಇಟ್ಟುಕೊಂಡಿರುವವರನ್ನೂ ನೋಡಿದ್ದೇನೆ. ನನ್ನ ಅಭಿಪ್ರಾಯದಲ್ಲಿ ಇದು ತಪ್ಪು ಮಾತ್ರವಲ್ಲ ವೈದಿಕಶಾಹಿಗಳು ತೆಗೆದ ಗುಂಡಿಯಲ್ಲಿ ನಾವು ಬೀಳುವ ಪರಿ. ಮಹಿಷ ಮಂಡಲದ ಮಹಿಷನಿಗೆ “ಅಸುರ” ಎಂದು ಕರೆದಿದ್ದು ವೈದಿಕರು.

ಯಾಕೆಂದರೆ ಮಹಿಷಾಸುರನ ಕುರಿತು ಪುರಾಣ ಬರೆದಿದ್ದು ಅವರೇ. ಆದರೆ ಮೂಲತಃ ಮಹಿಷ ಎಂಬುವವ ವ್ಯಕ್ತಿ ಮಹಿಷ ಮಂಡಲದ ಒಬ್ಬ ನಾಯಕ ಎಂದು ಅವನ ಕುರಿತಾದ ಆಚರಣೆಗಳು, ದ್ರಾವಿಡ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿರುವ ಸಂಗತಿಗಳು ಸಾರಿ ಹೇಳುತ್ತವೆ. ಎಮ್ಮೆಯನ್ನು ಸಂಕೇತಿಸುವ ಮಹಿಶನ ಸಮುದಾಯ ಆದಿಮ ದ್ರಾವಿಡ ಪಶುಪಾಲಕ ಸಮುದಾಯವೇ ಇರಬೇಕು. ಇಂದಿನ ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟ್ರಗಳ ಬಹುಭಾಗವನ್ನು ವ್ಯಾಪಿಸಿಕೊಂಡಿದ್ದ ಮಹಿಷಮಂಡಲ ಪಶುಪಾಲಕ ದ್ರಾವಿಡ/ದಲಿತ ಸಮುದಾಯಗಳ ಪ್ರಾಭಾವದಲ್ಲಿದ್ದ ಕಾಲವಾಗಿದ್ದಿರಬಹುದು.

ಅದೇ ಸಮಯದಲ್ಲಿ ಮಾತೃ ಪ್ರಧಾನ ದ್ರಾವಿಡ ಬುಡಕಟ್ಟುಗಳೂ ಇದ್ದವು. ಈ ಸಮುದಾಯಗಳ ನಡುವೆ ಸಂಘರ್ಷವೂ ಸಹಜವಾಗಿ ನಡೆದಿರಬಹುದು. ಆದರೆ ನಂತರದಲ್ಲಿ ಈ ಪ್ರದೇಶಗಳಿಗೆ ಬಂದ ವೈದಿಕಶಾಹಿ ಪುರಾಣಗಳನ್ನು ಕಟ್ಟುವಾಗ ತನ್ನ ಹಿತಾಸಕ್ತಿಗೆ ತಕ್ಕಂತೆ ಮಹಿಷನನ್ನು ಅಸುರನೆಂದೂ, ಚಾಮುಂಡಿಯನ್ನು ವೈದಿಕ ದೇವತೆಯೆಂದೂ ಚಿತ್ರಿಸಿದ್ದಾರೆ. ಪುರಾತನ ವೈದಿಕ ಸಾಹಿತ್ಯದಲ್ಲಿ ಮಾತೃ ದೇವತೆಗಳ ಸಂಖ್ಯೆ ಇಲ್ಲವೇ ಇಲ್ಲ ಎನ್ನುಷ್ಟು ಅತಿ ವಿರಳ. ಕಾಲಕ್ರಮೇಣ ಎಲ್ಲಾ ದ್ರಾವಿಡ ಮಾತೃಬುಡಕಟ್ಟುಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ವೈದಿಕಶಾಗಿ ಆ ಸಮುದಾಯಗಳ ಮಾತೃದೇವತೆಗಳನ್ನು ಬ್ರಾಹ್ಮಣೀಕರಿಸಿಕೊಂಡ ದೊಡ್ಡ ಚರಿತ್ರೆಯೇ ಇದೆ. ಎಲ್ಲಮ್ಮ ರೇಣುಕೆಯಾದದ್ದು. ಮಾರಮ್ಮ ಬ್ರಾಹ್ಮಣರ ಹೆಣ್ಣಾದದ್ದು ಉದಾಹರಣೆಗಳು.

ಇಂದು ನಾವು ವಾಗ್ವಾದದಲ್ಲಿ ತೊಡಗಿರುವುದು ವೈದಿಕರು ರಚಿಸಿರುವ ಸ್ವಹಿತಾಸಕ್ತಿಯ ಪುರಾಣದ ಆಧಾರದಲ್ಲಿಯೇ ವಿನಃ ವಾಸ್ತವಿಕ ಸಾಮಾಜಿಕ ಸಂಗತಿಗಳ ಆಧಾರದಲ್ಲಿ ಅಲ್ಲ. ವೈದಿಕರ ಪಠ್ಯಗಳ ಮೂಲಕ ನಮ್ಮ ಸಾಮಾಜಿಕ ಸಂಗತಿಗಳನ್ನು ಬಿಡಿಸುವ ಕೆಲಸವಾಗಬೇಕಿದೆ. ಇದಕ್ಕೆ ಅಕ್ಷರಶಃ ಪುರಾಣ ಕತೆಗಳನ್ನು ವ್ಯಕ್ತಿಗಳಾಗಿ ನೋಡಿದರೆ ನಾವು ಯಾವುದೇ ಖಚಿತ ತೀರ್ಮಾನಕ್ಕೆ ಬರುವುದು ಅಸಾಧ್ಯವೆನಿಸುತ್ತದೆ.

ನಾನು ಮಹಾರಾಷ್ಟ್ರ-ಆಂಧ್ರಗಳ ಕಡೆಯಿಂದ ಕರ್ನಾಟಕಕ್ಕೆ ನೂರು ವರ್ಷಗಳ ಹಿಂದೆ ವಲಸೆ ಬಂದಿರುವ ಮಾಂಗ್ ಗಾರುಡಿ ಅಲೆಮಾರಿ ಸಮುದಾಯದ ಅಧ್ಯಯನ ನಡೆಸುವಾಗ ಒಂದು ಕುತೂಹಲಕಾರಿ ಸಂಗತಿ ಕಂಡೆ. ಅದೇನೆಂದರೆ ಈ ಮಾಂಗ್ ಗಾರುಡಿ ಜನರು ಎಲ್ಲೇ ಹೋಗಿ ನೆಲೆಸಲಿ ಅಲ್ಲಿ ಅವರ ತಮ್ಮ ವಿವಿಧ ಮಾತೃ ದೈವಗಳ ಜೊತೆಗೆ ಒಬ್ಬ ಗಂಡುದೈವವನ್ನೂ ಇಡುತ್ತಾರೆ. ಬಹುತೇಕ ಕಡೆಗಳಲ್ಲಿ ಈ ದೈವಗಳೆಲ್ಲ ಗುಂಡಗಿನ ಕಲ್ಲುಗಳಷ್ಠೇ. ಈ ಗಂಡು ದೈವದ ಹೆಸರು ಮಶೋಬಾ. ಯಾರು ಈ ಮಶೋಭಾ ಎಂದು ಕೊಂಚ ಕೆದಕಿದಾಗ ಮಹಾರಾಷ್ಟ್ರದಲ್ಲಿ ಮಶೋಬಾ ದೇವಸ್ಥಾನವೇ ಇರುವುದು ಕಂಡು ಬಂತು. ಮಾತ್ರವಲ್ಲ ಮಶೋಬಾನಿಗೆ ಪ್ರತಿ ವರ್ಷ ಜಾತ್ರೆಯೂ ಆಗುತ್ತದೆ. ಮಶೋಭಾ ಬೇರಾರೂ ಅಲ್ಲದೇ ಮಹಿಷ ಮಂಡಲದ ಮಹಿಷನೇ ಎಂದು ಡಿಡಿ ಕೋಸಾಂಬಿಯವರೂ ದಾಖಲಿಸಿದ್ದಾರೆ.

ಮಾಂಗ್ ಜನರು ಮಶೋಬಾ ಅಥವಾ ಮಹಿಶ ತಮ್ಮ ಮಾತೃ ದೇವತೆ ಮರಗುಬಾಯಿಯ ಸೋದರನೆಂದೇ ತಿಳಿದಿದ್ದಾರೆ. ಹಾಗಾಗಿಯೇ ಮರಗುಬಾಯಿಯ ಗುಡಿ ಇದ್ದಲ್ಲೆಲ್ಲ ಮಶೋಬಾನೂ ಇರುತ್ತಾನೆ. ಆದಿಮ ದಲಿತ ಸಮುದಾಯಗಳು ಪಶುಪಾಲನೆ ಮತ್ತು ಕೃಷಿ ಎರಡರಲ್ಲೂ ತೊಡಗಿದ್ದನ್ನು ಈ ಎರಡು ದೈವಗಳು ಸಂಕೇತಿಸುವುದಿಲ್ಲವೇ? ಇವುಗಳ ನಡುವಿನ ಕಲಹವನ್ನೇ ವೈದಿಕರು ವಕ್ರಗೊಳಿಸಿ ಪುರಾಣ ರಚಿಸಿರಬಾರದೇಕೆ? ವೈದಿಕ ಪುರಾಣಗಳು ಮಹಿಶನನ್ನು “ಅಸುರ” ಎಂದು ಕರೆದಿದ್ದರೂ ನಮ್ಮ ಬುಡಕಟ್ಟು ದಲಿತರು ಅವನನ್ನು ತಮ್ಮ ದೈವ ಎಂದು ಪೂಜಿಸುವುದು ಏನನ್ನು ಸೂಚಿಸುತ್ತದೆ?
ಇನ್ನು ಈ ಅಸುರ ಎಂಬ ಪರಿಕಲ್ಪನೆ ಅಪ್ಪಟ ವೈದಿಕ ಮೂಲದ್ದು. ಈ ಪದವೂ ವೈದಿಕರದ್ದೇ.

ಹರಪ್ಪ ನಾಗರಿಕತೆಯ ಕಾಲದಲ್ಲಿ ಈ ಸುರ- ಅಸುರ- ದೇವ- ದೇವತೆಗಳ ಕಲ್ಪನೆಗಳು ದ್ರಾವಿಡ ಜನರಿಗೆ ಇರಲಿಲ್ಲ. ಹೆಚ್ಚೆಂದರೆ ನಿಸರ್ಗದ ವಿವಿಧ ಅಂಶಗಳನ್ನು ಇಲ್ಲವೇ ಪೂರ್ವಿಕ ಪಿತೃಗಳನ್ನು ನೆನೆಯುತ್ತಿದ್ದರು. ಮಾತೆಯರೇ ಮಾನಿನಿಯರಾಗಿದ್ದರು. ಕ್ರಿ.ಪೂ 1700ರ ಸುಮಾರಿಗೆ ಋಗ್ವೇದಿ ಆರ್ಯರು ಭಾರಕ್ಕೆ ಕಾಲಿಟ್ಟ ಮೇಲೆಯೇ ಅಸುರ-ದೇವ ಮುಂತಾದ ಪರಕಲ್ಪನೆಗಳು ಬಂದಿದ್ದು.
ಇನ್ನೂ ಯೂರೇಶಿಯಾದಿಂದ ಭಾರತದ ಕಡೆಗೆ ಹೊರಡುವ ಮೊದಲೇ ಒಂದಾಗಿದ್ದ ವೈದಿಕರು ಮತ್ತು ಜೊರಾಷ್ಟ್ರಿಯನ್ನರು (ಪಾರ್ಸಿ ಧರ್ಮೀಯರು) ಒಟ್ಟಾಗಿದ್ದಾಲೇ ಈ ಆರ್ಯ- ಅಸುರ- ಇತ್ಯಾದಿ ಪದಗಳನ್ನು ಬಳಸುತ್ತಿದ್ದರು. ನಂತರವ ಇವರಿಬ್ಬರ ನಡುವೆ ದಾಯಾದಿ ಕಲಹ ಏರ್ಪಡುತ್ತದೆ. ನಂತರ ಪಾರ್ಸಿಗಳು ಪೂಜಿಸುವ ದೇವರು ಅಹುರ ಮಜ್ದಾ ಋಉಗ್ವೇದಿ ಆರ್ಯರಿಗೆ “ಅಸುರ”ನಾಗುತ್ತಾನೆ. ಹಾಗೆಯೇ ಆರ್ಯರು ಪೂಜಿಸುವ ದೇವ (ದೇಏವ) ಪಾರ್ಸಿಗಳಿಗೆ ದುಷ್ಟ ನಾಗುತ್ತಾನೆ.

ಋಗ್ವೇದವನ್ನೂ ಮತ್ತು ಪಾರ್ಸಿಗಳ ಧರ್ಮ ಗ್ರಂಥವಾದ ಜೆಂಡ್ ಅವೆಸ್ತಾ (ಕ್ರಿ.ಪೂ 2500ರ ಸುಮಾರಿಗೆ ರಚಿತವಾದದ್ದು) ಎರಡನ್ನೂ ಹೋಲಿಸಿ ಎರಡಲ್ಲಿ ದೇವ ಮತ್ತು ಅಸುರ ಎಂಬ ಪದ ಬಳಕೆ ಹೇಗೆ ಆಗಿದೆ ಎಂಬುದನ್ನು ಗಮನಿಸಿದಾಗ ಈ ಮೇಲಿನ ಸಂಗತಿ ತಿಳಿದು ಬರುತ್ತದೆ. ಬಹಳ ಮುಖ್ಯವಾಗಿ ಋಗ್ವೇದದ ಮೊದಲ ಭಾಗಗಳಳು ಮತ್ತು ಪಾರ್ಸಿಗಳ ಅವೆಸ್ತಾ ಎರಡೂ ಒಂದೇ ಭೂಗೋಳಿಕ ಪ್ರದೇಶದಲ್ಲಿ ರಚನೆಯಾಗಿರುವುದು ಎನ್ನುವುದಕ್ಕೆ ಅವುಗಳಲ್ಲಿ ಹೇರಳವಾದ ಉದಾಹರಣೆಗಳಿವೆ. ಈ ಕುರಿತು ಹೆಚ್ಚಿನ ವಿವರ ಮತ್ತು ಆಳವಾದ ವಿಶ್ಲೇಶಣೆಗೆ ಸಂಸ್ಕೃತಿ ಚಿಂತಕರಾದ ಲಕ್ಷ್ಮೀಪತಿ ಕೋಲಾರ ಅವರು ಪ್ರಾಜಾವಾಣಿಗೆ ಬರೆದಿದ್ದ “ಧರ್ಮಸಂಕಟ ಸೃಷ್ಟಿಸಿರುವ ಮಾದಕ ಸೋಮ” ಎಂಬ ಲೇಖನವನ್ನು ಓದಿ. ಹಾಗೂ ಪ್ರಖ್ಯಾತ ಇತಿಹಾಸಕಾರ ರಾಜೇಶ್ ಕೊಚ್ಚಾರ್ ಅವರು ವೈದಿಕ ಸಂಸ್ಕೃತಿ ಕುರಿತು ಬರೆದ ಗ್ರಂಥದಲ್ಲಿ ಆರ್ಯ ವೈದಿಕರ ಋಗ್ವೇದ ಮತ್ತು ಪಾರ್ಸಿಗಳ ಜೆಂಡ್ ಅವೆಸ್ತಾಗಳಲ್ಲಿ ಅಡಕವಾಗಿರುವ ಸಂಗತಿಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.

(ಇಲ್ಲಿರುವ ಫೋಟೋಗಳು ಒಂದು ಮೈಸೂರಿನ ಮಹಿಷನಾದರೆ ಮಿಕ್ಕಿದ್ದು ಮಾಂಗ್ ಜನರ ಆರಾಧ್ಯ ದೈವ ಮಶೋಬ (ಮಹಿಷ)ನವು. ಫೋಟೋ ತೆಗೆದವರು ನವ್ಯ ಕಡಮೆ (Navya Kadame))

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version