ಅಂತರಂಗ

ನಿಮ್ಮಂಥ ಧ್ವನಿ ಸಂಸತ್ತಿನಲ್ಲಿ ಇರಬೇಕಿತ್ತು ಸರ್

Published

on

ಮಲ್ಲಿಕಾರ್ಜುನ ಖರ್ಗೆ ಅವರ ತಂದೆ ಜವಳಿ ಮಿಲ್ ಕಾರ್ಮಿಕ. ಖರ್ಗೆ ಸೇರಿದಂತೆ ಆರು ಮಕ್ಕಳು. ಖರ್ಗೆಯವರೇ ಎಲ್ಲರಿಗಿಂತ ಕಿರಿಯರು. ಗುಡಿಸಲೇ ಅವರ ಮಹಲಾಗಿತ್ತು. ಅದು ಕೂಡ ಊರ ಹೊರಗಿತ್ತು. ಒಮ್ಮೆ ಆ ಊರಿನಲ್ಲಿ ಸಂಘರ್ಷ ಉಂಟಾಗಿತ್ತು. ದುಷ್ಕರ್ಮಿಗಳು ಖರ್ಗೆ ಅವರ ಗುಡಿಸಲಿಗೆ ಬೆಂಕಿ‌ ಇಟ್ಟರು. ಹಾಗೆ ಬೆಂಕಿಬಿದ್ದ ಸಂದರ್ಭದಲ್ಲಿ ಖರ್ಗೆ ಅವರ ತಾಯಿ ಮತ್ತು ಐವರು ಅಣ್ಣಂದಿರು ಗುಡಿಸಲಿನ ಒಳಗಿದ್ದರು.

ಆ ತಾಯಿ ತಾನೂ ಹೊರಬರಲಾರದೆ ಮಕ್ಕಳನ್ನೂ ಹೊರದಬ್ಬಲಾರದೆ ಸುಟ್ಟು ಬೂದಿಯಾದರು. ಈ ದೃಶ್ಯವನ್ನು ಖರ್ಗೆ ಕಣ್ತುಂಬಿಸಿಕೊಂಡಾಗ ಖರ್ಗೆ ಅವರ ವಯಸ್ಸು ಮೂರು ವರ್ಷ. ಎಷ್ಟೇ ಅತ್ತರೂ ಕೇಳುವವರಿರಲಿಲ್ಲ. ಅಪ್ಪ ಬರುವಷ್ಟರಲ್ಲಿ‌ ಕಣ್ಣೀರು ಬತ್ತೋಗಿತ್ತು. ಮಗನನ್ನು ತಬ್ಬಿಕೊಂಡು ಅಳುವುದರ ಹೊರತು ಅಪ್ಪನಿಗೆ ಏನೇನೂ ಉಳಿದಿರಲಿಲ್ಲ. ಕಡುಬಡವನಿಗೆ ಶವಸಂಸ್ಕಾರ ಮಾಡುವ ಕಷ್ಟವನ್ನು ಕೊಡದೆ ಭಗವಂತ ಪುಣ್ಯ ಕಟ್ಟುಕೊಂಡಿದ್ದ.

ಕೆಲ ವರ್ಷಗಳ ಬಳಿಕ ಶಾಲೆ ಸೇರಿದರು ಖರ್ಗೆ. ಅದು ಖರ್ಗೆ ಅವರ ತಂದೆ ಕೆಲಸಕ್ಕಿದ್ದ ಜವಳಿ ಮಿಲ್ ದೇಣಿಗೆಯಲ್ಲಿ ನಡೆಯುತ್ತಿದ್ದ ಶಾಲೆ. ಜವಳಿ ಮಿಲ್ ಮ್ಯಾನೇಜರ್ ಮಗ ಕೂಡ ಅದೇ ಶಾಲೆಯಲ್ಲಿ ಓದುತ್ತಿದ್ದ. ಆದರೆ ಆತನಿಗಾಗಿಯೇ ಎಂದು ಒಂದು ಬೆಂಚ್ ಇತ್ತು. ಒಮ್ಮೆ ತನ್ನ ಸಹಪಾಠಿಗೆ ಜಾಗ‌ ಸಿಗದಿದ್ದಾಗ ಖರ್ಗೆ ಆ ಮ್ಯಾನೇಜರ್ ಮಗನ ಬಳಿ ಜಗಳ ಮಾಡಿ ಆ ಬೇಂಚ್ ನಲ್ಲಿ ಕೂರಿಸಿದ್ದರು. ದೂರು ಶಿಕ್ಷಕ, ಮುಖ್ಯ ಶಿಕ್ಷಕ, ಮ್ಯಾನೇಜರ್ ಮತ್ತು ಮಿಲ್ ಮಾಲೀಕನವರೆಗೂ ಹೋಯಿತು. ಮ್ಯಾನೇಜರ್ ಖರ್ಗೆ ಅಪ್ಪನನ್ನು ಕರೆದು ಗದರಿದರು. ಕೆಲಸದಿಂದ ಕಿತ್ತಾಕುವುದಾಗಿ ಹೇಳಿದರು. ಉಳಿದಿದ್ದ ಏಕೈಕ ಜೀವದ ಕುಡಿಗೆ ಅಕ್ಕರೆಯಿಂದಲೇ ಬುದ್ದಿ ಹೇಳಿದ್ದರು ಖರ್ಗೆ ಅವರ ತಂದೆ.

ಕೆಲ ವರ್ಷಗಳ ಬಳಿಕ ಕಾಲೇಜು. ಶಾಲಾದಿನಗಳಂತೆ ಕಾಲೇಜಿನಲ್ಲೂ ಅನ್ಯಾಯದ ವಿರುದ್ಧ ಬಂಡಾಯ. ಎಷ್ಟರಮಟ್ಟಿಗೆ ಎಂದರೆ ದ್ವಿತೀಯ ಪಿಯೂಸಿಯಲ್ಲಿ ಇವರ ಶಿಕ್ಷಕರು ಉದ್ದೇಶಪೂರ್ವಕವಾಗಿ ಇವರ ಮಾರ್ಕ್ಸ್ ಕಟ್ ಮಾಡುವ ಮಟ್ಟಿಗೆ. ಇದರಿಂದಾಗಿ ಎಕನಾಮಿಕ್ಸ್ ನಲ್ಲಿ ಉನ್ನತ ವ್ಯಾಸಂಗ ಮಾಡುವ ಕನಸು ಭಗ್ನ. ಆಮೇಲೆ ಓದಿದ್ದ ಲಾ. ಲಾ ಓದು ಅಪ್ಪ ಕೆಲಸ ತೆಗೆದುಕೋಸರ್ಕಾರಿಮುಗಿಯುತ್ತಿದ್ದಂತೆಎಂದಿದ್ದರಂತೆ. ಅಷ್ಟೊತ್ತಿಗಾಗಲೇ ಯುವ ಕಾಂಗ್ರೆಸ್ ಸೇರಿದ್ದ ಖರ್ಗೆ ‘ನಾನೀಗಾಗಲೇ ರಾಜಕಾರಣ ಮತ್ತು ವಕೀಲಿಕೆ ಆರಂಭಿಸಿದ್ದೇನೆ.‌ ಸರ್ಕಾರಿ ಕೆಲಸ ಬೇಡ’ ಎಂದಿದ್ದರಂತೆ.

ಇದಾದ ಕೆಲ ವರ್ಷಗಳ ಬಳಿಕ ದೇವರಾಜ ಅರಸು ಕಣ್ಣಿಗೆ ಬಿದ್ದಿದ್ದ ಖರ್ಗೆ ಶಾಸಕರಾಗಿ ಶಿಕ್ಷಣ ಮಂತ್ರಿಯಾಗಿದ್ದರು. ಆಷ್ಟರಲ್ಲಿ ಮಾರ್ಕ್ಸ್ ಕಟ್ ಮಾಡಿದ್ದ ಶಿಕ್ಷಕ ಬಡ್ತಿ ಪಡೆದು ಶಿಕ್ಷಣ ಇಲಾಖೆಯ ಆಯಕಟ್ಟಿನ‌ ಜಾಗಕ್ಕೆ ಬಂದಿದ್ದರು‌. ಒಮ್ಮೆ ಸಭೆಯಲ್ಲಿ ಗುರು-ಶಿಷ್ಯರು ಮುಖಾಮುಖಿಯಾದರು. ಎಂದಿನಂತೆ ಆ ಶಿಕ್ಷಕ ಒಂದು ವರ್ಗದ ಪರ ವಕಾಲತ್ತು ವಹಿಸಿದರು. ಇನ್ನೊಬ್ಬ ಅಧಿಕಾರಿ ಆಕ್ಷೇಪಿಸಿದರು‌. ಇವರ ನಡುವಿನ ಘರ್ಷಣೆ ತಡೆಯಲು ಖರ್ಗೆ ‘ಇನ್ನು ಮೂರು ಮಾರ್ಕ್ಸ್ ಕೊಟ್ಟು ಬಿಟ್ಟಿದ್ದಿದ್ದರೆ ಹೀಗಾಗುತ್ತಿರಲಿಲ್ಲ ನೋಡಿ ಮೇಷ್ಟ್ಟ್ರೇ’ ಎಂದರು ಖರ್ಗೆ. ಯಾರಿಗೂ ಏನೂ ಅರ್ಥ ಆಗುವುದಿಲ್ಲ‌. ಖರ್ಗೆ ಬಿಡಿಸಿ ಹೇಳಿದ ಮೇಲೆ ಮೇಷ್ಟರ ಮುಖ ಚಿಕ್ಕದಾಗಿತ್ತು‌.

ಇದಾದ ಮೇಲೆ ದೇವರಾಜ ಅರಸು ಕಾಂಗ್ರೆಸ್ ನಿಂದ ದೂರವಾಗಿ ಸೋತಿದ್ದರು. ಖರ್ಗೆ ಮತ್ತೊಮ್ಮೆ ಮಂತ್ರಿಯಾಗಿದ್ದರು. ಅಚಾನಕ್ಕಾಗಿ ಒಮ್ಮೆ ಅರಸು ಅವರು ಖರ್ಗೆ ಚೇಂಬರ್ ಗೆ ಬಂದು ಖರ್ಗೆ ಅವರಿಗಾಗಿ ಕಾಯುತ್ತಾ ಕುಳಿತಿದ್ದರು. ಅರಸು ಅವರನ್ನು ಖರ್ಗೆ ತಮ್ಮ ಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳಲು ಕೇಳಿಕೊಂಡರಂತೆ. ‘ನೀನ್ನಂಥವರು ಇಂಥ ಚೇರಿನಲ್ಲಿ ಯಾವಾಗಲೂ ಕುಳಿತಿರಬೇಕು, ಕೂತ್ಕೊ’ ಎಂದಿದ್ದರಂತೆ. ಖರ್ಗೆ ಕಣ್ಞೀರಿಟ್ಟಿದ್ದರಂತೆ…

ಈಗ ಖರ್ಗೆ ಅವರಷ್ಟೇಯಲ್ಲ, ಬಹಳ ಜನಗಳ ಕಣ್ಣು ಒದ್ದೆಯಾಗಿವೆ. ಅರಸು ಕಂಡು ಕನಸು ಕಮರಿದೆ. ಖುದ್ದು ಅವರ ಬಾಯಲ್ಲೇ ಈ ಕಥನಗಳನ್ನು ಕೇಳಿದ್ದಾಗ ನಾನು ಕನಲಿದ್ದೆ. ಇಂಥ ಪರಿಸ್ಥಿತಿಯಲ್ಲಿ ಹಂಚಿಕೊಳ್ಳಲು ಬಹಳ ನೋವಾಗುತ್ತಿದೆ.

ನಿಮ್ಮಂಥ ಧ್ವನಿ ಸಂಸತ್ತಿನಲ್ಲಿ ಇರಬೇಕಿತ್ತು ಸರ್. ಈ ದೇಶ ನಿಮ್ಮನ್ನ ನೆನಪಿಸುತ್ತೆ.

ಧರಣೇಶ್ ಭೂಕನಕೆರೆ
News 18 Kannada ಸುದ್ದಿ ವಾಹಿನಿ
ದೆಹಲಿ ವರದಿಗಾರ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version