ಭಾವ ಭೈರಾಗಿ

‘ನನ್ನಲ್ಲೊಂದು ಕನಸಿದೆ’ ಮಾರ್ಟಿನ್ ಲೂಥರ್ ಕಿಂಗ್..!

Published

on

  • ಬಾಲಾಜಿ ಕುಂಬಾರ, ಚಟ್ನಾಳ

ಒಂದು ದಿನ ನನ್ನ ನಾಲ್ಕು ಪುಟ್ಟ ಮಕ್ಕಳು,
ಚರ್ಮದ ಬಣ್ಣಕ್ಕೆ ಬದಲಾಗಿ ವ್ಯಕ್ತಿತ್ವದ ಮೇಲೆ ಚಾರಿತ್ರ್ಯ ಅಳೆಯುವಂತಹ ರಾಷ್ಟ್ರದಲ್ಲಿ ಬದುಕುತ್ತಾರೆ ಎಂಬ ಕನಸಿದೆ. ಜಾರ್ಜಿಯಾದ ಕೆಂಪು ಪರ್ವತಗಳ ಮೇಲೆ, ಗುಲಾಮರ ಹಾಗೂ ಮಾಲೀಕರ ಮಕ್ಕಳ ಸಹೋದರತೆಯ ಮೇಜಿನ ಮೇಲೆ ಒಟ್ಟೊಟ್ಟಿಗೆ ಕುಳಿತು ಮಾತನಾಡುತ್ತಾರೆ ಎಂಬ ಕನಸು ನನ್ನಲ್ಲಿದೆ.”

ಈ ಮೇಲಿನ ಮಾತುಗಳನ್ನು ಹೇಳಿದವರು ಯಾರು ಗೊತ್ತೇ..?

ಅವರೇ, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್..!

ಇಂದು ಮಾರ್ಟಿನ್ ಲೂಥರ್ ಕಿಂಗ್ ಜನ್ಮದಿನ
ಜನವರಿ 15, 1929 ರಲ್ಲಿ ಜನಿಸಿದ ಕಿಂಗ್ ಒಬ್ಬ ಪ್ರತಿಭಾವಂತ ವಿದ್ಯಾರ್ಥಿ ಎಂಬ ಖ್ಯಾತಿಗೆ ಹೆಸರಾಗಿದ್ದವನು. ಅಮೇರಿಕನ್ ಕರಿಯರ ಪಾಲಿಗೆ ಭರವಸೆಯ ನಾಯಕನಾಗಿ ಕ್ರಾಂತಿಯ ಚೇತನವಾಗಿ ಆಗಮಿಸಿದ ಕಿಂಗ್ ವರ್ಣಭೇದ ನೀತಿ ವಿರುದ್ಧ ಧ್ವನಿಯೆತ್ತಿದನು.

ಬಿಳಿಯರು ಕಿರುಕುಳಕ್ಕೆ ಅಸ್ಪ್ರಶ್ಯತೆಗೆ ಒಳಗಾಗಿರುವ ಕರಿಯರನ್ನು ಅಪ್ಪಿಕೊಂಡು ಕಿಂಗ್ ಕರಿಯರ ಪರ ಹೋರಾಟಕ್ಕೆ‌ ಸಜ್ಜಾಗಿ ಕರಿಯರ ನಾಯಕನಾಗಿ ಕಿಂಗ್ ಹೊರಹೊಮ್ಮಿದ. ಬಿಳಿಯರು ಹಿಂಸಾತ್ಮಕ ಚಟುವಟಿಕೆಗಳು ನಡೆಸಿ ಎಷ್ಟೇ ಕಿರುಕುಳ ನೀಡಿದರೂ ಕಿಂಗ್ ಹಿಂಸಾತ್ಮಕ ಮಾರ್ಗಕ್ಕೆ ಕೈಹಾಕಲಿಲ್ಲ. ಏಕೆಂದರೆ ಭಾರತದ ಅಹಿಂಸಾ ಪಾಲಕ ಮಹಾತ್ಮ ಗಾಂಧೀಜಿ ಮಾರ್ಟಿನ್ ಲೂಥರ್ ಕಿಂಗ್ ಗೆ ಆದರ್ಶವಾಗಿದ್ದರು.

ಅಮೇರಿಕಾದಿಂದ ಭಾರತಕ್ಕೂ ಆಗಮಿಸಿದ ಕಿಂಗ್ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದನು. ಎಲ್ಲಾ ಕ್ಷೇತ್ರಗಳಲ್ಲೂ ಬಿಳಿಯರಿಗೆ ಅವಕಾಶ , ಸವಲತ್ತು , ಹಕ್ಕು ನೀಡಿದರೂ ಕೂಡ ಕರಿಯರಿಗೆ ಮಾತ್ರ ಹಕ್ಕು ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕರಿಯರಿಗೆ ಮತ್ತು ಬಿಳಿಯರಿಗೆ ಪ್ರತೇಕತೆ ಮಾಡುವ ಮೂಲಕ ಅಸಮಾನ ವ್ಯವಸ್ಥೆ ಜಾರಿಯಲ್ಲಿತ್ತು.

ಇಂತಹ ಅನೇಕ ಸಂಕಷ್ಟ, ಅನುಮಾನಗಳನ್ನು ಅನುಭವಿಸಿದ ಲೂಥರ್ ಕಿಂಗ್ ದೊಡ್ಡ ಮಟ್ಟದಲ್ಲಿ ಶಾಂತಿಯುತ ಪ್ರತಿಭಟನೆ ಮಾಡಲು ಮುಂದಾದನು‌. ಲಕ್ಷ ಲಕ್ಷ ಕರಿಯರನ್ನು ಒಂದೆಡೆ ಸೇರಿಸಿದ ಕಿಂಗ್ ವೇದಿಕೆ ಮೇಲೆ ಆಗಮಿಸಿ ತುಂಬಾ ಭಾವುಕನಾಗಿ ‘ನನ್ನಲ್ಲೊಂದು ಕನಸಿದೆ’ ಎಂಬ ಭಾಷಣ ಮಾಡುತ್ತಾನೆ.

ಕೊನೆಗೂ ಕಿಂಗ್ ಹೋರಾಟದ ಫಲವಾಗಿ 1964 ರಲ್ಲಿ ಅಮೇರಿಕ ಅಧ್ಯಕ್ಷ ನಾಗರೀಕ ಹಕ್ಕುಗಳ‌ ಕಾಯಿದೆ ಜಾರಿ ಒಪ್ಪಂದಕ್ಕೆ ಸಹಿ ಹಾಕಿದರು. ನೂರಾರು ವರ್ಷಗಳ ಕಾಲ ಬಿಳಿಯರ‌ ಅಟ್ಟಹಾಸ, ಹಿಂಸೆ, ದೌರ್ಜನ್ಯಕ್ಕೆ ಒಳಗಾಗಿದ್ದ ಲಕ್ಷಾಂತರ ಕರಿಯರು ಮಾರ್ಟಿನ್ ಲೂಥರ್ ಕಿಂಗ್ ಎಂಬ ಚೈತನ್ಯ ಶಕ್ತಿಯಿಂದ ನಿಟ್ಟುಸಿರು ಬಿಟ್ಟಿದರು.

ಸಾಮಾಜಿಕ ಕ್ರಾಂತಿಗೆ ಹೆಸರಾದ ಮಾರ್ಟಿನ್ ಲೂಥರ್ ಕಿಂಗ್ ಗೆ ನೊಬೆಲ್ ಶಾಂತಿ ಪ್ರಶಸ್ತಿ ಕೂಡ ಒಲಿದಿತ್ತು. ಅಮೇರಿಕದ ಗಾಂಧಿ ಎಂದೇ ಪ್ರಖ್ಯಾತಿ ಪಡೆದಿರುವ ಕಿಂಗ್ ಅಹಿಂಸೆ ಮೂಲಕ ವಿಜಯ ಸಾಧಿಸಿದ ನೇತಾರ. ಆದರೆ ಕೊನೆಗೆ ಎಪ್ರಿಲ್ 4, 1968 ರಲ್ಲಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿ ದೈಹಿಕವಾಗಿ ಮರೆಯಾದ ಅದಮ್ಯ ಚೇತನ.

ಇಂತಹ ಕ್ರಾಂತಿಕಾರಿ ನಾಯಕರ ಆದರ್ಶಗಳು ನಮ್ಮಂತಹ ಲಕ್ಷಾಂತರ ಮನಸ್ಸುಗಳಿಗೆ ಸ್ಫೂರ್ತಿಯಾಗಿ ಇನ್ನೂ ಜೀವಂತವಾಗಿವೆ. ಈ ಸಮಾಜಕ್ಕೆ ದುರಿತ ಕಾಲ‌ ಸಂಭವಿಸಿದಾಗೆಲ್ಲ ಮಾರ್ಟಿನ್ ಲೂಥರ್ ಕಿಂಗ್ ನಂತಹ ಕ್ರಾಂತಿಕಾರಿ ಚಿಲುಮೆಗಳು ಮತ್ತೆ ಮತ್ತೆ ಹುಟ್ಟು ಪಡೆದು ಪುಟಿದೇಳಬೇಕು ಎಂದೆನಿಸುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version