ಅಂತರಂಗ
ಹಾಲಾಯಣ – ಇದು ನನ್ನ ರಾಮಾಯಣ
- ಗಣೇಶ್ ಪ್ರಸಾದ್ ಯಾನಗಹಳ್ಳಿ
ಈ ಹಾಲು ನನ್ನನ್ನು ಗೋಳುಹೊಯ್ದುಕೊಂಡಷ್ಟು ಬೇರೆ ಯಾರು ಗೋಳಾಡಿಸಿಲ್ಲ. ಅಮ್ಮ ಮನೆಯಲ್ಲಿದ್ದರೆ ಸುಮ್ಮನೆ ಇರುತ್ತದೆ. ಕಾಫಿ, ಟೀ ಯಾವುದಕ್ಕೆ ಹಾಕಿದರೂ ಏನೂ ತಂಟೆ ಮಾಡುವುದಿಲ್ಲ. ರಾತ್ರಿ ಒಮ್ಮೆ ಕಾಯಿಸಿಟ್ಟರೂ ಸಾಕು ಬೆಳಿಗ್ಗೆ ಮತ್ತೆ ಕಾಫಿಗೆ ರೆಡಿ ಎಂದು ಹಲ್ಲುಕಿರಿಯುತ್ತದೆ. ಅಮ್ಮನಿಲ್ಲ ಎಂದರೆ ಇದು ನನಗೆ ಕೇರ್ ಮಾಡುವುದೇ ಇಲ್ಲ.
ನಾನು ಬೆಳಿಗ್ಗೆ ತಂದು ಕಾಯಿಸಿಟ್ಟರೆ ಸಂಜೆಗೆಲ್ಲಾ ತನ್ನ ಗಟ್ಟಿತನವನ್ನು ಮುದ್ದೆ ಮಾಡಿಕೊಂಡು ಪಾತ್ರೆಯಲ್ಲೇ ಈಜುತ್ತಿರುತ್ತದೆ.(ಒಡೆದು ಹೋಗುತ್ತದೆ) ಮತ್ತೆ ಸಂಜೆಗೆ ಹಾಲು ತರಬೇಕು, ಇದು ಬೆಳಿಗ್ಗೆ ಆಗುವಷ್ಟರಲ್ಲಿ ಅದೇ ಅವತಾರದಲ್ಲಿ ಈಜಾಡಿಕೊಂಡು, ಮಲಗಿರುವ ನನ್ನ ಕೋಪವನ್ನು ಮೆಟ್ಟಿ ಏಳಿಸಿ ಗುಂಡನ(ನಾಯಿಗೆ ಅಮ್ಮ ಇಟ್ಟಿರುವ ಹೆಸರು) ಬಾಯಿಗೆ ಆಹಾರವಾಗುತ್ತದೆ. ಈ ನಾಯಿಯೂ ಹಾಲು ಒಡೆಯಲಿ ಎಂದೇ ಹಾರೈಸುತ್ತಿರುತ್ತದೋ ಏನೋ, ಇಲ್ಲದಿದ್ದರೇ ಒಂದೇ ಲೋಟ ಹಾಕುತ್ತೀನಲ್ಲ ಅನ್ನೋ ಸಿಟ್ಟಿಗೆ.
ಇತ್ತಿಚಿಗೆ ಹಾಲು ಬೇಗ ಒಡೆದು ಹೋಗದಂತೆ ಅದನ್ನು ಕಾಪಾಡುವುದನ್ನು ಕಲಿತಿದ್ದೇನೆ. ಅದು ಸಹಾ ನನ್ನಂತೆ ಹೊಸದೊಂದಷ್ಟು ಐಡಿಯಾಗಳ ಕಲಿತಿದೆ. ಹಾಲನ್ನು ಕಾಯಲು ಇಟ್ಟು ಅದರ ಮುಂದೆ ಎಷ್ಟು ಹೊತ್ತು ನಿಂತಿದ್ದಿರೂ ಉಸಿರು ಬಿಗಿ ಹಿಡಿದುಕೊಂಡು ಪಾತ್ರೆಯಲ್ಲಿಯೇ ಅಲುಗಾಡದೇ ಕುಳಿತಿರುತ್ತದೆ. ಮೆಸೆಜ್ ಬಂದರೆ ಅಥವಾ ಹೊರಗೆ ಯಾರೋ ಕೂಗಿದರೂ ಎಂದು ತಿರುಗಿದರೂ ಸಾಕು. ಬಿಗಿಹಿಡಿದಿದ್ದ ಉಸಿರನ್ನೆಲ್ಲಾ ಒಮ್ಮೆಗೆ ಬಿಟ್ಟು ಪಾತ್ರೆಯಿಂದ ಆಚೆಗೆ ಹಾರಿ ಸ್ಟೌ ಮತ್ತು ನೆಲವನ್ನೆಲ್ಲಾ ತೋಯಿಸಿಬಿಡುತ್ತದೆ.
ಮತ್ತೆಲ್ಲವನ್ನು ಒಮ್ಮೆ ಹಾಲಿಗೆ ಬೈದುಕೊಳ್ಳುತ್ತಾ ಒರೆಸಿ ಮತ್ತೆ ಕಾಫಿ ಅಥವಾ ಟೀ ಮಾಡಲು ಸ್ಟೌ ಹಚ್ಚಲು ತೊಡಗಿದರೆ ಅದು ಹತ್ತುವುದೇ ಇಲ್ಲ. ಉಕ್ಕಿಹರಿದ ಹಾಲು ಸ್ಟೌನ ರಂಧ್ರದೊಳಗೆಲ್ಲ ಜಮಾಯಿಸಿ ನನ್ನನ್ನು ಅಣಕಿಸುತ್ತಿರುತ್ತದೆ. ಮತ್ತಷ್ಟು ಕೋಪ ಮಾಡಿಕೊಂಡು ಇನ್ಮಂದೆ ಹಾಲು ತರುವುದೇ ಇಲ್ಲ ಎಂದು ನಿರ್ಧರಿಸಿದರೆ, ಬಾಯಿ ಸುಮ್ಮನಿರದೇ ಕಾಫೀ ಬೇಕು ಎಂದು ಬೊಂಬಡ ಹೊಡೆಯಲು ಶುರು ಮಾಡುತ್ತದೆ. ಹಾಲು ತಂದರೆ ಅದು ಮಾತ್ರ ದಿನವೂ ನಿಯತ್ತಿನಿಂದ ತನ್ನ ಏಳೇಳು ಜನುಮದ ಹಗೆಯನ್ನು ಸಾಧಿಸಿಯೇ ತೀರುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243