ದಿನದ ಸುದ್ದಿ
ಎನ್ ಆರ್ ಸಿ ವಿರುದ್ಧ ಕವಿತೆ ವಾಚಿಸಿದ್ದಕ್ಕೆ ಎಫ್ ಐ ಆರ್ | ಇದು ‘ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸ’ ; ನೆಟ್ಟಿಗರ ಆಕ್ರೋಶ
ಸುದ್ದಿದಿನ ಡೆಸ್ಕ್ : ಕೊಪ್ಪಳದ ಪತ್ರಕರ್ತ ಸಿರಾಜ್ ಬಿಸರಳ್ಳಿ ಅವರು ಜನವರಿ 9 ಮತ್ತು 10 ನೇ ತಾರೀಖಿನಂದು ಕೊಪ್ಪಳದಲ್ಲಿ ನಡೆದ ‘ಆನೆಗುಂದಿ ಉತ್ಸವ’ ದಲ್ಲಿ ‘ ನಿನ್ನ ದಾಖಲೆ ಯಾವಾಗ ಕೊಡುತ್ತೀ..? ಎಂಬ ಪೌರತ್ವ ತಿದ್ದುಪಡಿ ಕಾಯ್ದೆ (ಎನ್ ಆರ್ ಸಿ)ವಿರೋಧಿಸಿ ಬರೆದ ಕವಿತೆಯನ್ನು ವಾಚಿಸಿದ್ದರು. ಈ ಕಾರಣವನ್ನಿಟ್ಟುಕೊಂಡು ಗಂಗಾವತಿಯ ಬಿಜೆಪಿ ನಗರ ಘಟಕವು ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿಗೆ ದೂರುನೀಡಿತ್ತು. ಈ ದೂರಿನನ್ವಯ ಪೊಲೀಸರು ಪತ್ರಕರ್ತ ಸಿರಾಜ್ ಬಿಸರಳ್ಳಿಯವರ ಮೇಲೆ ಎಫ್ ಐ ಆರ್ ದಾಖಲಿಸಿದೆ.
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರದ ಕಾಯ್ದೆಯೊಂದನ್ನು ವಿರೋಧಿಸಿ ಬರೆದ ಕವಿತೆ ವಾಚಿಸಿದಕ್ಕೆ ಕವಿಯ ಮೇಲೆ ಎಫ್ ಐ ಆರ್ ದಾಖಲಿಸಲಾಗಿದೆ, ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸವೆಂದು ನೆಟ್ಟಿಗರು ಬಿಜೆಪಿ ಮತ್ತು ಗಂಗಾವತಿ ಪೋಲಿಸ್ ಇಲಾಖೆಯ ವಿರುದ್ಧ ಆಕ್ರೋಶವ್ಯಕ್ತ ಪಡಿಸಿದ್ದಾರೆ.
ಹಾಗೆಯೇ, ಸಿರಾಜ್ ಬಿಸರಳ್ಳಿ ಅವರಿಗೆ ಬೆಂಬಲ ಸೂಚಿಸಿ ಅವರು ವಾಚಿಸಿದ ಕವಿತೆಯನ್ನು ಪ್ರಗತಿಪರ ಚಿಂತಕರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ಆ ಕವಿತೆ ಈ ಕೆಳಗಿನಂತಿದೆ.
ಕವಿತೆ | ನಿನ್ನ ದಾಖಲೆ ಯಾವಾಗ ಕೊಡುತ್ತೀ ?
- ಸಿರಾಜ್ ಬೆಸರಳ್ಳಿ
ಆಧಾರು, ರೇಷನ್ ಕಾರ್ಡಗಳ ಕ್ಯೂನಲ್ಲಿ
ಥಂಬಿನ, ಸರ್ವರಿನ ಮಂಗನಾಟದಲ್ಲಿ
ಬದುಕ ಕಳೆದುಕೊಳ್ಳು ತ್ತಿರುವವರ ದಾಖಲೆ
ಕೇಳುವವನೇ ನಿನ್ನ ದಾಖಲೆ ಯಾವಾಗ ನೀಡುತ್ತಿ?
ನಾಡಿನ ಸ್ವಾತಂತ್ರ್ಯಕ್ಕಾಗಿ ನಗುನಗುತ್ತಲೇ ನೇಣಿಗೇರಿದವರ,
ಹೆಸರೂ ಬೇಡವೆಂದು ಹುತಾತ್ಮರಾದವರ
ಇತಿಹಾಸದ ಹಾಳೆಗಳ ಹರಿಯುತ್ತಿರುವವನೇ
ನಿನ್ನ ದಾಖಲೆ ಯಾವಾಗ ನೀಡುತ್ತಿ ?
ತಾಜ್ ಮಹಲ್, ಚಾರ್ ಮಿನಾರು ಗುಂಬಜಗಳಿಗೆ
ಕೆಂಪು ಕೋಟೆ ಕುತುಬ್ ಮಿನಾರುಗಳಿಗೆ ಸಾಕ್ಷಿ ಕೇಳುತ್ತಿರುವವನೇ
ನಿನ್ನ ದಾಖಲೆ ಯಾವಾಗ ನೀಡುತ್ತಿ?
ಬ್ರಿಟಿಷರ ಬೂಟು ನೆಕ್ಕಿದ ತಲೆಹಿಡುಕರ
ಧರ್ಮ ದ್ವೇಷದ ಅಮಲಿನಲ್ಲಿ ರಕ್ತ ಕುಡಿಯುತ್ತಿರುವ
ಗೊಬೆಲ್ ಸಂತತಿಯವನೇ
ನಿನ್ನ ದಾಖಲೆ ಯಾವಾಗ ನೀಡುತ್ತಿ?
ಪಕೋಡ ಮಾರಿ ಬದುಕಿದವನು
ಚಾ ಮಾರಿ ಬದುಕಿದವನು ನನ್ನೂರಿನಲ್ಲಿ
ಮನುಷ್ಯತ್ವ ಮಾರಿಕೊಂಡಿಲ್ಲ
ಸ್ವಾಭಿಮಾನ ಮಾರಿಕೊಂಡಿಲ್ಲ, ಸುಳ್ಳಿನ ಕಂತೆಗಳ ಕತೆ ಕಟ್ಟಿಲ್ಲ
ಹೇಳು ನಿನ್ನ ದಾಖಲೆಗಳ ಯಾವಾಗ ನೀಡುತ್ತಿ ?
ಮುಳ್ಳು ಚುಚ್ಚಿ, ಹರಿದು, ಸಿಡಿದು ಹೋದ
ಟ್ಯೂಬುಗಳ, ಟೈಯರುಗಳ ತಿದ್ದಿ ತೀಡಿ ಗಾಳಿ ತುಂಬಿದ
ಪಂಚರ್ ನವನು ತನ್ನತನವನ್ನು ಮಾರಿಕೊಳ್ಳಲಿಲ್ಲ
ನೀನು ದೇಶವನ್ನೇ ಮಾರಿಬಿಟ್ಟೆಯಲ್ಲ
ಹೇಳು ನಿನ್ನ ದಾಖಲೆಗಳ ಯಾವಾಗ ನೀಡುತ್ತಿ ?
ದೇಶವನ್ನೇ ಯಾಮಾರಿಸಿದ ನಿನಗೆ
ನಕಲಿ ದಾಖಲೆಗಳು ದೊಡ್ಡದಲ್ಲ ಬಿಡು
ಕನಿಷ್ಠ ಮನುಷ್ಯತ್ವವೂ ನಿನಗಿದೆ
ಎನ್ನುವ ದಾಖಲೆ ಯಾವಾಗ ನೀಡುತ್ತಿ?
ಸುದ್ದಿದಿನ.ಕಾಂ|ವಾಟ್ಸಾಪ್|9980346243