ದಿನದ ಸುದ್ದಿ

“ಮೊಂಡುತಿರಿ” ರೋಗದಿಂದ ಅಡಿಕೆ ಮರಗಳ ರಕ್ಷಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಲಹೆ

Published

on

ಸುದ್ದಿದಿನ,ಶಿವಮೊಗ್ಗ : ಮೈದಾನ ಪ್ರದೇಶಗಳಲ್ಲಿ ಹಾಗೂ ನಾಲೆ ನೀರಾವರಿ ಅಡಿಕೆ ತೋಟಗಳಲ್ಲಿ ಸಾಮಾನ್ಯವಾಗಿ ಮರಗಳಿಗೆ ಹಿಡಿಮುಂಡಿಗೆ, ಬಂದ್ ಅಥವಾ ಮೊಂಡುತಿರಿ ರೋಗ ಕಂಡು ಬರುವ ಸಾಧ್ಯತೆ ಹೆಚ್ಚಿದ್ದು ರೈತರು ಸೂಕ್ತ ಕ್ರಮ ಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂಟು ಮತ್ತು ಗೋಡು ಮಣ್ಣಿನಲ್ಲಿ ಅಡಿಕೆ ಬೆಳೆಯುವುದು, ತೋಟಗಳಲ್ಲಿ ನೀರು ನಿಲ್ಲುವಂತೆ ಮಾಡುವುದು, ತೋಟಕ್ಕೆ ಕೆರೆಗೋಡು ಮಣ್ಣನ್ನು ಹಾಕುವುದು, ಬಸಿಗಾಲಿವೆಗಳ ವ್ಯವಸ್ಥೆ ಇಲ್ಲದಿರುವುದು, ಪದೇ ಪದೇ ಟ್ರ್ಯಾಕ್ಟರ್‍ನಲ್ಲಿ ಉಳುಮೆ ಮಾಡುವುದು, ಪ್ರತಿ ವರ್ಷ ಬೇರುಗಳು ಕತ್ತರಿಸುವುದು, ಸರಿಯಾದ ಪೋಷಕಾಂಶ ನಿರ್ವಹಣೆ ಮಾಡದಿರುವುದು ಈ ರೋಗಕ್ಕೆ ಕಾರಣವಾಗಿದೆ.

ರೋಗ ಪೀಡಿತ ಮರಗಳು ಸೋಗೆಗಳು ಚಿಕ್ಕದಾಗಿ ಕಡು ಹಸಿರು ಬಣ್ಣಕ್ಕೆ ತಿರುಗುವುದು, ಗೆಣ್ಣುಗಳ ಅಂತರ ಕಡಿಮೆಯಾಗಿ ಓರೆಯಾಗುವುದು, ಸುಳಿಕೊಳೆ ರೋಗ ಕಂಡುಬರುವುದು, ಬೇರುಗಳು ರೋಗ ಪೀಡಿತವಾಗಿ ಕಡು ಕಂದು ಬಣ್ಣಕ್ಕೆ ತಿರುಗುವುದು, ಹಿಂಗಾರ ಮತ್ತು ಅಡಿಕೆ ಕಾಯಿಗಳ ಇಳುವರಿ ಕಡಿಮೆ ಇದಿಷ್ಟು ರೋಗದ ಲಕ್ಷಣವಾಗಿದ್ದು ಈ ಚಿಹ್ನೆಗಳು ಕಂಡು ಬಂದ ಕೆಲವೇ ವರ್ಷಗಳಲ್ಲಿ ರೋಗ ಪೀಡಿತ ಮರಗಳು ಸಾಯುತ್ತವೆ.

ಈ ರೋಗದಿಂದ ಅಡಿಕೆ ಮರಗಳನ್ನು ರಕ್ಷಿಸಲು ಸೂಕ್ತ ಕ್ರಮಗಳಾದ ಮೂರು ಅಡಿ ಆಳ ಹಾಗೂ ಎರಡು ಅಡಿ ಅಗಲದ ಬಸಿಗಾಲುವೆ ಹಾಗೂ ಎರಡು ಅಡಿ ಆಳ ಹಾಗೂ ಒಂದು ಅಡಿ ಅಗಲದ ಬಸಿಗಾಲುವೆ ನಿರ್ಮಾಣ ಮಾಡುವುದು. ಪ್ರತಿ ಮರಕ್ಕೆ 25 ಕೆ.ಜಿ ಕೊಟ್ಟಿಗೆ ಅಥವಾ ಕಾಂಪೋಸ್ಟ್ ಗೊಬ್ಬರ ನೀಡುವುದು.

100;40;140 ಪ್ರಮಾಣದ ಸಾ;ರಂ;ಪೋ ರಸಗೊಬ್ಬರವನ್ನು ಮಣ್ಣು ಪರೀಕ್ಷೆ ಆಧಾರದ ಮೇಲೆ ನೀಡುವುದು. ಕೆರೆಗೋಡು ಮಣ್ಣು ಹಾಕುವುದನ್ನು ಕಡಿಮೆ ಮಾಡುವುದು. ಬೇಸಾಯದ ಸಮಯದಲ್ಲಿ ಬೇರುಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುವುದು. ಕೋಕೋ, ಬಾಳೆಯನ್ನು ಮಿಶ್ರ ಬೆಳೆಯಾಗಿ ಬೆಳೆಯುವುದು. ಹನಿ ಮತ್ತು ಸಿಂಚನ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದು. ತೋಟದ ತ್ಯಾಜ್ಯಗಳನ್ನು ಮರಗಳ ಬುಡಕ್ಕೆ ಹೊದಿಕೆ ಮಾಡುವುದು. ರಸ ಹೀರುವ ಕೀಟಗಳ ನಿಯಂತ್ರಣದಂತಹ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version