ಲೋಕಾರೂಢಿ

ಆನ್ ಲೈನ್ ಬೋಧನೆಯು ತರಗತಿಯ ಬೋಧನೆ – ಕಲಿಕೆ ವಿಧಾನಕ್ಕೆ ಪರ್ಯಾಯವೇ?

Published

on

 

  • ಕ್ರಾಂತಿರಾಜ್ ಒಡೆಯರ್ ಎಂ, ಸಹಾಯಕ ಪ್ರಾಧ್ಯಾಪಕರು,ಸೇಪಿಯೆಂಟ್ ಕಾಲೇಜು, ಮೈಸೂರು

ನ್ನೇನು ಸೆಮಿಸ್ಟರ್ ಮುಗಿಯಲು ಕೆಲವೇ ದಿನಗಳಿದ್ದು, ವಿಶ್ವವಿದ್ಯಾನಿಲಯಗಳು ಪರೀಕ್ಷೆ ತಯಾರಿಯಲ್ಲಿ ತೊಡಗಿದ್ದ ಸಂದರ್ಭದಲ್ಲೇ ಕೋವಿಡ್ 19 ರೋಗ ಎಲ್ಲೆಡೆ ಹರಡುವ ಭೀತಿಯಿಂದ ಪಾಠ ಪ್ರವಚನೆಯ ತರಗತಿಗಳನ್ನು ನಿಲ್ಲಿಸಲಾಗಿ, ಒಂದೆಡೆ ವಿದ್ಯಾರ್ಥಿಗಳಿಗೆ ಪಠ್ಯಕ್ರಮಗಳು ಪೂರ್ಣಗೊಳ್ಳದೆ, ಮತ್ತೊಂದೆಡೆ ಪರೀಕ್ಷೆಯನ್ನೂ ನೆಡೆಸಲಾಗದೆ, ತಮ್ಮ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಅಥವಾ ವಿದ್ಯಾಭ್ಯಾಸ ಆಧಾರಿತ ದುಡಿತದಿಂದ ಜೀವನ ಕಟ್ಟಿಕೊಳ್ಳುವ ಉತ್ಸುಕತೆಯಲ್ಲಿದ್ದ ವಿದ್ಯಾರ್ಥಿಗಳ ಆಸೆಗಳ ಮೇಲೆ ಕಾರ್ಮೋಡ ಕವಿದಿದ್ದು, ಮುಂದೇನು ಎಂಬ ಪ್ರಶ್ನೆ ಇಡೀ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಕಾಡುತ್ತಿದೆ.

ಇಂತಹ ಸಂದರ್ಭದಲ್ಲಿ, ನಮ್ಮ ದೇಶದ ಉನ್ನತ ಶಿಕ್ಷಣ ಸಚಿವಾಲಯವು ತನ್ನ ಅಭಿಪ್ರಾಯವನ್ನು ತಿಳಿಸಿದ್ದು, ಅವರ ಅಭಿಪ್ರಾಯದಂತೆ, ನಮ್ಮ ರಾಜ್ಯ ಸಚಿವಾಲಯವು ಪ್ರಾಯೋಗಿಕ ಪರೀಕ್ಷೆಗಳನ್ನು ರದ್ದುಮಾಡಿದ್ದು ಒಂದೆಡೆಯಾದರೆ, ಪೂರ್ಣಗೊಂಡಿಲ್ಲದ ಪಠ್ಯಕ್ರಮವನ್ನು ಆನ್ ಲೈನ್ ತರಗತಿಗಳ ಮೂಲಕವೋ, ಯೂ ಟ್ಯೂಬ್ ವಿಡಿಯೋ ರೆಕಾರ್ಡಿಂಗ್ ಮೂಲಕವೋ ವಿದ್ಯಾರ್ಥಿಗಳಿಗೆ ತಿಳಿಸಿ, ಹೇಗೋ ಪಠ್ಯಕ್ರಮವನ್ನು ಮುಗಿಸುವಂತೆ ಅಧ್ಯಾಪಕರ ಮೇಲೆ ಒತ್ತಡ ಹೇರುತ್ತಿದೆ.

ಜ್ಞಾನ ಆಧಾರಿತ, ಮೌಲ್ಯ ಆಧಾರಿತ, ಉದ್ಯೋಗ ಆಧಾರಿತ ಶಿಕ್ಷಣವನ್ನು ಕೊಡಲು ಸೋತಿರುವ ಶಿಕ್ಷಣ ಒಂದೆಡೆಯಾದರೆ, ಜಾಗತೀಕರಣದ ವೇಗಕ್ಕೆ ಬೇಕಿರುವ ಪಠ್ಯಕ್ರಮ ಹಾಗು ಬೋಧನೆಯನ್ನು ಇಂದಿನ ವಿದ್ಯಾರ್ಥಿಗಳಿಗೆ ಕೊಡಲು ಹೆಣಗಾಡುತ್ತಿರುವ ನಮ್ಮ ಶಿಕ್ಷಣ ವ್ಯವಸ್ಥೆ, ಕಾಟಾಚಾರಕ್ಕೆ ಪಠ್ಯಕ್ರಮವನ್ನು ಮುಗಿಸಿ, ಪರೀಕ್ಷೆಗೆ ಸಿದ್ಧವಾಗುವಂತೆ ವಿಶ್ವವಿದ್ಯಾನಿಲಯಗಳಿಗೆ ನಿರ್ದೇಶನ ನೀಡುತ್ತಿರುವುದನ್ನು ನೋಡಿದರೆ, ಈಗಾಗಲೇ ನರಳುತ್ತಿರುವ ಶಿಕ್ಷಣ ವ್ಯವಸ್ಥೆಯನ್ನು ಕತ್ತು ಹಿಸುಕಿ ಸಾಯಿಸಿದಂತಾಗುತ್ತದೆ ಎಂಬುದು ನನ್ನ ಅನಿಸಿಕೆ.

ಹಳತಾದ ಬೋಧನಾ ಶೈಲಿ, ಜೆರಾಕ್ಸ್ ನೋಟ್ಸ್ ಆಧಾರಿತ ಕಲಿಕೆಯ ವಸ್ತುಗಳು, ಹಳೆಯ ಪ್ರಶ್ನೆಪತ್ರಿಕೆಗಳಲ್ಲಿ ಬಂದಿರುವ ಪ್ರಶ್ನೆಗಳಿಗಷ್ಟೇ ವಿದ್ಯಾರ್ಥಿಗಳನ್ನು ತಯಾರು ಮಾಡುವ, ಪರೀಕ್ಷೆಗಳಿಗಷ್ಟೇ ವಿದ್ಯಾರ್ಥಿಗಳನ್ನು ಸೀಮಿತಗೊಳಿಸುವ ಕೆಟ್ಟ ಶಿಕ್ಷಣ ಪದ್ದತಿಯನ್ನು ನಾನು ಉನ್ನತ ಶಿಕ್ಷಣದ ವಿದ್ಯಾರ್ಥಿಯಾಗಿಯೂ ಅಲ್ಲದೇ, ಇದೇ ವ್ಯವ್ಯಸ್ಥೆಯ ಒಬ್ಬ ಅಧ್ಯಾಪಕನಾಗಿಯೂ ನೋಡಿದ್ದೇನೆ.

ಇಂದು ಬೇರೂರಿರುವ ಈ ಕೆಟ್ಟ ವ್ಯವ್ಯಸ್ಥೆಗೆ ಸಡ್ಡು ಹೊಡೆದು, ಬದಲಾವಣೆಯ ದಿಕ್ಕಿನಲ್ಲಿ ಹೊಸ ಆಲೋಚನೆ ಹಾಗೂ ಪರಿಣಾಮಕಾರಿ ಬೋಧನಾ ಶೈಲಿ ಮೂಲಕ ಶಿಕ್ಷಣ ವ್ಯವಸ್ಥೆಯಲ್ಲಿ ಕೊಂಚವಾದರೂ ಆಶಾವಾದವಿಟ್ಟು ಕ್ರಾಂತಿಯನ್ನು ತರಲು ಕೊಂಚವಾದರೂ ಶ್ರಮಪಡುತ್ತಿರುವ ಸಮಾನಮನಸ್ಕ ಅಧ್ಯಾಪಕರಿಗೆ, ಇಂದಿನ ಶಿಕ್ಷಣ ವ್ಯವಸ್ಥೆಯ ಜೊತೆ ಸರ್ಕಾರದ ನಿರ್ದೇಶನ ಉಸಿರುಗಟ್ಟಿಸುವ ವಾತಾವರಣವನ್ನು ನಿರ್ಮಾಣ ಮಾಡಿದೆ.
ಕೋವಿಡ್ 19 ರೋಗ ಇಡೀ ವಿಶ್ವಕ್ಕೇ ಒಡ್ಡಿರುವ ಸವಾಲಿನಲ್ಲಿ, ವಿದೇಶಿ ವಿಶ್ವವಿದ್ಯಾಲಯಗಳು ಹುಡುಕಿಕೊಂಡಿರುವ ಅಂತರ್ಜಾಲ ಆಧಾರಿತ ಬೋಧನೆ ಎಂಬ ಪರ್ಯಾಯ ವ್ಯವಸ್ಥೆಯನ್ನೇ ಮಾನದಂಡವಾಗಿಟ್ಟುಕೊಂಡು, ನಮ್ಮ ವಿಶ್ವವಿದ್ಯಾನಿಲಯಗಳು ಅದೇ ಮಾದರಿಯನ್ನು ಅನುಸರಿಸುತ್ತಿರುವುದು ಸರಿಯೇ.

ಆದರೆ, ನಾನು ಕಂಡಿರುವಂತೆ, ಹಾಜರಾತಿ ಪ್ರಮಾಣವನ್ನು ಕಾಪಾಡಿಕೊಳ್ಳಲೋ ಅಥವಾ ತರಗತಿಗೆ ಹಾಜರಾಗದಿದ್ದರೆ ಪೋಷಕರು ಅಥವಾ ಶಿಕ್ಷಕರು ಬಯ್ಯುವರೆಂದೋ ತರಗತಿಗಳಿಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳು ಒಂದೆಡೆಯಾದರೆ, ತರಗತಿಗಳಿಗೆ ಹಾಜರಾಗದೇ, ಸೆಮಿಸ್ಟರ್ ನ ಕೊನೆಯಲ್ಲಿ ಜೆರಾಕ್ಸ್ ಪ್ರತಿಯಲ್ಲಿ ಪರೀಕ್ಷೆಗೆ ತಯಾರಾಗುವ ವಿದ್ಯಾರ್ಥಿಗಳೇ ಹೆಚ್ಚಿದ್ದಾರೆ.

ಇಂತಹ ಸಂದರ್ಭದಲ್ಲಿ, ಆನ್ ಲೈನ್ ತರಗತಿಗಳನ್ನು ತೆಗೆದುಕೊಂಡರೆ, ಬರುವ ವಿದ್ಯಾರ್ಥಿಗಳ್ಯಾರು? ಅವರಿಗೆ ಆನ್ ಲೈನ್ ತರಗತಿಗೆ ನೋಂದಾಯಿಸಿಕೊಳ್ಳಲು ಹೇಗೆ ಕಡ್ಡಾಯ ಮಾಡಲಾಗುತ್ತದೆ? ಆನ್ ಲೈನ್ ತರಗತಿ ತೆಗೆದುಕೊಳ್ಳುವ ಉತ್ಸುಕತೆ ವಿದ್ಯಾರ್ಥಿಗಳಲ್ಲಿದ್ದರೂ, ಅವರಿಗೆ ಇಂಟರ್ನೆಟ್ ನೆಟ್ ವರ್ಕ್ ಸಿಗದೇ ಇದ್ದರೆ ಏನು ಮಾಡೋದು? ಎಂಬ ಹಲವು ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ.

ಇದರ ಮೇಲಾಗೂ ಅಧ್ಯಾಪಕರಾದ ನಾವು ಆನ್ ಲೈನ್ ತರಗತಿಗಳನ್ನು ತೆಗೆದುಕೊಂಡರೂ ಅಥವಾ ಯೂಟ್ಯೂಬ್ ವಿಡಿಯೋ ಮೂಲಕ ವಿಷಯಗಳನ್ನು ಅಂತರ್ಜಾಲದಲ್ಲಿ ಹರಿಯಬಿಟ್ಟರೂ, ನಾವು ತರಗತಿಯಲ್ಲಿ ಪಾಠ ಮಾಡುವಾಗ ಆಸಕ್ತ ವಿದ್ಯಾರ್ಥಿಗಳ ಕಣ್ಣಲ್ಲಿ ಕಾಣುವ ಉತ್ಸುಕತೆ, ವಿಷಯವನ್ನು ಅರ್ಥಮಾಡಿಸಲು ಜೀವನಕ್ಕೆ ಹತ್ತಿರವಿರುವ ಉದಾಹರಣೆಯನ್ನು ಕೊಟ್ಟಾಗ ವಿದ್ಯಾರ್ಥಿಗಳ ತುಟಿಯ ಮೇಲೆ ಕಾಣುವ ಕಿರುನಗೆ, ಅಧ್ಯಾಪಕರು ಮಾಡುವ ಪಾಠ ತುಂಬಾ ಇಷ್ಟವಾದಾಗ ವಿದ್ಯಾರ್ಥಿಗಳು ತೋರುವ ಆ ಆನಂದದ ಪ್ರತಿಕ್ರಿಯೆ ಹಾಗೂ ತರಗತಿಯಲ್ಲಿ ಆಗುವ ಮುಖಾಮುಖಿಯಿಂದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳ ನಡುವೆ ಉಂಟಾಗುವ ಬಾಂಧವ್ಯಕ್ಕೆ ಪರ್ಯಾಯ ಇದೆಯೇ?

ಇವೆಲ್ಲವನ್ನೂ ಆನ್ ಲೈನ್ ತರಗತಿಗಳು ಅಥವಾ ಯೂಟ್ಯೂಬ್ ವಿಡಿಯೋ ವಿಷಯ ಮಂಡನೆಗಳು ಕೊಡಲು ಸಾಧ್ಯವೇ? ತಂತ್ರಜ್ಞಾನ ಎಷ್ಟೇ ಅಭಿವೃದ್ಧಿ ಹೊಂದಿದ್ದರೂ, ತರಗತಿ ಬೋಧನೆ-ಕಲಿಕೆ ವಿಧಾನಕ್ಕೆ ಪರ್ಯಾಯವಾಗಲು ಎಷ್ಟೇ ಶತಮಾನಗಳು ಬಂದರೂ ಸಾಧ್ಯವಿಲ್ಲ ಎಂಬುದು ನನ್ನ ಅಭಿಪ್ರಾಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version