ದಿನದ ಸುದ್ದಿ
ಪಾದರಾಯನಪುರದ ನಂತರವಾದರೂ..!
- ಹ.ರಾ.ಮಹಿಶ ಬೌದ್ಧ
ಹೇಗೂ ಸೀಲ್ ಡೌನ್ ಆಗಿರುವುದರಿಂದ ಹಗಲಾಗಲೀ ರಾತ್ರಿಯಾಗಲಿ ಜನರೆಲ್ಲಾ ಮನೆಯಲ್ಲೇ ಇರುತ್ತಾರೆ ರಸ್ತೆರಸ್ತೆಯಲ್ಲಿಯೂ ಪೋಲಿಸ್ ಸರ್ಪಗಾವಲು ಇರುತ್ತದೆ. ಹಾಗಾಗಿ ಪಾದರಾಯನಪುರದ ನಂತರ ಮುಂದೇನಾದರೂ ಸೀಲ್ ಡೌನ್ ಆಗಿರುವ ಬೇರೆ ಏರಿಯಾಗಳಲ್ಲಿರುವ ಶಂಕಿತ ಸೋಂಕಿತರನ್ನು ಕ್ವಾರಂಟೇನ್ ಗೆ ಕರೆದುಕೊಂಡು ಹೋಗುವುದಿದ್ದರೆ ದಯಮಾಡಿ ಹಗಲಿನ ಸಮಯದಲ್ಲೇ ಹೋದರೆ ಒಳಿತು. ಹಾಗೂ ಹೋಗುವ ಮುನ್ನ ಅಲ್ಲಿನ ಜನರಿಗೆ ಅರ್ಥವಾಗುವಂತೆ ಜಾಗೃತಿ ಮೂಡುವಂತೆ ಇಡೀ ಬಡಾವಣೆಯ ಮನೆಯೊಳಗಿರುವ ಜನರಿಗೆ ಕೇಳಿಸುವಂತೆ ಅನೌನ್ಸ್ ಮೆಂಟ್ ಮಾಡಿಸಿ ನಂತರ ಹೋದರೆ ಒಳಿತು.
ಮೊದಲೇ ಈ ಕೊರೋನದಾಳಿಯಿಂದ ಕಂಗೆಟ್ಟು ಹೈರಾಣವಾಗಿರುವ ದೇಶದ ಜನಸಾಮಾನ್ಯರು ನಂತರ ಅನಿವಾರ್ಯವಾದ ಲಾಕ್ ಡೌನ್ ನಿಂದ ದಿಕ್ಕೆಟ್ಟು ಹೋಗಿ ನಂತರ ಧುತ್ತನೆರಗಿದ ಸೀಲ್ ಡೌನ್‌ನಿಂದ ಇನ್ನೂ ಮಾನಸಿಕವಾಗಿ ಜರ್ಜರಿತರಾಗಿದ್ದಾರೆ. ಅಲ್ಲದೆ ಕೊರೋನ ಬಗ್ಗೆ ಈ ಟಿವಿಯವರು 24/7 ಉತ್ಪಾದಿಸಿರುವ ಭಯವೂ ಸೇರಿಹೋಗಿ ಜೊತೆಗೆ ಕೂಲಿಕೆಲಸಗಳನ್ನು ಕಳೆದುಕೊಂಡು ತುತ್ತುಕೂಳಿಗೂ ತತ್ತರಿಸುತ್ತಾ ಜೀವನವೇ ರೋಸಿಹೋಗಿ ಜೊತೆಗೆ ಭಾರತದಂಥ ದೇಶದಲ್ಲಿ ಸಾಂಕ್ರಾಮಿಕ ರೋಗಕ್ಕೂ ಜಾತಿ ಧರ್ಮದ ಬಣ್ಣಬಳಿದು ಜನರನ್ನು ಮಾನಸಿಕವಾಗಿ ನೈತಿಕವಾಗಿ ಕುಗ್ಗಿಸುವ ಕಲೆಕಲಿತವರ ನಡುವೆ ಒಂಥರಾ ಪಾಪಪ್ರಜ್ಞೆಯಿಂದ ನರಳುತ್ತಿರುವ ಜನಸಾಮಾನ್ಯರು ಪಾದರಾಯನಪುರದಲ್ಲಿರಲಿ ಬಸವನಗುಡಿಯಲ್ಲಿರಲಿ ಅಥವಾ ಇನ್ನೆಲ್ಲೋ ಇರಲಿ ಇಷ್ಟೆಲ್ಲಾ ಮಾನಸಿಕವಾಗಿ ತತ್ತರಿಸುತ್ತಾ ಭಯ ಮತ್ತು ಅಭದ್ರತೆಯಲ್ಲಿ ಕುಸಿದಿದ್ದಾರೆ.
ತಮ್ಮ ಕಣ್ಮುಂದೆ ತಮ್ಮಮನೆಯ ಸಣ್ಣಮಕ್ಕಳ ವಯಸ್ಸಾದ ತಂದೆತಾಯಿಗಳ ದುಸ್ಥಿತಿಯನ್ನು ಕಂಡೂ ಅಸಹಾಯಕರಾಗಿ ತಮ್ಮಗಳ ಬದುಕಿನ ಬಗ್ಗೆಯೇ ಭರವಸೆ ಕಳೆದುಕೊಂಡು ಮೊದಲೇ ಭಯಾಂತಕದಲ್ಲಿರುವಾಗ ದಿಢೀರನೆ ರಾತ್ರಿಯ ವೇಳೆ ನಮ್ಮ ಪರವಾಗಿಯೇ ನಮಗಾಗಿಯೇ ನಮ್ಮ ಸಹಾಯಕ್ಕಾಗಿಯೇ ನಮ್ಮವರೇ ನಮ್ಮ ಪೋಲಿಸರೇ ವೈದ್ಯರೇ ಮನೆಗೆ ಹೋದರೂ ಜನಕ್ಕೆ ಅನುಮಾನದ ಜೊತೆಗೆ ಮತ್ತಷ್ಟು ಭಯ ಹೆಚ್ಚಾಗುತ್ತದೆ..! ದಿಕ್ಕುತೋಚದ ಜನಸಮೂಹ ಹುಚ್ಚಾಗುತ್ತದೆ..!
ವೈದ್ಯರಾಗಲಿ ದಾದಿಯರಾಗಲಿ ಆಶಾಕಾರ್ಯಕರ್ತೆಯರಾಗಲಿ ಪೋಲಿಸರಾಗಲಿ ಸರ್ಕಾರವಾಗಲೀ ಇರುವುದು ನಮಗಾಗಿ ನಮ್ಮ ರಕ್ಷಣೆಗಾಗಿಯೇ ಹೊರತು ಬೇರೆ ಉದ್ದೇಶಗಳಿಗಾಗಿ ಅಲ್ಲ ಎಂಬ ಸತ್ಯವನ್ನು ಜನರು ಅರ್ಥಮಾಡಿಕೊಳ್ಳಬೇಕು. ಆ ಸತ್ಯವನ್ನು ಜನಸಾಮಾನ್ಯರಿಗೆ ಅವರ ಮಟ್ಟಕ್ಕಿಳಿದು ಅರ್ಥ ಮಾಡಿಸಬೇಕಾದುದು ನಮ್ಮ ಕರ್ತವ್ಯವಾಗಬೇಕು. ಅವರಿಗೆ ನಂಬಿಕೆ ಬರುವಂತೆ ನಡೆದುಕೊಳ್ಳಬೇಕು. ಜನರೂ ಅದನ್ನು ತಾಳ್ಮೆಯಿಂದ ಅರ್ಥ ಮಾಡಿಕೊಳ್ಳಬೇಕು..! ಮಾಧ್ಯಮದವರು ಮನುಷ್ಯರಂತೆ ವರ್ತಿಸಬೇಕು..!
ಪಾದರಾಯನಪುರದವರಾಗಲೀ ಪಾಂಡುರಂಗಪುರವಾಗಲಿ ನಾವೆಲ್ಲರೂ ಭಾರತೀಯರು ಮೊದಲಿಗೂ ಕೊನೆಗೂ… ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೋರೊನಾ ದೃಷ್ಟಿಯಲ್ಲಿ ನಾವೆಲ್ಲರೂ ಕೇವಲ ಮನುಷ್ಯರು ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು..! ಇಂಥ ವಿಷಮಕಾಲದಲ್ಲಿ ಮನುಷ್ಯತ್ವ ಮತ್ತು ಸೌಹಾರ್ದತೆಯೊಂದೇ ನಮ್ಮೆಲ್ಲರನ್ನೂ ಉಳಿಸಬಲ್ಲದು ಎಂಬುದನ್ನು ನಾವೆಲ್ಲರೂ ಮನಗಾಣಬೇಕು..!
ಸುದ್ದಿದಿನ.ಕಾಂ|ವಾಟ್ಸಾಪ್|9980346243