ಅಂತರಂಗ

ಸಾಹಸ ಅಥವಾ ಸಾಧನೆ ಎನ್ನದಿರಲಾದೀತೆ..!

Published

on

ಶಿಕ್ಷಕ ಹೆಚ್.ಎಸ್. ಹಾಲೇಶ್

ದುಕೇ ಒಂದು ಕಾವ್ಯಧಾರೆ,,, ಸೃಷ್ಟಿಕರ್ತನ ಕೈ ಚಳಕದ ಕಾವ್ಯಕುಂಚದಲ್ಲಿ ಕಲೆ ಮತ್ತು ಕಲಾತ್ಮಕತೆ ಎಲ್ಲಿ ಹೇಗೆ ಅರಳುತ್ತದೋ ಯಾರಿಗೆ ಗೊತ್ತು … !?

ಪ್ರಕೃತಿ ವಿಸ್ಮಯವೋ, ಸೃಷ್ಟಿ ವೈಚಿತ್ರ್ಯವೋ, ಭೂ ಒಡಲಿನ ಬೆರಗೋ, ಭಗವಂತನ ಕೃಪಾದೃಷ್ಟಿಯ ಕಾರುಣ್ಯದ ಫಲವೋ.. ಅಂತೂ ಇಲ್ಲೊಂದು ಅದ್ಭುತ ಘಟಿಸಿದೆ. ಮೂಲತಃ ಶಿಕ್ಷಕರಾದ ಅವರಿಂದು ಸೋಜಿಗ ಎಂಬಂತೆ ಪ್ರಗತಿ ಪರ – ಸಾಧಕ ರೈತರಾಗಿಯೂ ಹೊರ ಹೊಮ್ಮಿದ್ದಾರೆ.

ಚನ್ನಗಿರಿ ತಾಲ್ಲೂಕಿನ ನಲ್ಕುದುರೆ ಗ್ರಾಮದ ಅವರ ಎರಡು ಎಕರೆ ಕಪ್ಪು ಮಣ್ಣಿನ ಭೂಮಿಯಲ್ಲೀಗ ಪಪ್ಪಾಯಿ ಬೆಳೆ ಕಂಗೊಳಿಸುವ ಹಸಿರು ಉಡುಗೆಯನುಟ್ಟು ನಳನಳಿಸುತ್ತಾ ನಿಂತು ದಾರಿ ಹೋಕರಿಗೂ, ಕೃಷಿಕರಿಗೂ ಬೆರಗು ಮೂಡಿಸಿದೆ.

ದಾವಣಗೆರೆ ಡಿ.ಆರ್.ಆರ್ ಪ್ರೌಢ ಶಾಲೆಯ ಶಿಕ್ಷಕರಾದ ಹೆಚ್.ಎಸ್.ಹಾಲೇಶ್ ಹಂಚಿನಮನೆ ಯವರು ಸುಮಾರು 8 ತಿಂಗಳ ಹಿಂದೆ ತಮ್ಮ ಹುಟ್ಟೂರಿನಲ್ಲಿರುವ ಖಾಲಿ ಇದ್ದ 2 ಎಕರೆ ಜಮೀನಿನಲ್ಲಿ ಬೋರ್ ವೆಲ್ ಕೊರೆಸುವ ಸಾಹಸಕ್ಕೆ ಕೈ ಹಾಕಿದರು. ಆಗ ಅಲ್ಲಿ ನೀರು ಬೀಳುವುದಿಲ್ಲ, ವೃಥಾ ಹಣ ವ್ಯರ್ಥ ಎಂದು ಭಯಪಡಿಸಿದವರೇ ಹೆಚ್ಚು. ಆದರೂ ಅದೃಷ್ಟ ಪರೀಕ್ಷೆ ಎಂಬಂತೆ ತಮ್ಮ ನಿರ್ಧಾರದಿಂದ ಹಿಂದೆ ಸರಿಯದೆ ಬೋರ್ ಕೊರೆಸಿದರು. ಅದೃಷ್ಟವಶಾತ್ ಆ ಜಮೀನಿನಲ್ಲಿ 2 ಇಂಚು ನೀರು ಬಿದ್ದೇ ಬಿಟ್ಟಿತು.

ಅಲ್ಲಿ ಯಾವ ಬೆಳೆ ಬೆಳೆದರೆ ಸೂಕ್ತ ಎಂಬ ವಿಷಯ ಬಂದಾಗ ಅವರ ಮನಸ್ಸಿನಲ್ಲಿ ಅಂದು ಯಾಕೋ ಪಪ್ಪಾಯಿ ಬೆಳೆಯ ವಿಚಾರ ಸದ್ದಿಲ್ಲದೆ ಕಾಡಿತು,, ನಾಲ್ಕಾರು ಕಡೆ ಅಡ್ಡಾಡಿ ಪ್ರಗತಿ ಪರ ರೈತರ ಸಲಹೆ ಪಡೆದರಲ್ಲದೆ ಕೃಷಿ ವಿಜ್ಞಾನಿಗಳ ಮಾರ್ಗದರ್ಶನದ ಮೊರೆಗೂ ಹೋದರು. ಆಗ ಎಲ್ಲರೂ ಹೇಳಿದ್ದು ಕಪ್ಪು ಮಣ್ಣಿನ ಆ ಜಮೀನಿನಲ್ಲಿ ಪಪ್ಪಾಯಿ ಬೆಳೆ ಬೆಳೆಯುವುದು ಅಸಾಧ್ಯ. ಈ ಮಣ್ಣಿನ ಗುಣ ಲಕ್ಷಣ ಆ ಬೆಳೆಗೆ ಯೋಗ್ಯವಲ್ಲ. ಅದರ ಬದಲು ಪರ್ಯಾಯ ಬೆಳೆಯ ಕುರಿತು ಯೋಚಿಸುವುದೇ ಸೂಕ್ತ ಎಂದು… ಆದರೂ ಆ ಹೊತ್ತಿಗಾಗಲೇ ಅವರ ಮನದಲ್ಲಿ ಮನೆ ಮಾಡಿ ಬಿಟ್ಟಿದ್ದ ಪಪ್ಪಾಯಿ ಬೀಜವನ್ನು ಬಿತ್ತುವ ಬಯಕೆ ಹೆಮ್ಮರವಾಗಿ ಬೆಳೆದು ಬಿಟ್ಟಿತ್ತು. ಬೆಳೆಯುವುದೋ ಅಥವಾ ಬೀಜ ಕರಗಿ ಹೋಗುವುದೋ , ಲಾಭವೋ – ನಷ್ಟವೋ ಅಂತೂ ಅದನ್ನೇ ಬಿತ್ತಿದರಾಯಿತು ಎಂಬ ಸಂಕಲ್ಪದೊಂದಿಗೆ ಧೃಢ ಮನಸ್ಸಿನಿಂದ – ಧೃತಿಗೆಡದೆ ಎರಡನೇ ಸಾಹಸಕ್ಕೆ ಮುನ್ನಡಿ ಇಟ್ಟೇ ಬಿಟ್ಟರು.

ಹಾಗಂತ ಬೀಜ ಬಿತ್ತಿ ಸುಮ್ಮನೆ ಕೂರಲಿಲ್ಲ . ತಮ್ಮ ಶಿಕ್ಷಕ ವೃತ್ತಿಯ ಪ್ರಾಮಾಣಿಕ ನಿರ್ವಹಣೆಯ ಜೊತೆಯಲ್ಲಿ ಬಿಡುವಿನ ವೇಳೆಯಲ್ಲಿ ಪದೇ ಪದೇ ಜಮೀನಿಗೆ ಭೇಟಿ ಕೊಟ್ಟು ವೀಕ್ಷಿಸುತ್ತಾ ಬಾವಿ ತೋಡಿಸಿ , ಡ್ರಿಪ್ ಇರಿಗೇಷನ್ ವ್ಯವಸ್ಥೆಯನ್ನೂ ಮಾಡಿದರು. ವ್ಯವಸ್ಥಿತವಾಗಿ – ಶಿಸ್ತು ಬದ್ಧವಾಗಿ ಪ್ರಜ್ಞಾವಂತಿಕೆ ಮತ್ತು ವಿಚಾರವಂತಿಕೆ ಮೂಲಕ ಮಕ್ಕಳಂತೆ ಬೆಳೆಯನ್ನು ಪೋಷಿಸಿದರು. ದೃಢ ವಿಶ್ವಾಸದಿಂದ ರಾಸಾಯನಿಕ ಮುಕ್ತ ಬೆಳೆಯಾಗಿ , ಸಾವಯವ ಕೃಷಿ ಪದ್ಧತಿಯಡಿ ಇಸ್ರೇಲ್ ಮಾದರಿಯ ಬೆಳೆಯಾಗಿ ಬೆಳೆಯುವ ಜಾಣ್ಮೆ ತೋರಿದರು. ಅದರ ಫಲಸ್ವರೂಪವಾಗಿ ಇಂದು ಆ ಜಮೀನಿನಲ್ಲಿ ಸಾವಿರಾರು ಪಪ್ಪಾಯಿ ಗಿಡಗಳು ಮೈ ದುಂಬಿ ನಿಂತು ಕಟಾವು ಹಂತ ತಲುಪಿವೆ.

ಮಣ್ಣಿನ ಫಲವತ್ತತೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೈ ಗೊಂಡಿರುವ ಕ್ರಮಗಳು, ಬೆಳೆಯ ಇಳುವರಿ, ಪ್ರಕೃತಿ ದತ್ತ ಕೃಷಿ ಪದ್ಧತಿ ಸೇರಿದಂತೆ ಅವರು ಅನುಸರಿಸುತ್ತಿರುವ ಬೆಳೆ ವಿಧಾನ ಹಾಗೂ ನಾವು ಈ ಪ್ರಾಕೃತಿಕ ಸಂಪತ್ತನ್ನು ಉಳಿಸಿ ಹೋಗಬೇಕೆಂಬ ದೂರಲೋಚನೆಯಿಂದ ಕೂಡಿದ ವಿಚಾರ ಲಹರಿ, ಕಾಳಜಿ – ಕಳಕಳಿ ಇತರೆ ರೈತರಿಗೆ ಮಾದರಿಯೇ ಸರಿ ಎಂಬುದು ಅವರ ಒಡನಾಡಿಗಳ ಅಭಿಮಾನದ ನುಡಿಯಾಗಿದೆ.

ಅವರ ಈ ಬೆಳೆ ಇನ್ನಷ್ಟು ಹುಲುಸಾಗಿ ಬೆಳೆದು, ಆರ್ಥಿಕವಾಗಿ ಅವರಿಗೆ ಸಮೃದ್ಧಿ ಉಂಟಾಗಲಿ ಎಂದು ಹಾರೈಸುವ ಜೊತೆ ಶ್ರೀಯುತ ಹಾಲೇಶ್ ಅವರ ಈ ಯಶೋಗಾಥೆ ಶಿಕ್ಷಿತರ ಮನದಲ್ಲೊಂದು ಚಿಂತನೆಯ ಬೀಜ ಬಿತ್ತಲಿ, ಬೆಳೆ ವಿಧಾನ ಕುರಿತು ಚಿಂತಿಸುವ ದಿಸೆಯಲ್ಲಿ ರೈತಾಪಿ ವರ್ಗದವರಿಗೆ ಪ್ರೇರಣೆಯಾಗಲಿ ಎಂಬ ಆಶಯದೊಂದಿಗೆ.

-ಗಂಗಾಧರ ಬಿ ಎಲ್ ನಿಟ್ಟೂರ್
ದಾವಣಗೆರೆ

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version