ಅಂತರಂಗ
ಸರಳ ಸಜ್ಜನಿಕೆಯ ಮೌಲ್ಯಾಧಾರಿತ ರಾಜಕಾರಣ ಪ್ರಸ್ತುತ ರಾಜಕಾರಣಿಗಳಲ್ಲಿದೆಯೇ..!?
- ಕೆ.ಶ್ರೀಧರ್(ಕೆ.ಸಿರಿ)
ನಮಗೆ ಸ್ವಾತಂತ್ರ್ಯ ಬಂದು ಸುಮಾರು ದಶಕಗಳೇ ಕಳೆದಿವೆ ಮಸಾಲೆ ಪದಾರ್ಥಗಳ ವ್ಯಾಪಾರಕ್ಕೆ ಬಂದ ಬ್ರಿಟಿಷರು ಸುಮಾರು 300 ವರ್ಷಗಳ ಕಾಲ ನಮ್ಮನ್ನು ಆಳಿ ಹೋಗಿದ್ದಾರೆ.ನಮಗೆ ಸ್ವಾತಂತ್ರ್ಯ ತಂದು ಕೊಡಲು ಅದೇಷ್ಟೋ ಮಹನೀಯರು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ತ್ಯಾಗ, ಬಲಿದಾನದ ಮೂಲಕ ಹಿಂಸೆ-ಅಹಿಂಸಾತ್ಮಾಕ ಮಾರ್ಗಗಳ ಮೂಲಕ ಹೋರಾಟ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಷಯವಾಗಿದೆ.
ದೇಶಕ್ಕೆ ಸ್ವಾತಂತ್ರ್ಯ ಬಂತು ಮುಂದೇನು ? ಎನ್ನುವ ಪ್ರಶ್ನೆ ಬಂದಾಗ ನಮಗೊಂದು ಕಾನೂನಾತ್ಮಕ ಸಂವಿಧಾನ ಬೇಕು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ಆಳ್ವಿಕೆ ಹಾಗೂ ಬ್ರಿಟಿಷರಿಗಿಂತಲೂ ಮೊದಲು ರಾಜಪ್ರಭುತ್ವ ವ್ಯವಸ್ಥೆ ಇತ್ತೆಂಬುದು ನಮಗೆಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ.ರಾಜಪ್ರಭುತ್ವದಲ್ಲಿದ್ದ ವರ್ಣಾಶ್ರಮ ಪದ್ಧತಿ ಹಾಗೂ ಬ್ರಿಟಿಷರ ನಿರಂಕುಶ ಪ್ರಭುತ್ವದಿಂದ ನಲುಗಿ ಹೋಗಿದ್ದ ಜನರಿಗೆ ಅಂದರೆ ನಮಗೆಲ್ಲರಿಗೂ ಒಂದೊಳ್ಳೆ ನೆಮ್ಮದಿಯ ಜೀವನ ಹಾಗೂ ಜೀವನಪದ್ದತಿಯನ್ನು ಕಟ್ಟಿಕೊಡುಬೇಕೇಂಬ ಮಹತ್ವಾಕಾಂಕ್ಷೆಯಿಂದ ಸ್ವಾತಂತ್ರ್ಯ ನಂತರ ದೇಶವನ್ನು ಸುಭದ್ರವಾಗಿ ಕಟ್ಟುವ ನಿಟ್ಟಿನಲ್ಲಿ ಅನೇಕ ಮಹನೀಯರು ದೇಶಕ್ಕೆ ಒಂದು ಸಂವಿಧಾನ ರಚಿಸಲು ಸೂಕ್ತ ವ್ಯಕ್ತಿಯ ಹುಡುಕಾಟದಲ್ಲಿರುವಾಗ ದೊರೆತಂತಹ ಅನಗ್ರ್ಯ ರತ್ನವೇ ನಮ್ಮ ಡಾ.ಬಿ.ಆರ್.ಅಂಬೇಡ್ಕರ್.
ಆಗಾಗಲೇ ಅಂಬೇಡ್ಕರವರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಧ್ಯಾಭ್ಯಾಸ ಮುಗಿಸಿ ದಲಿತ ಸಮುದಾಯದಲ್ಲಿ ಅಸ್ಪೃಶ್ಯತೆಯ ಕರಾಳ ನೆರಳಿನಲ್ಲಿ ಬೆಂದು ಜ್ಞಾನದ ತಪೋನಿಧಿಯಾಗಿದ್ದರು.ಅಂಬೇಡ್ಕರರು ಸಂವಿಧಾನ ರಚನಾ ಸಮಿತಿಯ ಸಹಯೋಗದೊಂದಿಗೆ ಅನೇಕ ಸಂವಿಧಾನಗಳನ್ನು ಓದಿ ಭಾರತದಂತಹ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುವ ರಾಷ್ಟ್ರಕ್ಕನುಗುಣವಾಗಿ 1.17.369 ಶಬ್ದಗಳನ್ನೊಳಗೊಂಡ (ಆಂಗ್ಲ ಭಾಷೆಯ ಆವೃತ್ತಿ) ಬೃಹತ್ ಗಾತ್ರದ ಶ್ರೇಷ್ಠ ಸಂವಿಧಾನವನ್ನು ರಚಿಸಿ”ಭಾರತವನ್ನು ಒಂದು ಸಾರ್ವಭೌಮ,ಸಮಾಜವಾದಿ,ಜಾತ್ಯತೀತ,ಪ್ರಜಾಸತ್ತಾತ್ಮಕ ಗಣತಂತ್ರವನ್ನಾಗಿ ” ರೂಪಿಸಲು 1949ನೆಯ ಇಸವಿ ನವೆಂಬರ್ ತಿಗಳ 26 ದಿನದಂದು ಈ ಸಂವಿಧಾನವನ್ನು ನಮಗೇ ನಾವೇ ಅರ್ಪಿಸಿಕೊಂಡು ಅಂಗೀಕರಿಸಿ ಶಾಸನವಾಗಿ ವಿಧಿಸಿಕೊಂಡಿದ್ದೇವೆ.ಎಂಬ ಪೀಠಿಕೆಯುಳ್ಳ ಸಂವಿಧಾನವನ್ನು ರಚಿಸಿ ಇಡೀ ಜಗತ್ತೇ ಹುಬ್ಬೇರಿ ನೋಡುವಂತೆ ಮಾಡಿದವರು ನಮ್ಮ ಡಾ.ಬಿ.ಆರ್.ಅಂಬೆಡ್ಕರ್.
ಸಂವಿಧಾನ ರಚನೆಯಾದ ಬಳಿಕ “ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ನಡೆಯುವ ಪ್ರಜೆಗಳ ಸರ್ಕಾರ. ಈ ವ್ಯಾಖ್ಯಾನವನ್ನು ಪ್ರಸ್ತುತ ದಿನಮಾನಗಳ ರಾಜಕಾರಣಕ್ಕೆ ಹೋಲಿಸಿಕೊಂಡು ನೋಡಿದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳ ಮೂಲಕ ಅಧಿಕಾರ ಹಿಡಿಯುವ ರಾಜಕಾರಣಿಗಳು “ಚುನಾವಣೆಗಳಲ್ಲಿಮತದಾರರಿಂದ,ರಾಜಕಾರಣಕ್ಕಾಗಿ ರಾಜಕಾರಣಿಗಳಿಗೋಸ್ಕರ ಮುಖ್ಯಮಂತ್ರಿ ಹಾಗೂ ಮಂತ್ರಿಯಾಗಲೋಸ್ಕರ ಇರುವ ಸರ್ಕಾರ”.
ಎಂದರೆ ಬಹುಷ ತಪ್ಪಾಗಲಾರದು ಎನ್ನುವುದು ನನ್ನ ಭಾವನೆ ಏಕೆಂದರೆ ಇತ್ತೀಚಿನ ದಿನಗಳ ರಾಜಕಾರಣಿ ಹಾಗೂ ರಾಜಕಾರಣಕ್ಕೂ ಹೋಲಿಸಿಕೊಂಡರೆ ಅಜಗಜಾಂತರ ವ್ಯತ್ಯಾಸಗಳಿವೆ.ಕರ್ನಾಟಕ ಏಕೀಕರಣದ ಪೂರ್ವ ಹಾಗೂ ಏಕೀಕರಣದ ನಂತರದ ರಾಜಕಾರಣ ಮತ್ತು ರಾಜಕಾರಣಿಗಳ ಬಗ್ಗೆ ಒಂದಿಷ್ಟು ಗಮನಹರಿಸೋಣ.
ಕರ್ನಾಟಕ ಏಕೀಕರಣದ ಮೊದಲು ಮೈಸೂರು ರಾಜ್ಯದ ಕೆ.ಸಿ.ರೆಡ್ಡಿ ಹಾಗೂ ವಿಶಾಲ ಮೈಸೂರು ರಾಜ್ಯದ ನಿಜಲಿಂಗಪ್ಪರವರು ಮತ್ತು ಕರ್ನಾಟಕ ಏಕೀಕರಣದ ಮೊದಲ ಮುಖ್ಯಮಂತ್ರಿ ಡಿ.ದೇವರಾಜ್ ಅರಸು ರವರ ಕಾಲಘಟ್ಟದಲ್ಲಿನ ರಾಜಕಾರಣ ಸರಳ,ಸಜ್ಜನಿಕೆಯ ಹಾಗೂ ಮೌಲ್ಯಧಾರಿತ ರಾಜಕಾರಣಕ್ಕೆ ಹೆಸರಾದವರು. ಸಾಕಷ್ಟು ಲೋಕಾಭಿಮಾನವನ್ನು ಹೊತ್ತು ಲೋಕಕಲ್ಯಾಣದ ಕನಸ್ಸು ಕಂಡವರು.ಆ ಕಾಲ ಘಟ್ಟದ ರಾಜಕಾರಣವನ್ನು “ಲೋಕಕಲ್ಯಾಣದ ರಾಜಕಾರಣ” ಎಂದರೆ ತಪ್ಪಾಗಲಾರದು.
ಪ್ರಸ್ತುತ ದಿನಮಾನಗಳ ರಾಜಕೀಯ ಚಿತ್ರಣವನ್ನು ನೋಡಿದರೆ ‘ಅಧಿಕಾರ ಗ್ರಹಣವಿಡಿದ’ ನೀಚಗೆಟ್ಟ ದುಡ್ಡು ಮಾಡುವ ರಾಜಕಾರಣ ಎನ್ನಬಹುದು. ಕೆಲವು ವರ್ಷಗಳಿಂದ ನಡೆಯುತ್ತಿರುವ ರಾಜಕಾರಣದ ದೊಂಬರಾಟವನ್ನು ಅವಲೋಕಿಸಿದಾಗ ಎತ್ತ ಸಾಗುತ್ತಿದೆ ನಮ್ಮ ರಾಜಕಾರಣದ ವ್ಯವಸ್ಥೆ ಎಂದೆನಿಸಿಬಿಡುತ್ತದೆ. ಏಕೆಂದರೆ ಸದನದಲ್ಲಿ ಜರುಗುವ ಚರ್ಚೆಗಳು,ಆರೋಪಗಳು ಪ್ರತ್ಯಾರೋಪಗಳು ಎಷ್ಟರಮಟ್ಟಿಗೆ ಪ್ರಜೆಗಳ ಪರವಾಗಿವೆ ಎಂಬುದು ತಿಳಿಯದಾಗಿದೆ.
ಇತ್ತೀಚಿಗೆ ನಡೆದ ಕಲಾಪದಲ್ಲಿ ಸಚಿವರಾದ ಡಾ.ಕೆ.ಸುಧಾಕರ್ ರವರು ಶಾಸಕರಾದ ಪ್ರಿಯಾಂಕ್ ಖರ್ಗೆ ಯವರನ್ನು ಉದ್ದೇಶಿಸಿ ” ನೀನು ನಿಮ್ಮ ತಂದೆಯಿಂದ ಹಲವು ಬಾರಿ ಮಂತ್ರಿಯಾದೆ ಹೊರತು ನಿಮಗ್ಯಾವ ಅರ್ಹತೆ ಇಲ್ಲ.” ಎಂದು ನುಡಿದರು ನಾನೂ ಇತ್ತೀಗೆ ನಡೆದ ಹಲವಾರು ಸದನಗಳ ಕಲಾಪಗಳನ್ನು ಹಾಗೂ ಅಧಿಕಾರ ದಾಹದ ಈ ರೀತಿಯ ಮಾತುಗಳನ್ನು ಕೇಳಿದಾಗ ಸದನದಲ್ಲಿರುವ ಪ್ರತಿಯೊಬ್ಬ ಶಾಸಕುರುಗಳು ಮಂತ್ರಿಯಾಗುವ ಗುಂಗಿನಲ್ಲಿದ್ದಾರೆ ಎಂದೆನಿಸುವಂತಿದೆ.ಸಾಮಾಜಿಕ ಸೇವೆಯನ್ನು ಮಾಡಲು ರಾಜಕೀಯ ಕ್ಷೇತ್ರಕ್ಕೆ ಬಂದಿರುವ ಇವರು ಶಾಸಕರಾದರೇನು ಮಂತ್ರಿಯಾದರೇನು ಸಾಮಾಜಿಕ ಪರವಾದ ಕೆಲಸಗಳನ್ನು ಮಾಡಬೇಕೆ ಹೊರತು ಅಧಿಕಾರ ದಾಹವಿರಬಾರದು ಎನ್ನುವುದು ನನ್ನ ಅಭಿಪ್ರಾಯ.
ರಾಜಕಾರಣಕ್ಕೆ ಬಂದ ಮೇಲೆ ರಾಜಕಾರಣಿಗಳು ದಿಢೀರ್ ಶ್ರೀಮಂತರಾಗಿಬಿಡುತ್ತಾರೆ ಇದೊಂದು ರೀತಿಯ ಪವಾಡವೇ?? ಒಂದು ರೀತಿಯಲ್ಲಿ ದುಡ್ಡು ಮಾಡುವ ಸಲುವಾಗಿಯೇ ರಾಜಕಾರಣಕ್ಕೆ ಬರುತ್ತಾರೆ ಆದರೆ ಈ ದಿಢೀರ್ ಶ್ರೀಮಂತಿಕೆಗೆ ದುಡ್ಡು ಎಲ್ಲಿಂದ ಬರುತ್ತದೆ ಎಂಬುದು ನನಗಷ್ಟೇ ಅಲ್ಲದೇ ನಿಮಗೂ ತಿಳಿದಿರುವ ಗುಪ್ತ ಸತ್ಯವಾಗಿದೆ.ಆದರೂ ಮೂಕ ಪ್ರೇಕ್ಷಕರಾಗಿ ರಾಜಕಾರಣ ಮಾಡುವ ರಾಜಕಾರಣಿಗಳಿಗೆ ಬೆಂಬಲಿಗರಾಗಿ ಇನ್ನಷ್ಟು ದುಡ್ಡು ಮಾಡಲು ಮತದಾರ ಪ್ರಭುಗಳಾದ ನಾವುಗಳೇ ಇಂಬು ನೀಡುತ್ತಿದ್ದೇವೇ.
ಹಿಂದೆ ಒಂದು ಕಾಲವಿತ್ತು ಊರಿನಲ್ಲಿ ನೂರಾರು ಎಕರೆ ಜಮೀನು ಹೊಂದಿರುವ ಗೌಡರು ಜಮೀನ್ದಾರರು ಇದ್ದರು ಆದರೆ ಪ್ರಸ್ತುತ ದಿನಗಳಲ್ಲಿ ರಾಜಕಾರಣಿಗಳ ಬಳಿಯೇ ನೂರಾರೂ ಎಕರೆ ಜಮೀನು ಜಿಲ್ಲಾ ತಾಲ್ಲೂಕುಗಳಲ್ಲಿ ನಿವೇಶನಗಳು,ಪಬ್,ಬಾರ್ ಅಂಡ್ ರೆಸ್ಟೋರೆಂಟ್ಗಳಿದ್ದು ಇವರ್ಯಾವ ರೀತಿಯ “ಮಧ್ಯಪಾನ ವ್ಯಸನ ಮುಕ್ತ” ಕರ್ನಾಟಕ ಮಾಡುತ್ತಾರೆಂಬುದು ನನ್ನ ಪ್ರಶ್ನೆ.
ಜಮೀನನ್ನು ಉತ್ತು ಬಿತ್ತುವ ರೈತನಿಗೆ ಒಂದಡಿ ಭೂಮಿಯಿಲ್ಲ ಉತ್ತದೇ ಬಿತ್ತದೇ ಇದ್ದರೂ ರಾಜಕಾರಣಿಗಳ ಬಳಿ ನೂರಾರು ಸಾವಿರಾರು ಎಕರೆ ಜಮೀನಿದ್ದು “ರಾಜಕಾರಣದ ರೈತನಾಗಿದ್ದಾನೆ” ಉದ್ಯಮಿಗಳ ಬಳಿಯೇ ಇಲ್ಲದ ನಿವೇಶನಗಳು ರಾಜಕಾರಣಿಗಳ ಬಳಿ ನಿವೇಶನ ಪಬ್ ಬಾರ್ ಅಂಡ್ ರೆಸ್ಟೋರೆಂಟ್ ಇದ್ದು ಒಂದು ರೀತಿಯ ರಾಜಕಾರಣದ ಉದ್ಯಮಿಯಾಗಿದ್ದಾನೆ.ಇವರ ದುಡ್ಡು ಇಮ್ಮಡಿಯಾಗಲು ಕೇವಲ ಲಾಭದಾಯಕ ಹುದ್ದೆಗಳಲ್ಲಿಯೇ ತಮ್ಮ ಹಣ ವಿನಿಯೋಗಿಸುವುದು ಇವರ ಲಾಭಕ್ಕಾಗಿ ಇದು ಸತ್ಯ!ಸತ್ಯ!ಸತ್ಯ!.
ಕರ್ನಾಟಕ ಏಕೀಕರಣಾನಂತರ ಕರ್ನಾಟಕ ರಾಜ್ಯದ ರಾಜಕಾರಣದಲ್ಲಿ ರಾಜಕಾರಣಿಗಳು ಕೆರೆ,ಕಟ್ಟೆಗಳನ್ನು ಕಟ್ಟಲು ದವಾಖಾನೆಗಳನ್ನು ಕಟ್ಟಲು ಗಮನಹರಿಸಿದರೆ ಈ ಕಾಲದ ರಾಜಕಾರಣಿಗಳು ಅಧಿಕಾರ ಪದಗ್ರಹಣದ ಬಗ್ಗೆ ಗಮನಹರಿಸುತ್ತಾರೆ. ರಾಜಕೀಯ ಪಕ್ಷಗಳ ಅಧಿಕಾರಕ್ಕೆ ತರಲು ರೆಸಾರ್ಟ್ಗಳಲ್ಲಿ ಒಗ್ಗಟ್ಟಾದ ಇವರು ಒಂದು ದಿನವಾದರೂ ರಾಜ್ಯದ ಜ್ವಲಂತ ಸಮಸ್ಯೆಗಳಾದ ‘ಕಾವೇರಿ ವಿವಾದ’,’ಮಹಾದಾಯಿ ವಿವಾದ’,ಬಡತನ,ಅನಾರೋಗ್ಯ ಅನಕ್ಷರತೆ ನಿವಾರಿಸಲು ಈ ಒಗ್ಗಟ್ಟನ್ನು ತೋರಿಸಿರುವುದು ಎಂದಾದರೂ ನೋಡಿದ್ದೀರಾ!!?.ಬರೀ ಆಡಳಿತ ಪಕ್ಷ ವಿರೋಧ ಪಕ್ಷಗಳ ಲಾಭದ ಕಚ್ಚಾಟದಲ್ಲಿ ರಾಜ್ಯದ ಜನ ರಾಜ್ಯ ಬಡವಾಗಿದೆ ಎಂಬುದು ನನ್ನ ಅಭಿಪ್ರಾಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243