ಅಂತರಂಗ
ತೇಜಸ್ವಿಯನ್ನು ಹುಡುಕುತ್ತಾ…
ಮಗು ಮನಸ್ಸಿನ ಜಿ.ಹೆಚ್ ನಾಯಕರು ತಾವು ನಂಬಿದ ಆದರ್ಶಗಳು, ತತ್ವ ಸಿದ್ದಾಂತಗಳನ್ನು ಬಿಟ್ಟುಕೊಟ್ಟು ’ಜೀ ಹುಜೂರ್’ ಪಾಲಿಸಿಯನ್ನು ಪಾಲಿಸದ ಕಾರಣಕ್ಕೆ ತಮ್ಮ ಅಧ್ಯಾಪಕ ವೃತ್ತಿಯಲ್ಲಿ ಸಾಕಷ್ಟು ಕಷ್ಟಕೋಟಲೆಗಳಿಗೆ, ಕಿರುಕುಳಗಳಿಗೆ ಒಳಗಾಗಿ ಮಾನಸಿಕವಾಗಿ ತೊಳಲಾಟದಲ್ಲಿ ಇದ್ದಂತ ಕಾಲದಲ್ಲಿ ತೇಜಸ್ವಿ ಇವರ ಬೆಂಬಲಕ್ಕೆ ನಿಂತ ವಿವರಗಳನ್ನು ನಾಯಕರು ನಮ್ಮೊಂದಿಗೆ ಹಂಚಿಕೊಳ್ಳುತ್ತಾರೆ.
ನವ್ಯಕಾವ್ಯದ ಅನುಯಾಯಿ, ಜೊತೆಗೆ ಕುವೆಂಪು ವಿರೋಧಿ ಎಂಬ ಹಣೆಪಟ್ಟಿ ಹಲವರ ವ್ಯವಸ್ಥಿತ ಪಿತೂರಿಯಿಂದಾಗಿ ಜಿ.ಹೆಚ್ ನಾಯಕರಿಗೆ ಬಿಡಿಸಿಕೊಳ್ಳಲಾಗದಂತೆ ಅಂಟಿಕೊಂಡಿತ್ತಂತೆ ಆಗ, ಈ ಹಣೆಪಟ್ಟಿಯ ಕಾರಣದಿಂದಾಗಿ ಇವರ ಪಿ ಹೆಚ್ ಡಿ ಅಧ್ಯಯನದಲ್ಲಿ ದೊಡ್ಡವರು, ಹಿರಿಯರು ಅನ್ನಿಸಿಕೊಂಡಿದ್ದವರೇ ಸಾಧ್ಯವಾದಷ್ಟೂ ಕಿರುಕುಳ ನೀಡಿ ಪಿ ಹೆಚ್ ಡಿ ಪಡೆಯಲು ಸಾಧ್ಯವಾಗದ ಹಾಗೆ ಮಾಡಿದ್ದರಿಂದ ಇವರಿಗೆ ಒಟ್ಟಾರೆ ಯೂನಿವರ್ಸಿಟಿಯ ಒಳರಾಜಕೀಯಗಳು, ಅಲ್ಲಿನ ಬಹುಪರಾಕ್ ಸಂಸ್ಕೃತಿ (ನೇರವಾಗಿ ಬಕೆಟ್ ಹಿಡಿಯುವ ಸಂಸ್ಕೃತಿ ಅನ್ನಬಹುದೇನೊ) ಮುಖಸ್ತುತಿ, ಇವುಗಳೆಲ್ಲದರಿಂದ ನೋವುಂಟಾಗಿ ಅಧ್ಯಾಪನ ವೃತ್ತಿಯನ್ನೇ ಬಿಟ್ಟು ಬೇರೆ ಏನಾದರೂ ವೃತ್ತಿ ಕೈಗೊಳ್ಳಬೇಕು ಎಂಬ ಯೋಚನೆಯಲ್ಲಿದ್ದರಂತೆ. ನಂತರ ಬೇರೆ ದಾರಿ ಕಾಣದೆ ಬೆಳಗಿನ ಹೊತ್ತು ಲಾ ಕಾಲೇಜಿನಲ್ಲಿ ಲಾ ಡಿಗ್ರಿ ಅಭ್ಯಾಸ ಮಾಡುತ್ತಿದ್ದರಂತೆ.
ಅಷ್ಟೊತ್ತಿಗಾಗಲೇ ತೇಜಸ್ವಿ ಮೈಸೂರು ಬಿಟ್ಟು ದೂರದ ಮೂಡಿಗೆರೆಗೆ ಕಾಫಿ ತೋಟ ಮಾಡಲು ಹೋಗಿ ಆಗಿತ್ತು. ಇದನ್ನೆಲ್ಲಾ ಕೇಳಿದ ತೇಜಸ್ವಿಯವರಿಗೂ ಬೇಸರ ಮೂಡಿ ಅವರು ಈ ರೀತಿ ಕ್ಷುಲ್ಲಕ ರಾಜಕೀಯ ಮಾಡುತ್ತಿರುವವರನ್ನು ಬಾಯಿಗೆ ಬಂದ ಹಾಗೆ ಬೈದು “ರೀ ನಾಯಕರೆ ಈ ದರಿದ್ರ ಜನಗಳ ಸಹವಾಸವೇ ಬೇಡ ಕಣ್ರಿ. ಕಾಫಿ ತೋಟಕ್ಕೆ ಅರ್ಜಿ ಹಾಕಿ. ಇಪ್ಪತ್ತು ಎಕರೆವರೆಗೂ ಕೊಡ್ತಾರೆ. (ಆಗ ಸರ್ಕಾರ ಉತ್ತರಕನ್ನಡ ಜಿಲ್ಲೆಯ ಹಳಿಯಾಳ, ಸೂಪ, ಯಲ್ಲಾಪುರ ಮುಂತಾದ ಪ್ರದೇಶಗಳು ಕಾಫಿಗೆ ಸೂಕ್ತ ಎಂದು ಗುರುತಿಸಿ ಈ ಪ್ರದೇಶದಲ್ಲಿ ಕಾಫಿ ತೋಟ ಮಾಡುವವರಿದ್ದರೆ ಅರ್ಜಿ ಕೊಡಬಹುದೆಂದು ಪ್ರಕಟಣೆ ಕೊಟ್ಟಿತ್ತಂತೆ. ಬೇಕಾದಷ್ಟಾಯ್ತು. ತೋಟ ಡೆವಲಪ್ ಮಾಡೋದಕ್ಕೆ ಒಂದೆರಡು ವರ್ಷ ಬೇಕಾಗುತ್ತೆ. ನನಗೆ ಈಗ ಕಾಫಿ ತೋಟ ಮಾಡಿದ ಅನುಭವ ಬೇಕಾದಷ್ಟಿದೆ. ಕೆಲಸದವರನ್ನ ಬೇಕಾದ್ರೆ ನಾನೇ ಕಳಿಸ್ತೀನಿ. ಏನೂ ಯೋಚನೆ ಮಾಡ್ಬೇಡಿ. ಮೊದಲು ಈ ಕೊಳೆತು ನಾರುತ್ತಿರೊ ವ್ಯವಸ್ಥೆಯಿಂದ ಹೊರಗೆ ಬನ್ನಿ” ಎಂಬ ಉತ್ತೇಜಕ ಮಾತುಗಳನ್ನಾಡಿದರಂತೆ.
ನಾಯಕರು ಕಾಫಿ ತೋಟ ಮಾಡುವ ತೇಜಸ್ವಿಯವರ ಆಹ್ವಾನಕ್ಕೆ ಪ್ರತಿಕ್ರಿಯಿಸದ್ದಿದ್ದಾಗ ತೇಜಸ್ವಿ ಅವರ ಮನಸ್ಸಿನ ತೊಳಲಾಟವನ್ನು ಅರ್ಥ ಮಾಡಿಕೊಂಡವರಂತೆ, “ಓದು, ಬರವಣಿಗೆಗೆ ಏನೂ ತೊಂದರೆ ಆಗೋದಿಲ್ರಿ. ನನ್ನೇ ನೋಡಿ ದಿನಕ್ಕೆ ನಾಲ್ಕು ಗಂಟೆ ಓದು ಬರಹ ಮಾಡ್ತಿದ್ದೀನಿ. ಹೋಗ್ತಾ ಹೋಗ್ತಾ ಇನ್ನೂ ಹೆಚ್ಚು ಹೊತ್ತು ಬಿಡುವು ಮಾಡ್ಕೊಳ್ತಾ ಹೋಗಬಹುದು. ನನಗೇನು ಇಷ್ಟ ಆಗುತ್ತೊ ಅದನ್ನ ಓದ್ತೀನಿ, ಬರೀತಿನಿ.
ಸುಮ್ಮನೆ ಹಾಳು ಮೂಳು ಎಲ್ಲಾ ಓದ್ಬೇಕಾಗಿಲ್ಲ. ಅಧ್ಯಾಪಕರಾಗಿದ್ದ ಮಾತ್ರಕ್ಕೆ ನನಗಿಂತ ಹೆಚ್ಚು ಓದ್ತೀರಿ, ಬರೀತೀರಿ ಅನ್ನೊದೆಲ್ಲಾ ಸುಳ್ಳು, ಸುಮ್ಮನೆ ಯಾವುಯಾವ್ದೊ ಹಾಳುಮೂಳು ರದ್ದಿಟೆಕ್ಸ್ಟ್ ಬುಕ್ಕುಗಳನ್ನ ಬೆಳಿಗ್ಗೆಯಿಂದ ಸಂಜೆವರೆಗೂ ಪಾಠ ಮಾಡೋದಕ್ಕೆ, ಆಮೇಲೆ ನಾಳೆ ಹೋಗಿ ಮತ್ತೆ ಕ್ಲಾಸ್ ರೂಮಿನಲ್ಲಿ ಪಾಠ ಮಾಡೋದಿಕ್ಕೆ ತಯಾರಿ ಮಾಡ್ಕೊಳ್ಳೊದ್ರಲ್ಲೇ ಟೈಮ್ ಕಳೆದುಹೋಗಿಬಿಡುತ್ತೆ. ಅದ್ರಿಂದ ಸುಮ್ನೆ ನಿಮಗೂ ಪ್ರಯೋಜನ ಇಲ್ಲ, ಹುಡುಗರಿಗೂ ಪ್ರಯೋಜನ ಇಲ್ಲ. ನಡೀರಿ ಕಾಫಿ ತೋಟ ಮಾಡುವಿರಂತೆ…” ಎಂದು ಜಿ.ಹೆಚ್ ನಾಯಕರನ್ನು ಕಾಫಿ ತೋಟ ಮಾಡಲು ಒಪ್ಪಿಸಿದ್ದರಂತೆ ತೇಜಸ್ವಿ.
ಆ ಪ್ರಕಾರ ಇವರು ತೋಟಕ್ಕೆ ಅರ್ಜಿ ಸಹ ಹಾಕಿದ್ದರಂತೆ. ಆದರೆ ಏನೋ ತಾಂತ್ರಿಕ ಕಾರಣಗಳಿಂದಾಗಿ ಇವರಿಗೆ ತೋಟ ಮಾಡಲು ಜಾಗ ಸಿಗಲಿಲ್ಲವಂತೆ. ಹಾಗಾಗಿ ತೇಜಸ್ವಿಯವರಂತೆ ಕಾಫಿ ತೋಟ ಮಾಡುವ ಕನಸು ಅಲ್ಲಿಗೇ ಕೊನೆಯಾಯಿತಂತೆ. ಇಷ್ಟು ಹೇಳುವಷ್ಟರಲ್ಲಿ ಜಿ.ಹೆಚ್ ನಾಯಕರ ಕಣ್ಣುಗಳು ಭಾವೋದ್ವೇಗದಿಂದ ತುಂಬಿಬಂದಿದ್ದವು. ಅವರು ಕನ್ನಡಕ ತೆಗೆದು ಕಣ್ಣೀರು ಒರೆಸಿಕೊಂಡು ಮಾತು ಮುಂದುವರೆಸಿದರು, “ಇಡೀ ಜಗತ್ತೇ ನನ್ನನ್ನ ಕುವೆಂಪು ವಿರೋಧಿ ಅಂತ ಟೀಕಿಸುತ್ತಿದ್ದರೂ ನನಗೆ ತುಂಬಾ ಇಷ್ಟವಾಗಿದ್ದ ಸಾಹಿತ್ಯದ ಓದು, ವಿಮರ್ಶೆಯ ಕೆಲಸಕ್ಕೆ ಸಹಾಯ ಆಗಲಿ ಅಂತ ಬದುಕಿಗೆ ಪರ್ಯಾಯವಾದ ಒಂದು ದಾರಿ ಹುಡುಕಿಕೊಡೋದಿಕ್ಕೆ ತೇಜಸ್ವಿ ಆಸಕ್ತಿವಹಿಸಿದ್ದರಲ್ಲ ಅದನ್ನ ನೆನೆಸ್ಕೊಂಡಾಗಲೆಲ್ಲ ಅವರ ಪರಿಶುದ್ಧವಾದ ಸ್ನೇಹಕ್ಕೆ, ಕಾಳಜಿಗೆ ನಾನು ಭಾವುಕನಾಗಿಬಿಡ್ತೇನೆ.
ಅಂತ ಸ್ನೇಹಕ್ಕೆ, ಮಮತೆಗೆ ನಾನು ಅರ್ಹನ? ಅಂತ ಬಹಳ ಸಲ ಯೋಚನೆ ಮಾಡಿದ್ದೀನಿ. ಇದರ ಜೊತೆಗೆ ನಾನು ಆಗಲೇ ಹೇಳಿದ ಹಾಗೆ ಅವರ ದೊಡ್ಡಮಗಳು ಸುಸ್ಮಿತಳನ್ನ ನಮ್ಮ ಮನೇಲಿ ಓದೋಕೆ ಬಿಟ್ಟು ಕುವೆಂಪು ವಿರೋಧಿ ಅಂತಿದ್ದವರಿಗೆಲ್ಲಾ ಇನ್ಡೈರೆಕ್ಟಾಗಿ ಉತ್ತರ ಕೊಟ್ರಲ್ಲ ಅಂಥ ದೊಡ್ಡ ವ್ಯಕ್ತಿ ಬಗ್ಗೆ ನಾನೇನು ಹೇಳಲಿ?…” ನಾಯಕರ ಕಣ್ಣುಗಳು ಮತ್ತೆ ಮತ್ತೆ ತೇವವಾಗುತ್ತಿದ್ದವು. ಜೊತೆಗೆ ಗಂಟಲುಕಟ್ಟಿದಂತಾಗಿ ಮಾತು ತಡವರಿಸಲಾರಂಭಿಸಿತು.
ಕೆಲ ನಿಮಿಷಗಳ ನಂತರ ಸಾವರಿಸಿಕೊಂಡು ಅವರು ಮತ್ತೆ ಮಾತು ಪ್ರಾರಂಭಿಸಿದರು, “ಇಷ್ಟೆಲ್ಲ ಮಾಡಿದ್ರೂ ತೇಜಸ್ವಿ ’ತಾನೇನೊ ಮಾಡಿದೆ’ ಅಂತ ಯಾರ ಹತ್ರಾನೂ ಹೇಳ್ಕೊಂಡಿಲ್ಲ. ಮಾಡಿದನ್ನ ಹೇಳ್ಕೊಳ್ಳೊ ಸ್ವಭಾವ ಇರಲಿಲ್ಲ ಅವರಿಗೆ. ಇನ್ನೂ ಒಂದು ಮುಖ್ಯವಾದ ವಿಷಯ, ಈ ಸಂದರ್ಭದಲ್ಲಿ ಹೇಳಲೇಬೇಕು, ತೇಜಸ್ವಿ ಅಷ್ಟು ದೊಡ್ದವರ ಮಗನಾಗಿದ್ರೂ ’ಇಂಥವರ ಮಗ ನಾನು’ ಅಂತ ಎಲ್ಲೂ ತನ್ನನ್ನ ತಾನು ಪ್ರೊಜೆಕ್ಟ್ ಮಾಡ್ಕೊಂಡಿಲ್ಲ. ತಾನಾಗೆ ತನ್ನ ಯೋಗ್ಯತೆಯಿಂದ, ತನ್ನ ಶಕ್ತಿಯಿಂದ, ಸಂಕಲ್ಪ ಬಲದಿಂದ ಬೆಳೆದ ಪ್ರತಿಭಾವಂತ ಅವರು. “ಪಂಪ ಪ್ರಶಸ್ತಿ ನನಗೆ ಬೇಡ, ಬೇರೆ ಯಾರಿಗಾದ್ರು ಕೊಡ್ರಿ!”ಆಮೇಲೆ ಯಾವ ಪ್ರಶಸ್ತಿಗೂ ತಲೆಕೆಡಿಸ್ಕೊಳ್ತಿರ್ಲಿಲ್ಲ. ನನಗೆ ಚೆನ್ನಾಗಿ ನೆನಪಿದೆ, ಒಂದ್ಸಾರ್ತಿ ಇಬ್ಬರು ಸ್ನೇಹಿತರು ನನ್ನ ಹತ್ತಿರ ಬಂದು “ನಾಯಕರೆ ನೋಡಿ ತೇಜಸ್ವಿ ಒಪ್ಪಿದ್ರೆ ಈ ಸಾರಿ ಅವರನ್ನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡ್ಬೇಕು ಅಂತಿದ್ದೀವಿ.
ಆದರೆ ಅವರಿಗೆ ಹೇಳೋರ್ಯಾರು? ಅದಕ್ಕೆ ನಿಮ್ಮ ಹತ್ತಿರ ಹೇಳಿಸಬಹುದು ಅಂತ ನಿಮ್ಮ ಹತ್ತಿರ ಬಂದಿದ್ದೀವಿ. ನೀವು ಅವರಿಗೆ ಒಂದು ಮಾತು ಹೇಳಿ” ಅಂದ್ರು. ನಾನು ಹೇಳಿದೆ, “ನಾನು ಅಷ್ಟು ದೊಡ್ಡವನಲ್ಲ. ಅವರಿಗೆ ಹೇಳೋವಷ್ಟು ಯೋಗ್ಯತೆ ನನಗಿಲ್ಲ. ತೇಜಸ್ವಿಯ ತೀರ್ಮಾನ ಅವರೇ ಕೈಗೊಳ್ತಾರೆ. ಅವರ ಮೇಲೆ ಒತ್ತಡ ಹಾಕುವ, ವಶೀಲಿ ಮಾಡುವ ಯೋಗ್ಯತೆ, ಅರ್ಹತೆಗಳು ನನಗಿಲ್ಲ. ನಾನು ಹೇಳೋಲ್ಲ” ಅಂದೆ. ಕೊನೆಗೆ ಯಾರೂ ಅವರಿಗೆ ಅವರನ್ನ ಹೋಗಿ ಕೇಳೊ ಧೈರ್ಯಾನೇ ಮಾಡ್ಲಿಲ್ಲ. ಹೆಸರು ಬೇಕಿದ್ರೆ ಹೇಳ್ತೀನಿ, ಹಿ.ಶಿ ರಾಮಚಂದ್ರೇಗೌಡರು ನನ್ನ ಸ್ನೇಹಿತರು. ಅವರೇ ಬಂದು ಕೇಳಿದ್ರು ನೀವು ಹೇಳಿದ್ರೆ ಒಪ್ಪಬಹುದು ಹೇಳಿ ಅಂತ. ನಾನು ಹೇಳೊಲ್ಲ ಅಂದೆ. ಯಾಕಂದ್ರೆ ಆ ವ್ಯಕ್ತಿತ್ವ ಅಂಥದ್ದು. ನಿಜವಾದ ದೊಡ್ಡವರು ಅವರು. ತೋರಿಕೆಗಲ್ಲ” ಜಿ.ಹೆಚ್ ನಾಯಕರ ನೆನಪುಗಳು ಒಂದರ ಹಿಂದೆ ಒಂದು ಭೋರ್ಗರೆದು ಹರಿಯುತ್ತಿದ್ದವು.
-ಶ್ರೀ ಗಂಗಾಧರ್
(ಸಂಗ್ರಹ)
ಸುದ್ದಿದಿನ.ಕಾಂ|ವಾಟ್ಸಾಪ್|9986715401