ನೆಲದನಿ
ಮಹಾಬೌದ್ಧ ‘ದಶ ತಥಾಗತ ಬಲೋಪನ್’ ರಾವಣ V/s ವೈದಿಕಾರ್ಯ ವಿಪ್ರೋತ್ತಮ ರಾವಣ..!
- ಡಾ.ವಡ್ಡಗೆರೆ ನಾಗರಾಜಯ್ಯ
ರಾವಣ ನಮ್ಮ ಮೂಲನಿವಾಸಿ ಮಾತೃ ಪ್ರಧಾನ ದ್ರಾವಿಡ ಸಂಸ್ಕೃತಿಯ ಸಾಂಸ್ಕೃತಿಕ ನಾಯಕ. ಅವನನ್ನು ಆರ್ಯರು ತಮಗೆ ಬೇಕಾದ ಆಕಾರಕ್ಕೆ ಎರಕ ಹೊಯ್ದುಕೊಂಡರು. ಶಿವನ ನಿರ್ಗುಣ ಉಪಾಸಕನಾಗಿದ್ದ ರಾವಣನೊಬ್ಬ ಬೌದ್ಧ ಭಿಕ್ಖುವೆಂದು ಸಂಸ್ಕೃತಿ ಚಿಂತಕರು ತಮ್ಮ ಸಂಶೋಧನೆಗಳಿಂದ ವಿಶ್ಲೇಷಿಸಿದ್ದಾರೆ. ರಾಮನು ಹೋಗಿ ತಂಗುವುದು ಅಶೋಕ ವನದಲ್ಲಿ. ಅಶೋಕನು ಒಬ್ಬ ಬೌದ್ಧ ದೊರೆ ಎಂದು ನಮಗೆ ತಿಳಿದಿದೆ. ಹೀಗೆ ರಾವಣನಿದ್ದದ್ದು ಆಳಿದ್ದು ಬೌದ್ಧ ನಾಡಿನಲ್ಲಿ.
ದಕ್ಷಿಣದ ಭೂನೆಲೆಯಲ್ಲಿದ್ದ ರಾವಣನು ಪೂಜಿಸುತ್ತಿದ್ದದ್ದು ಬದ್ಧಗುರು ಹುಟ್ಟುವ ಪೂರ್ವದಲ್ಲಿಯೇ ಇದ್ದ ದ್ರಾವಿಡ ಬುಡಕಟ್ಟು ನಾಯಕನಾದ ಶಿವ ಎಂಬ ಆದಿಬುದ್ಧನನ್ನು. ಬುದ್ಧಗುರುವನ್ನು ‘ದಶ ತಥಾಗತ ಬಲೋಪನ್’ ಎಂಬ ವಿಶೇಷಣದಿಂದ ಕರೆಯಲಾಗಿದೆ.
ಇಂಥದ್ದೇ ವಿಶೇಷಣದಿಂದ ಬೌದ್ಧ ದೊರೆಯಾದ ದ್ರಾವಿಡ ನಾಯಕ ರಾವಣನನ್ನೂ ಸಹ ‘ದಶಕಂಠ ರಾವಣ’ – ‘ದಶಮುಖ ರಾವಣ’ ಎಂದು ಕರೆಯಲಾಗಿದೆ. Dr.K.Jamanadas ಅವರ ‘Ravana; A Non-violent Gana Nayaka(Chief of Republics) contemporary with the Buddha’ ಎನ್ನುವ ಲೇಖನದಲ್ಲಿ ರಾವಣನನ್ನು ‘ಗೌತಮ ಬುದ್ಧನ ಸಮಕಾಲೀನ’ ಎಂದಿದ್ದಾರೆ.
ಪುರುಷ ನಿರ್ಮಿತವಾದ ಲಕ್ಷ್ಮಣರೇಖೆಯನ್ನು ದಾಟಿ ರಾವಣನೊಂದಿಗೆ ಹೋಗುವುದೆಂದರೆ ಸೀತೆಯಲ್ಲಿರುವ ದ್ರಾವಿಡ ಪ್ರಧಾನ ಮಾತೃ ಸಂಸ್ಕೃತಿಯ ಲಕ್ಷಣದ ಪ್ರತೀಕವಾಗಿ ಕಾಣಿಸುತ್ತದೆ. ಸೀತೆಯನ್ನು ಅರಸಿ ಹೊರಟ ರಾಮನು ತಲುಪುವುದು ಅಶೋಕ ವನವನ್ನು. ಅಶೋಕ ಎಂಬುದು ಬೌದ್ಧ ನಾಯಕನ ಹೆಸರು. ಭಾರತ ದೇಶವನ್ನು ಮಸ್ಕಿ ಶಾಸನದಲ್ಲಿ ‘ಜಂಬೂದ್ವೀಪ’ ಎಂದು ಕರೆದಿರುವ ದೇವನಾಂಪ್ರಿಯ ಅಶೋಕ ಒಬ್ಬ ಬೌದ್ಧ ದೊರೆ.
ರಾಮನು ತಲುಪುವ ಅಶೋಕ ವನವು, ಸಾಮ್ರಾಟ ಅಶೋಕನಿಗೂ ಪೂರ್ವದಲ್ಲಿದ್ದ, ಅಷ್ಟೇ ಏಕೆ ರಾವಣನಿಗೂ ಪೂರ್ವದಲ್ಲಿದ್ದ ಬೌದ್ಧ ನಾಯಕನಾದ ಅಶೋಕನ ಹೆಸರಿನದ್ದಾಗಿರಲು ಸಾಧ್ಯವಿದೆ. ಆ ಅಶೋಕನ ಧರ್ಮ ಬೌದ್ಧ ಧರ್ಮವೇ ಆಗಿದ್ದು ಅವನು ನಿಸರ್ಗದ ನಡುವೆ ಶಿವನನ್ನು ನಿಸರ್ಗದ ನಿರ್ಗುಣ ತತ್ವದಲ್ಲಿ ಉಪಾಸನೆ ಮಾಡುವವನಾಗಿದ್ದಾನೆ.
ರಾಮನ ರಾಜ್ಯದಲ್ಲಿ ಶಂಭೂಕ ಮುನಿಯನ್ನು ಹತ್ಯೆಗಯ್ಯುವಂತಹ ಜಾತಿ – ವರ್ಣ ಪದ್ದತಿ ಇದ್ದರೆ ರಾವಣನ ರಾಜ್ಯದಲ್ಲಿ ಜಾತಿ – ವರ್ಣ ಪದ್ಧತಿ ಇರುವುದಿಲ್ಲ. ಬುದ್ಧನ ಧಮ್ಮದಲ್ಲಿಯೂ ಜಾತಿ- ವರ್ಣ ಪದ್ದತಿ ಇರುವುದಿಲ್ಲ. ಬುದ್ಧನ ಸಮಾಜದಲ್ಲಿ ಜಾತಿವರ್ಣಗಳ ವಿಷಬೀಜವನ್ನು ಬಿತ್ತಿ ದ್ವಿಜ ಶ್ರೇಷ್ಠತೆಯನ್ನು ಪ್ರತಿಷ್ಠಾಪಿಸಲು ಪ್ರಯತ್ನಿಸಿದವರೇ ವೈದಿಕಶಾಹಿ ಆರ್ಯರು.
ಅದನ್ನು ಅವರು ಯಜ್ಞ ಯಾಗ ಹೋಮ ಹವನ ಮುಂತಾದ ಅಚರಣೆಗಳನ್ನು ಕೈಗೊಳ್ಳುವ ಮೂಲಕ ಪ್ರಾರಂಭಿಸುತ್ತಾರೆ. ಇದೇ ಆರ್ಯರು ರಾವಣನ ಲಂಕೆಯಲ್ಲಿಯೂ ಜಾತಿ- ವರ್ಣಗಳೆಂಬ ವಿಷಬೀಜವನ್ನು ಬಿತ್ತಲು ಹೋದರು. ಅವರು ಯಜ್ಞ ಯಾಗ ಹೋಮ ಹವನ ಮುಂತಾದ ಅಚರಣೆಗಳನ್ನು ಲಂಕೆಯಲ್ಲಿಯೂ ಕೈಗೊಳ್ಳುವ ಮೂಲಕ ಲಂಕೆಯ ಕಾಡು ಜನರಿಗೆ ಮತ್ತು ಜೀವಮಂಡಲಕ್ಕೆ ಅನೇಕ ರೀತಿಯಲ್ಲಿ ಕೇಡುಗಳನ್ನು ತಂದೊಡ್ಡಿದರು.
ಈಗ ಹೆಚ್ಚು ಚಾಲ್ತಿಗಿರುವ ನಂಬಿಕೆಯಂತೆ ರಾವಣ ಮಹಾಜ್ಞಾನಿ, ಸಕಲ ವೇದ ಪಾರಂಗತ, ಮಹಾಬ್ರಾಹ್ಮಣ, ಮಹಾ ದೈವಭಕ್ತ. ಶ್ರೀರಾಮನೊಡನೆ ಯುದ್ಧ ಮಾಡುವ ಮೊದಲು ಅವನ ಜಯಕ್ಕಾಗಿ ಪೂಜೆ ಮಾಡಿ ಶ್ರೀರಾಮನಿಗೆ ಜಯದ ಕಂಕಣ ಕಟ್ಟುತ್ತಾನೆ. ವೈರಿಗೆ ಜಯ ಬಯಸುವ ಇಂತಹ ಶ್ರೇಷ್ಠ ವ್ಯಕ್ತಿ ರಾವಣ!! ಡಾ.ರಾಜ್ ಕುಮಾರ್ ಅವರ “ದಶಾವತಾರ” ಚಲನಚಿತ್ರದ ಈ ದೃಶ್ಯ ನೋಡಿ, ಡಾ.ರಾಜ್ ಅವರ ಅಮೋಘ ಅಭಿನಯವೂ ರಾವಣನನ್ನು ವೈದಿಕಾರ್ಯ ಬ್ರಾಹ್ಮಣನನ್ನಾಗಿ ಜನರ ಎದೆಗಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243