ದಿನದ ಸುದ್ದಿ

“ನೀನು ಹಂದಿ ಮಾಂಸ ತಿಂತೀ ಏನಯ್ಯಾ” ಎಂದು ಕೇಳಿದ್ದ ರವಿ ಬೆಳಗೆರೆಯನ್ನು ನೆನೆದು

Published

on

  • ಬಿ.ಪೀರ್ ಬಾಷಾ

ಬಿ.ಟಿ.ಎಸ್ ಬಸ್ಸಿನಲ್ಲಿ ಅವತ್ತು ತುಂಬಿಕೊಂಡ ಜನ. ಗದ್ದಲ. ಬಗಲ ಬ್ಯಾಗು ಅತ್ತಿತ್ತ ಸರಿಸಿಕೊಳ್ಳುತ್ತಾ ಆ ತನಕ ನಿಂತೇ ಪ್ರಯಾಣಿಸುತ್ತಿದ್ದಾಗ ಖಾಲಿಯಾದ ಒಂದು ಸೀಟಿನಲ್ಲಿ ಪಟಕ್ಕನೆ ಕೂತು ನಿಟ್ಟುಸಿರು ಬಿಟ್ಟು ಘಳಿಗೆ ಕಳೆದಿರಲಿಲ್ಲ, ಮೊಬೈಲ್ ರಿಂಗಾಯಿತು. ಕಂಡಿದ್ದು ಬರೀ ನಂಬರ್‌ ಗಳು. ಹಾಗಾಗಿ “ಇದ್ಯಾವುದೋ ನನ್ನ ಲಿಸ್ಟಿನಲ್ಲಿಲ್ಲದ ಹೆಸರು” ಎಂದುಕೊಳ್ಳುತ್ತಾ ರಿಸೀವ್ ಮಾಡಿ, ” ಹಲೋ” ಅಂದೆ ಉದಾಸೀನದಿಂದ.

“ಎಲ್ಲದಿಯೋ, ಹೆಂಗದೀ”? ಅತ್ಯಾಪ್ತ ಎನಿಸುವ ಸಲಿಗೆಯ ಖಡಕ್ಕು ದನಿ!
ಈ ಭಾಷೆ ನಮ್ಮದೇ, ನಮ್ಮದೇ ಊರು- ಜಿಲ್ಲೆಯದು. ಇಷ್ಟು ಆಪ್ತ ದನಿ ಬೇರೆ. ನಾನೇಕೆ ಈ ನಂಬರ್ ಸೇವ್ ಮಾಡಿಕೊಂಡಿಲ್ಲ ಎಂದುಕೊಳ್ಳುತ್ತಲೇ, “ಯಾರು” ಎಂದೆ.

“ನಾನಯ್ಯ, ರವಿ ಬೆಳಗೆರೆ ” ನನಗ್ಗೊತ್ತು. ನೀನೆಲ್ಲಿ ನನ್ನ ನಂಬರ್ ಇಟ್ಕೊಳ್ತಿ? ಅದಿರ್ಲಿ…, ಎಲ್ಲದೀ ಈಗ?”
ಹೆಸರು ಕೇಳುತ್ತಲೇ, ನಾನು ಹಗುರಾಗಿ ಹೋಗಿದ್ದೆ. ತಕ್ಷಣ, ಸರ್… ಅಂದೆನೋ, ಅಣ್ಣಾ.. ಎಂದೆನೋ ಆ ಆಶ್ಚರ್ಯ ದ ಉದ್ಗಾರ ನನ್ನಲ್ಲಿ ನೆನಪನ್ನೂ ಉಳಿಸಿಲ್ಲ. ಆದರೆ “ಇಲ್ಲೇ ಬೆಂಗಳೂರಲ್ಲೇ ಅದೀನಿ” ಅಂದದಷ್ಟೇ, “ಏ..ಕಳ್ಳಾ, ಬಾರಯ್ಯ, ಇಲ್ಲಿಗೆ” ಎಂಬ ಪ್ರೀತಿ.

ನಾನು ಏನು ಹೇಳಬೇಕೆಂದು ತೋಚದೇ ಏನೇನೋ ಗುಯ್ ಗುಟ್ಟುತ್ತಿದ್ದಂತೆ….”ಏ..ಏನೂ ಹೇಳ್ಬೇಡ. ಬರ್ತೀಯಾ, ಇಲ್ಲಾ, ಹೊತ್ಹಾಕ್ಕೆಂಡ್ ಬರ್ಲ್ಯಾ” ಎಂದೇ ಬಿಟ್ಟರು. “ಸರಿ, ಬರ್ತೀನಿ” ಅಂತೇನೋ ಅಂದೆ. ಆದರೆ ಅವರ ವಿಳಾಸವೇ ಗೊತ್ತಿರಲಿಲ್ಲ. ಕೇಳಿಯೇ ಬಿಟ್ಟೆ. ವಿಚಿತ್ರವಾಗಿ ನಕ್ಕು, ಹೇಳಿದರು. ಹೋದೆ, ಸೀದಾ ಅಲ್ಲಿಗೆ.

ಗೇಟಿನಲ್ಲಿ ಸೆಕ್ಯುರಿಟಿ ಯವನು ಹೆಸರೇನು, ಯಾರನ್ನು ಕಾಣಬೇಕು ಅಂತಾ ಇನ್ನೂ ಕೇಳ್ತಿದ್ದಂಗೆ, ಅವನಿಗೆ ಒಳಗಿನಿಂದ ಫೋನ್ ಬಂತು. “ಬಿಡಯ್ಯಾ ಅವನಿಗೆ ಒಳಗೆ” ಎಂದಿರಬಹುದು ಬಹುಶಃ.” ” ಹೋಗಿ” ಅಂದ. ಒಳ ಬಂದೆ. ಅಲ್ಲಿ, ಎಲ್ಲಿ ಹೋಗುವುದೆಂದು ತೋಚದೆ, ಅತ್ತಿತ್ತಾ ನೋಡುತ್ತಾ ನಿಂತಿದ್ದಂತೆ….”ಇಲ್ಲೇ…ಇದ್ದೀನಿ ಬಾರಯ್ಯಾ” ಎಂದು ಜೋರಾಗಿ ಕರೆದ ಸದ್ದಿಗೆ, ಬರೆವಣಿಗೆಗೆ ಬಾಗಿದ್ದ ತಲೆಗಳೆಲ್ಲಾ ಒಮ್ಮೆಗೆ ಎದ್ದು ನಿಂತು ನನ್ನತ್ತಾ..ಹೊರಳಿದವು. ರವಿ, ಬೆಳಗೆರೆ, ತಮ್ಮ ಕೋಣೆ ಬಿಟ್ಟು ಹೊರಗಿನ ಕೆಲಸಗಾರರ ನಡುವೆ ಕುಳಿತಿದ್ದರು. ನಗುತ್ತಾ ಹೋಗಿ ಕೈ ಕುಲುಕಿದೆ.

“ಬಾರಪ್ಪಾ, ದೊರೆ” ಎಂದು ಕೈ ಕುಲುಕುತ್ತಾ, ಅಲ್ಲಿರುವ ಎಲ್ಲರಿಗೂ ಪರಿಚಯಿಸಿ ಕೊಡುವ ಧಾಟಿಯಲ್ಲಿ, “ಇವನಿದ್ದಾನಲ್ಲ, ಇವನ ಹೆಸರು ಪೀರ್ ಬಾಷ. ನಮ್ಮ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯವನು. ಕವಿ, ಹೋರಾಟಗಾರ. ಭಾಳಾ ಭಾಳಾ ಬುದ್ಧೀವಂತ…..” ನಾನು, ಇದು ಪ್ರೀತಿಯೋ, ವ್ಯಂಗವೋ ಎಂದು ಗೊಂದಲಕ್ಕೀಡಾದವನಂತೆ, ಅಡ್ಡ ಬಾಯಿ ಹಾಕಿ ತಡೆದೆ.

“ಹೇಗಿದ್ದಾನಯ್ಯಾ, ನಿಮ್ಮ ಎಂ.ಪಿ.ಪ್ರಕಾಶ, ನೀನೇನು, ಎಲ್ಲಾ ಬಿಟ್ಟು ಆತಗೂ ತಡವಿಕೊಂಡು ಬಿಟ್ಟೀಯಲ್ಲಾ…” ಎಂದು ಮಾತು ಶುರುವಿಟ್ಟುಕೊಂಡರು. ಪ್ರಕಾಶರ ವಿರುದ್ಧ ನಮ್ಮೂರಿನಲ್ಲಿ ನಾನು ಎದುರು ಹಚ್ಚಿಕೊಂಡ ಹೋರಾಟವನ್ನು ಗಮನಿಸಿದಂತೆನಿಸಿತ್ತು.

ಅವತ್ತು ಅದೂ, ಇದೂ ಎಂದು ಏನೇನು ಮಾತಾಡಿದೆವೋ ತಾಸೊಂದೂವರೆತಾಸು. ನೆನಪಿನಲ್ಲಿರುವುದು ಕೆಲವೇ ಮಾತುಗಳು. “ಗೊತ್ತಿಲ್ಲೇನು ನಿನಗೆ. ಎರಡನೆ ಹೆಂಡತೀನಾ ಮಾಡಿಕೊಂಡೆ…ಹೆ, ಅದ್ಭುತ ಹೆಣ್ಣು ಮಗಳು.. ಎಂದೆಲ್ಲಾ ಸಾಗಿ, ತನ್ನ ಬರೆವಣಿಗೆ, ದುಡಿಮೆ, ಶಾಲೆ ಕಟ್ಟಿದ್ದು, ಮಕ್ಕಳ ಪ್ರೀತಿ…ಇತ್ಯಾದಿ.

ಆಗ ಗೊತ್ತಾಯಿತು ನನಗೆ, ಇವರು ನನ್ನನ್ನು ಕರೆದದ್ದೇಕೆಂದು.

“ದೇವರು ಮನುಷ್ಯರಾದ ದಿನ” ನನ್ನ ಕವನ ಸಂಕಲನ, ಪ್ರಕಟವಾದ ಕೆಲವೇ ದಿನಗಳಲ್ಲಿ ಅದು ಹೇಗೋ ಅವರ ಕೈ ತಲುಪಿತ್ತು. ಅವರು ನನ್ನ ಕವಿತೆಗಳ ಬಗ್ಗೆ ಹೇಳುವುದೇನೂ ಇರಲಿಲ್ಲ. ಆದರೆ ಆ ಸಂಕಲನದಲ್ಲಿ ನಾನು ಬರೆದುಕೊಂಡಿದ್ದ ಮಾತುಗಳಲ್ಲಿನ ಒಂದು ವಿಷಯ ಅವರ ಮನಸ್ಸಿಗೆ ನಾಟಿತ್ತು. ಸಣ್ಣ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡ ನನ್ನ ತಂಗಿ, ಹಾಲು ಕುಡಿವ ಹಸುಗೂಸಿನೊಂದಿಗೆ ಮೂವರು ಹೆಣ್ಣು ಮಕ್ಕಳನ್ನೂ ಒಳಗೊಂಡಂತೆ ತನ್ನ ಐದು ಮಕ್ಕಳನ್ನು ಸಾಕಿ ಸಲಹುವ ಗೋಳನ್ನು ಉಲ್ಲೇಖಿಸಿ ಆಕೆಗೆ ಆ ಕೃತಿಯನ್ನು ಅರ್ಪಿಸಿದ್ದು ಅವರ ಮನಸ್ಸಿನಲ್ಲುಳಿದಿತ್ತು.

ರವಿ ಬೆಳೆಗೆರೆ ಅವತ್ತು, “ಪೀರ್ ಬಾಷ. ನೀನು ಏನೂ ಯೋಚನೆ ಮಾಡಬ್ಯಾಡ. ಆ ಮಕ್ಕಳನ್ನ ಓದಿಸೋ ಪೂರ್ತೀ ಜವಾಬ್ದಾರಿ ನನಗ ಬಿಡು. ತೀರಾ ಸಣ್ಣ ಮಕ್ಕಳು ಬೇಕಾದ್ರೆ, ತಾಯಿ ಜೊತೆ ಇರಲಿ. ಹೈಯರ್ ಪ್ರೈಮರಿ, ಹೈಸ್ಕೂಲು ಓದ್ತಿರೋರನ್ನ ನೀನು ನನ್ನ ಪ್ರಾರ್ಥನಾ ಸ್ಕೂಲಿಗೆ ಹಾಕೋದಾದ್ರೆ..ಅವರು ಇಲ್ಲೇ ಇದ್ದುಕೊಂಡು, ಓದಲಿ”

ನನಗೆ ತಕ್ಷಣಕ್ಕೆ ಏನು ಹೇಳಬೇಕೋ ತೋಚದಂತಾಗಿತ್ತು. ಅವರ ಪ್ರೀತಿ ಕಾಳಜಿಗೆ ಥ್ಯಾಂಕ್ಸ್ ಹೇಳಿದೆನಷ್ಟೇ. “ಊರಿಗೆ ಹೋಗಿ ಹೇಳ್ತೀನಿ” ಅಂತಾ ಬಂದು ಏನನ್ನೂ ಹೇಳದೇ ಉಳಿದೆ. ಇವತ್ತು ಅವರು ಹೋಗಿಯೇ ಬಿಟ್ಟರು.

ಅವತ್ತು ಅವರು ಲೋಕಾಭಿರಾಮವಾಗಿ ಮಾತಾಡುತ್ತಾ, ನನ್ನನ್ನು ತಮಾಷೆಯ ಶೈಲಿಯಲ್ಲಿ ತಡವಿದ್ದು ಮಾತ್ರ ಎಂದೂ ಮರೆಯಲಾರೆ. ಆ ಮಾತುಗಳ ನಡುವೆ ಅವರು;
“ನೀನು ಹಂದೀ ಮಾಂಸ ತಿನ್ತೀ ಏನೋ” ಅಂದಿದ್ರು. ನಾನು ” ಇಲ್ಲ ” ಅಂದಿದ್ದಕ್ಕೆ, ನೀನ್ಯಾ ಸೀಮೆ ಕಮ್ಯೂನಿಸ್ಟನಯ್ಯಾ? ಎನ್ನುವ ದನಿಯಲ್ಲೇ ಇನ್ನೊಂದನ್ನು ಹೇಳುವವರಂತೆ “ನೋಡೋ, ನಾನು ಹುಟ್ಟಾ ಬ್ರಾಹ್ಮಣ, ನಾನು ತಿಂತೀನಿ,” ಎಂದು ನನ್ನನ್ನು ಮೀಟಿದ್ದರು.

ಕೊನೆಗೆ, ನಂಗೊತ್ತಯ್ಯಾ, ನೀನು ನನ್ನನ್ನ ಒಪ್ಪಲ್ಲಾ, ಹಂಗಂತ್ಲೇ ನನ್ನ ಪೇಪರ್ರಿಗೆ ಬರಿಯಾದಿಲ್ಲ, ಚೆಂದದೀಯಲ್ಲಾ,…ಅನ್ನುತ್ತಾ ಕೊನೆಗೆ ” ನೋಡು, ನೀನಾಗಿ ಕಳಿಸಿಕೊಟ್ರೆ ಆ ಮಕ್ಕಳನ್ನ ಓದಿಸಿ, ದೊಡ್ಡವರನ್ನು ಮಾಡೋ ಜವಾಬ್ದಾರಿ ನಾನು ನೋಡ್ಕಂತೀನಿ, ನಿನ್ನಿಷ್ಟ” ಅಂದರು. ಅವರಿಗೆ ಅವೇ ಕೆಲ ನಿಮಿಷಗಳಲ್ಲಿಯೇ ಅರ್ಥವಾಗಿ ಹೋಗಿತ್ತು, ನಾನು ಮಕ್ಕಳನ್ನು ಅವರಲ್ಲೆ ಕಳಿಸುವುದಿಲ್ಲವೆಂದು.

ಪ್ರೀತಿಯ ರವಿ ಬೆಳಗೆರೆ, ನನ್ನ ಜಿಲ್ಲೆಯವರು. ಅಣ್ಣನೆಂಬಷ್ಟು ಆಪ್ತ ದನಿ ಸಂಬಂಧವನ್ನು ಇಟ್ಟುಕೊಂಡಿದ್ದವರು. ಖಯಾಲಿಯ ಜೀವನದ ನಡುವೆಯೂ ಅವರಿಗಿದ್ದ ಕಾಳಜಿಯ ಕರುಳೊಂದಿತ್ತು ಎಂಬುದನ್ನು ನಾನು ಮರೆಯಲಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version