ಅಂತರಂಗ
ಕನ್ನಡಿ ಎದುರು ಜೊತೆಯಾಗಿ ನಿಂತ ಗಳಿಗೆ ನೆನೆದು..!
- ಕೆ.ಪಿ. ಸುರೇಶ್
‘ಬರಹ ಮೋಹಕ ‘ ಎಂದಾಗ ಲೇಖಕನೊಬ್ಬ ಬೆಚ್ಚಿ ಬೀಳಬೇಕು. ಮೋಹಕ ಬರವಣಿಗೆ ಎಂದರೆ ಓದುಗನನ್ನು ಹಿಡಿದಿಡಲು ಸುಳ್ಳುಗಳನ್ನು ಪೋಣಿಸುವ ಚಡಪಡಿಕೆ. ಸತ್ಯದಿಂದ ಇಷ್ಟಿಷ್ಟೇ ದೂರವಾಗುವ ನಡಿಗೆ ಅದು. ಯೇಟ್ಸ್ ತನ್ನ Second Coming ಕವನದಲ್ಲಿ ಸುತ್ತುತ್ತಿರುವ ಡೇಗೆಯ ರೂಪಕವೊಂದನ್ನು ಕೊಡುತ್ತಾನೆ.
ಗಿಡುಗ ಒಂದು ಕೇಂದ್ರವನ್ನು ಧೇನಿಸುತ್ತಾ ವೃತ್ತಾಕಾರವಾಗಿ ಚಲಿಸುತ್ತಾ ವೃತ್ತವನ್ನು ಹಿಗ್ಗಲಿಸುತ್ತಾ ಹಾರುತ್ತದೆ. ಆದರೆ ಯಾವುದೋ ಒಂದು ಕ್ಷಣ ತನ್ನ -ಆ ಕ್ಷಣದ ಬಿಂದುವನ್ನು ಕೇಂದ್ರವೆಂದು ಬಗೆದು ಅದರ ಸುತ್ತ ಸುತ್ತುತ್ತಾ ಹೊಸ ವೃತ್ತ ಸೃಷ್ಟಿಸುತ್ತದೆ. ಈ ಹೊಸ ವೃತ್ತ ಹಳೆ ವೃತ್ತವನ್ನು ಆಗಾಗ್ಗ ಛೇದಿಸುತ್ತಿರುತ್ತದೆ. ಹಳೆಯ ಪರಿಚಿತ ಲೋಕ!! ಆಗ ಅದಕ್ಕೊಂದು ತೃಪ್ತಿಯೂ; ಕೇಂದ್ರದಿಂದ ದೂರ ಸರಿದಿಲ್ಲ ಎಂಬ ಭರವಸೆಯೂ ಇರುತ್ತದೆ. ತನಗೆ ತಾನೇ ಕೊಡುವ ಧೈರ್ಯ ಅದು!
ಇದೆಲ್ಲಾ ನೆನಪಾಗಿದ್ದು ಇವತ್ತು ರವಿ ಬೆಳೆಗೆರೆ ಎಂಬ ರೂಪಕ ತೀರಿಕೊಂಡ ಎಂಬ ಸುದ್ದಿ ನೋಡಿದಾಗ.
ಯಾಕೆ ಮನುಷ್ಯನಿಗೆ ತಾನು ಗೆದ್ದಿದ್ದನ್ನು ಸದಾ ಪೋಷಿಸಬೇಕು ಎಂಬ ಆಕಾಂಕ್ಷೆ ಹುಟ್ಟುತ್ತದೆ? ಒಂದು ಪೆನ್ನು ತೋರಿಸಿ ಯಃಕಶ್ಚಿತ್ ಹತ್ತು ರೂಪಾಯಿ ಪೆನ್ನು ಕೋಟಿ ರೂಪಾಯಿ ದುಡಿಯುತ್ತೆ ಎಂದು ರವಿ ಹೇಳಿದ್ದ ಎಂಬ ಕತೆ ಇದೆ.
ಅದು ಪೆನ್ನಲ್ಲ, ತನ್ನ ಹೃದಯ/ ಮೆದುಳು ಒದಗಿಸಿದ ದ್ರವ್ಯ ಎಂಬುದು ಗೊತ್ತಿರಬೇಕು, ರವಿಗೆ ಗೊತ್ತಿತ್ತು.
ತನ್ನ ಕಾಲಕ್ಕೆ ತಕ್ಕಂತ ಅಭಿರುಚಿಯನ್ನು ಗುರುತಿಸಿ ಅದಕ್ಕೆ ತಕ್ಕಂಥಾ ಶೈಲಿ ರೂಢಿಸಿ ಅದರ ಮೂಲಕವೇ ಹೇಳಬೇಕಾದ್ದನ್ನು ಹೇಳುತ್ತೇನೆ, ತೋರಿಸಬೇಕಾದ್ದನ್ನು ತೋರಿಸುತ್ತೇನೆ ಎಂಬ ಗರ್ವ ಲೇಖಕನಿಗಿರುತ್ತದೆ.
ಆದರೆ ಭಾಷೆಯೆಂಬುದು ತನ್ನ ಒಳಪ್ರಜ್ಞೆಯನ್ನೇ ಪುಸಲಾಯಿಸುವ, ಅದನ್ನು ಗಾಣದೆತ್ತಿನಂತೆ ನಿಯಂತ್ರಿಸುವ ಸಾಂಸ್ಕೃತಿಕ ಶಕ್ತಿ ಎಂಬುದು ಗೊತ್ತಿರಬೇಕು. ಈ Tyranny ವಿರುದ್ಧ ಸೆಣೆಸುವುದೇ ಬರಹಗಾರನ ವಿಧಿ. ಒಮ್ಮೆ ಈ ಭಾಷೆಯ ಮೋಹಕ್ಕೆ ಸಿಲುಕಿದವನು ದೆವ್ವ ಒಳ ಹೊಕ್ಕ ಹಾಗೆ ಅದರ ಅದೃಶ್ಯ ನಿಯಂತ್ರಣದಲ್ಲಿರುತ್ತಾನೆ.
ತನ್ನ ವೈಯಕ್ತಿಕ ಸಾಧನೆಗಳೆಂದರೆ ಸಕಲಾತಿ ಭೌತಿಕ ವಸ್ತು ವಿಶೇಷಗಳು ಎಂದು ಭಾವಿಸುವ ಕಾರಣ ಈ ಲೋಕ ಹೆಚ್ಚಿನ ಅಂತಸ್ಸಾಕ್ಷಿಯ ತಂಟೆಯಿಲ್ಲದೇ ಬದುಕಿದೆ! “ಅಷ್ಟಕ್ಕು ಹೆಣ್ಣೆಂದರೆ ಮೊಲೆ ಯೋನಿ ಇರುವ ಜೀವಿ ಅಷ್ಟೇ ಅಲ್ಲ, ಭೂಮಿ, ಧನ, ಕೀರ್ತಿ, ಅಧಿಕಾರ ಎಲ್ಲವೂ ಸ್ತ್ರೀ ನಮ್ಮಲ್ಲಿ” ಅಂತ ನನ್ನ ದೊಡ್ಡಪ್ಪ ಹೇಳಿದ್ದರು.
ತನಗಿರುವ ಶಕ್ತಿ ಪ್ರತಿಭೆ ಒಂದು ದೊಡ್ಡ ಲೋಕ ಕಾರಣಕ್ಕಾಗಿ ವ್ಯಯಿಸುವ ಇರಾದೆ ಮನುಷ್ಯನಿಗಿದ್ದರೆ ಆತನ ಅತೃಪ್ತಿ ಲೋಕವನ್ನೂ, ಲೋಕದ ಸಂವೇದನೆಯನ್ನೂ ಬದಲಾಯಿಸಲು ಬದ್ಧವಾಗಿರುತ್ತದೆ. ಇದನ್ನು ಜನಪರ ಹೋರಾಟ ಅಂತ ಕರೆಯಿರಿ, ಬದುಕನ್ನು ಹಸನಾಗಿಸುವತ್ತ ಅಳಿಲ ಸೇವೆ ಎಂದು ಕರೆಯಿರಿ, ವ್ಯವಸ್ಥೆಯ ವಿರುದ್ಧದ ಹೋರಾಟ ಎಂದು ಕರೆಯಿರಿ –ಅಡ್ಡಿಯಿಲ್ಲ.
ಆದರೆ ಮೂಲತಃ ಇದು ನವೀಕರಿಸಿಕೊಳ್ಳುತ್ತಾ ಲೋಕವನ್ನೂ ಬದಲಾಯಿಸುವ ಬಗೆ. ರವಿಯನ್ನು ಹಿನ್ನೋಟದಲ್ಲಿ ಗ್ರಹಿಸುವಾಗ ಮೂಲತಃ ರವಿ ನಮ್ಮದೇIntellectual Degenerationನ ಕನ್ನಡಿ ಅನ್ನಿಸುತ್ತಿತ್ತು. ಹೇಳಬೇಕಾದ ಸಂದರ್ಭದಲ್ಲಿ ಹೇಳಬೇಕಾದ್ದನ್ನು ಹೇಳದೇ ಇನ್ನೇನಾದರೂ ಹೇಳಿದರೂ ಅದು ಗಮನ ದೂರ ಸೆಳೆವ ಕಾಯಕದ ಭಾಗವೇ.
ಇದನ್ನು ಇನ್ನು ಎಷ್ಟು ಬರೆದರೂ ಪುನರಾವರ್ತನೆಯೇ. ಲಂಕೇಶ್ ಬಳಿಕ ಕನ್ನಡ ಓದುಗರನ್ನು ಹಿಡಿದಿಟ್ಟ ಸಂಪಾದಕ ಎಂಬ ಮಾತು ರವಿ ಬಗ್ಗೆ ಇದೆ. ಹಕ್ಕಿ ಮರಿಯನ್ನು ಅಂಗೈ ಆಕಾಶಕ್ಕೆ ತೋರಿದಂತೆ ಇಟ್ಟು ಕೊಳ್ಳಬೇಕು, ಮುಷ್ಟೀ ಭೂಮಿ ನೋಡುವ ಬಿಗಿಯಲ್ಲಿ ಇರಬಾರದು ಅಂತ ಮಾತಿದೆ.
(ಇದೆಲ್ಲಾ ಕಂಡಿದ್ದು ರವಿ ಕನ್ನಡಿಯೆದುರು ನಿಂತಾಗ ನಾನೂ ಇಣುಕಿದಾಗ; ನನ್ನ ಬಿಂಬವೂ ಅಲ್ಲಿ ಕಂಡು ಮುಜುಗರವಾಗಿ ಇಷ್ಟೆಲ್ಲಾ ಬರೆದೆ) ನಮ್ಮನ್ನು ಸದಾ ಕೆಣಕುವ ನೆನಪಾಗಿ ಈ ಜೀವಮೋಹಿ, ಸ್ನೇಹ ಜೀವಿ ರವಿ ಇರುತ್ತಾನೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243