ದಿನದ ಸುದ್ದಿ

ಭತ್ತದಲ್ಲಿ ಕಂದು ಜಿಗಿ ಹುಳುವಿನ ನಿರ್ವಹಣೆ

Published

on

ಸುದ್ದಿದಿನ,ದಾವಣಗೆರೆ: ಕಂದು ಜಿಗಿ ಹುಳು ಹೆಸರೇ ಸೂಚಿಸುವಂತೆ ಕಂದು ಬಣ್ಣದ ಬೆನ್ನು ಭಾಗ ಬಿಳಿ ರೆಕ್ಕೆಗಳನ್ನು ಹೊಂದಿರುವ ಒಂದು ಚಿಕ್ಕ ಕೀಟವಾಗಿದ್ದು, ಇದು ಭತ್ತದ ಬೆಳೆಯಲ್ಲಿ ನೀರಿನ ಮಟ್ಟದಿಂದ ಸ್ವಲ್ಪ ಮೇಲಕ್ಕೆ ಸಸ್ಯಗಳ ಬುಡದಲ್ಲಿ ರಸಹೀರುವುದರಿಂದ ಎಲೆಗಳು ಕಂದು ಬಣ್ಣಕ್ಕೆ ತಿರುಗುತ್ತವೆ.

ಹಾನಿಯ ತೀವ್ರತೆ ಹೆಚ್ಚಾದಾಗ ಬೆಳೆಯಲ್ಲಿ ಅಲ್ಲಲ್ಲಿ ವೃತ್ತಾಕಾರದಲ್ಲಿ ಸುಟ್ಟ ಹಾಗೆ ಕಾಣುವ ಪಟ್ಟಿಗಳು ಕಾಣುತ್ತವೆ. ಕೀಟದ ಹಾವಳಿಯ ತೀವ್ರತೆ ಇಳುವರಿ ಮೇಲೆ ಪರಿಣಾಮ ಬೀರುತ್ತದೆ. ಹಾಗೂ ಉಷ್ಣಯುಕ್ತ ತೇವಾಂಶ, ಆದ್ರ್ರತೆಯಿಂದ ಕೂಡಿದ ವಾತಾವರಣ, ಒತ್ತೊತ್ತಾಗಿ ನಾಟಿಯಾದ ಗದ್ದೆ ಹಾಗೂ ಯೂರಿಯಾ ಹೆಚ್ಚಾಗಿ ಬಳಕೆಯಾಗಿರುವ ಕಡೆಗಳಲ್ಲಿ ಈ ಕೀಟದ ಹಾವಳಿ ಹೆಚ್ಚಾಗಿರುತ್ತದೆ.

ಇವುಗಳ ಸ್ವಾಭಾವಿಕ ಶತ್ರುಗಳಾದ ಜೇಡ, ಗುಲಗಂಜಿ ಹುಳು ಹೆಚ್ಚಾಗಿರುವ ಕಡೆ ಅವುಗಳಿಂದಲೇ ಇವುಗಳ ಸಂಖ್ಯೆ ನಿಯಂತ್ರಣದಲ್ಲಿರುತ್ತದೆ. ಹಾಗೂ ಅನಾವಶ್ಯಕ ಹಾಗೂ ಸತತ ಪೀಡೆನಾಶಕಗಳ ಬಳಕೆ ಈ ಸ್ವಾಭಾವಿಕ ಶತ್ರುಗಳನ್ನು ಕೊಲ್ಲುವುದರಿಂದ ಕಂದುಜಿಗಿ ಹುಳುಗಳ ಸಂಖ್ಯೆ ಹೆಚ್ಚಾಗುತ್ತದೆ. ಅತಿ ಕಡಿಮೆ ಸಮಯದಲ್ಲಿ ತೀವ್ರಗತಿಯಲ್ಲಿ ಬೆಳವಣಿಗೆ ಹೊಂದುವುದರಿಂದ ಆಗಾಗ್ಗೆ ಸ್ವಾಭಾವಿಕ ಶತ್ರುಗಳು ಹಾಗೂ ಕಂದುಜಿಗಿ ಹುಳುಗಳನ್ನು ವೀಕ್ಷಿಸುತ್ತಿರಬೇಕು.

ನಿರ್ವಹಣಾ ಕ್ರಮಗಳು

ಒಂದು ತೆಂಡೆಗೆ ಒಂದು ಅಥವಾ ಎರಡು ಕಂದುಜಿಗಿ ಹುಳುಗಳಿದ್ದು, ಸ್ವಾಭಾವಿಕ ಶತ್ರುಗಳ ಸಂಖ್ಯೆ ಅವುಗಳಿಗಿಂತ ಕಡಿಮೆ ಇದ್ದಲ್ಲಿ ತಕ್ಷಣವೆ ನಿರ್ವಹಣೆ ಕೈಗೊಳ್ಳಬೇಕು. ಗದ್ದೆಯಲ್ಲಿನ ನೀರು ಬಸಿದು ತೆಗೆದು ಸಸಿಗಳನ್ನು ಗಾಳಿಯಾಡುವಂತೆ ಅಲ್ಲಲ್ಲಿ ಓರೆ ಮಾಡಬೇಕು. ಸಾರಜನಕಯುಕ್ತ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ತಕ್ಷಣ ನಿಲ್ಲಿಸಬೇಕು. ಹಾಗೂ ವಾರಕ್ಕೊಮ್ಮೆ ನೀರು ಹಾಯಿಸಿ ತೇವಾಂಶ ನಿರ್ವಹಣೆ ಮಾಡಬೇಕು.

ಅನಾವಶ್ಯಕ ಕೀಟನಾಶಕಗಳ ಸಿಂಪರಣೆ ಮಾಡಬಾರದು ಹಾಗೂ ಬೇವು ಆಧಾರಿತ ಕೀಟನಾಶಕಗಳನ್ನು ಸಿಂಪಡಿಸಬೇಕು 3.5 ಮಿ.ಲೀ. ಅಜಾಡಿರೆಕ್ಟಿನ್ , 1.5 ಮಿ.ಲೀ. ಕ್ಲೋರೋಪೈರಿಫಾಸ್, 20% ಇ.ಸಿ., 0.5 ಮಿ.ಲೀ. ಇಮಿಡಕ್ಲೋಪ್ರಿಡ್, 17.5 ಎಸ್.ಎಲ್. ಇವುಗಳಲ್ಲಿ ಯಾವುದಾರೊಂದನ್ನು 1 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಕಾಳು ಕಟ್ಟಿದ ನಂತರ ಕಂದು ಜಿಗಿ ಹುಳು ಕಾಣಿಸಿಕೊಂಡಲ್ಲಿ ಇಳವರಿ ಮೇಲೆ ಪರಿಣಾಮ ಬೀರುವುದಿಲ್ಲವಾದ ಕಾರಣ ಕೀಟನಾಶಕಗಳನ್ನು ಸಿಂಪಡಿಸುವ ಅವಶ್ಯಕತೆಯಿರುವುದಿಲ್ಲವೆಂದು ಜಂಟಿ ಕೃಷಿ ನಿರ್ದೇಶಕರಾದ ಶ್ರೀನಿವಾಸ್ ಚಿಂತಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version