ಸಿನಿ ಸುದ್ದಿ
ಭೀಮ ಪರಂಬರೈ ಹಾಗೂ ಕಬಿಲನ್ ರಂಜಿತ್..!
- ಬಸವರಾಜು ಕಹಳೆ
“Float like a butterfly, sting like a bee”
– Muhammad Ali
“ಗಾಯಗೊಂಡಿದ್ದು ನಿನ್ನ ಮೈಯಷ್ಟೇ, ನಿನ್ನ ಮನಸ್ಸಲ್ಲ.”
“ಇಲ್ಲಿ ನಮ್ಮಂಥವರಿಗೆ ಅವಕಾಶ ಸುಲಭವಾಗಿ ಬರುವುದಿಲ್ಲ. ಈ ಆಟ ನಮ್ಮದು. ಎದುರು ಬರುವವನ ಚಡ್ಡಿ ಒದ್ದೆಯಾಗಬೇಕು. ಮುನ್ನುಗು ಕಬಿಲನ್ ಈ ಕಾಲ ನಮ್ಮದು”
ಇಂಥದ್ದೊಂದು ಡೈಲಾಗ್ ಕಿವಿಗೆ ಬೀಳುತ್ತಿರುವಾಗಲೇ ಸೀನ್ ಮಧ್ಯೆ ಬಾಬಾ ಸಾಹೇಬರ ಭಾವಚಿತ್ರ ಎದ್ದು ಕಾಣುತ್ತದೆ. ಹೀಗೆ ಸಿನಿಮಾದ ಉದ್ಧಕ್ಕೂ ಆಗೊಮ್ಮೆ ಈಗೊಮ್ಮೆ ಬುದ್ಧ, ಭೀಮರು ಎದ್ದು ಕಾಣುತ್ತಾರೆ.
ಕೊಳಗೇರಿಯ ಗುಡಿಸಲುಗಳ ಮಧ್ಯೆ ಬುದ್ಧನ ವಿಗ್ರಹದ ಪಕ್ಕದಲ್ಲೇ ಬಾಕ್ಸಿಂಗ್ ಪ್ರಾಕ್ಟೀಸ್ ಮಾಡುವ ಸನ್ನಿವೇಶ ವಿಶಿಷ್ಟ ಪ್ರತಿಮೆಯಂತೆ ಕಾಣುತ್ತದೆ. ನವ ವಧು ವರರ ಕೈಗೆ ಉಡುಗೊರೆಯಾಗಿ ಬುದ್ಧ, ಭೀಮರ ಫೋಟೋ ಕೊಡುವ ದೃಶ್ಯ ಎದೆಗೂಡಲ್ಲಿ ಸರಪಟಾಕಿ ಹಚ್ಚುತ್ತದೆ. ದ್ರಾವಿಡ ಸ್ವಾಭಿಮಾನದ ಕಪ್ಪು ಪತಾಕೆಯನ್ನು ಬಿಳಿ ಮುಗಿಲಿನಲ್ಲಿ ಹಾರಿಸಿದ ಪೆರಿಯಾರ್ ಕಂಡಾಗಲೂ ಹುಚ್ಚೆದ್ದು ಕುಣಿಯುವ ಉತ್ಸಾಹ ಮೂಡುತ್ತದೆ
ಅಣ್ಣ ಪಾ.ರಂಜಿತ್ ಸಿನಿಮಾ ಅನ್ನೋ ಬಾಕ್ಸಿಂಗ್ ರಿಂಗ್ನಲ್ಲಿ ಎದುರಾಳಿಗೆ ತಿಕ ಮಕ ನೋಡದೇ ಯಕ್ಕಾಮಕ್ಕಾ ಗುದ್ದಿ ಕೆಡವಿ ಭೀಮ ಪರಂಪರೆಯ ತಾಕತ್ತು ಎಂಥದ್ದು ಅನ್ನೋದನ್ನ ತೋರಿಸಿದ್ದಾರೆ. ಸರ್ಪಟ್ಟ ಪರಂಬರೈ ಸಿನಿಮಾ ನನ್ನ ಕಣ್ಣಿಗೆ ಒಂದೇ ಗುಕ್ಕಿನಲ್ಲಿ ಕಾಣಿಸಿದ್ದು ಹೀಗೆ. ಇಲ್ಲಿ ನನಗೆ ಕಂಡಿದ್ದು ಸರ್ಪಟ್ಟ ಅನ್ನೋ ನಾಲ್ಕು ಪಟ್ಟದ ಕತ್ತಿಗಳ ಕಥೆಯಲ್ಲ. ವರ್ಣಾಶ್ರಮದ ನಾಲ್ಕು ವರ್ಗಗಳ ಪೈಕಿ ಕೊನೆಯ ಶೂದ್ರ ಪರಂಪರೆ ಗೆದ್ದ, ಗೆಲ್ಲುತ್ತಿರುವ, ಗೆಲ್ಲಬೇಕಿರುವ ಕಥೆಯಂತೆ ಕಾಣುತ್ತದೆ.
ಕಬಿಲನ್ (ಆರ್ಯ) ನನಗೆ ಬರೀ ಪಾತ್ರದಂತೆ ಕಾಣುವುದಿಲ್ಲ. ಜಾತಕ ಕಥೆಗಳು ಹೇಳುವಂತೆ ಬುದ್ಧನ ಮತ್ತೊಂದು ಅವತಾರವೇ ಆದ ಕಪಿಲನೇ ಕಬಿಲನ್ ಅನಿಸುತ್ತದೆ. ಇಬ್ಬರೂ ನಿರೀಶ್ವರವಾದವನ್ನೇ ಸಾರಿದ್ದವರು. ಸಿನಿಮಾದಲ್ಲಿ ಕಬಿಲನ್ ಸಿದ್ಧಾರ್ಥನಂತೆಯೂ ಕಾಣುತ್ತಾನೆ. ಅಣ್ಣ ಪಾ.ರಂಜಿತ್ ಎಲ್ಲಾ ಸಿನಿಮಾಗೂ ಹಾಡುಗಳನ್ನು ಬರೆದುಕೊಟ್ಟ ಕವಿ ಕಬಿಲನ್ ಪ್ರೇರಣೆಯಿಂದ ಹುಟ್ಟಿದ ವ್ಯಕ್ತಿತ್ವದಂತೆ ಕಾಣುತ್ತದೆ. ಆರ್ಯನನ್ನು ಮೊದಲು ನೋಡಿದ್ದು ಆ್ಯಟ್ಲಿಯ ರಾಜರಾಣಿಯಲ್ಲೇ. ಆ ಬಳಿಕ ಮದರಾಸಿಪಟ್ಟಿನಂ ನೋಡಿದ್ದೇವೆ. ಈ ಎರಡೂ ಸಿನಿಮಾಗಳಿಗಿಂತಲೂ ಕಬಿಲನ್ ಆಗಿ ಜೀವ ತುಂಬುವ ಕೆಲಸ ಮಾಡಿದ್ದಾನೆ ಆರ್ಯ.
ಪಶುಪತಿ ರಂಗನ್ ವಾತಿಯರ್, ಬೀಡಿ ತಾತ, ವೆಂಬುಲಿ, ಡ್ಯಾಡಿ, ಡ್ಯಾನ್ಸಿಂಗ್ ರೋಸಿ ಈ ಎಲ್ಲಾ ಪಾತ್ರಗಳಿಗಿಂತಲೂ ಹೆಚ್ಚು ನನ್ನನ್ನು ಆಕರ್ಷಿಸಿದ್ದು ಎರಡೇ ಎರಡು ಪಾತ್ರ. ಆ ಪಾತ್ರಗಳೇ ಮರಿಯಮ್ಮ ಹಾಗೂ ಬಾಕ್ಯಮ್ಮ. ವಿಶೇಷ ಅಂದ್ರೆ 60 ಸೆಕೆಂಡ್ ಕಾಲ ಬಂದು ಹೋಗುವ ನಮ್ಮ ಕನ್ನಡಿಗ ಕಿಶೋರ್ಗಿಂತಲೂ ಮರಿಯಮ್ಮ ಹಾಗೂ ಭಾಕ್ಯಮ್ಮ ಪಾತ್ರಗಳು ಈ ಸರ್ಪಟ್ಟ ಪರಂಪರೆಯನ್ನು ಎಳೆದೊಯ್ದ ಸ್ವಾಭಿಮಾನದ ಸೀರೆಯುಟ್ಟ ಕುಸ್ತಿ ಪಟುಗಳಂತೆ ಕಾಣುತ್ತಾರೆ.
ಒಬ್ಬಳು ಪುಟ್ಟ ಮಗನೊಂದಿಗೆ ಗಂಡನನ್ನು ಉಳಿಸಿಕೊಳ್ಳೋದಕ್ಕೆ ಸಾಹಸಪಡುವ ಹೆಣ್ಣು ಹುಲಿಯಂತೆ ಕಾಣುತ್ತಾಳೆ. ಮತ್ತೊಬ್ಬಳು ಕುಡಿದು ಮಲಗಿದ ಗಂಡನನ್ನು ಕಾಪಾಡೋದಕ್ಕೆ ಹಸುಗೂಸಿನೊಂದಿಗೆ ಬಗೆದು ಹಾಕುವ ಬಾಣಂತಿ ಹುಲಿಯಂತೆ ಗೆಬರುತ್ತಾಳೆ, ಅಬ್ಬರಿಸುತ್ತಾಳೆ. ರಂಜಿತ್ ಅಣ್ಣನ ಸಿನಿಮಾಗಳಲ್ಲಿ ಇಂಥಾ ಪವರ್ಫುಲ್ ಪಾತ್ರಗಳು ಪ್ರತೀ ಸಿನಿಮಾದಲ್ಲೂ ನೋಡಬಹುದು. ಕಬಾಲಿಯ ಕುಮುದವಲ್ಲಿ, ಕಾಲಾನ ಸೆಲ್ವಿ, ಜರೀನಾರಿಗಿಂತಲೂ ಪವರ್ಫುಲ್ ಪಾತ್ರಗಳು ಮರಿಯಮ್ಮ ಹಾಗೂ ಬಾಕ್ಯಮ್ಮ. ಕಮ್ಮನೆಯ ಕಪ್ಪು ಸಂಸ್ಕೃತಿಯ ಸಣ್ಣ ತುಣುಕಿನಂತೆ ದುಷಾರ ವಿಜಯನ್ ಮರಿಯಮ್ಮನಾಗಿ ಕಾಣುತ್ತಾಳೆ.
“ಅವಕಾಶ ನಮಗಾಗಿ ಬರೋದಿಲ್ಲ. ಅವಕಾಶವನ್ನು ನಾವೇ ಹುಡುಕುತ್ತಾ ಹೋಗಬೇಕು. ಅದನ್ನು ಮನಸ್ಸಿನಲ್ಲಿ ಇಟ್ಟುಕೋ ಗೆಲುವು ನಿನ್ನದೇ. ಹೋಗಪ್ಪಾ ಹೋಗು” ಎನ್ನುವಾಗ ಬೀಡಿ ತಾತನ ಎದುರಿಗೆ ನಿಂತ ಕಬಿಲನ್ ಮಧ್ಯೆ ಮಹಾಸಮುದ್ರ ರಣಕೇಕೆ ಹಾಕುತ್ತಿರುತ್ತದೆ. ಕಡುಗತ್ತಲಿನಲ್ಲಿ ಟೈಟಲ್ ಕಾರ್ಡ್ನಲ್ಲಿ ಓಡುತ್ತಾ ಸಾಗುವ ನೆತ್ತರುಂಡ ಅಕ್ಷರಗಳು. ಅಲ್ಲಲ್ಲಿ ಕತ್ತಲ ಸೀರೆಯುಡಿಸಿ ತೆಗೆದ ಸೀನ್ಗಳು ಮತ್ತೊಮ್ಮೆ ಸರ್ಪಟ್ಟ ಪರಂಪರೆಯನ್ನು ನೋಡಬೇಕಿನಿಸುತ್ತದೆ.
My films are an extension of my ideology ಎನ್ನುವ ಪಾ. ರಂಜಿತ್ ಆಡಿದ ಮಾತಿನ ಪ್ರತೀ ಅಕ್ಷರ ಒಂದೊಂದು ಸೀನ್ನಲ್ಲಿ ಕಾಣುತ್ತದೆ. ಇಲ್ಲಿ ಐಡಿಯಾಲಜಿ ಅನ್ನೋ ದೊಡ್ಡ ಶಬ್ಧ ಅರ್ಥವಾಗದ ಮಂತ್ರದಂತೆ ಕೇಳಿಸೋದೂ ಇಲ್ಲ. ಕಾಣಿಸೋದೂ ಇಲ್ಲ. ಬದಲಿಗೆ ತಮಟೆಯ ಏಟಿನಂತೆ, ಜೇನ್ನೊಣದ ಕುಟುಕಿನಂತೆ ಅನುಭವಿಸಬಹುದು. ಮೊಲದ ಬಾಡು, ದನದ ಬಾಡು ತಿಂದಷ್ಟೇ ಖುಷಿಯಾಗುತ್ತದೆ.
ಬ್ರಿಟಿಷರು ಕಲಿಸಿ ಹೋದ ಬಾಕ್ಸಿಂಗ್ ನಲ್ಲಿ ಹೆಚ್ಚುಗಾರಿಕೆಯ ಪರಂಪರೆಗಾಗಿ ನಡೆಯುವ ಕಾದಾಟದ ಕಥೆ ಎಂದು ಸುಲಭಕ್ಕೆ ಹೇಳಬಹುದಾದ ಸಿನಿಮಾವನ್ನು ಎದೆಗಣ್ಣಿನಿಂದ ನೋಡಬೇಕಷ್ಟೇ. ರಂಗನ್ ವಾತಿಯರ್ ಹೇಳುವಂತೆ, “ನಿಮಗಿಂತ ಗಂಡ್ಸು ಇಲ್ಲಿ ಯಾರೂ ಇಲ್ಲ ಅನ್ನೋದನ್ನ ಸದಾ ತಲೆಯಲ್ಲಿ ಇಟ್ಟುಕೊಂಡಿರಬೇಕು”. ಎಂದಿನಂತೆ ಕ್ಯಾಮರಾ ವರ್ಕ್, ಮ್ಯೂಸಿಕ್ ಚೆನ್ನಾಗಿದೆ. ಕಿಶೋರ್ ಅವರನ್ನು ಇನ್ನೂ ಚೆನ್ನಾಗಿ ಬಳಸಿಕೊಳ್ಳಬಹುದಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243