ದಿನದ ಸುದ್ದಿ
ಪರಿಶಿಷ್ಟ ಸಮುದಾಯಗಳ ಮೇಲೆ ಜಾತಿ ದೌರ್ಜನ್ಯ ಪ್ರಕರಣ; ಇಲಾಖೆಗಳ ನಡುವೆ ಸಮನ್ವಯದಿಂದ ಕಾರ್ಯನಿರ್ವಹಿಸಿ : ಅಧಿಕಾರಿಗಳಿಗೆ ಸಿಎಂ ಸೂಚನೆ
ಸುದ್ದಿದಿನ,ಬೆಂಗಳೂರು : ಪರಿಶಿಷ್ಟ ಸಮುದಾಯಗಳ ಮೇಲೆ ನಡೆಯುವ ಜಾತಿ ದೌರ್ಜನ್ಯ ಪ್ರಕರಣಗಳನ್ನು ತಗ್ಗಿಸುವುದರ ಜೊತೆಗೆ ದಾಖಲಾದ ಪ್ರಕರಣಗಳನ್ನು ಸಮರ್ಥವಾಗಿ ನಿರ್ವಹಿಸಲು ಪೊಲೀಸ್, ಕಾನೂನು, ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ ರಾಜ್ಯಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಪೊಲೀಸ್ ಅಧಿಕಾರಿಗಳು ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಎರಡು ತಿಂಗಳೊಳಗಾಗಿ ಚಾರ್ಜ್‌ಶೀಟ್ ಹಾಕುವ ಬಗ್ಗೆ ಹಿರಿಯ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಇವುಗಳನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಶಿಕ್ಷೆ ಕೊಡಿಸಲು ಎಲ್ಲ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ಕರೆಯಲಾಗುವುದು ಎಂದು ಹೇಳಿದ ಮುಖ್ಯಮಂತ್ರಿ, ಕಾನೂನು ಬಾಹಿರವಾಗಿ ನಡೆಯುವ ದೌರ್ಜನ್ಯಗಳನ್ನು ತಡೆಯಲು ಸರ್ಕಾರ ಬದ್ಧವಾಗಿದೆ. ದೌರ್ಜನ್ಯ ತಡೆಯಲು ಚುನಾಯಿತ ಜನಪ್ರತಿನಿಧಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಮತ್ತು 6 ತಿಂಗಳಿಗೊಮ್ಮೆ ಸಭೆ ಕರೆಯುವಂತೆ ಇದೇ ವೇಳೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243