ಅಂತರಂಗ

ಪಕ್ಕೆಲುಬು – ಕಪ್ಪೆಲುಬು : ಸ್ತ್ರೀಲಿಂಗ – ಪುಲ್ಲಿಂಗ

Published

on

ಸಾಂದರ್ಭಿಕ ಚಿತ್ರ
  • ವಿವೇಕಾನಂದ. ಹೆಚ್.ಕೆ.

ಕ್ಕೆಲುಬು – ಕಪ್ಪೆಲುಬು : ಸ್ತ್ರೀಲಿಂಗ – ಪುಲ್ಲಿಂಗ’,         ಮುಂತಾದ ಕೆಲವು ಪದಗಳನ್ನು ಶಾಲೆಯ ಪುಟ್ಟ ಮಕ್ಕಳು ತಪ್ಪಾಗಿ ಉಚ್ಚರಿಸುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ – ನೋಡಿ ನಗು ಬಂದಿತು. ಅವರ ಮುಗ್ದತೆ ಖುಷಿ ನೀಡಿತು. ಮಕ್ಕಳ ಉಚ್ಚಾರಣೆಯ ತಪ್ಪುಗಳೇ ಒಂದು ನಿಷ್ಕಲ್ಮಶ ನಗುವನ್ನು ಮನದಲ್ಲಿ ಮೂಡಿಸಿತು.ಮಕ್ಕಳು ಈ ರೀತಿಯ ತಪ್ಪು ಮಾಡಿದರೆ ಅದೇ ಚೆಂದ. ನನ್ನಂತ ಕತ್ತೆಗಳು ತಪ್ಪು ಮಾಡಿದರೆ ಅದು ಅಸಹ್ಯ.

ಆದರೆ ಆ ಮಗುವಿನ ತಪ್ಪನ್ನು ಮಹಾ ಅಪರಾಧ ಎಂಬಂತೆ ಬಿಂಬಿಸುವುದು, ತುಂಬಾ ದಡ್ಡ ಎಂದು ಭಾವಿಸುವುದು, ತಪ್ಪಾಗಿ ಉಚ್ಚರಿಸಿದ್ದಕ್ಕೆ ಹೊಡೆಯುವುದು, ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಹರಿಯಬಿಟ್ಟು ಮಗುವನ್ನು ಮೂದಲಿಸಿ ಅದರ ಆತ್ಮವಿಶ್ವಾಸ ಕುಂದಿಸುವುದು ಅಕ್ಷಮ್ಯ ಅಪರಾಧ ಮತ್ತು ಅಮಾನವೀಯ ವರ್ತನೆ. ಅದರಲ್ಲೂ ಮಕ್ಕಳಿಗೆ ತಪ್ಪನ್ನು ತಿದ್ದಿ ಮತ್ತೆ ಮತ್ತೆ ತಾಳ್ಮೆಯಿಂದ ಕಲಿಸಬೇಕಾದ ಶಿಕ್ಷಕರೇ ಹೀಗೆ ಅಪಹಾಸ್ಯ ಮಾಡಿದರೆ ಅದು ದೊಡ್ಡ ತಪ್ಪಾಗುತ್ತದೆ.

ಮಕ್ಕಳು ಬಿಡಿ ದೊಡ್ಡವರ ತಪ್ಪುಗಳೇ ಪ್ರತಿ ದಿನವೂ ನಡೆಯುತ್ತಲೇ ಇರುತ್ತದೆ. ನಾನಾಗ ಕಿರುತೆರೆಯ ಧಾರಾವಾಹಿ, ಕಿರುಚಿತ್ರ, ಸಾಕ್ಷ್ಯಚಿತ್ರ, ಜಾಹೀರಾತು ಚಿತ್ರಗಳನ್ನು ನಿರಂತರವಾಗಿ ಮಾಡುತ್ತಿದ್ದೆ. ಅನೇಕ ಜನ ಪರಿಚಯದ ಡಾಕ್ಟರುಗಳು, ಇಂಜಿನಿಯರುಗಳು, ಶಿಕ್ಷಕರು, ಸರ್ಕಾರಿ ಅಧಿಕಾರಿಗಳು ‌ಸೇರಿ ಕೆಲವರು ನಟಿಸುವ ಅವಕಾಶಗಳನ್ನು ಕೇಳುತ್ತಿದ್ದರು. ಆಗ ಅವರಿಗೆ ಕೆಲವು ಚಿಕ್ಕ ಪಾತ್ರಗಳನ್ನು ಕೊಡುತ್ತಿದ್ದೆವು.

ಅಂತಹ ವಿದ್ಯಾವಂತರುಗಳೇ ನಾಲ್ಕು ಐದು ವಾಕ್ಯಗಳನ್ನು ಒಟ್ಟಿಗೆ ಹೇಳಲು 30/40 ಟೇಕ್ ಗಳನ್ನು ತೆಗೆದುಕೊಳ್ಳುತ್ತಿದ್ದರು. ಆಗ ಧಾರವಾಹಿಗಳಿಗೆ ಡಬ್ಬಿಂಗ್ ಮಾಡುವುದು ಸ್ವಲ್ಪ ಹೆಚ್ಚು ದುಬಾರಿ ಆಗಿದ್ದುದರಿಂದ ನೇರ ಧ್ವನಿಮುದ್ರಣಕ್ಕೆ ಪ್ರಾಮುಖ್ಯತೆ ಕೊಡುತ್ತಿದ್ದೆವು.

ಒಬ್ಬ ವ್ಯಕ್ತಿಯಂತು ” ನಮ್ಮ ಅಪ್ಪನಿಗೆ ಮೂಗಿನ ತುದಿಯಲ್ಲಿ ಕೋಪ ಇರುತ್ತದೆ ” ಎಂದು ಹೇಳಲು ಐದು ಗಂಟೆಯಷ್ಟು ಸಮಯ ವ್ಯರ್ಥ ಮಾಡಿದರು. ರಿಹರ್ಸಲ್ ಸಮಯದಲ್ಲಿ ಸರಿಯಾಗಿ ಹೇಳುತ್ತಿದ್ದ ಅವರು ಟೇಕ್ ಸಮಯದಲ್ಲಿ ಲೈಟ್ಸ್ – ಸೌಂಡ್ – ಕ್ಯಾಮರಾ – ಆಕ್ಷನ್ ಎಂದು ಹೇಳುತ್ತಿದ್ದಂತೆ ” ಅಪ್ಪನ ತುದಿಯಲ್ಲಿ…. ಅಪ್ಪನ ತುದಿಯಲ್ಲಿ…. ” ಎಂದು ತೊದಲುತ್ತಿದ್ದರು. ಆಗ ಸಹಜವಾಗಿ ಅಲ್ಲಿದ್ದ ತಾಂತ್ರಿಕ ಸಿಬ್ಬಂದಿ ನಗುತ್ತಿದ್ದರು. ಇದು ಆ ವ್ಯಕ್ತಿಯ ಮಾನಸಿಕ ಒತ್ತಡ ಮತ್ತಷ್ಟು ಹೆಚ್ಚಿಸಿ ಮತ್ತೂ ತಪ್ಪು ಹೇಳುತ್ತಿದ್ದರು.

ಈಗಲೂ ಎಷ್ಟೋ ಜನರಿಗೆ ಅ ಕಾರ ಹ ಕಾರ, ಸ ಕಾರ ಶ ಕಾರ, ಸಂಕ್ರಾಂತಿ ಶಂಕ್ರಾಂತಿ, ಪುದಿನ ಸೊಪ್ಪು ಕುದಿನ ಸೊಪ್ಪು ಮುಂತಾದ ಅನೇಕ ದಿನನಿತ್ಯದ ತಪ್ಪುಗಳು ನಮ್ಮ ನಡುವೆಯೇ ಆಗುತ್ತಿರುತ್ತದೆ. ಆದ್ದರಿಂದ ಆ ಪುಟ್ಟ ಮಗುವಿನ ಮುಗ್ಧ ಕಪ್ಪೆಲುಬು ಉಚ್ಚಾರಣೆಯನ್ನು ಒಂದು ಮುಗ್ಧ ನಗುವಿನಿಂದ ಸ್ವೀಕರಿಸಿಬೇಕೆ ಹೊರತು ಅದನ್ನು ತಪ್ಪು ಎಂದು ಭಾವಿಸಿದಲ್ಲಿ ನಾವು ಅಮಾನವೀಯ ಮನಸ್ಥಿತಿಯ ವ್ಯಕ್ತಿಗಳು ಎಂದೇ ನಮ್ಮನ್ನು ಕರೆದುಕೊಳ್ಳಬೇಕು.

ಕನ್ನಡದಲ್ಲಿ ಸದಾ ಬರೆಯುವ ನಾನು ಹೊಗಳು ಭಟರು ಎಂಬುದನ್ನು ಭಟ್ಟರು ಎಂದೂ, ಆಗುಹೋಗುಗಳನ್ನು ಹಾಗುಹೋಗುಗಳು ಎಂದೂ ಬರೆಯುತ್ತಿದ್ದೆ. ಗೆಳೆಯರು ತಪ್ಪು ತಿದ್ದಿದಾಗ ನನಗೂ ನನ್ನ ಬಗ್ಗೆ ನಗು ಬಂತು.ಯಾವಾಗಲೂ ಸಹಜ ತಪ್ಪುಗಳು ಸ್ವೀಕಾರಾರ್ಹ,
ಉದ್ದೇಶಪೂರ್ವಕ ತಪ್ಪುಗಳು ಶಿಕ್ಷಾರ್ಹ. ಒಂದು ವಾಸ್ತವ ಉದಾಹರಣೆಯೊಂದಿಗೆ ಇದನ್ನು ಮುಗಿಸುತ್ತಿದ್ದೇನೆ.

ಒಂದು ವೇಳೆ ನಾವು ದಾರಿಯಲ್ಲಿ ಹೋಗುವಾಗ ನಮ್ಮ ಎದುರಿಗೆ ಯಾರಾದರೂ ಎಡವಿ ಬಿದ್ದಾಗ ನಮಗೆ ಅರಿವಿಲ್ಲದೆ ನಮ್ಮಲ್ಲಿ ಒಂದು ನಗು ಮೂಡಿದರೆ ಅದು ಸಹಜ. ಆದರೆ ಕೆಲವು ಕ್ಷಣದ ನಂತರವೂ ಆ ವ್ಯಕ್ತಿಯನ್ನು ನೋಡಿ ನಾವು ಗಹಗಹಿಸಿ ನಗುತ್ತಿದ್ದರೆ ಅದು ಕ್ಷಮಿಸಲು ಸಾಧ್ಯವಾಗದ ತಪ್ಪು ಮತ್ತು ಅಮಾನವೀಯ ಹಾಗು ವಿಕೃತ ಮನಸ್ಸು ಅದನ್ನು ಬದಲಾಯಿಸಿಕೊಳ್ಳಬೇಕು.

ಹಾಗೆಯೇ, ಹತ್ತು ವರ್ಷಕ್ಕೂ ಕಡಿಮೆ ವಯಸ್ಸಿನ ಮಗು ಎಡವಿ ಬಿದ್ದವರನ್ನು ನೋಡಿ ಜೋರಾಗಿ ನಕ್ಕರೂ ಅದು ದೊಡ್ಡ ತಪ್ಪಲ್ಲ. ಕ್ಷಮೆಗೆ ಅರ್ಹ. ಆದರೆ ಆ ಸಮಯದಲ್ಲಿ ಮಕ್ಕಳಿಗೆ ಒಂದು ಪ್ರೀತಿ ಪೂರ್ವಕ ತಿಳಿವಳಿಕೆ ನೀಡಬೇಕು. ” ನೀನು ಬಿದ್ದಾಗ ಯಾರಾದರೂ ನಕ್ಕರೆ ನಿನಗೆ ಕೋಪ ಬರುವುದಿಲ್ಲವೇ ಆದ್ದರಿಂದ ನಗಬಾರದು ” ಎಂದು ಅರ್ಥಮಾಡಿಸಬೇಕು. ಮುಂದೆ ಮಗು ದೊಡ್ಡದಾದ ಮೇಲೆ ನೆನಪಿಸಿಕೊಳ್ಳಬಹುದು.

ಮಕ್ಕಳನ್ನು ಮಕ್ಕಳಂತೆ ನೋಡಿ, ನೀವು ದೊಡ್ಡವರಾಗಿದ್ದರೂ….!

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version