ಅಂತರಂಗ

ಮರೆಯಾದ ಅಪೂರ್ವ ಚಿತ್ರಕಲಾ ಪ್ರತಿಭೆ ‘ಶೋಭಾ ಕರಣಿಕ್’

Published

on

ಶೋಭಾ ಕರಣಿಕ್
  • ಡಾ.ಎನ್.ಕೆ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ

ವರು ಬಿಡಿಸುತ್ತಿದ್ದ ರೇಖೆಗಳು ನಮ್ಮ ದೇಶೀ ಸಂಸ್ಕೃತಿಯ ವಕ್ತಾರಿಕೆಯ ಪಾತ್ರ ನಿರ್ವಹಿಸುತ್ತಿದ್ದವು. ಕನ್ನಡದ್ದೇ ಆದ ಕಲಾತ್ಮಕ ಪರಂಪರೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ್ದ ಅವರ ಚಿತ್ರಗಳು ಜೀವಂತಿಕೆಯ ಗುಣಲಕ್ಷಣದೊಂದಿಗೆ ಕಂಗೊಳಿಸುತ್ತಿದ್ದವು.

ಸಾಂಪ್ರದಾಯಿಕ ಚಿತ್ರಶೈಲಿಯನ್ನು ಆಧುನಿಕ ಅಗತ್ಯಗಳಿಗೆ ತಕ್ಕಂತೆ ಮಣಿಸಿ ಪರಂಪರೆಯೊಳಗೇ ಅಡಗಿದ್ದ ಮೌಲಿಕ ಮಾದರಿಗಳನ್ನು ಮನಗಾಣಿಸುವ ಶ್ರದ್ಧೆಯೊಂದಿಗೇ ಅವರು ಚಿತ್ರವಿನ್ಯಾಸ ರೂಪಿಸುತ್ತಿದ್ದರು. ಇನ್ಸ್ಟಾಗ್ರಾಮ್, ಫೇಸ್‌ಬುಕ್ ಮತ್ತಿತರ ಮಾಧ್ಯಮಗಳ ಮೂಲಕ ತಮ್ಮ ಚಿತ್ರಗಳನ್ನು ಕಾಣಿಸುತ್ತಿದ್ದರು. ಪರಂಪರೆ ಮತ್ತು ವರ್ತಮಾನವನ್ನು ಬೆಸೆದು ಹೊಸ ಬಗೆಯ ಚಿತ್ರಪ್ರಯೋಗಗಳನ್ನು ನಡೆಸುವ ಹುಮ್ಮಸ್ಸಿನೊಂದಿಗೆ ಚಿತ್ರಕಲಾಯಾನ ಮುಂದುವರೆಸಿದ್ದರು. ಅವರ ಹೆಸರು ಶೋಭಾ ಕರಣಿಕ್.

ಇತ್ತೀಚೆಗಷ್ಟೇ ಅವರ ಚಿತ್ರಕಲಾಯಾನ ನಿಂತಿತು. ಅವರ ನಿಧನವು ವಿನೂತನವಾದ ಪ್ರಯೋಗಶೀಲ ಚಿತ್ರಕಲಾ ಸಾಧ್ಯತೆಗಳನ್ನು ತಡೆದು ನಿಲ್ಲಿಸಿತು. ಪುರಾಣದ ಕಥನ ಪ್ರಸಂಗಗಳಲ್ಲಿ ಉಲ್ಲೇಖಿತ ದೇವರು-ದೇವತೆಗಳ ಅಸ್ಮಿತೆ ಮತ್ತು ದೇಸೀ ಸಂಸ್ಕೃತಿಯನ್ನು ಬಿಂಬಿಸುವ ವಿನ್ಯಾಸಗಳನ್ನು ಸಮನ್ವಯಗೊಳಿಸಿ ಚಿತ್ರಕಲೆಗೆ ಹೊಸ ಆಯಾಮ ತಂದುಕೊಟ್ಟ ಪ್ರತಿಭೆಯಾಗಿ ಶೋಭಾ ಕರಣಿಕ್ ಅವರದ್ದು ವಿಶೇಷ ವ್ಯಕ್ತಿತ್ವವಾಗಿತ್ತು. ಮ್ಯೂರಲ್ ಪೇಂಟಿಂಗ್‌ನಲ್ಲಿ ಅವರಿಗಿದ್ದ ಪರಿಣತಿ, ಉತ್ತರ ಕನ್ನಡದ ಕಾವಿ ಕಲೆಯ ಕುರಿತಾದ ವಿಸ್ತೃತ ಜ್ಞಾನವು ಚಿತ್ರಕಲೆಯನ್ನು ಉನ್ನತೀಕರಿಸುವುದಕ್ಕೆ ಅವರಿಗೆ ನೆರವಾಗಿತ್ತು.

ಕಲೆಯ ಜೊತೆಗಿನ ಅನುಸಂಧಾನದ ಕ್ಷಣಗಳು ಅಪೂರ್ವ. ಒಂದು ನಿರ್ದಿಷ್ಟ ನಿರ್ಣಾಯಕ ಸಂದರ್ಭ, ಸಮಯದಲ್ಲಿ ಕಲೆಯೊಂದು ವ್ಯಕ್ತಿತ್ವವನ್ನು ಪ್ರಭಾವಿಸಿ ಸೃಜನಶೀಲತೆಯ ಹಸಿವನ್ನು ನೆಲೆಗೊಳಿಸುವುದಕ್ಕೆ ಪ್ರೇರಣೆಯಾಗುತ್ತದೆ. ಕಲೆಯ ಪ್ರಭಾವ ಎರಡು ಬಗೆಯದ್ದು. ಸಹೃದಯರನ್ನು ತನ್ನ ಕಲಾತ್ಮಕ ಮಾದರಿಗಳಿಂದ ಸೆಳೆದು ಅವರೊಳಗೆ ವಿಶೇಷ ಅನುಭೂತಿ ಧಾರೆ ಎರೆಯುವಂಥದ್ದು ಒಂದು ಬಗೆಯಾದರೆ ಹೀಗೆ ಸೆಳೆದುಕೊಂಡು ಮತ್ತೆ ಮತ್ತೆ ಪ್ರಭಾವಿಸುತ್ತಾ ಸಹೃದಯರನ್ನೇ ಕಲಾವಿದರನ್ನಾಗಿಸುವ ಸಾಧ್ಯತೆ ಮತ್ತೊಂದು ತೆರನಾದದ್ದು.

ಈ ಕಾರಣಕ್ಕಾಗಿಯೇ ಕಲಾತ್ಮಕ ಸಂಭವನೀಯತೆಯು ಅನನ್ಯವೆನ್ನಿಸಿಕೊಂಡಿದೆ. ಇಂಥ ಅನನ್ಯತೆಯೊಂದಿಗೇ ಶೋಭಾ ಕರಣಿಕ್ ಗುರುತಿಸಿಕೊಂಡಿದ್ದರು. ಅವರು ಓದಿದ್ದು ತಾಂತ್ರಿಕ ವಿಜ್ಞಾನ. ಆದರೆ, ಅವರ ನಿಜದ ಪ್ರತಿಭೆ ಅಭಿವ್ಯಕ್ತವಾದದ್ದು ಚಿತ್ರಕಲೆಯ ಮೂಲಕ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರಿಸರದಲ್ಲಿ ಬೆಳೆದ ಶೋಭಾ ಕರಣಿಕ್ ಮೊದಲಿನಿಂದಲೂ ದೇಶೀ ಕಲೆಯ ಕುರಿತು ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡು ಬಂದಿದ್ದರು. ಹೈಸ್ಕೂಲ್ ಓದುತ್ತಿರುವಾಗಲೇ ಕಾವಿಕಲೆಯ ವಿನ್ಯಾಸ ಅವರನ್ನು ಸೆಳೆದಿತ್ತು. ಇವುಗಳನ್ನು ಮತ್ತೆ ಮತ್ತೆ ನೋಡುತ್ತಾ ಹೋದಂತೆಲ್ಲಾ ಕಾವಿ ಕಲೆಯ ಕುರಿತ ಆಕರ್ಷಣೆ ಕಲಿಕೆಯ ಹಂಬಲವಾಗಿ ಮಾರ್ಪಟ್ಟಿತು. ಉತ್ತರ ಕನ್ನಡದ ಟೆಂಪಲ್ ರ‍್ಟ್ ಪ್ರಕಾರದ ಭಾಗವಾಗಿ ಕಾವಿ ಕಲೆಯನ್ನು ಪರಿಚಯಿಸುವ ದೃಷ್ಟಿಯಿಂದ ಅವರು ರಚಿಸಿದ್ದ ತರಹೇವಾರಿ ವಿನ್ಯಾಸಗಳು ವಿವಿಧ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಗಮನ ಸೆಳೆದಿದ್ದವು.

ಕಾವಿ ಕಲೆಯೂ ಸೇರಿದಂತೆ ನಮ್ಮ ಸಾಂಪ್ರದಾಯಿಕ ಕಲೆಗಳು ಈ ಹಿಂದಿನ ಕಾಲದ ತಲೆಮಾರನ್ನಷ್ಟೇ ಪ್ರಭಾವಿಸಿದ್ದಲ್ಲದೇ ನಂತರದ ಹೊಸ ಪೀಳಿಗೆಯನ್ನೂ ಆಕರ್ಷಿಸುವ ಗುಣ ಹೊಂದಿವೆ. ಮೂಲ ಅಂತಃಸತ್ವಕ್ಕೆ ಧಕ್ಕೆಯೊದಗದ ಹಾಗೆ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಈ ಸಾಂಪ್ರದಾಯಿಕ ಚಿತ್ರಕಲಾ ವಿನ್ಯಾಸಗಳನ್ನು ಮರುರೂಪಿಸಬಹುದು. ಹೊಸ ಕಾಲದಲ್ಲಿ ಅವುಗಳ ಮಹತ್ವವನ್ನು ಮನಗಾಣಿಸಬಹುದು ಎಂಬುದು ಅವರ ಆಶಯವಾಗಿತ್ತು.

ಕಲೆಯೊಂದು ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ದಾಟಿಕೊಳ್ಳುವಾಗ ಪಲ್ಲಟಗಳು ಸಹಜ. ಈ ಪಲ್ಲಟಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಇಂತಹ ಕಲೆಗಳಿಗೆ ಹೊಸಕಾಲದಲ್ಲೂ ಜೀವಂತಿಕೆಯನ್ನು ತಂದುಕೊಡುವ ಪ್ರಯತ್ನದ ಅಗತ್ಯವನ್ನು ಮನಗಾಣಿಸುವುದಕ್ಕಾಗಿಯೇ ಶೋಭಾ ಕರಣಿಕ್ ಅವರು ಚಿತ್ರಕಲಾ ರಚನೆಯ ವೈವಿಧ್ಯಮಯ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದರು.

ಅವರ ನಿಧನದಿಂದ ಈ ಪ್ರಯೋಗಶೀಲ ಹೆಜ್ಜೆಗಳು ನಿಂತಂತಾಗಿವೆ. ಆದರೆ, ಅವರು ಪರಂಪರೆ ಮತ್ತು ವರ್ತಮಾನವನ್ನು ಸಮನ್ವಯಗೊಳಿಸಿ ಸಾಬೀತುಪಡಿಸಿದ ಅಪೂರ್ವ ಚಿತ್ರಕಲಾ ಪ್ರಯೋಗಶೀಲತೆಯ ಜೀವಂತಿಕೆ ಹೊಸ ಪೀಳಿಗೆಗೆ ಸದಾ ಸ್ಫೂರ್ತಿಯ ಸೆಲೆಯಾಗಿರುತ್ತದೆ. ಅವರ ಹೆಸರಿನ ಇನಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು ಇಂಥ ಸ್ಫೂರ್ತಿಯ ಪ್ರಭೆಯನ್ನು ದಾಟಿಸುತ್ತಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version