ಅಂತರಂಗ
ಹೇ ‘ಸಿದ್ದಾರ್ಥ’ ನೀನು ಸೋಲನ್ನು ಮೆಟ್ಟಿ ನಿಂತು ಜಯದ ಕೇಕೆ ಹಾಕಿ ವಿಜೃಂಭಿಸಬೇಕಿತ್ತು !
ಸಿದ್ದಾರ್ಥ ಅವರ ಆಪ್ತರಲ್ಲೊಬ್ಬರಾದ ಎಂ.ಎನ್.ಚಂದ್ರೇಗೌಡ ಅವರ ಮನಮಿಡಿಯುವ ಬರಹ ಇದಾಗಿದೆ. ಓದಿ.ಅಭಿಪ್ರಾಯ ತಿಳಿಸಿ.
ಹೇ ಸಿದ್ಧಾರ್ಥ ! ಎಸ್ಎಂಕೆ ಕಣ್ಣಿನಲ್ಲಿ ಜಿನುಗುತ್ತಿದ್ದ ಕಣ್ಣೀರನ್ನು ನೀವು ಗಮನಿಸಿದ್ದರೆ, ಹೀಗೆ ರಣಹೇಡಿಯಂತೆ ಆಳುದ್ದದ ನೀರಿಗೆ ಹಾರಿ ನೀವು ಸಾಯುತ್ತಿರಲಿಲ್ಲ. ಅದು ಅಳಿಯನ ಕಳೆದುಕೊಂಡ ಶೋಕವಲ್ಲ. ಅದು ಮಗನನ್ನು ಕಳೆದುಕೊಂಡ ದು:ಖ. 87 ರ ಆ ಇಳಿ ವಯಸ್ಸಿನಲ್ಲಿ ಅದೆಂಥ ದು:ಖ ಕೊಟ್ಟೆ ಅವರಿಗೆ. ನೀವು ನಿನ್ನಬ್ಬರು ಗಂಡು ಮಕ್ಕಳನ್ನು ಎದೆಮೇಲೆ ಮಲಗಿಸಿಕೊಂಡು ಆಡಿಸಿ ಬೆಳೆಸಿದ್ದರೆ ನೀವು ಇಷ್ಟು ನಿರ್ದಯಿಯಾಗಿ ಅವರನ್ನು ಬಿಟ್ಟು ಹೋಗುತ್ತಿರಲಿಲ್ಲ. ನಿನ್ನ ತಾಯಿಯನ್ನು ನೋಡು. ಅಲ್ಲಿ ಪತಿ ಮರಣಶಯ್ಯೆಯಲ್ಲಿ. ಮಗ ನೀರಿನ ಆಳದಲ್ಲಿ. ಅವರೇನು ತಪ್ಪುಮಾಡಿದ್ದರು ಈ ಶಿಕ್ಷೆ ಅನುಭವಿಸಲು. ಅವರೇನು ರೇಂಜ್ ರೋವರ್ ಕಾರನ್ನು ಕೊಡಿಸಿ ಎಂದು ಕೇಳಿದ್ದರೆ, ಅಥವಾ ನಿನ್ನ 100 ಎಕರೆ ಕಾಫಿ ತೋಟ ಬರೆದುಕೊಡು ಎಂದು ಹಿಂದೆ ಬಿದ್ದಿದ್ದರೆ? ಇಲ್ಲಾ ಸಿದ್ಧಾರ್ಥ, ನಿನ್ನ ಮಕ್ಕಳಿಗೆ ಒಬ್ಬ ಅಪ್ಪ ಬೇಕಾಗಿತ್ತು ಅವರ ಕೈಹಿಡಿದು ನಡೆಸಲು. ಕಾಲು ಮುರಿದುಕೊಂಡು ಮಗ ತೆವಳುತ್ತಾ ಬಿದ್ದದ್ದರೂ ನಿನ್ನ ಅಂಡು ತೊಳೆದು ಸಾಕುತ್ತಿದ್ದರು ನಿನ್ನ ತಾಯಿ. ಅದು ತಾಯಿಗಿರುವ ಮಗನ ಮೇಲಿನ ಮಮತೆ. ತಾಯಿಗೆ ಗಂಡನಿಗಿಂತ ಮಗನ ಮೇಲೆ ಕಕ್ಕುಲತೆ ಜಾಸ್ತಿ ಎಂಬುದನ್ನು ಅರಿಯದಾದೆಯಾ? ನೀವು ನಿನ್ನ ಕಂಪನಿಗಾಗಿ ಅಲ್ಲ, ನಿನ್ನ ಷೇರುಗಳ ಬೆಲೆ ಏರಿಕೆಗಾಗಿ ಅಲ್ಲ, ನಿನ್ನ ಕಾಫಿ ಸಾಮ್ರಾಜ್ಯ ವಿಸ್ತರಿಸುವುದಕ್ಕಾಗಿ ಅಲ್ಲ, ನಿನ್ನ ಮಾವನ ಅಂತಸ್ತು ಹೆಚ್ಚಿಸುವುದಕ್ಕಾಗಿ ಅಲ್ಲ, ನೀವು ನಿನ್ನ ತಾಯಿಗೆ ಒಬ್ಬ ಮಗನಾಗಿ, ನಿನ್ನ ಇಬ್ಬರು ಗಂಡು ಮಕ್ಕಳಿಗೆ ಒಬ್ಬ ತಂದೆಯಾಗಿ ನೀನು ಬದುಕಿರಬೇಕಿತ್ತು.
ನಿಮ್ಮ ಫಿಲಾಸಫಿಯೇನೋ, ನೀವು ಯಾವ ಪುಸ್ತಕ ಓದಿ ಗಟ್ಟಿಗೊಂಡಿದ್ದರೋ ನನಗೆ ಗೊತ್ತಿಲ್ಲ. ಆದರೆ ಬದುಕನ್ನು ಪ್ರೀತಿಸುವ ಸಾಮನ್ಯ ಪರಿಜ್ಞಾನ ಬೆಳೆಸಿಕೊಳ್ಳದೇ ಹೋದರಲ್ಲ ಎಂಬುದೇ ನನ್ನ ದು:ಖ. ನಿಜ ನೀವು 24 ಸಾವಿರ ಕೋಟಿ ಎತ್ತರಕ್ಕೆ ಬೆಳೆದಿದ್ರಿ . ನಿಮ್ಮ ನೆಟ್ವರ್ತ, ಸಾಲ ಮುರಿದು 16 ಸಾವಿರ ಕೋಟಿ ಇರಬಹುದು. ಯಾರಿಗಾಗಿ ಅದನ್ನು ದುಡಿದಿರಿ. ಯಾರಿಗಾಗಿ ಅದನ್ನು ಕೂಡಿಟ್ಟಿರಿ ? ಯಾವುದೇ ತಂದೆ ತನ್ನ ಮಕ್ಕಳ ಭವಿಷ್ಯ ಚೆನ್ನಾಗಿರಲಿ ಎಂದು ಬಯಸುತ್ತಾನೆ ಆನಂತರದ ಸರತಿಯಲ್ಲಿ ತನ್ನ ಹೆಂಡತಿ, ತನ್ನ ತಂದೆ ತಾಯಿ, ಮಾವ ಅತ್ತೆ, ಬಂಧು ಬಳಗ, ತನ್ನ ಸ್ನೇಹಿತರು ಹೀಗೆ ಅವರಿಗಾಗಿ ಏನನ್ನೋ ಮಾಡುತ್ತಾನೆ, ಕೂಡಿಡುತ್ತಾನೆ. ಕೈಎತ್ತಿ ಕೊಡುತ್ತಾನೆ. ತನ್ನನ್ನು ನಂಬಿದವರಿಗಾಗಿ ಏನನ್ನೋ ಮಾಡಬಯಸುತ್ತಾನೆ. ಏಕೆಂದರೆ ಅವರೆಲ್ಲಾ ನಿನಗೆ ಒಳ್ಳೆಯದನ್ನು ಬಯಸುತ್ತಾರೆಂದು. ಆದರೆ ನೀವೆನು ಮಾಡಿದಿರಿ? ಒಬ್ಬ ಯಶಸ್ವಿ ಉದ್ಯಮಿಯಾಗಿ, ತುಂಬಾ ಎತ್ತರಕ್ಕೆ ಏರಿ, ಆ ಪರ್ವತದ ಮೇಲೆ ಒಂಟಿಯಾಗಿ ಬಿಟ್ಟರಾ? ಅಲ್ಲಿ ಏಕಾಂಗಿಯಾಗಿ ಯಾರಲ್ಲೂ ನಿಮ್ಮ ನೋವು, ಆತಂಕ, ತಳಮಳಗಳನ್ನು ಹೇಳಿಕೊಳ್ಳದೇ ಹೋದಿರಾ? ನಿಮ್ಮ ಮನಸ್ಸಿನ ಗೋಡೆಯಿಂದ ಹೊರಬರದೆ ಹೋದಿರಾ?
ಅದೆಂಥದೋ ಐಟಿ ದಾಳಿಯಂತೆ, ಸಿದ್ದಾರ್ಥನ ಬಳಿ 500 ಕೋಟಿ ಬೇನಾಮಿ ಆಸ್ತಿ ಅಥವಾ ಹಣ ಸಿಕ್ಕಿತಂತೆ. ದೊಡ್ಡ ಸುದ್ದಿಯಾಗಿತ್ತು ! ನಿಮ್ಮ ಮನೆ ಮೇಲೆ ಐಟಿ ದಾಳಿ ನಡೆದಾಗ ನನ್ನ ಹಿತೈಷಿ ವಯೋವೃದ್ದ ವಕೀಲರೊಬ್ಬರು ಹೇಳಿದರು ” ಸಿದ್ದಾರ್ಥ ಐಟಿ ಅಧಿಕಾರಿಗಳಿಗೆ ಹೇಳಿದನಂತೆ, 500 ಕೋಟಿಯಲ್ಲಿ 40 % ತೆರಿಗೆ ಮುರಿದುಕೊಂಡು ಉಳಿದಿದ್ದನ್ನು ನನ್ನ ಆದಾಯ ಎಂದು ಘೋಷಿಸಿರಿ ಎಂದು. ಅವರೇನು ಅವನದನ್ನು ಕಿತ್ತುಕೊಳ್ಳುತ್ತಾರ ಎಂದು. ವಿಷಯ ಇಷ್ಟು ಸರಳವಾಗಿರಬೇಕಾದರೆ ನೀವೇಕೆ, ಐಟಿಗೆ ಅಂಜಿದಿರಿ? ಐಟಿಯಲ್ಲಿ ನಿಮ್ಮ ಆರಂಭಿಕ ಅಸೆಸ್ಮೆಂಟ್ ನಂತರ, ಮೇಲ್ಮನವಿ ಟ್ರಿಬ್ಯುನಲ್ಗಳಿವೆ, ಇವುಗಳಿಗಿಂತ ಹೈಕೋಟ, ಸುಪ್ರೀಂಕೋಟರ್್ವರೆಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ನೀವೇನು ಕಡಿಮೆ ಪ್ರಭಾವವುಳ್ಳ ವ್ಯಕ್ತಿಯಾಗಿದ್ದರೆ? ಖಂಡಿತ ಇಲ್ಲಾ. ಹೀಗಿದ್ದರೂ ನೀವು ಐಟಿ ಜನರಿಗೆ ಹೆದರಿ ನದಿಗೆ ಧುಮುಕುತ್ತೀರೆಂದರೆ ನಂಬಲು ಸಾಧ್ಯವಾಗುತ್ತಿಲ್ಲ. ಗರಿಷ್ಠ ಅವರೇನು ಮಾಡಬಹುದಾಗಿತ್ತು? ಟ್ಯಾಕ್ಸ್ ರಿಕವರಿಗಾಗಿ ನಿಮ್ಮ ಆಸ್ತಿಯನ್ನು ಹರಾಜು ಹಾಕಲು ಪ್ರಯತ್ನಿಸಬಹುದಿತ್ತು. ಹಾಗೇನಾದರೂ ಅವರು ಮಾಡಿದ್ದರೆ ಖಂಡಿತ ನಾನು ಹೇಳುತ್ತೀನಿ ಈ ಪ್ರಪಂಚದಲ್ಲಿ ಯಾರೊಬ್ಬರೂ ವೈಟ್ ಮನಿ ತೋರಿಸಿ ನಿಮ್ಮ ಅಗಾಧ ಜಮೀನು ಖರೀದಿಸಲು ಮುಂದೆ ಬರುತ್ತಿರಲಿಲ್ಲ !
ಇಂಡಸ್ಟ್ರಿ ಇಸ್ ಎ ರಿಚ್ಮೆನ್ ಗೇಮ್ ಎನ್ನುತ್ತಾರೆ. ಇದು ನನ್ನಂಥ ಸಾಮಾನ್ಯ ಉದ್ಯಮಿಗಿರುವ ಜ್ಞಾನ. ಯಾವ ಆಯಾಮದಲ್ಲೇ ಹೋದರೂ ಒಬ್ಬ ಕೈಗಾರಿಕೋದ್ಯಮಿ ನಷ್ಟ ಅನುಭವಿಸಲು ಸಾಧ್ಯವಿಲ್ಲ. ಅಷ್ಟು ಸವಲತ್ತು, ಸೌಲಭ್ಯ ಒಬ್ಬ ಕಾಪರ್ೋರೇಟ್ ಕುಳಕ್ಕೆ ಬ್ಯಾಂಕ್ಗಳು ನೀಡುತ್ತವೆ. ನಿಮ್ಮ ಒಂದು ಅಕೌಂಟ್ NPA ಆದರೆ, ಲೋನ್ ರಿಸ್ಟ್ರಕ್ಚರ್ ಮಾಡಲು ಬ್ಯಾಂಕ್ ರೆಡಿ ಇರುತ್ತದೆ. ಅಲ್ಲೂ ಫೇಲ್ ಆದರೆ, ಅಡಿಷನಲ್ ಲೋನ್ ನೀಡುತ್ತದೆ. ಆನಂತರ ಓಟಿಎಸ್ ನೀಡುತ್ತದೆ. ಅದನ್ನು ಪಾವತಿಸಲು ಕಂತು ನೀಡಿ ದಮ್ಮಯ್ಯ ಕೊಡಪ್ಪ ಎನ್ನುತ್ತದೆ. ಅದೂ ಫೇಲ್ ಆದರೆ ತಕ್ಕಮಟ್ಟಿಗೆ ಅಸಲು ಬಡ್ಡಿ ವೇವ್ ಆಫ್, ವ್ರೈಟ್ ಆಫ್ ಮಾಡುತ್ತಾರೆ. ನೀವು ಸೆಕ್ಯೂರಿಟಿ ನೀಡಿರುವ ಆಸ್ತಿಯ ಮೇಲೆ ಕೇಸು ಬಿದ್ದರೆ ಬ್ಯಾಂಕ್ ನೀನು ಕೊಟ್ಟಷ್ಟು ಕೊಡಪ್ಪ ಅಂತ ಅಂಗಲಾಚುತ್ತದೆ. ಇವೆಲ್ಲಾ ಆಗದಿದ್ದರೆ ಈಗ ದಿವಾಳಿ ಎಂದು ಘೋಷಿಸಿ ಬದುಕಿಬಿಡಬಹುದು.
ಹೀಗಿದ್ದರೂ ನಿಶ್ಚಯಿಸಿ ನಿಗದಿತ ಉದ್ದೇಶದಿಂದಲೇ ಅಷ್ಟು ದೂರ ಪ್ರಮಾಣ ಮಾಡಿ ಜೀವ ತೆಗೆದುಕೊಂಡಿದ್ದು ಅಕ್ಷಮ್ಯ. ಇನ್ನು ಯಾರೋ ಬಾಂಬೆ ಫೈನಾಸ್ಸರುಗಳ ಕಿರುಕುಳವಂತೆ. ಸಿದ್ದಾರ್ಥ, ನೀವು ಯಾವ ಸ್ಥಾನದಲ್ಲಿ ಇದ್ದೀರೆಂದು ನಿಮಗೆ ಗೊತ್ತಾಗದೆ ಹೋಯಿತೇ ? ಅವರು ಕ್ರಿಮಿನಲ್ ಮೊಕದ್ದಮೆ ಹುಡುವ ಮುನ್ನವೇ ನಿಮ್ಮದೇ ಕೇಂದ್ರದ Home Minister ರಾಜ್ನಾಥ್ ಸಿಂಗರನ್ನು ಭೇಟಿ ಮಾಡಬಹುದಿತ್ತು. ಈಗ ರಾಜ್ಯ ಸಕರ್ಾರ ನಿಮ್ಮದೇ. ಯಡಿಯೂರಪ್ಪನವರನ್ನು ಭೇಟಿ ಮಾಡಿ after all ಗೊಂಡಾಗಳ ಬೆದರಿಕೆಗಳಿಂದ ರಕ್ಷಣೆ ಕೇಳಬಹುದಾಗಿತ್ತಲ್ಲವೇ? ಹಿಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ನಿಮ್ಮ ನೆರವಿಗೆ ಧಾವಿಸುತ್ತಿರಲಿಲ್ಲವೇ? ನಿಮಗಾಗಿ ನಿಮ್ಮ ಬಳಿ ವಕೀಲರ ಪಡೆ ಇರಲಿಲ್ಲವೇ?, ಹಿತೈಷಿಗಳ ಬಳಗ ಇರಲಿಲ್ಲವೇ? ಕೇವಲ ನಿಮಗೆ ಬೇಕಾಗಿದ್ದು ಟೈಮ್ ಟು ಕ್ಲಿಯರ್ ಯುವರ್ ಡೆಟ್ಸ್ ! ಅದನ್ನು ಪಡೆಯಲು ನೂರಾರು ಮಾರ್ಗಗಳಿದ್ದವು. ಬಹುಷ: ನೀವು ತುಂಬಾ ಎಲ್ಲರಕ್ಕೆ ಬೆಳೆದಿದ್ದರಿಂದ ಕೆಳಗೆ ಇಳಿದು ಟೈಮ್ ಗಳಿಸುವ ವ್ಯವಧಾನ ಇರಲಿಲ್ಲ ಅನಿಸುತ್ತದೆ. ಅದಕ್ಕಾಗಿ ಅವಸರದಲ್ಲಿ ನೀರಿಗೆ ಹಾರಿದರಿ. ಫೇಲ್ಡ್ ಉದ್ಯಮಿ ಎಂದು ನೀವೇ ಘೋಷಿಸಿಕೊಂಡಿರಿ. ಸಿದ್ದಾರ್ಥ ನೀವು ಒಂದೇ ಒಂದು ಸೋಲು, ನಿರಾಸೆ, ಹಿನ್ನಡೆಯನ್ನು ಅರಗಿಸಿಕೊಳ್ಳಲು ವಿಫಲರಾದಿರಿ. ಬಹುಷ: ನೀವು ತುಂಬಾ ಮೇಲೆ ಏರಿ ಒಬ್ಬಂಟಿಯಾಗಿಬಿಟ್ಟಿರಿ. ಸೆಕ್ಸಸ್ ಸೂತ್ರವನ್ನು ಯಾರಿಗೂ ಹಂಚಲು ಹೆದರಿ ಇತರರಿಂದ ಅಂತರ ಕಾಯ್ದುಕೊಂಡಿರಿ. ಅದರ ಪರಿಣಾಮವೇ ಇದು. ನಿಮ್ಮ ಮಕ್ಕಳಿಗೆ, ನಿಮ್ಮ ತಾಯಿಗೆ, ವಯೋವೃದ್ಧ ತಂದೆ, ಮುದ್ಸದ್ದಿ ಎಸ್ಎಂಕೆಗೆ ಈ ಪರಿ ನೋವು ನೀಡಿದ್ದು ಅಕ್ಷಮ್ಯ. ನೀವು ಬದುರಿಬೇಕಿತ್ತು. ಸೋಲನ್ನು ಮೆಟ್ಟಿ ನಂತು ಜಯದ ಕೇಕೆ ಹಾಕಿ ವಿಜೃಂಭಿಸಬೇಕಿತ್ತು ! ಅದಾಗಲಿಲ್ಲ !
ಎಂ.ಎನ್.ಚಂದ್ರೇಗೌಡ
ಪತ್ರಕರ್ತರು
ಸುದ್ದಿದಿನ.ಕಾಂ|ವಾಟ್ಸಾಪ್|9980346243