ಅಂತರಂಗ

ಮನಸೂರೆಗೊಳ್ಳುವ ಮಧುರ ಗಾಯಕಿ ‘ನವ್ಯಾ ಆರ್ ಭಟ್’

Published

on

ನವ್ಯಾ ಅರ್ ಭಟ್

ಮ್ಮೆ ಕೇಳಿದರೆ ಸಾಕು ಮತ್ತೆ ಮತ್ತೆ ಕೇಳಬೇಕಿನಿಸುವ ಆ ಹಾಡಿನ ಧ್ವನಿಗೆ ಯಾರಾದರೂ ತಲೆದೂಗಲೇಬೇಕು, ಮನಸಾರೆ ಮೆಚ್ಚಲೇಬೇಕು, ಮತ್ತೊಮ್ಮೆ ಕೇಳುವ ಮನಸ್ಸು ಮಾಡಲೇಬೇಕು. ಅಂತಹ ಮಧುರ ಇನಿ ದನಿಯ ಈ ಗಾನ ಕೋಗಿಲೆಯ ಬಗ್ಗೆ ನಿಮ್ಮ ಮುಂದೆ ಒಂದಷ್ಟು ಹೇಳಲೇಬೇಕು.

ಪ್ರಕೃತಿಯೇ ವರ

ಕೆಲವರಿಗೆ ಹಾಡುವ ಕಲೆ ಹವ್ಯಾಸವಾದರೆ, ಕೆಲವರಿಗೆ ಅಭ್ಯಾಸದ ಬಲದಿಂದ ಒಲಿಯಬಹುದೇನೋ !? ಕೆಲವರಿಗೆ ಜನ್ಮಗತವಾಗಿ ಬಂದರೂ ಅವರು ಮತ್ತು ಆ ಕಲೆ ಎರಡು ಸಹ ಬೆಳಕಿಗೆ ಬರುವುದು ಅಷ್ಟಕ್ಕಷ್ಟೇ. ಆದರೆ ಕೆಲವೇ ಕೆಲವರಿಗದು ಪ್ರಕೃತಿಯ ವರವಾಗಿ ಲಭಿಸಿರುತ್ತದೆ. ಹಾಗಾಗಿಯೇ ಏನೋ ಅವರು ಸುಮ್ಮನಿರಲು ಪ್ರಯತ್ನ ಪಟ್ಟರೂ ಆ ಕಲೆಯೇ ಅವರ ಬೆನ್ನು ಬಿದ್ದು ಅವರನ್ನು ಬೆಳಕಿಗೆ ತರುತ್ತದೆ. ಅಂತಹ ಅಪರೂಪದ ಸಾಲಿಗೆ ಸೇರುತ್ತಾರೆ ಹರಿಹರದ ನವ್ಯಾ ಆರ್ ಭಟ್. ಅವರ ಪಾಲಿಗೆ ಹಾಡುಗಾರಿಕೆ ಜನ್ಮಗತವೂ ಹಾಗೂ ಪ್ರಕೃತಿಯ ಕೊಡುಗೆಯೂ ಹೌದು.

ಮನೆಯೇ ಸಂಗೀತಾಲಯ

ನವ್ಯಾ ಅವರಿಗೆ ಮನೆಯೇ ಎಲ್ಲಾ. “ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು” ಎಂಬಂತೆ ಅವರೊಳಗಿನ ಆ ಸುಪ್ತ ಕಲೆಯ ಅನಾವರಣಕ್ಕೆ ಮೊಟ್ಟ ಮೊದಲು ಪ್ರೋತ್ಸಾಹಿಸಿ – ಪ್ರೇರಣೆ ನೀಡಿದ್ದು ಅವರ ತಾಯಿ ಶ್ರೀಮತಿ ಉಮಾ ಆರ್ ಭಟ್.
ಹರಿಹರದ ಖಾಸಗಿ ಶಾಲೆಯೊಂದರಲ್ಲಿ ಸಂಗೀತ ಶಿಕ್ಷಕಿಯಾಗಿರುವ ಉಮಾ ಭಟ್ ಅವರು ನುರಿತ ಗಮಕ ಕಲಾವಿದೆಯೂ ಹೌದು. ಹಾಗಾಗಿ ನವ್ಯಾ ಅವರಿಗೆ ಬಾಲ್ಯದಲ್ಲಿ ತಮ್ಮ ತಾಯಿಯವರಿಂದ ಪ್ರಥಮ ಸಂಗೀತ ಸಂಸ್ಕಾರ ಗಮಕ ಕಲೆಯ ಮೂಲಕವೇ ಆರಂಭವಾಯಿತು. ದಾವಣಗೆರೆಯ ಬಾಪೂಜಿ ಹೈಟೆಕ್ ಇನ್‍ಸ್ಟಿಟ್ಯೂಷನ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಬಿ.ಎಸ್ಸಿ ಓದುತ್ತಿರುವ ನವ್ಯಾ ಅವರಿಗೆ ಗಮಕವೆಂದರೆ ಈಗಲೂ ಅದೇ ಪ್ರೀತಿ. ಹಳೆಗನ್ನಡ ಪದ್ಯ ಅಥವಾ ಕಾವ್ಯ ವಾಚನದ ವಿಶಿಷ್ಠ ಶೈಲಿ ಎನಿಸಿರುವ ಗಮಕದಲ್ಲಿ ಹಾಡುವವರ ಸಂಖ್ಯೆ ಪ್ರಸ್ತುತ ದಿನಮಾನಗಳಲ್ಲಿ ವಿರಳವೇ ಸರಿ. ಬಾಲ್ಯದಲ್ಲೇ ದೊರೆತ ಸಂಸ್ಕಾರ, ಆಸಕ್ತಿ, ಅವಿರತ ಅಭ್ಯಾಸ ಹಾಗೂ ಪರಿಶ್ರಮದ ಫಲವಾಗಿ ಈ ವಿರಳ ಹಾಡುಗಾರಿಕೆಯ ಕಲೆಯಲ್ಲಿ ಈಗಾಗಲೇ ಸಾಕಷ್ಟು ನೈಪುಣ್ಯತೆ ಸಾಧಿಸಿದ್ದಾರೆ ನವ್ಯಾ.

ನವ್ಯಾ ಅವರ ತಂದೆ ರವಿ ಭಟ್ ಅವರು ಕೂಡ ಗಾಯಕರು. ಅವರಿಗೆ ಸಿನಿಮಾ ಹಾಡುಗಳನ್ನು ಹಾಡುವುದರಲ್ಲಿ ಅತಿಯಾದ ಆಸಕ್ತಿ. ಜೊತೆಗೆ ತಬಲ, ಕಾಂಗೋ ಮತ್ತು ಕೀ ಬೋರ್ಡ್ ಕೂಡ ನುಡಿಸುತ್ತಾರೆ. ಬಿಡುವು ದೊರೆತಾಗಲೆಲ್ಲಾ ತಮ್ಮ ವಿದ್ಯೆಯನ್ನು ಮಗಳಿಗೂ ಧಾರೆ ಎರೆಯುತ್ತಿದ್ದಾರೆ. ಇಷ್ಟೇ ಅಲ್ಲದೆ, ನವ್ಯಾ ಅವರ ಅಕ್ಕ ಕಾವ್ಯ ಶುಕ್ಲಾ ಸಹ ಸುಗಮ ಸಂಗೀತ ಗಾಯಕಿ. ನಿಜಕ್ಕೂ ನವ್ಯಾ ಅವರದು ಎಂತಹ ಅದೃಷ್ಟ … ! ಸಂಗೀತ ತರಬೇತಿಗಾಗಿ ಇತರೆಯವರಂತೆ ಎಲ್ಲೆಲ್ಲೋ ಅಲೆದಾಡುವ ಪಜೀತಿ ಅನುಭವಿಸದೆ ಮನೆಯಲಿಯೇ ನಾನಾ ಪ್ರಕಾರಗಳಲ್ಲಿ ಪರಿಣಿತಿ ಪಡೆಯುವ ಅವಕಾಶ ನವ್ಯಾ ಅವರಿಗೆ ಲಭಿಸಿದೆ.ನವ್ಯಾ ಅವರ ಕುಟುಂಬದ ಮತ್ತೊಂದು ವಿಶೇಷವನ್ನು ಇಲ್ಲಿ ಪ್ರಸ್ತಾಪಿಸಲೇಬೇಕಿದೆ. ಅವರ 73 ವರ್ಷದ ಅಜ್ಜಿ ( ತಂದೆಯ ತಾಯಿ ) ಶ್ರೀಮತಿ ಹೆಚ್.ರತ್ನಾವತಿಯವರ ಬತ್ತದ ಉತ್ಸಾಹ ನೋಡಿದರೆ ಅಚ್ಚರಿ ಎನಿಸುತ್ತದೆ. ತಮ್ಮ ಈ ಇಳಿ ವಯಸ್ಸಲ್ಲೂ ಸುಮ್ಮನೆ ಕೂರದೆ, ವಿಶ್ರಾಂತಿಯನ್ನು ಬಯಸದೆ ಒಂದಿಲ್ಲ ಒಂದು ಚಟುವಟಿಕೆಯಲ್ಲಿ ಮಗ್ನರಾಗಿರುತ್ತಾರೆ. ವಿಶೇಷವಾಗಿ ಹಪ್ಪಳ, ಸಂಡಿಗೆ, ಪೂಜೆಗಾಗಿ ಹತ್ತಿಯ ಬತ್ತಿ ಮಾಡುವ ಕಾರ್ಯದಲ್ಲಿ ತೊಡಗುವ ಅವರ ಕ್ರಿಯಾಶೀಲತೆ ನಿಜಕ್ಕೂ ಮಾದರಿಯೇ ಸರಿ. ಅವರ ಮತ್ತೊಬ್ಬ ಅಜ್ಜಿ ( ತಾಯಿಯ ತಾಯಿ ) ಶ್ರೀಮತಿ ಚಂದ್ರಲಾನಾಯಕ್ ಅವರು ಭಾಮಿನಿ ಮತ್ತು ವಾರ್ಧಕ ಷಟ್ಪದಿಯಲ್ಲಿ ಹರಿಹರೇಶ್ವರ ಮಹಿಮೆ ಹಾಗೂ ಶ್ರೀ ಚಂದ್ರಲಾ ಪರಮೇಶ್ವರಿ ಎಂಬ ಎರಡು ಕೃತಿಗಳನ್ನು ರಚಿಸಿದ್ದಾರೆ. ಅಕ್ಷರಶಃ ನವ್ಯಾ ಅವರ ಮನೆಯು ಸಾಹಿತ್ಯ ಮತ್ತು ಸಂಗೀತ ಲೋಕಗಳೆರಡರ ಸಂಗಮವಾಗಿದೆ.

ಸಂಗೀತ ಪಯಣ

ಬಾಲ್ಯದಿಂದಲೇ ಆರಂಭವಾದ ತಮ್ಮ ಸಂಗೀತ ಪಯಣದಲ್ಲಿ ನವ್ಯಾ ಅವರು ಈಗಾಗಲೇ ಸಾಕಷ್ಟು ಪಯಣಿಸಿದ್ದಾರೆ. ಹರಿಹರದ ಹಲವು ದೇವಸ್ಥಾನಗಳಲ್ಲಿ ಭಜನೆ, ಕೀರ್ತನೆ, ದೇವರನಾಮ ಹಾಡುವ ಮೂಲಕ ಬಾಲ್ಯದಲ್ಲೇ ಆರಂಭವಾದ ಅವರ ಹಾಡುಗಾರಿಕೆ ನಿರಂತರ ಸಾಗುತ್ತಿದೆ. ಶಿವಮೊಗ್ಗ, ಮಂಗಳೂರು ಸೇರಿದಂತೆ ರಾಜ್ಯದ ಮೂಲೆ – ಮೂಲೆಗಳಲ್ಲೂ ಸಹ ಅವರ ಸಂಗೀತ ಕಛೇರಿಯ ನಿನಾದ ಮೊಳಗಿದೆ. 2016 ರಲ್ಲಿ ಮಂತ್ರಾಲಯದ ಗುರು ರಾಘವೇಂದ್ರ ದೇವಾಲಯದಲ್ಲಿ ಅವರು ನೀಡಿದ ಗಮಕ ಕಾರ್ಯಕ್ರಮ ಸಂಗೀತ ಕ್ಷೇತ್ರದಲ್ಲಿ ಅವರನ್ನು ಮೇಲ್ಪಂಕ್ತಿಯಲ್ಲಿ ಗುರುತಿಸುವಂತೆ ಮಾಡಿದೆ. ಈ ಟಿವಿಯ ಎದೆ ತುಂಬಿ ಹಾಡುವೆನು, ಕಸ್ತೂರಿ ಟಿವಿಯ ಸಪ್ತಸ್ವರ, ಸುವರ್ಣ ಟಿವಿಯ ಲಿಟ್ಲ್ ಸ್ಟಾರ್ ಸಿಂಗರ್, ಉದಯ ಟಿವಿಯ ಸಂಗೀತ ಮಹಾಯುದ್ಧ ಹಾಗೂ ಹಾಡು ಬಾ ಕೋಗಿಲೆ, ಝಿ ಟಿವಿಯ ಸರಿಗಮಪ ಲಿಟ್ಲ್ ಚಾಂಪ್ಸ್, ಹರಿಹರದಲ್ಲಿ ಆಯೋಜಿಲಾಗಿದ್ದ ಚಂದನ ಟಿವಿಯ ಮಧುರ ಮಧುರವೀ ಮಂಜುಳಗಾನ ಹಾಗೂ ದಾವಣಗೆರೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಹತ್ತು ಹಲವು ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ನವ್ಯಾ ಅವರು ಹೋದೆಡೆಯಲ್ಲೆಲ್ಲಾ ಮಧುರ ಗಾಯಕಿ ಎಂದೇ ಗುರುತಿಸಿಕೊಂಡಿದ್ದಾರೆ. ಒಮ್ಮೆ ಅವರ ಧ್ವನಿಯನ್ನು ಕೇಳಿದವರು ಅವರ ಹೆಸರನ್ನು ಇಂದಿಗೂ ಮರೆತಿಲ್ಲ.

ಪ್ರಶಸ್ತಿ ಪುರಸ್ಕಾರಗಳ ಗರಿ

ಲೆಕ್ಕಕ್ಕಾಗಿ ಎಣಿಸುತ್ತಾ ಕೂತರೆ ಬಾಲ್ಯದಿಂದಲೂ ಹಾಡುತ್ತಿರುವ ಈ ಹಾಡು ಹಕ್ಕಿಗೆ ಮಾಧ್ಯಮಗಳಿಂದ ಹಾಗೂ ಸಾರ್ವಜನಿಕ ವಲಯಗಳಿಂದ ಸಂದಿರುವ ಪ್ರಶಸ್ತಿ ಪುರಸ್ಕಾರಗಳ ಸಂಖ್ಯೆ ಸಾವಿರಾರು ಆಗಬಹುದೇನೋ. ಆದರೆ ತನಗೆ ಈವರೆಗೆ ಕೊಡಮಾಡಿರುವ ಬಿರುದು, ಸನ್ಮಾನಗಳ ಬಗ್ಗೆ ತನ್ನೊಳಗೆ ಅಹಮಿಕೆ ತಲೆದೋರದಂತೆ ಸರಳತನ ರೂಡಿಸಿಕೊಂಡಿರುವ ನವ್ಯಾ ಅವರು ಹೇಳುತ್ತಾರೆ – “ಈಗ್ಗೆ ಸುಮಾರು 10 ವರ್ಷಗಳ ಹಿಂದೆ ಶ್ರೀಯುತ ಅಮರನಾರಾಯಣ್ ಅವರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ, ಜಿಲ್ಲಾಡಳಿತ ಮತ್ತು ಕನ್ನಡ – ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮವೊಂದನ್ನು ಅವರೊಂದಿಗೆ ತಾನೂ ಕೂಡ ಉದ್ಘಾಟನೆ ಮಾಡಿದ್ದು ಹಾಗೂ ಖಾಸಗಿ ಸಂಸ್ಥೆಯೊಂದರಿಂದ ಪಡೆದ – ಗಾನ ವಿಶಾರದೆ ಎಂಬ ಬಿರುದು ತಾನು ಪಡೆದ ಎಲ್ಲಾ ಪುರಸ್ಕಾರಗಳಿಗಿಂತ ಅತೀವ ಸಂತಸ ಮತ್ತು ಹೆಮ್ಮೆಯ ಭಾವ ಮೂಡಿಸಿದೆ. ನನಗಷ್ಟೇ ಸಾಕು”.

ಮಾದರಿ ಗುರಿ – ಆದರ್ಶ ಕನಸು

ಹಾಗೇ ನೋಡಿದರೆ ಈ ಜಗತ್ತಿನಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ಒಂದಲ್ಲ ಒಂದು ಕಲೆ ಇದ್ದೇ ಇರುತ್ತದೆ. ಕೆಲವರು ಬೆಳಕಿಗೆ ಬರುತ್ತಾರೆ. ಕೆಲವರು ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳದೆ ದೂರ ಉಳಿಯುತ್ತಾರೆ. ಕೆಲವರು ಅವಕಾಶ ವಂಚಿತರಾದರೆ, ಮತ್ತೆ ಕೆಲವರು ಅವಕಾಶ ಪಡೆಯಲು ನಾನಾ ಸಾಹಸ ಮಾಡುತ್ತಾ ವಾಮಮಾರ್ಗಗಳ ಬೆನ್ನು ಕೂಡ ಬೀಳುತ್ತಾರೆ. ಇನ್ನು ಕೆಲವರಿಗಂತೂ ಅವಕಾಶಗಳು ಲಭಿಸುತ್ತಾ ಹೋದರೆ ಸಾಕು ಅವರ ವರ್ತನೆ ಮತ್ತು ವರಸೆಗಳೇ ಬೇರೆಯಾಗಿ ಬಿಡುತ್ತವೆ. ಇಂಥವರ ನಡುವೆ ನವ್ಯಾ ಅವರು ತಾವು ಕಟ್ಟಿಕೊಂಡಿರುವ ಕನಸು ಮತ್ತು ಗುರಿಯಿಂದಾಗಿಯೇ ವಿಭಿನ್ನ ಎನಿಸಿಕೊಳ್ಳುತ್ತಾರೆ. ಸಂಗೀತದ ಮೂಲಕ ಬುದ್ಧಿ ಮಾಂದ್ಯ ಮಕ್ಕಳ ಆರೋಗ್ಯ ಸುಧಾರಣೆ ಮಾಡಬೇಕು. ಸಮಾಜದ ಮುಖ್ಯ ವಾಹಿನಿಯಲ್ಲಿ ಅವರು ಸಹ ಇತರರಂತೆ ಸುಖಮಯ ಜೀವನ ನಡೆಸುವುದಕ್ಕಾಗಿ ತನ್ನ ಕಲೆ ಬಳಕೆಯಾಗಬೇಕು ಎಂದು ಬಯಸುತ್ತಾರೆ ನವ್ಯಾ. ಅಲ್ಲದೆ ತಮ್ಮ ಇಂಪಾದ ಈ ಧ್ವನಿಯು ನೊಂದವರಿಗೆ ಚೈತನ್ಯ ಶಕ್ತಿಯಾಗಬೇಕೆಂದು ಯೋಚಿಸುವ ನವ್ಯಾ ಅವರ ಚಿಂತನೆ ನಿಜಕ್ಕೂ ಇತರರಿಗೆ ಮಾದರಿಯೇ ಸರಿ.

ಶುಭ ನುಡಿ – ಶುಭಾರೈಕೆ

ಕೇಳುಗರ ಮನಸೂರೆಗೊಳ್ಳುವಂತೆ ತನ್ಮಯತೆಯಿಂದ ಹಾಡಿ ಇತರರನ್ನು ರಂಜಿಸುವ ಜೊತೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವತ್ತ ಕೂಡ ಚಿತ್ತ ಹರಿಸಿರುವ ಓ ಮಧುರ ಗಾಯಕಿಯೇ ನಿಮಗಿದೋ ಶುಭವಾಗಲಿ ಆಲ್ ದಿ ಬೆಸ್ಟ್ ನವ್ಯಾ.

– ಗಂಗಾಧರ್ ಬಿ.ಎಲ್ ನಿಟ್ಟೂರ್
ಮೊ.ಸಂ : 8867702396

Leave a Reply

Your email address will not be published. Required fields are marked *

Trending

Exit mobile version