ಬಹಿರಂಗ
ಆರ್ನಾಬ್; ನಿನ್ನನ್ನು ಮಗನಾಗಿ ಪ್ರೀತಿಸುವಷ್ಟು ಕರುಣೆ ಆಕೆಯಲ್ಲಿದೆ..!
- ಬಿ.ಪೀರ್ ಬಾಷ
ಸೋನಿಯಾಗಾಂಧಿ ನಾನು ಬಹುವಾಗಿ ಗೌರವಿಸುವ ಹೆಣ್ಣುಮಗಳು. ಆರ್ನಾಬ್; ನಿನ್ನನ್ನು ಮಗನಾಗಿ ಪ್ರೀತಿಸುವಷ್ಟು ಕರುಣೆ ಆಕೆಯಲ್ಲಿದೆ ಎಂದು ಭಾವಿಸಿದ್ದೇನೆ.
ಕಣ್ಣೆದುರೇ ಅತ್ತೆಯ ಕೊಲೆಯಾಯಿತು. ಗಂಡನನ್ನು ಪ್ರಧಾನಿ ಪಟ್ಟದ ಮೇಲೆ ಕಂಡ ಮೊದಲ ದಿನದಿಂದಲೇ ಗುಂಡಿಗೆಯಲ್ಲಿ ನಡುಕವನ್ನು ಬಚ್ವಿಟ್ಟುಕೊಂಡವಳು. ಕೊನೆಗೂ ಆಕೆಯ ಭಯ ಸತ್ಯವೇ ಆಯಿತು. ಪ್ರೀತಿಸಿ ಮದುವೆಯಾದ ಗಂಡ ಮಾನವ ಬಾಂಬಿನ ದಾಳಿಗೆ ಸಿಕ್ಕು ಮಾಂಸದ ಮುದ್ದೆಯಾದ ಬಳಿಕ ತನ್ನ ಎಳೆಯ ಮಕ್ಕಳನ್ನು ಎದೆಗವಚಿ ಬಿಕ್ಕಿ ಬಿಕ್ಕಿ ಅತ್ತವಳು. ಆ ಹೊತ್ತು ಆಕೆಯ ಕಣ್ಣೀರೊರೆಸಲು ತನ್ನವರೆಂಬುವರಾದರೂ ಯಾರಿದ್ದರು?
ಗಂಡ ಸತ್ತ ಬಳಿಕ ತವರಿನ ಸಾಂತ್ವನವನ್ನು ಬಯಸುತ್ತಾಳೆ ಯಾವ ಹೆಣ್ಣಾದರು. ಆದರೆ ಆ ಹೊತ್ತು ಯಾರಿದ್ದರು? ಗಂಡನ ಕಡೆಯವರು ಯಾರಿದ್ದರು? ಆಕೆಗೇ ಗೊತ್ತು. ರಾಜಕಾರಣದ ಸೋಂಕೇ ಬೇಡ, ನನ್ನ ಮಕ್ಕಳೊಂದಿಗೆ ನನಗೆ ಬಿಟ್ಟು ಬಿಡಿ ಎಂದು ಪಟ್ಟು ಹಿಡಿದರೂ, ಸ್ವಂತ ಸಾಮರ್ಥ್ಯವಿಲ್ಲದ ಆ ಮನೆತನದ ಹೆಸರನ್ನೇ ತಮ್ಮ ರಾಜಕೀಯ ಲಾಭಕ್ಕೆ ಟ್ರೇಡ್ ಮಾರ್ಕ್ ಮಾಡಿಕೊಳ್ಳುವ ಹಂಬಲದವರು ಬೆನ್ನಿಗೆ ಬಿದ್ದರು. ಬಹುಶಃ ಕಾಲು ಹಿಡಿಯುವಷ್ಟು.
ಒಲ್ಲೆನೆಂದರೂ ಎಳೆತಂದರು. ಮುಂದೆ ನಿಲ್ಲಿಸಿಕೊಂಡು, ಹಿಂದೆ ನಿಂತು ಜೈಕಾರ ಕೂಗಿದರು. ರಾಜಕೀಯದ ಗಂಧಗಾಳಿಯರಿಯದ, ಭಾರತದ ಜನ, ಮನಸ್ಥಿತಿ ತಿಳಿಯದ ದೊಡ್ಡ ಮನೆತನದ ಮಾಮೂಲಿ ಹೆಣ್ಣುಮಗಳನ್ನು ರಾಷ್ಟ್ರನಾಯಕಿಯಾಗಿ ಬಿಂಬಿಸಿಬಿಟ್ಟರು. ರಾಜಕಾರಣ ನಡೆದೇ ಹೋಯಿತು. ಆಳುವ ಉಸಾಬರಿಯೇ ಬೇಡವೆಂದು, ಕರೆದದ್ದಕ್ಕೆ ಬಂದಾಕೆಗೆ ದೇಶದ ಪ್ರಧಾನಮಂತ್ರಿ ಯಾಗುವ ಅವಕಾಶ ಬಂದಾಗ, ಕಣ್ಣುಮುಚ್ಚಿ ಕೈಮುಗಿದು ಒಲ್ಲೆ ಎಂದಳು. ಹಿಂದೆ ಸರಿದು, ಬಿಡುಗಡೆಯಿಲ್ಲದ ಬಲವಂತಕ್ಕೆ ಪಕ್ಷದ ಗದ್ದುಗೆ ಮೇಲೆ ಕೂಡಲೇ ಬೇಕಾಯ್ತು.
ಅರ್ಧಶತಮಾನಕ್ಕೂ ಮೀರಿದ ದೇಶದ ರಾಜಕಾರಣದ ಎಲ್ಲ ಕರಾಮತ್ತು, ಹಿಕಮತ್ತುಗಳನ್ನು ಅರಿತಿದ್ದ ಈ ತಾಯಿ ತನ್ನ ಮಗನನ್ನು ಅದೆಷ್ಟು ಪ್ರೀತಿಯಿಂದ ಬೆಳೆಸಿದಳೆಂದರೆ, ಮಗ ಹರೆಯಕ್ಕೆ ಬಂದರೂ ಮುಖದ ಮೇಲೆ ಅಹಂಕಾರ ಸುಳಿಯಲಿಲ್ಲ. ಪರಮ ಅಧಿಕಾರ, ಪರಮ ಸಂಪತ್ತು ಎಲ್ಲ ಇದ್ದು, ಬದುಕಿಗೆ ನೆಮ್ಮದಿಯೇ ಇರಗೊಡದ ರಾಜಕೀಯ ಉತ್ಸಾಹ ಬೇಕೆಂದೇ ಅನಿಸಲಿಲ್ಲ ಆತನಿಗೆ. ಆದರೂ ದೇಶದ ರಾಜಕಾರಣ, ದೇಶದ ಜನತೆಯ ಮನಗಳಲ್ಲಿ ಒಂದು ಮಿಂಚು ಮೂಡಿಸಿದ್ದ ಆ ಮನೆತನದ ಹೆಸರು… ಅವರಿಗೆ ತಮ್ಮಪಾಡಿಗೆ ಇರಗೊಡಲಿಲ್ಲ.
ಮಗ ರಾಹುಲನಿಗೆ ಅಂತಹ ದುಷ್ಟ ಉತ್ಸಾಹವಿದ್ದಿದ್ದರೆ, ಆಥವಾ ಪ್ರಧಾನಿಯಾಗಲೇ ಬೇಕೆಂಬ ಮಹಾ ಹಂಬಲ ವಿದ್ದಿದ್ದರೆ….ಇನ್ನೇನೋ ಆಗಿರುತ್ತಿತ್ತು. ರಾಜಕಾರಣಕ್ಕೆ ತಕ್ಕನಲ್ಲದ ಶತಧಡ್ಡ ಪ್ರಬುದ್ಧತೆ ಅವನದು. ಹರೆಯದ ವಯಸ್ಸಿನಲ್ಲಿ ಜುಬ್ಬಾ ಹಾಕಿಕೊಂಡು ಮುದುಕರಷ್ಟು ಪ್ರಬುದ್ಧತೆ ತೋರಿದರೆ, ಮಾಧ್ಯಮಗಳ ಟಿ.ಆರ್.ಪಿ. ಏರುತ್ತದೆಯೇ? ಆತ ಮಿಂಚಲಿಲ್ಲ. ಅವನ ಅಮ್ಮನಿಗೂ ಅದೇ ಬೇಕಿತ್ತು. “ಕಂಡಿದ್ದೇನೆ ಬಿಡು ಮಗಾ, ಪ್ರಧಾನಿ ಹುದ್ದೆ. ಉಂಡುಟ್ಟು ಸುಖವಾಗಿರು, ಮದುವೆಯಾಗು” ಎಂದರೆ, ಈ ಮಗನಿಗೆ ಅದ್ಯಾವ ವೈರಾಗ್ಯವೋ…”ನಾನು ಮದುವೆ ಯಾಗಲ್ಲಮ್ಮಾ”! ನನ್ನ ಮನೆತನದ ಹೆಸರು ನನ್ನಿಂದಲೇ ಕೊನೆಯಾಗಿ ಬಿಡಲಿ! ಎಂದೇನಾದರೂ ಆತ ಬಯಸುತ್ತಾನೋ ಏನೋ!!
ತನ್ನ ಗಂಡ-ತನ್ನ ಮಕ್ಕಳ ತಂದೆಯನ್ನೇ ಬರ್ಬರವಾಗಿ ಕೊಂದ, ಕೊಲೆಗಡುಕರನ್ನೇ ಕ್ಷಮಿಸುವಷ್ಟು ಕ್ಷಮೆಯನ್ನು ಎದೆಯಲ್ಲಿಟ್ಟುಕೊಂಡಿದ್ದ ಹೆಣ್ಣು….ಇನ್ನು, ತನ್ನನ್ನು ಅಷ್ಟು ಕೀಳಾಗಿ ನಿಂದಿಸುವವರನ್ನು ಕ್ಷಮಿಸದಿರುತ್ತಾಳೆಯೇ? ಚುನಾವಣಾ ಕಣದಲ್ಲಿ ತಾನೂ ಒಬ್ಬ ಸ್ಪರ್ಧಿಯಾಗಿದ್ದಾಗ, ತಾನೂ ಒಬ್ಬ ಹೆಣ್ಣಾಗಿದ್ದ ಪ್ರತಿಸ್ಪರ್ಧಿಯೊಬ್ಬರು “ಸೋನಿಯಾ ಗಾಂಧಿ ಪ್ರಧಾನ ಮಂತ್ರಿಯಾದರೆ ತಾನು ತಲೆಬೋಳಿಸಿಕೊಳ್ಳುತ್ತೇನೆ” ಎಂದಿದ್ದರು. ಹಾಗೆಂದಾಗಲೂ ಅದಕ್ಕೆ ಪ್ರತಿಕ್ರಿಯಿಸಿರಲಿಲ್ಲ. ಆಕೆಯ ಸಂಸ್ಕಾರ ಆಕೆಗೆ ಎಂಬಂತಿದ್ದಳು.
ದೇಶದ ಪ್ರಧಾನ ಮಂತ್ರಿ, ಆತನ ಮಹಾರಥಿ, ಎಲ್ಲರೂ ಹೀನಾಯವಾಗಿ ಅಂಗಭಾಷೆ, ಜಿಹ್ವಾಭಾಷೆಯಲ್ಲಿ ಆಕೆಯನ್ನು ಅದೆಷ್ಟು ಲಘುವಾಗಿ ನಿಂದಿಸಿದರೆಂದರೆ ಅದಕ್ಕೆ ಪ್ರತಿಯಾಗಿ ಆಕೆ ನಕ್ಕು “ನಿಮ್ಮ ಯೋಗ್ಯತೆ ನಿಮಗೆ” ಎಂಬಂತೆ ಸುಮ್ಮನಾದಳು. ಆಕೆಯ ಮೌನದಲ್ಲಿ “My foot” ಎನ್ನುವ ಅರ್ಥವಿತ್ತೋ ಏನೋ?
ಈಗ ಮತ್ತೊಂದು ಹುಚ್ವುನಾಯಿ ಬಾಯಿಗೆ ಬಂದಂತೆ, ಹೇಸಿಗೆ ಬರುವಷ್ಟು ಅಸಹ್ಯ ದಿಂದ ಕೈ ಮುರಿಯುತ್ತಾ, ಕೈಚಾಚುತ್ತಾ, ಕೂಗಾಡಿದೆ. ಕೂಗಾಡುತ್ತಲೇ ಇದೆ. ಇನ್ನೆಷ್ಟೋ ಸಂಸ್ಕೃತಿ, ಸಭ್ಯತೆಯ ಪಾಠ ಉರುಹೊಡೆದ ಕುನ್ನಿಗಳೂ ಲಬೋ ಎನ್ನುತ್ತಿವೆ. ಹಲವು ಮೃಗಗಳು ನಡು ನಾಡಿನಲ್ಲಿ ಕಚ್ಚುತ್ತಲೂ ಇವೆ. ಅದಿರಲಿ. ಸಂಬಂಧವೇ ಇಲ್ಲದ ಘಟನೆಗೆ ಸಂಬಂಧ ಕಲ್ಪಿಸಿ ತನ್ನ ಪಾಡಿಗೆ ತಾನಿರುವ ಆಕೆಯ ತವರು, ತವರು ಸೀಮೆ ಮೊದಲು ಮಾಡಿ ಇದ್ದದ್ದು ಇರದ್ದನ್ನೆಲ್ಲಾ ಬೆರೆಸಿ ನಂಜು ಕಾರುತ್ತಿರುವ ಆ ಮನೋವಿಕಾರಿ ಆರ್ನಾಬ್ ಗೋಸ್ವಾಮಿ ಎಂಬ ಹೀನಾತಿಹೀನ ಜಂತು ಥೂ! ಇವನೊಬ್ಬ ಪತ್ರಕರ್ತನಾ? ದೇಶದಲ್ಲಿ ಮರ್ಯಾದಸ್ಥ ಪತ್ರಕರ್ತರು ಇದನ್ನೆಲ್ಲ ಕಂಡು ಕೇಳಿ ಹಾಸಿಗೆ ಹಿಡಿದಿದ್ದಾರಾ?
ನಾನು, ನನ್ನ ರಾಜಕೀಯ ಪ್ರಜ್ಞೆಯ ಮೊದಲ ದಿನದಿಂದ ಕಾಂಗ್ರೆಸ್ಸನ್ನು ವಿರೋಧಿಸುತ್ತಾ ಬಂದವನು. ಈಗಲೂ ಕಾಂಗ್ರೆಸ್ ವಿರೋಧಿ. ಹೌದು. ಆದರೆ ಸೋನಿಯಾ ಗಾಂಧಿ ಎಂಬ ಹೆಣ್ಣು ಜೀವದ ಬಗ್ಗೆ ಅಪಾರ ಗೌರವವಿದೆ. ಆಕೆಯ ಜೀವನದ ಬಗ್ಗೆ ನನಗೆ ಆಳದ ಸಂವೇದನೆಗಳಿವೆ. ಒಂದು ಹೆಣ್ಣು ಬಯಸುವುದು ಬರೀ ಸಂಪತ್ತು, ಅಧಿಕಾರ ಎಂದು ನಾನು ಯಾವತ್ತೂ ಅಂದುಕೊಂಡಿಲ್ಲ.
ಯಾವುದೇ ಹೆಣ್ಣಿಗೆ ಗಂಡನಿರಬೇಕು ಇಲ್ಲವೇ ತಾಯಿ- ತವರುಮನೆ ಗಳಿರಬೇಕು. ಇವೆರಡನ್ನೂ ಕಳಕೊಂಡು, ವಯಸ್ಸಿಗೆ ಬಂದ ಮಗನಿಗೆ ಮದುವೆ ಮಾಡಲಾಗದ, ಎಲ್ಲವಿದ್ದೂ ಏನೂ ಮಾಡಲಾಗದ ಅಸಹಾಯಕ ತಾಯಿಯಾಗಿ ನನಗೆ ಸೋನಿಯಾ ಕಾಣಿಸುತ್ತಾರೆ. ಸೋನಿಯಾಗಾಂಧಿ, ಮೊದಲಿಗೆ ಒಂದು ಹೆಣ್ಣು. ಕೊನೆಯಲ್ಲಿ ಆಕೆ ಒಂದು ಪಕ್ಷದ ನಾಯಕಿ.
ಅದೇಕೋ, ಈ ಬಾರಿ ತುಂಬಾ ಕೆಟ್ಟದ್ದೆನಿಸಿತು. ಬಿ.ಜೆ.ಪಿ.ಯ ಎಲ್ಲ ನಾಯಕರೂ ಆಕೆಯ ಬಗ್ಗೆ ಬಳಸಿದ ಭಾಷೆ, ಆಡಿಸಿದ ಕೈ ಬೆರಳು, ತೋಳು, ಮುಷ್ಠಿಗಳ ಅಂಗಭಾಷೆಯನ್ನು ಕಂಡಿದ್ದೇನೆ ನಾನು. ಆದರೆ ಈ ಸಲ, ಆರ್ನಾಬನ ನುಡಿ ನಡತೆ ಹೇಸಿಗೆಯೆನಿಸಿತು.
ಇಸ್ಸಿ ಮಾಡಲು ಕುಂತು, ತಮ್ಮ ಇಸ್ಸಿಯಲ್ಲಿ ತಾವು ಕಡ್ಡಿಯಾಡಿಸುತ್ತಾ ಆಡುವ ಪುಟ್ಟ ಮಕ್ಕಳನ್ನು ಗದರಿಸಿ ಬುದ್ಧಿಹೇಳಬಹುದು. ಆದರೆ ಕಡ್ಡಿಯ ಬದಲಿಗೆ ಬೆರಳನ್ನೇ ಇಟ್ಟು, ಮುಂದೆ ಬಂದವರ ಮೇಲೆ ಸಿಡಿಸುವಂತೆ ತನ್ನ ನ್ಯೂಸ್ ರೂಮಿನಿಂದ ಅರಚುವ ಈ ವಿಕಾರಿಗೆ ಬುದ್ಧಿ ಕಲಿಸುವವರು ಯಾರಾದರೂ ಇದ್ದಾರೆಯೇ?
ಸುದ್ದಿದಿನ.ಕಾಂ|ವಾಟ್ಸಾಪ್|9980346243