ಲೈಫ್ ಸ್ಟೈಲ್
ಸ್ಟಿರಾಯ್ಡುಗಳು : ಜೀವರಕ್ಷಕಗಳೋ ? ಜೀವ ನಾಶಕಗಳೋ ?
- ಡಾ: ಎನ್.ಬಿ.ಶ್ರೀಧರ
ಘಟನೆ 1
“ಸಾರ್.. ಇಲ್ಲೊಂದು ಬೆಲೆಬಾಳುವ ಎತ್ತಿಗೆ ಸಿಕ್ಕ ಪಟ್ಟೆ ಜೇನುನೊಣ ಕಚ್ಚಿ ಎತ್ತು ಸಾಯುವ ಸ್ಥಿತಿಯಲ್ಲಿದೆ. ಇದನ್ನು ಬದುಕಿಸಲು ಚಿಕಿತ್ಸೆ ಸೂಚಿಸಿ”. ಇದು ಉತ್ತರ ಕರ್ನಾಟಕ ಭಾಗದಲ್ಲಿನ ನನ್ನ ವಿದ್ಯಾರ್ಥಿ ಪಶುವೈದ್ಯರ ಕೋರಿಕೆ. ಅದಕ್ಕೆ ಸ್ಟಿರಾಯ್ಡ್ ಅವಶ್ಯಕತೆ ಇದೆ. ಇಂತಿಷ್ಟು ಪ್ರಮಾಣದಲ್ಲಿ ಚುಚ್ಚುಮದ್ದಿನ ರೂಪದಲ್ಲಿ ನೀಡಿ ಹಾಗೂ ಉಳಿದಂತೆ ಇತರ ಚಿಕಿತ್ಸೆ ನೀಡಿ ಎಂದು ಸಲಹೆ ನೀಡಿದೆ. ಮರು ದಿನ ಎತ್ತು ಚೇತರಿಸಿಕೊಂಡಿತು ಸಾರ್.. ಧನ್ಯವಾದ ಅಂದು ಅನುಸರಣಾ ವರದಿ ಬಂತು.
ಘಟನೆ 2
ನಮ್ಮ ಸ್ನೇಹಿತರನ್ನು ಅವರ ಕಾಯಿಲೆಯೊಂದಕ್ಕೆ ಚಿಕಿತ್ಸೆಗಾಗಿ ತಜ್ಞರೊಬ್ಬರ ಬಳಿ ಕರೆದೊಯ್ದಿದ್ದೆ. ಎಲ್ಲಾ ಪರೀಕ್ಷೆಗಳಾದ ಮೇಲೆ ಚಿಕಿತ್ಸಾ ಚೀಟಿಯನ್ನು ವೈದ್ಯರು ವಿವರಿಸಿದರು. ನೀಡಿ… ಇವರೆ.. ನಿಮ್ಮ ಕಾಯಿಲೆ ಇಂತಹದು. ಇದರ ಚಿಕಿತ್ಸೆಗಾಗಿ ಸಣ್ಣ ಪ್ರಮಾಣದಲ್ಲಿ ಸ್ಟಿರಾಯ್ಡ್ ಒಂದನ್ನು ಬರೆದಿದ್ದೇನೆ. ಇದು ನಿಮ್ಮ ಕಾಯಿಲೆಯಲ್ಲಿ ಬಹಳ ಅನಿವಾರ್ಯ.
ಇಂತಿಷ್ಟು ದಿನ ತೆಗೆದುಕೊಳ್ಳಿ ಎನ್ನುತ್ತಿದ್ದಂತೆ ನನ್ನ ಸ್ನೇಹಿತರು ಪಕ್ಕದಲ್ಲಿ ಹಾವು ಹಾದು ಹೋದಂತೆ ಹಾರಿಬಿದ್ದರು. ಛೆ.. ಛೆ.. ಸ್ಟಿರಾಯ್ಡುಗಳೇ? ನಾನು ತೆಗೆದುಕೊಳ್ಳಲು ಸಾಧ್ಯವೇ ಇಲ್ಲ !!. ಈ ಡಾಕ್ಟ್ರೇ ಸರಿ ಇಲ್ಲ. ಸ್ಟಿರಾಯ್ಡುಗಳನ್ನು ಬರ್ದು ಕೊಡ್ತಾರೆ. ಇವರಿಗೆ ಅವರ ಕಾಯಿಲೆಗಳಲ್ಲಿ ಸ್ಟಿರಾಯ್ಡುಗಳ ಬಗ್ಗೆ ಅವರ ಕಾಯಿಲೆಯಲ್ಲಿ ಅನಿವಾರ್ಯತೆಯನ್ನು ವಿವರಿಸಿ ಅವರು ಅದನ್ನು ಸ್ವಲ್ಪ ದಿನ ತೆಗೆದುಕೊಳ್ಳುವಂತೆ ಮಾಡಲು ಸಾಕು ಸಾಕಾಯಿತು!!
ಘಟನೆ 3
ಸುಮಾರು ವರ್ಷಗಳ ಹಿಂದಿನ ಕಥೆ. ನಮ್ಮ ಪ್ರಯೋಗಶಾಲೆಯಲ್ಲಿರುವ ಒಬ್ಬರಿಗೆ ” ಸೋರಿಯಾಸಿಸ್” ಕಾಯಿಲೆ ಇತ್ತು. ಈ ಕಾಯಿಲೆಗೆ ಉತ್ತಮ ಔಷಧಿ ಇಲ್ಲ. ಇದಕ್ಕೆ ಅಲೋಪತಿಯಲ್ಲಿ ಇರುವ ಔಷಧಗಳನ್ನು ತೆಗೆದುಕೊಳ್ಳುತ್ತಾ ದಿನ ದೂಡುತ್ತಿದ್ದರು. ಕೈ ಮೇಲೆ ತುರಿಕೆಯ ಕಲೆಗಳು ಎದ್ದು ಕಾಣುತ್ತಿದ್ದವು.
ಸ್ವಲ್ಪ ದಿನ ಬಿಟ್ಟು ನೋಡಿದರೆ ಏನಾಶ್ಚರ್ಯ !! ಕಲೆಗಳೆಲ್ಲಾ ಮಾಯ !! ಔಷಧಶಾಸ್ತ್ರ ತಜ್ಞರೆಂದು ಹೇಳಿಕೊಳ್ಳುವ ನಮಗೇ ಗೊತ್ತಾಗದ ಹಾಗೇ ಹೊಸ ಔಷಧಿ ಬಂದು ಬಿಟ್ಟಿತೇ ಎಂದು ಆಶ್ಚರ್ಯ ಪಟ್ಟೆ!. ಕೇಳಿದರೂ ನಿಮಗೆ ಆ ಔಷಧದ ವಿಷಯ ಬೇಡ ಸಾರ್. ನೀವು ಅದನ್ನೆಲ್ಲಾ ನಂಬಲ್ಲ ಎಂದು ನುಣುಚಿಕೊಂಡು ಬಿಟ್ಟರು. ವಿಷಯ ಮರೆತು ಹೋಯಿತು.
ಸ್ವಲ್ಪ ದಿನದ ನಂತರ ಅವರಿಂದ ದೂರವಾಣಿ ಕರೆ!. ಸಾರ್. ಸ್ವಲ್ಪ ಮೈಗೆ ಹುಶಾರಿಲ್ಲ.. ನಾಲ್ಕು ದಿನ ರಜೆ ಬೇಕು.. ಸರಿ. ರಜೆ ಮುಗಿಸಿ ಬಂದ ನಂತರ ಅವರಲ್ಲಿ ಏನೋ ಬದಲಾವಣೆ ಗಮನಿಸಿದೆ. ಮುಖವೆಲ್ಲಾ ಸ್ವಲ್ಪ ದಪ್ಪವಾಗಿತ್ತು. ದೇಹದ ತೂಕವೂ ಜಾಸ್ತಿಯಾದ ಹಾಗೇ ಕಾಣಿಸಿತು. ಅಲ್ರೀ… ಯಾಕೋ ದಪ್ಪ ಆದ ಹಾಗೇ ಕಾಣ್ತೀರಲ್ಲ!! ಯಾಕೆ ? ಅಂದೆ. ಇಲ್ಲ ಸಾರ್. ಒಂದು ಹತ್ತು ದಿನದಿಂದ ಆಲಸ್ಯ. ಬೆಳಿಗ್ಗೆ ವಾಕ್ ನಿಲ್ಲಿಸಿ ಬಿಟ್ಟೆ. ಅದಕ್ಕೆ ತೂಕ ಜಾಸ್ತಿಯಾಗಿ ಬಿಟ್ಟಿದೆ ಅಂದರು.
ನನಗೆ ಸಂಶಯವಾಗಿ ಏನಾದ್ರೂ ಔಷಧ ತೆಗೆದುಕೊಳ್ತಾ ಇದ್ದೀರೇನ್ರಿ ?? ಅಂದೆ. ಹೌದು ಸಾರ್. ಈ ಸೋರಿಯಾಸಿಸ್” ಗೆ ಹಳ್ಳಿ ಔಷಧಿ ತಗೋಳ್ತಾ ಇದ್ದೀನಿ ಸಾರ್. ಅದ್ರಿಂದ್ಲೇ ನನಗೆ ಹುಶಾರಾಗಾದೆ. ಅದೇನೂ ತೊಂದ್ರೆ ಇಲ್ಲ ಸಾರ್. ಅಯುರ್ವೇದಿಕ್ ಔಷಧಿ. ಸೈಡ್ ಇಫೆಕ್ಟ್ ಇಲ್ವಂತೆ ಸಾರ್.. ಅಂದ್ರು.
“ಸರಿ. ಔಷಧಿ ತಗೊಂಡು ಬನ್ನಿ ನೋಡೋಣ” ಅಂದೆ. ಕಾಗದದ ಪೊಟ್ಟಣದಲ್ಲಿ ಕಟ್ಟಿದ ಕಂದು ಬಣ್ಣದ ಪುಡಿಯಂತಹ ವಸ್ತುವೊಂದನ್ನು ತಂದು ಕೊಟ್ಟರು. ಅದನ್ನು ನಮ್ಮ ಪ್ರಯೋಗಾಲಯದಲ್ಲಿ ತಪಾಸಣೆಗೆ ಒಳಪಡಿಸಿದೆ. ಅದರಲ್ಲಿ ಸ್ಟಿರೋಯ್ಡ್ ಇರುವುದು ಪತ್ತೆ ಆಯ್ತು.
ನಂತರ ಗೊತ್ತಾಗಿರುವುದು ಆ ಪಂಡಿತ ಆಯುರ್ವೇದದ ಹೆಸರಿನಲ್ಲಿ ಸ್ಟಿರೋಯ್ಡ್ಗಳನ್ನು ಪುಡಿಯಲ್ಲಿ ಬೆರೆಸಿ ಜನರಿಗೆ ನೀಡಿ ಮಂಕು ಬೂದಿ ಎರಚಿ ಹಣ ಕೀಳುತ್ತಿದ್ದ. ಈ ಸ್ಟಿರೋಯ್ಡ್ ಗಳು ಶರೀರದ ರೋಗ ನಿರೋಧಕ ಕಣಗಳನ್ನು ಹತ್ತಿಕ್ಕಿ ತಾತ್ಕಾಲಿಕ ಉಪಶಮನ ನೀಡಿದರೂ ಅವುಗಳ ಅಡ್ಡಪರಿಣಾಮದಿಂದ ಶರೀರದಲ್ಲಿ ನೀರು ತುಂಬಿಕೊಂಡು ದೇಹದ ತೂಕ ಹೆಚ್ಚಿಸಿ ಆಲಸ್ಯವನ್ನುಂಟು ಮಾಡಿದೆ ಅಂತ ಗೊತ್ತಾಯ್ತು. ಔಷಧ ನಿಲ್ಲಿಸಿದ ಮೇಲೆ ಅವರ ಆರೋಗ್ಯ ಸುಧಾರಿಸಿತು.
ಘಟನೆ 4
ಕುದುರೆಗಳು ಚೆನ್ನಾಗಿ ಓಡಲು ಮತ್ತು ಜಾನುವಾರುಗಳು ಚೆನ್ನಾಗಿ ಕೊಬ್ಬಲು ಸ್ಟಿರಾಯ್ಡುಗಳ ಬಳಕೆ ಅತಿಯಾಗಿ ಅವುಗಳಿಗೆ “ಡೋಪಿಂಗ್ ಪರೀಕ್ಷೆ” ಈಗ ಕಡ್ಡಾಯವಾಗಿದೆ. ದೇಹ ಹುರಿಗೊಳಿಸುವ ಸಲುವಾಗಿ ತನ್ನ ಜಿಮ್ ಗ್ರಾಹಕರಿಗೆ ಸ್ಟಿರಾಯ್ಡ್ ಸಹಿತ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಬೆಂಗಳೂರಿನಲ್ಲಿ ಜಿಮ್ ತರಬೇತುದಾರನನ್ನು ಬಂಧಿಸಲಾಗಿದೆ ಮತ್ತು ಬಾಕ್ಸಿಂಗ್ ಚಾಂಪಿಯನ್ ಮೈಕ್ ಟೈಸನ್ ಸ್ಟಿರಾಯ್ಡ್ಸ್ ಉಪಯೋಗಿಸುತ್ತಿದ್ದ ಮತ್ತು ಸಿಕ್ಕಿ ಬಿದ್ದು ಕಂಬಿ ಎಣಿಸಿದ ಇತ್ಯಾದಿ.. ಸುದ್ಧಿಗಳು ಮಾಧ್ಯಮಗಳಲ್ಲಿ ಹರಿದಾಡಿ ಜನರಲ್ಲಿ ಸ್ಟಿರಾಯ್ಡುಗಳ ಬಗ್ಗೆ ಭಯನ್ನು ಹುಟ್ಟಿಸಿದವು. ಇವುಗಳಿಗೆ “ಉದ್ಧೀಪನ ಔಷಧಿಗಳು” ಎಂದೂ ಕರೆಯುತ್ತಾರೆ.
ಈ ಘಟನೆಗಳು ಸ್ಟಿರಾಯ್ಡುಗಳ ಉಪಯುಕ್ತತೆ ಮತ್ತು ಅವುಗಳ ದುಷ್ಪರಿಣಾಮ ಇವುಗಳ ಕುರಿತು ನನ್ನ ಗಮನಕ್ಕೆ ಬಂದ ಚಿಕ್ಕ ಪುಟ್ಟ ಉದಾಹರಣೆಗಳು ಅಷ್ಟೆ.. ಇಂತಹ ಸಹಸ್ರಾರು ಜನರು ಈ ತರಹದ ಸುಳ್ಳು ಔಷಧಗಳಿಗೆ ಬಲಿಯಾಗಿರಬಹುದೇನೋ?
ಹಾಗಿದ್ದರೆ ಏನಿದು ಸ್ಟಿರೋಯ್ಡ್? ಯಾಕೆ ಇದನ್ನು ಬಳಸುತ್ತಾರೆ? ಏನಿದರ ಪರಿಣಾಮ ಮತ್ತು ಅಡ್ಡಪರಿಣಾಮ? ಅನ್ನುವ ಬಗ್ಗೆ ತಿಳಿಯೋಣವೇ?
ಮೆದುಳಿನಿಂದ ಸ್ರವಿಸಲ್ಪಡುವ ಎಸಿಟಿಹೆಚ್ ಹಾರ್ಮೋನಿನಿಂದ ಪ್ರಚೋದಿತವಾಗಿ ಅಡ್ರಿನಲ್ ಗ್ರಂಥಿಯ ಕಾರ್ಟೆಕ್ಸ್ ಭಾಗದಿಂದ “ಕಾರ್ಟಿಕೋಸ್ಟಿರೋಯ್ಡ್” ರಕ್ತದಲ್ಲಿ ಸ್ರವಿಸಲ್ಪಡುತ್ತದೆ. ಪ್ರಸಕ್ತ ಮಾರುಕಟ್ಟೆಯಲ್ಲಿ ಇರುವ ಅನೇಕ ಸ್ಟಿರಾಯ್ಡುಗಳಿಗೆ ಇದೇ ಮೂಲ ಸೌಧ. ಇದರ ಪರಿಣಾಮವನ್ನು ಎರಡು ಮುಖ್ಯ ಘಟ್ಟದಲ್ಲಿ ವಿಭಜಿಸಬಹುದು.
ಅದೆ ಗ್ಲುಕೋಕಾರ್ಟಿಕಾಯ್ಡ್ ಪರಿಣಾಮ ಮತ್ತು ಮಿನೆರಲೋ ಕಾರ್ತಿಕಾಯ್ಡ್ ಪರಿಣಾಮಗಳು. ಶರೀರ ಹೆಚ್ಚಿನ ಕೆಲಸ ಮಾಡಬೇಕಾದರೆ ಅವಶ್ಯವಿರುವ ಗ್ಲುಕೋಸ್ ಬೇಕಾದಾಗ ಗ್ಲುಕೋಕಾರ್ಟಿಕಾಯ್ಡ್ ಪರಿಣಾಮವೆಂದರೆ ರಕ್ತದಲ್ಲಿನ ಗ್ಲುಕೋಸ್ ಪ್ರಮಾಣವನ್ನು ಪಿತ್ತಜನಕಾಂಗ, ಮಾಂಸಖಂಡಗಳು ಮತ್ತು ಕೊಬ್ಬಿನ ಕಣಗಳ ವಿಭಜನೆಯಿಂದ ಹೆಚ್ಚಿಸುವುದು.ಈ ವರ್ಗಕ್ಕೆ ಕೆಲವು ಉದಾಹರಣೆಗಳೆಂದರೆ ಕಾರ್ಟಿಸೊಲ್, ಪ್ರೆಡ್ನಿಸೋನ್, ಪ್ರೆಡ್ನಿಸೋಲೊನ್, ಮೆಥೈಲ್ ಪ್ರೆಡ್ನಿಸೋಲೊನ್,ಡೆಕ್ಸಾಮಿಥಸೋನ್, ಬೆಟಾಮಿಥಸೋನ್ ಇತ್ಯಾದಿ.
ಇನ್ನು ಮಿನೆರಲೋಕಾರ್ಟಿಕಾಯ್ಡ್ ಪರಿಣಾಮವೆಂದರೆ ಶರೀರದಲ್ಲಿ ಹೆಚ್ಚಿನ ಪೊಟ್ಯಾಸಿಯಂ ಅಂಶವನ್ನು ಅಲ್ಡೋಸ್ಟಿರೋನ್ ಅಂಶದ ಮೂಲಕ ಉಳಿಸಿಕೊಳ್ಳುವುದು. ಇದಕ್ಕೆ ಉದಾಹರಣೆಗಳೆಂದರೆ ಅಲ್ಡೋಸ್ಟಿರೋನ್ ಪ್ಲುಡ್ರೋಕಾರ್ಟಿಸೋನ್ ಇತ್ಯಾದಿ.
ಇದಲ್ಲದೇ “ಅನಾಬೋಲಿಕ್ ಸ್ಟಿರಾಯ್ಡ್” ಎಂಬ ಮತ್ತೊಂದು ವರ್ಗವಿದ್ದು ಇದನ್ನು ವಯಸ್ಸಾದ ವ್ಯಕ್ತಿಗಳಲ್ಲಿ ಮಾಂಸಖಂಡಗಳು ದುರ್ಬಲವಾದಾಗ ಉಪಯೋಗಿಸುತ್ತಾರೆ. ಆದರೆ ಬಹಳ ಸಲ ಇದನ್ನು ಕ್ರೀಡಾಪಟುಗಳು ದುರ್ಬಳಕೆ ಮಾಡಿ, ಹಿಂಬಾಗಿಲಿನಿಂದ ಕ್ರೀಡೆಯನ್ನು ಗೆಲ್ಲುವ ಹುನ್ನಾರ ಮಾಡುತ್ತಾರೆ.
“ಅನಾಬೋಲಿಕ್ ಸ್ಟಿರಾಯ್ಡ್” ಇವು ಗಂಡು ಹಾರ್ಮೊನಾದ ಟೆಸ್ಟೋಸ್ಟಿರಾನ್ ಇದರ ಪ್ರತಿರೂಪವಾಗಿದ್ದು ಮಾಂಸಖಂಡಗಳಲ್ಲಿ ಪ್ರೋಟೀನುಗಳ ಬಳಕೆ ಜಾಸ್ತಿ ಮಾಡುತ್ತವೆ. ಇದರಿಂದ ಮಾಂಸಖಂಡಗಳು ಹಿಗ್ಗಿ, ಕುಸ್ತಿ ಮತ್ತು ಬಾಕ್ಸಿಂಗ್ ಪಟುಗಳು ಮತ್ತು ಅನೇಕ ಕ್ರೀಡಾಪಟುಗಳು ಇದರ ದುರ್ಬಳಕೆ ಮಾಡಿ “ಉದ್ಧೀಪನ ಔಷಧಿ” ಪತ್ತೆಯ ಸಮಯದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಇದಕ್ಕೆ ಉದಾಹರಣೆಯೆಂದರೆ ಆಂಡ್ರೋಸ್ಟೆನೆಡಿಯೋನ್, ಸ್ಟಾನಜೋಲೋಲ್, ನಾಂಡ್ರೋಲೋನ್ ಇತ್ಯಾದಿ.
ಮತ್ತೊಂದು ಮುಖ್ಯವಾದ ಅಂಶವೆಂದರೆ ಕಾರ್ಟಿಕೋಸ್ಟಿರಾಯ್ಡುಗಳು ಶರೀರದಲ್ಲಿ ಉರಿಯೂತವನ್ನುಂಟು ಮಾಡಬಲ್ಲ ಸೈಟೊಕೈನ್ ಮತ್ತಿತರ ಪದಾರ್ಥಗಳ ಉತ್ಪಾದನೆ ಮತ್ತು ಅವುಗಳ ಕಾರ್ಯವನ್ನು ಕುಂಠಿತಗೊಳಿಸಿ ಉರಿಯೂತವನ್ನು ಕಡಿಮೆ ಮಾಡುತ್ತವೆ. ಕಾರಣ ಇವುಗಳನ್ನು “ ಜೀವ ರಕ್ಷಕ” ಔಷಧಗಳ ಪಟ್ಟಿಯಲ್ಲಿ ಸೇರಿಸುತ್ತಾರೆ.
ಈ ಔಷಧಿ ಇರದಿದ್ದರೆ ಅಪಘಾತ, ಹಾವು ಕಡಿತ, ಜೇನು ಹುಳ ಕಡಿತದಂತ ಅನೇಕ ಜೀವ ತೆಗೆಯುವ ಸ್ಥಿತಿಗಳಿಗೆ “ಜೀವ ರಕ್ಷಕ” ಔಷಧಗಳೇ ಇಲ್ಲವಾಗಿದ್ದವು. ನಮ್ಮ ದೇಹಕ್ಕೆ ಅತಿಯಾದ ಉರಿಯೂತವನ್ನುಂಟು ಮಾಡಬಲ್ಲ ಈ ಸ್ಥಿತಿಗಳಿಗೆ ಗ್ಲುಕೊಕಾರ್ಟಿ ಕಾಯ್ಡುಗಳು ರಾಮಬಾಣವಾಗಿ ಪರಿಣಮಿಸಿವೆ.
ಸ್ಟಿರಾಯ್ಡುಗಳು ಜನ ಹೆದರುವ ಹಾಗೇ “ಭಯಾನಕ” ಔಷಧಿಗಳೇನೂ ಅಲ್ಲ. ಸಾಕಷ್ಟು ಎಚ್ಚರ ವಹಿಸಿಯೇ ಅವುಗಳನ್ನು ಕಂಡು ಹಿಡಿಯಲಾಗಿದೆ. ಸ್ಟಿರಾಯ್ಡುಗಳು ಅಥವಾ ಅನಾಬೊಲಿಕ್ ಸ್ಟಿರಾಯ್ಡುಗಳ ದುರ್ಬಳಕೆಯಿಂದ ಕೆಟ್ಟ ಹೆಸರು ಪಡೆದಿವೆಯೇ ಹೊರತು ಇವುಗಳು ವೈದ್ಯರ ಸಲಹೆಯಂತೆ ಉಪಯೋಗಿಸಿದಲ್ಲಿ ಉತ್ತಮ ಪರಿಣಾಮ ಬೀರಬಲ್ಲ ಔಷಧಗಳು.
ಯಾವುದೇ ಔಷಧವನ್ನು ವೈದ್ಯರ ಸಲಹೆಯಂತೆ ನಿಯಮಿತ ಅವಧಿಗೆ ಬಳಸಿದರೆ ಏನೂ ತೊಂದರೆ ಇಲ್ಲ. ವೈದ್ಯರಿಗೆ ಪ್ರತಿ ಔಷಧಿಯ ಪರಿಣಾಮ ಮತ್ತು ಅಡ್ಡಪರಿಣಾಮ ತಿಳಿದಿರುತ್ತದೆ. ಅವಶ್ಯವಾಗಿದ್ದಾಗ ಮಾತ್ರ ಅವರು ಬಳಸುತ್ತಾರೆ. ಸುಮ್ಮನೆ ಪೂರ್ವಾಗೃಹ ಪೀಡೆಯಿಂದ ಒಂದು ಔಷಧಿಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ತರವಲ್ಲ. ಅಲ್ಲದೇ ಕೆಲವರು ಸ್ವಯಂ ವೈದ್ಯದಿಂದಲೂ ಹಾಗೂ ಕೆಲ ಹಣಬಾಕ ಕೊಟ್ಟಿ ವೈದ್ಯರುಗಳು ಸಹ ಈ ಔಷಧಿಗಳನ್ನು ದುರುಪಯೋಗ ಮಾಡುವುದನ್ನು ತಡೆಯುವುದು ಒಳ್ಳೆಯದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243