ಅಂತರಂಗ
ಎಚ್ಚೆತ್ತುಕೊಳ್ಳಿ..!
- ಸುರೇಶ ಎನ್ ಶಿಕಾರಿಪುರ
ಖಿನ್ನತೆ ಆತ್ಮಹತ್ಯೆಗಳ ಹಿಂದೆ ನಿರುದ್ಯೋಗದ ದೊಡ್ಡ ಕಾರಣವಾಗಿದೆ. ನಿರುದ್ಯೋಗ ಕೂಡ ಒಂದು ಭೀಕರ ಕ್ಷಾಮವೇ. ಅದು ಮನುಷ್ಯರನ್ನು ಕೊಲ್ಲುತ್ತದೆ. ಈ ದೇಶಕ್ಕೆ ಕೇಂದ್ರ ಸರ್ಕಾರದ ಕೊಡುಗೆ ಏನಾದರೂ ಇದ್ದರೆ, ಅದು ಹಿಂದೆಂದೂ ಕಂಡಿರದ ನಿರುದ್ಯೋಗ ಸೃಷ್ಠಿ. ನಿರುದ್ಯೋಗಿ ಯುವಕರ ಆತ್ಮಹತ್ಯೆಗೆ ನೇರ ಕಾರಣ ಆಳುವ ಸರ್ಕಾರವೇ ಆಗಿರುತ್ತದೆ.
ಮುಂದಿನ ದಿನಗಳಲ್ಲಿ ನಿರುದ್ಯೋಗದ ಮಟ್ಟ ಮೇರೆ ಮೀರುತ್ತದೆ. ಆ ಕೆಟ್ಟ ಪ್ರವಾಹದಲ್ಲಿ ದೇಶದ ಅಮೂಲ್ಯ ಯುವ ಸಂಪತ್ತು ತರಗೆಲೆಯಂತೆ ತೇಲಿಹೋಗಲಿದೆ. ನಿರುದ್ಯೋಗಕ್ಕೆ ಬಲಿಯಾಗುವವರಲ್ಲಿ ಮಧ್ಯಮ ವರ್ಗದ ದಲಿತ ವರ್ಗದ ಯುವ ಜನತೆಯದೇ ದೊಡ್ಡ ಪಾಲಾಗಿರುತ್ತದೆ. ನಿರುದ್ಯೋಗ ಸೃಷ್ಠಿಸುವ ಬಿಕ್ಕಟ್ಟು ಒಂದೊಂದು ಬಗೆಯದಲ್ಲ.
ಕೊಳ್ಳಲು ಹಣವಿಲ್ಲದಾದಾಗ ನಾಲ್ಕಾಣೆ ಕಾಸಿನ ವಸ್ತುವೂ ದುಬಾರಿಯಾಗುತ್ತದೆ. ವ್ಯಾಪಾರೀ ಕ್ಷೇತ್ರ ಕೊಳ್ಳುವವರಿಲ್ಲದೆ ಮುಗ್ಗರಿಸಿ ಬೀಳುತ್ತದೆ. ಸರಕು ಉತ್ಪಾದನಾ ಕ್ಷೇತ್ರ ನೆಲಕಚ್ಚುತ್ತದೆ. ರೈತರು ಬೆಲೆ ಕುಸಿತಕ್ಕೆ ಬಲಿಯಾಗಬೇಕಾಗುತ್ತದೆ. ಆಗ ಯಾವ ಮಂದಿರವೂ ನೆರವಿಗೆ ಬರುವುದಿಲ್ಲ. ಆದ್ಯತೆ ಮಂದಿರವಾದಾಗ ಆದ್ಯತೆ ಧರ್ಮವಾದಾಗ ಸಹಜವಾಗೇ ಉಳಿದೆಲ್ಲ ಪ್ರಗತಿ ವಿಚಾರಗಳು ಹಿನ್ನೆಲೆಗೆ ತಳ್ಳಲ್ಪಡುತ್ತವೆ.
ನಮಗೀಗ ನಿತ್ಯವೂ ಕಣ್ಣಿಗೆ ಕಾಣುತ್ತಿರುವವರು ಕಯ್ಯಲ್ಲಿ ರೆಸ್ಯೂಮ್ ಹಿಡಿದು ಎಲ್ಲಿಯಾದರೂ ಒಂದು ಕೆಲಸ ಸಿಕ್ಕೀತೇ ಎಂದು ಅಲೆದಾಡುವ ಸಾವಿರ ಸಾವಿರ ಯುವಕರ ಗುಂಪು. ಸ್ವತಃ ನಾನೂ ಇದರಿಂದ ಹೊರತಾದವನಲ್ಲ. ಉದ್ಯೋಗಕ್ಕಾಗಿ ಅಲೆದಾಡುವ ಅವರಲ್ಲಿ ಈ ಹಿಂದೆ ಲಕ್ಷಗಟ್ಟಲೆ ವೇತನ ಪಡೆಯುತ್ತಿದ್ದ ಇಂಜಿನಿಯರುಗಳೂ ಇದ್ದಾರೆ ಬೇರೆ ಬೇರೆ ಪ್ರತಿಷ್ಟಿತ ಕಂಪನಿಗಳಲ್ಲಿ ಸ್ಮಾರ್ಟ್ ಸ್ಯಾಲರಿ ಪಡೆದು ಏಕ್ಲಾಸ್ ಜೀವನ ನಡೆಸುತ್ತಿದ್ದ ಕೆಲಸ ಕಳೆದುಕೊಂಡ ತರಹೇವಾರಿ ಕ್ಷೇತ್ರದ ಮಾಜಿ ಉದ್ಯೋಗಿಗಳೂ ಇದ್ದಾರೆ.
ಅವರ ಕಣ್ಣುಗಳಲ್ಲಿನ ಆತಂಕ ಮುಖದಲ್ಲಿನ ಬೇಸರ ದುಗುಡ, ಯಾತನೆ, ಹತಾಶೆಗಳನ್ನು ಕಣ್ಣಾರೆ ಕಂಡಿದ್ದೇನೆ. ಕಿನ್ನರಾದ ಎಷ್ಟೋ ಜನ ಆತ್ಮಹತ್ಯೆಯ ಹಾದಿಯ ಕಡೆಗೆ ಮುಖ ಮಾಡುತ್ತಿದ್ದಾರೆ. ಕೆಲಸ ಕೊಡಲು ಸಾಹುಕಾರರು ಹಿಂದೇಟು ಹಾಕುತ್ತಾರೆ ಯಾಕೆಂದರೆ ಸಾಹುಕಾರರೇ ಕುಸಿದು ಬೀಳುತ್ತಿದ್ದಾರೆ. ಭಿಕ್ಷುಕರಿಗೆ ಒಂದು ರೂಪಾಯಿ ತೆಗೆದು ಹಾಕುವುದಕ್ಕೂ ಯೋಚಿಸುವವರಿದ್ದಾರೆ.
ಯಾಕೆಂದರೆ ಆ ಒಂದೋ ಎರಡೋ ರೂಪಾಯಿ ಕೊತ್ತಂಬರಿ ಕಟ್ಟಿಗೆ ಒಂದು ರೂಪಾಯಿ ಕಡಿಮೆಯಾದೀತು, ಸಿಗರೇಟಿಗೆ ಸಾಲದಾಗುತ್ತೆ, ಬಸ್ ಚಾರ್ಜಿಗೆ ಕಡಿಮೆ ಬಿದ್ದೀತು, ಅದಿದ್ದರೆ ಸಕ್ಕರೆಗೆ, ಉಪ್ಪಿಗೆ, ಟೀ ಪುಡಿಗೆ, ಕಡ್ಡಿಪೊಟ್ಟಣಕ್ಕೆ, ಆದೀತು ಎಂದು ಯೋಚಿಸುವ ಸ್ಥಿತಿ ಉಂಟಾಗಿದೆ. ಬಹಳೇ ಜನಕ್ಕೆ ತಮ್ಮ ಈ ಸ್ಥಿತಿಗೆ ಕಾರಣರು ಯಾರು ಎಂಬುದು ಮಾತ್ರ ತಲೆಗೆ ಹೋಗುತ್ತಲೇ ಇಲ್ಲ. ಯಾಕೆಂದರೆ ಅವರ ತಲೆಯಲ್ಲಿ ಅಂಧ ದೇಶಭಕ್ತಿ, ವ್ಯಕ್ತಿ ಅಂಧಾರಾಧನೆ, ಪಾಕಿಸ್ತಾನ, ಚೀನಾ, ಮಸೀದಿ, ರಾಮ, ಹಿಂದೂರಾಷ್ಟ್ರ, ಆತ್ಮ ನಿರ್ಭರ ಬರೀ ಇಂತಹ ವಿಚಾರಗೇ ತುಂಬಿ ಕೇಕೆ ಹಾಕುತ್ತಿವೆ.
ದೇಶದ ಜನರ ಬಾಳು ಮಾತ್ರ ಬರ್ಬರವಾಗಿಹೋಗಿದೆ. ಜನರ ಮೆದುಳು ಇಂಥಾ ಭಾವುಕ ವಿಚಾರಗಳಿಂದ ಗೋಜಲು ಗೋಜಲಾಗಿ ಹೋಗಿದೆ. ಹೀಗೆ ಸಮುದಾಯವನ್ನು ಯಾಮಾರಿಸಲಾಗಿದೆ. ನೈಜ ಸಮಸ್ಯೆಗಳಿಗೆ ಗುರುತರವಲ್ಲದ ಕಾರಣಗಳನ್ನು ಮುಂದಿಟ್ಟು ಜನತೆಯ ಆಕ್ರೋಷ ಪ್ರತಿರೋಧಗಳಿಂದ ವ್ಯವಸ್ಥಿತವಾಗಿ ಆಳುವವರು ತಪ್ಪಿಸಿಕೊಳ್ಳುತ್ತಿದ್ದಾರೆ. ಹಾಗೆ ತಪ್ಪಿಸಿಕೊಳ್ಳುವುದಕ್ಕೆ ಬೇಕಾದ ಅಗತ್ಯ ವಿಚಾರಗಳ ಕಂತೆಗಳೇ ಅವರ ಅವರ ಮುಂದೆ ಮುಗಿಯದಷ್ಟಿವೆ.
ತಾವು ಹೇಗೆ ಬಲಿಪಶುಗಳಾಗಿದ್ದೇವೆ ಎಂಬುದೇ ಅರ್ಥವಾಗದ ಮೊಂಡು ಮೆದುಳಿನ ಹುಂಬರ ದೊಡ್ಡ ಸಮುದಾಯ ನಮ್ಮ ದೇಶದಲ್ಲಿದೆ. ಕಣ್ಣಿಗೆ ಕಾಣದ ಗಿಲೋಟಿನ್ ಯಂತ್ರವೊಂದು ಈಗಾಗಲೇ ಈ ದೇಶದಲ್ಲಿ ತನ್ನ ಕೆಲಸ ಆರಂಭಿಸಿದೆ. ಪ್ರತಿಯೊಬ್ಬ ಪ್ರಜೆಯ ತಲೆಯೂ ಅದರೊಳಗೆ ಸಿಕ್ಕು ಛೇದನವಾಗುತ್ತಿದೆ. ಹೀಗೆ ಮಾನಸಿಕವಾಗಿ ಕೊಲ್ಲುವ ವ್ಯವಸ್ಥೆಯೇ ಅರ್ಥವಾಗದ ಜನ ಎಚ್ಚೆತ್ತುಕೊಳ್ಳುವ ಕಾಲ ಬರಬಹುದೇ ಎಂಬ ನಿರೀಕ್ಷೆಯೂ ಹುಸಿಯಾಗುತ್ತಿದೆ.
ನಾಳೆ ಈ ದೇಶದಲ್ಲಿ ಬಡವರ ಬಗ್ಗರ ನೌಕರರ ಬ್ಯಾಂಕ್ ಅಕೋಂಟು ಇದ್ದಕ್ಕಿದ್ದಂತೆ ಮಾಯವಾಗಬಹುದು, ಇನ್ನೂ ಕೋಟಿಕೋಟಿ ಉದ್ಯೋಗಿಗಳು ಕೆಲಸ ಕಳೆದುಕೊಂಡು ಮನೆ ಸೇರಬಹುದು. ಆದರೆ ಒಂದು ಮಾತ್ರ ಸತ್ಯ ಈ ದೇಶದಲ್ಲಿ ನಲವತ್ತು ಸಾವಿರ ರೂಪಾಯಿ ಬೆಲೆ ಅಣಬೆ ತಿನ್ನುವಾತ ಮಾತ್ರ ಸುಖವಾಗಿದ್ದಾನೆ, ಹೋದ ಹೋದಲ್ಲೊಂದು ವೇಷ ಹಾಕುತ್ತಾ, ಅರಚುತ್ತಾ, ಮಾತಾಡಾಬೇಕಾದಾಗ ಮೌನವಾಗಿ, ತನಗೆ ಅನುಕೂಲ ಇದ್ದಾಗ ಕೂಗು ಮಾರಿಯಾಗಿ ಅರಾಮವಾಗಿದ್ದಾನೆ.
ಅಷ್ಟೇ ಅಲ್ಲ ದೇಶದ ಕೆಲವೇ ಕೆಲವು ಬಂಡವಾಳ ಶಾಹಿಗಳಲ್ಲಿ ಅಗ್ರಗಣ್ಯನಾಗಿರುವ ಅಂಬಾನಿ ಮಾತ್ರ ದೇಶದ ಸ್ಥಿತಿ ಮೂರಾಬಟ್ಟೆಯಾಗಿದ್ದರೂ ಹತ್ತುಪಟ್ಟು ದೊಡ್ಡ ಶ್ರೀಮಂತನಾಗಿದ್ದಾನೆ. ಅವನನ್ನು ಸಾಕುವ ಅವನಿಗಾಗಿಯೇ ಅಧಿಕಾರವನ್ನು ಸಮರ್ಪಿಸಿಕೊಂಡಿರು ಅವನ ಗುಲಾಮ ಈ ದೇಶವನ್ನು ಆಳುತ್ತಿದ್ದಾನೆ.
ನಿರುದ್ಯೋಗ ಭಾಗ್ಯ ನೀಡಿದವನೇ ಆತ್ಮಹತ್ಯೆ, ಅಶಾಂತಿ, ಅಸಹನೆ ಹಿಂಸಾಚಾರದ ಜನಕನೂ ಆಗುತ್ತಾನೆ. ಈ ಸತ್ಯಗಳನ್ನು ನಮ್ಮ ಯುವ ಜನತೆ ಬಹಬೇಗ ಅರ್ಥ ಮಾಡಿಕೊಳ್ಳುತ್ತಾರೆ ಎಚ್ಚೆತ್ತುಕೊಳ್ಳುತ್ತಾರೆ ಎಂಬ ಆಶಾ ಭಾವದೊಂದಿದೆ ಕಾಯುತ್ತಿದ್ದೇನೆ..!
ಸುದ್ದಿದಿನ.ಕಾಂ|ವಾಟ್ಸಾಪ್|9980346243