ನೆಲದನಿ

ಪರಿಸರ ವಿಜ್ಞಾನ ಎನ್ನುವುದು ಖಾಯಂ ಆರ್ಥಿಕತೆ

Published

on

ಸುಂದರ್ ಲಾಲ್ ಬಹುಗುಣ
  • ಮ ಶ್ರೀ ಮುರಳಿ ಕೃಷ್ಣ, ಬೆಂಗಳೂರು

ಮೇಲಿನ ಘೋಷಣೆ ಪ್ರಸಿದ್ಧ ಪರಿಸರವಾದಿ ಸುಂದರಲಾಲ್ ಬಹುಗುಣ ಅವರದ್ದು. ತೊಂಬತ್ತ್ನಾಲ್ಕು ವರ್ಷದ ಅವರು ಶುಕ್ರವಾರ ಋಷಿಕೇಶ್ ನ ಎಐಐಎಂಎಸ್ ಆಸ್ಪತ್ರೆಯಲ್ಲಿ ಕೋವಿಡ್ ಗೆ ಬಲಿಯಾದರು.

ಈಗಿನ ಉತ್ತರಖಾಂಡದ ತೆಹರಿಯ ಬಳಿಯ ಮರೋಡ ಎಂಬ ಹಳ್ಳಿಯೊಂದರಲ್ಲಿ 1927ರಲ್ಲಿ ಜನಿಸಿದ ಸುಂದರಲಾಲ್ ಬಹುಗುಣ ಗಾಂಧೀವಾದಿಗಳಾಗಿ ಸಾರ್ವಜನಿಕ ಜೀವನವನ್ನು ಪ್ರವೇಶಿಸಿದರು. ಬ್ರಿಟೀಶರ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು.

ಅವರು ಅಸ್ಪರ್ಶ್ಯತೆ ವಿರುದ್ಧ ಹೋರಾಡುತ್ತಲೇ, 1965-1970ರ ಅವಧಿಯಲ್ಲಿ ಮಹಿಳೆಯರನ್ನು ಸಂಘಟಿಸಿ ಪಾನನಿರೋಧ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ವಿಮಲಾರನ್ನು ತಮ್ಮ ಬಾಳಸಂಗಾತಿಯನ್ನಾಗಿ ಮಾಡಿಕೊಂಡಾಗ ಅವರು ವಿಧಿಸಿದ ಒಂದು ಷರತ್ತು- ಗ್ರಾಮೀಣ ಪ್ರದೇಶದ ಒಂದು ಹಳ್ಳಿಯಲ್ಲಿ ಆಶ್ರಮವನ್ನು ಕಟ್ಟಿ, ಅದರಲ್ಲೇ ನೆಲಸಬೇಕೆಂಬುದಾಗಿತ್ತು!

1970ರಲ್ಲಿ ಗರ್ವಾಲ್ ಹಿಮಾಲಯದ ಅಲಕಾನಂದ ನದಿಯಲ್ಲಿ ಪ್ರವಾಹವಾಗಿ ಅನೇಕ ಹಳ್ಳಿಗಳು, ಸೇತುವೆಗಳು, ರಸ್ತೆಗಳು ಕೊಚ್ಚಿಕೊಂಡು ಹೋದವು. ಆ ಪ್ರದೇಶದಲ್ಲಿ ಸಿವಿಲ್ ಇಂಜಿನಿಯರಿಂಗ್ ಗೆ ಸಂಬಂಧಿಸಿದ ಅನೇಕ ನಿರ್ಮಾಣ ಕಾರ್ಯಗಳು ಜರಗುತ್ತಿದ್ದವು.

ನಂತರ ಭೂಕುಸಿತಗಳು ಹೆಚ್ಚಿದವು. ಅಲ್ಲದೆ, ದೊಡ್ಡ ಕಂಟ್ರಾಕ್ಟುದಾರರಿಗೆ ಅರಣ್ಯ ಪ್ರದೇಶಗಳಲ್ಲಿ ಮರಮಟ್ಟು(ಚೌಬೀನೆ)ಗಳಿಗಾಗಿ ಮರಗಳನ್ನು ಕಡಿಯುವ ಪರವಾನಗಿಯನ್ನು ನೀಡಲಾಗಿತ್ತು. ಇದರ ವಿರುದ್ಧ ಕ್ರಮೇಣ ಚಂಡಿಪ್ರಸಾದ್ ಭಟ್ಟ್ ಮುಂತಾದ ಪರಿಸರವಾದಿಗಳು ಹೋರಾಟದಲ್ಲಿ ತೊಡಗಿದರು. ಕ್ರಮೇಣ ಈ ಚಳವಳಿ ಕಾವನ್ನು ಪಡೆದುಕೊಂಡಿತು.

ಲೇಖಕ : ಮ ಶ್ರೀ ಮುರಳಿ ಕೃಷ್ಣ

ನಂತರ ಮಾರ್ಚಿ 1974ರಲ್ಲಿ ರೇಣಿ ಹಳ್ಳಿಯಲ್ಲಿ (ಇದರ ಸಮೀಪವೇ ಕಳೆದ ವರ್ಷ ಹಿಮನದಿ(ಗ್ಲೇಷಿಯರ್) ಸ್ಪೋಟಿಸಿದ್ದು), ಕಂಟ್ರಾಕ್ಟುದಾರರ ಕೆಲಸಗಾರರು ಮರಗಳನ್ನು ಕಡಿಯಲು ಶುರುಮಾಡಿದಾಗ, ಒಬ್ಬ ಹುಡುಗಿ ಆ ಗ್ರಾಮದ ಮಹಿಳಾ ದಳದ ಮುಖ್ಯಸ್ಥೆ ಗೌರಾ ದೇವಿಗೆ ಈ ವಿಷಯವನ್ನು ತಿಳಿಸಿದಳು. ಗೌರಾ ದೇವಿ ಸುಮಾರು 25 ಮಹಿಳೆಯರನ್ನು ಸಂಘಟಿಸಿ, ಮರಗಳ ಕಡಿಯುವ ಪ್ರದೇಶಕ್ಕೆ ತೆರಳಿದರು.

ಆಗ ಕೆಲಸಗಾರರು ಬಂದೂಕುಗಳನ್ನು ತಮ್ಮತ್ತ ಗುರಿಮಾಡಿದಾಗ, ಅಲ್ಲಿ ನೆರೆದಿದ್ದ ಮಹಿಳೆಯರು ಮರಗಳನ್ನು ಅಪ್ಪಿಕೊಂಡರು. ‘ ಚಿಪ್ಕೊ ‘ ಎಂದರೆ ‘ ಅಪ್ಪಿಕೊ ‘ ಎಂದರ್ಥ. ತರುವಾಯ ಈ ಚಳವಳಿ ವಿಸ್ತೃತ ರೂಪವನ್ನು ಪಡೆಯಿತು. ಇದರ ಮುಂಚೂಣಿಯಲ್ಲಿದ್ದರು ಸುಂದರಲಾಲ್ ಬಹುಗುಣ, ಚಂಡಿಪ್ರಸಾದ್ ಭಟ್ಟ್, ಗೌರಾ ದೇವಿ, ಸುದೇಶ ದೇವಿ ಮತ್ತಿತರ ಕೆಲವು ಮಹಿಳೆಯರು. ಒಂದರ್ಥದಲ್ಲಿ, ಇದು ಎಕೊ-ಫೆಮನಿಸಂನ ಪ್ರಾರಂಭಿಕ ನಡೆ ಎನ್ನಬಹುದು.

‘ ಚಿಪ್ಕೊ ‘ ಚಳವಳಿಯನ್ನು ವಿಸ್ತರಿಸುತ್ತ 1980ರ ದಶಕದ ಆದಿಯಲ್ಲಿ ಸುಂದರಲಾಲ್ ಬಹುಗುಣರು ಹಿಮಾಲಯದಲ್ಲಿ ಸುಮಾರು 5,000 ಕಿಮಿ ಪಾದಯಾತ್ರೆಯನ್ನು ನಡೆಸಿದರು. ನಂತರ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರನ್ನು ಭೇಟಿ ಮಾಡಿದರು. ಇದರ ಪರಿಣಾಮವಾಗಿ, ಪ್ರಧಾನಿಯವರು 15 ವರ್ಷಗಳ ಕಾಲ ಮರ ಕಡಿಯುವುದನ್ನು ನಿಷೇಧಿಸಿದರು.

ಇಂತಹ ಚಳವಳಿಯ ನಡುವೆಯೇ, 1978ರಲ್ಲೇ ತೆಹರಿ ಅಣೆಕಟ್ಟಿನ ಯೋಜನೆಯ ಕಾಮಗಾರಿ ಕೆಲಸಗಳು ಪ್ರಾರಂಭವಾದವು. ಇದರ ವಿರುದ್ಧ ಸುಂದರಲಾಲ್ ಬಹುಗುಣ ಮತ್ತು ಇತರ ಪರಿಸರ ಹೋರಾಟಗಾರರು ತಮ್ಮ ದನಿಯನ್ನು ಎತ್ತಿದರು. ಅಹಿಂಸಾತ್ಮಕ ಹೋರಾಟಗಳನ್ನು ಹಮ್ಮಿಕೊಂಡರು. ಭಾಗೀರಥಿ ನದಿಯ ದಡದಲ್ಲಿ ಸುಂದರಲಾಲ್ ಬಹುಗುಣರು ಅನೇಕ ಬಾರಿ ಉಪವಾಸದ ಸತ್ಯಾಗ್ರಹದಲ್ಲಿ ನಿರತರಾದರು.

1995ರಲ್ಲಿ ಅಂದಿನ ಪ್ರಧಾನಿ ಪಿ ವಿ ನರಸಿಂಹ ರಾವ್ ನೀಡಿದ ಪರಾಮರ್ಶೆ ಸಮಿತಿಯ ರಚನೆಯ ಆಶ್ವಾಸನೆಯ ಮೇರೆಗೆ ಅವರು ತಮ್ಮ 45 ದಿನಗಳ ಉಪವಾಸವನ್ನು ಕೊನೆಗೊಳಿಸಿದರು. ದೇವೇಗೌಡರು ಪ್ರಧಾನಿಯಾಗಿದ್ದಾಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ದೆಹಲಿಯ ರಾಜಘಾಟ್ನಲ್ಲಿ 74 ದಿನಗಳ ಕಾಲ ನಿರಶನವನ್ನು ನಡೆಸಿದ್ದರು.

ಕೊನೆಗೆ, ಸರ್ವೋಚ್ಚ ನ್ಯಾಯಾಲಯದಲ್ಲಿ ಹತ್ತು ವರ್ಷಗಳ ಕಾಲ ಕೇಸು ಜರುಗಿತು. ಆದರೂ 2001ರಲ್ಲಿ ಅಣೆಕಟ್ಟಿನ ಕಾರ್ಯ ಮುಂದುವರೆಯಿತು. ಸುಂದರಲಾಲ್ ಬಹುಗುಣರು ದಸ್ತಗಿರಿಗೆ ಒಳಗಾದರು. ತೆಹರಿ ಸಮೀಪವಿದ್ದ ಅವರ ನಿವಾಸವೂ ಮುಳುಗಡೆಯಾಯಿತು.

‘ ಚಿಪ್ಕೊ’ ಆಂದೋಳನದಿಂದ ಪ್ರಭಾವಿತಗೊಂಡ ಪಾಂಡುರಂಗ ಹೆಗಡೆ 1980ರ ದಶಕದಲ್ಲಿ ‘ ಅಪ್ಪಿಕೊ ‘ ಚಳವಳಿಯನ್ನು ನಮ್ಮ ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿ ಶುರುಮಾಡಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಮತ್ತು ಇತರ ಕೆಲವು ಸಂದರ್ಭಗಳಲ್ಲಿ ಸುಂದರಲಾಲ್ ಬಹುಗುಣರು ಕರ್ನಾಟಕಕ್ಕೆ ಭೇಟಿ ನೀಡಿದ್ದರು. ಅವರು ಪದ್ಮವಿಭೂಷಣ, ರೈಟ್ ಲೈವ್ಲಿಹುಡ್ ಮತ್ತು ಇತರ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಅವರಿಗೆ ಅಂತಿಮ ನಮನಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version