ಲೋಕಾರೂಢಿ
ಇದು ಬದುಕು ಮಗ್ಗುಲು ಬದಲಿಸುವ ಹೊತ್ತು..!
ಇದು ಬದುಕು ಮಗ್ಗುಲು ಬದಲಿಸುವ ಹೊತ್ತು
ಅಂದು ಡಿಸೆಂಬರ್ 10, 1914. ಬೆಂಕಿ ಧಗಧಗಿಸಿ ಉರಿಯುತ್ತಿತ್ತು. ಆ ವ್ಯಕ್ತಿ ಬೆಂಕಿಯ ಜ್ವಾಲೆ ಆಗಸದೆತ್ತರಕ್ಕೆ ಚಾಚುತ್ತಿರುವುದನ್ನು ಶಾಂತವಾಗಿ ನೋಡುತ್ತಿದ್ದ. ತನ್ನ 24 ವರ್ಷದ ಪ್ರಯೋಗಗಳು ಕ್ಷಣ ಮಾತ್ರದಲ್ಲಿ ಸುಟ್ಟು ಬೂದಿಯಾಗುತ್ತಿರುವುದು ಆತನಲ್ಲಿ ದುಃಖವನ್ನು ಮಡುವುಗಟ್ಟಿಸುತ್ತಿತ್ತಾ? ಗೊತ್ತಿಲ್ಲ. ಆದರೆ ಆತನಲ್ಲಿ ಆ ತೋರ್ಪಡಿಕೆಗಳಿರಲಿಲ್ಲ. ಅಗ್ನಿಶಾಮಕ ಸಿಬ್ಬಂದಿಗಳು ಶತಪ್ರಯತ್ನ ಮಾಡಿ ಬೆಂಕಿ ಆರಿಸಲು ಪ್ರಯತ್ನಿಸುತ್ತಿದ್ದರು. ಆದರೆ ಬೆಂಕಿಯ ಓಘ ಹಿಡಿತಕ್ಕೆ ಸಿಗುತ್ತಿರಲಿಲ್ಲ. ಊರಿನ ಜನರೆಲ್ಲ ದಿಗ್ಭ್ರಾಂತರಾಗಿ ಮಹಾನ್ ದುರಂತವೊಂದಕ್ಕೆ ಸಾಕ್ಷಿಯಾಗಿ ನಿಂತಿದ್ದರು. ಅಲ್ಲಿ ಶಾಂತವಾಗಿ ನಿಂತಿದ್ದ ವ್ಯಕ್ತಿ ಜಗತ್ತು ಕಂಡ ಖ್ಯಾತ ವಿಜ್ಞಾನಿ ಥಾಮಸ್ ಎಡಿಸನ್ ಹಾಗೂ ಅವತ್ತಿಗೆ ಆತನ ವಯಸ್ಸು 67 ವರ್ಷ!
10 ಕಟ್ಟಡಗಳನ್ನೊಳಗೊಂಡ ಸಮುಚ್ಛಯ ಬೆಂಕಿಗೆ ಆಹುತಿಯಾಗಿ, 24 ವರ್ಷಗಳ ಪ್ರಯತ್ನಗಳು ಸುಟ್ಟು ಕರಕಲಾಗುತ್ತಿರುವುದನ್ನು ನೋಡುತ್ತಾ ನಿಂತಿದ್ದ ಥಾಮಸ್ ಎಡಿಸನ್ ಪಕ್ಕ 24 ವರ್ಷದ ಮಗ ಚಾಲ್ರ್ಸ್ ಬಂದು ನಿಂತಿದ್ದ. ಮಗನ ಬಳಿ ಥಾಮಸ್ ತಣ್ಣನೆಯ ಧ್ವನಿಯಲ್ಲಿ ಹೇಳಿದ್ದ, “ಬೇಗ ಹೋಗಿ ಅಮ್ಮ ಹಾಗೂ ಮನೆಯವರನ್ನೆಲ್ಲ ಕರೆದುಕೊಂಡು ಬಾ. ಬೆಂಕಿ ಇಷ್ಟೆತ್ತರಕ್ಕೆ ಉರಿಯುವುದನ್ನು ಅವರಿನ್ನೆಂದೂ ಜೀವಮಾನದಲ್ಲಿ ನೋಡಲಾರರು.”
ಅಪ್ಪನ ಮಾತನ್ನು ಕೇಳಿ ಚಾಲ್ಸ್ ಅಚ್ಚರಿಗೊಳಗಾದ. “ಅಪ್ಪಾ, ನಮ್ಮ ಕಾರ್ಖಾನೆ ಹೊತ್ತಿ ಉರಿದು ಬೂದಿಯಾಗುತ್ತಿದೆ. ನೀವು ಇಷ್ಟು ಶಾಂತವಾಗಿದ್ದೀರಲ್ಲಾ?”
“ಹೌದು. ನಮ್ಮ ಕಾರ್ಖಾನೆ ಬೂದಿಯಾಗುತ್ತಿದೆ.
ಜೊತೆಗೇ ಇಷ್ಟು ವರ್ಷಗಳ ಕಾಲ ನಾವು ಕಾರ್ಖಾನೆಯಲ್ಲಿ ಮಾಡಿದ ತಪ್ಪುಗಳೂ ಬೂದಿಯಾಗುತ್ತಿವೆ. ನಾಳೆಯಿಂದ ನಮ್ಮ ಹೊಸ ಜೀವನ ಆರಂಭ.” ಎಂದಷ್ಟೇ ಹೇಳಿ ಥಾಮಸ್ ಎಡಿಸನ್ ಮಗನ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದ.
ಮರುದಿನ ಥಾಮಸ್ ಎಡಿಸನ್‍ನನ್ನು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಮಾತನಾಡಿಸಿತು. “ನಾನು 67 ವರ್ಷದವ ಹಾಗೂ ಎಲ್ಲವನ್ನೂ ಕಳೆದುಕೊಂಡ ಒಬ್ಬ ಸಾಮಾನ್ಯ ವ್ಯಕ್ತಿ. ಆದರೆ ನಾಳೆಯಿಂದ ನನ್ನ ಬದುಕು ಹೊಸದಾಗಿ ತೆರೆದುಕೊಳ್ಳುತ್ತದೆ. ನಾಳೆಯೆನ್ನುವುದು ನನಗೆ ಹೊಸ ಆರಂಭ” ಎಂದಿದ್ದ ಥಾಮಸ್ ಎಡಿಸನ್‍ನನ್ನು ವರದಿಗಾರ ಹೆಮ್ಮೆಯಿಂದ ನೋಡಿದ್ದ.
ಬದುಕು ಯಾವ ಕ್ಷಣದಲ್ಲಿ ಎಂತಹ ತಿರುವನ್ನು ಪಡೆಯಬಹುದೆಂಬ ಸಣ್ಣ ಸುಳಿವೂ ನಮಗಿರುವುದಿಲ್ಲ. ಆ ತಿರುವು ಯಶಸ್ಸಿನೆಡೆಗಿರಬಹುದು ಅಥವಾ ಬದುಕೇ ಜರ್ಜರಿತವಾಗುವುದರೆಡೆಗಿರಬಹುದು. ಯಶಸ್ಸಿನೆಡೆಗಾದರೆ ನಮ್ಮ ಓಟ ಸಲೀಸಾಗಿ ಮುಂದುವರೆಯುತ್ತದೆ. ಆದರೆ ಕಟ್ಟಿದ ಕನಸಿನ ಸೌಧ, ಆವರೆಗೆ ಮಾಡಿದ ಸಾಧನೆ, ನಿದ್ದೆಗೆಟ್ಟು ನಡೆಸಿದ ಪ್ರಯತ್ನಗಳು, ಮಾನವ ಸಂಬಂಧಗಳು ಒಂದೇ ಕ್ಷಣದಲ್ಲಿ ಪಾತಾಳಕ್ಕಿಳಿಯುವುದಿದೆಯಲ್ಲ, ಆ ಕ್ಷಣ ಬದುಕು ಒಂದು ನಿಲುಗಡೆಗೆ ಬಂದುಬಿಡುತ್ತದೆ. ಆ ಹೊತ್ತು ನಮ್ಮವರಾರು ಜೊತೆಗಿರುವುದಿಲ್ಲ, ಅಷ್ಟೂ ಕಷ್ಟಗಳ ಮೂಟೆ ಹೆಗಲೇರಿ ಕುಳಿತಿರುತ್ತದೆ. ಇಂತಹ ಸಮಯದಲ್ಲಿ ನಾವು ಹೇಗೆ ಪ್ರತಿಕ್ರಿಸುತ್ತೇವೆ-ಸಂದರ್ಭವನ್ನು ಹೇಗೆ ನಿಭಾಯಿಸುತ್ತೇವೆ ಎನ್ನುವುದರ ಮೇಲೆ ಮುಂದಿನ ಬದುಕು ನಿರ್ಧರಿತವಾಗಿರುತ್ತದೆ.
ಬದುಕು ಒಂದು ನಿಲುಗಡೆಗೆ ಬಂದಿರುತ್ತದೆ ಎಂದೆನಲ್ಲ, ಹೆಚ್ಚಿನ ಜನ ಆ ನಿಲುಗಡೆಯನ್ನು ಒಪ್ಪಿಕೊಂಡುಬಿಡುತ್ತಾರೆ. ಸೋಲು ಅದ್ಯಾವ ಪರಿ ಹಿಂಡಿಹಿಪ್ಪೆ ಮಾಡುತ್ತದೆಯೆಂದರೆ ಯೋಗ್ಯತೆಯಿದ್ದರೂ ಮುಂದಡಿಯಿಡಲು ಮನಸ್ಸಾಗುವುದಿಲ್ಲ. ಎಲ್ಲವನ್ನು ಕಳೆದುಕೊಂಡು ಒಬ್ಬಂಟಿಗನಾದ ಹತಾಶ ಭಾವ ಕಾಡಲಾರಂಭಿಸುತ್ತದೆ. ನೆನಪಿರಲಿ, ದೃಢ ನಿಶ್ಚಯ ಮಾಡಿ ಒಮ್ಮೆ ಈ ಹಂತ ದಾಟಿದ ವ್ಯಕ್ತಿಯನ್ನು ಜಗತ್ತಿನ ಇನ್ಯಾವ ಶಕ್ತಿಯೂ ಸೋಲಿಸಲಾಗುವುದಿಲ್ಲ. ಮಾಡಿದ ಕೆಲಸಗಳು ಹೇಳಹೆಸರಿಲ್ಲದೇ ಹೋಗಬಹುದು, ಆದರೆ ಅದರ ಫಾರ್ಮುಲಾ ನಮ್ಮ ಬಳಿಯೇ ಇರುತ್ತದೆ. ಎಲ್ಲ ಮುಗಿಯಿತು ಎನ್ನುವುದನ್ನು ಬಿಟ್ಟು, ಮತ್ತೊಂದು ಹೊಸ ಅವಕಾಶ ತೆರೆದುಕೊಂಡಿತು ಎಂಬ ನಿಶ್ಚಯ ಮಾಡಬೇಕು. ಹಳೆಯದನ್ನೇ ಹೊಸತಾಗಿ ಕಟ್ಟುವ, ವಿಭಿನ್ನವಾಗಿ ಕ್ರಿಯೆಗಿಳಿಸುವ ಕೆಲಸವಾಗಬೇಕು. ಸಂಬಂಧಗಳ ವಿಷಯದದ್ದಾದರೆ ಪ್ರಯತ್ನಪೂರ್ವಕವಾಗಿ ಮರೆತು ಮುನ್ನಡೆಯಬೇಕು.
ಸೋಲನ್ನು ನೆನೆನೆನೆದು ಅಳುತ್ತಾ ಕೂರುವಷ್ಟು ಬದುಕು ದೀರ್ಘವಾಗಿಲ್ಲ. ಸೋಲು ನಮ್ಮ ಏರುವಿಕೆಗೆ ಮೆಟ್ಟಿಲಾಗಬೇಕೆ ವಿನಃ ಜೀವವನ್ನೇ ಜರ್ಜರಿತವನ್ನಾಗಿಸಿ ಜೀವನವನ್ನು ದುರ್ಬರವಾಗಿಸಬಾರದು. ಸೋಲು ಆವರಿಸಿತಾ? ಸರಿ, ಸೋಲನ್ನು ಮರೆತುಬಿಡಿ, ಆದರೆ ಅದು ಕಲಿಸಿದ ಪಾಠವನ್ನಲ್ಲ. ನಮ್ಮ ಸೋಲು ಸುತ್ತಮುತ್ತಲಿನವರಿಗೆ ಆಡಿಕೊಳ್ಳಲು ವಸ್ತುವಾಗಬಹುದು. ಸುಮ್ಮನೆ ಅವರ ಮಾತನ್ನು ಕೇಳಿಸಿಕೊಂಡು ಬಿಟ್ಟುಬಿಡಿ. ಅವಮಾನವಾದರೆ ಕಷ್ಟಪಟ್ಟು ಸಹಿಸಿಕೊಳ್ಳಿ. ಆದರೆ ಮುಂದೆ ನೀವಿಡುವ ಹೆಜ್ಜೆ ನಿಮ್ಮ ಸೋಲಿಗೆ, ಅವಮಾನಕ್ಕೆ ತಕ್ಕ ಉತ್ತರವಾಗಿರಬೇಕು. ನಿಮ್ಮೆಡೆಗೆ ಬೆರಳು ತೋರಿಸಿ ನಕ್ಕವರು ಅಚ್ಚರಿಯಿಂದ ಬಾಯಿ ಮೇಲೆ ಬೆರಳಿಡುವಂತಾಗಬೇಕು. ಅದನ್ನೆಲ್ಲ ಸಾಧಿಸಲು ನಮ್ಮ ಮಂತ್ರ ಪ್ರಯತ್ನ ಎಂಬುದಾಗಿರಬೇಕು.
ಜೀವನದಲ್ಲಿ ಕಂಫರ್ಟ್ ಝೋನ್ ಇರುವಾಗ ಬೇರೆ ಯೋಚನೆಗಳು ಆವರಿಸುವುದಿಲ್ಲ. ಆದರೆ ನಿಮ್ಮ ಜೊತೆಗೆ ಇರುವವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಬೇಕಾ? ರಿಸ್ಕ್ ತೆಗೆದುಕೊಳ್ಳಿ. ಬರೀ ರಿಸ್ಕ್ ಅಲ್ಲ, ಕ್ಯಾಲ್ಕ್ಯುಲೇಟೆಡ್ ರಿಸ್ಕ್. ನಿಮಗೆ ನೀವೇ ಒಂದು ಗುರಿ ನಿರ್ಧರಿಸಿಕೊಳ್ಳಿ. ಸಮಯಮಿತಿ ಅಳವಡಿಸಿಕೊಳ್ಳಿ. ಇಷ್ಟು ದಿನದಲ್ಲಿ ಯಾ ಇಷ್ಟು ವರ್ಷದಲ್ಲಿ ನಾನು ಇಲ್ಲಿರಬೇಕು ಎಂದು ನಿಶ್ಚಯಿಸಿಕೊಳ್ಳಿ. ಯಾವುದೇ ಅಡೆತಡೆಗಳು ಬಂದಲ್ಲಿ ಅದನ್ನು ಸ್ಮಾರ್ಟ್ ಆಗಿ ಪರಿಹರಿಸಿಕೊಳ್ಳಿ. ಪದೇ ಪದೇ ನೆನಪಿಸಿಕೊಳ್ಳಬೇಕಾದದ್ದು, ಬದುಕು ದೀರ್ಘವಾಗಿಲ್ಲ ಎಂಬ ಸಂಗತಿಯನ್ನು. ಈ ಕ್ಷಣ ನಿರ್ಧರಿಸಿದ್ದನ್ನು ಬರೆದಿಟ್ಟುಕೊಳ್ಳಿ. ಅದರ ಮೇಲೆ ಕೆಲಸ ಪ್ರಾರಂಭಿಸಿ. ಮತ್ತೊಂದು ಬಹುಮುಖ್ಯ ಅಂಶವೆಂದರೆ, ಎಲ್ಲರಿಗೂ ನಾವು ಒಳ್ಳೆಯವರಾಗಿರಲಾಗುವುದಿಲ್ಲ. ಪ್ರತಿಯೊಬ್ಬರೂ ಯೋಚಿಸುವುದು ಅವರವರ ದೃಷ್ಟಿಕೋನದಲ್ಲಿ ಮಾತ್ರ. ಅವರಿಗಾಗಿ ನಾನು ಬದುಕಿದರೆ ನನ್ನ ವ್ಯಕ್ತಿತ್ವ ಕಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ.
ನೀವು ಸೋತಿದ್ದೀರಾ? ಸರಿ, ನಾಳೆ ನಿಮಗೊಂದು ಹೊಸ ಆರಂಭ. ಹೊಸ ಯೋಚನೆ, ಹಳೆ ಅನುಭವ, ಹೊಸ ಹುರುಪು ಇವೆಲ್ಲ ನಿಮ್ಮಲ್ಲಿರಬೇಕಾದ ಸಾಧನ. ತಡ ಮಾಡಬೇಡಿ. ಪ್ರತಿ ಕ್ಷಣವೂ ಅಮೂಲ್ಯ. ನೋಡನೋಡುತ್ತಿದ್ದಂತೆ ನಿಮ್ಮ ಕೆಳಗಿರುವ ವ್ಯಕ್ತಿ ಮೇಲೇರಿಬಿಡಬಹುದು. ಹಾಗೆಂದ ಮಾತ್ರಕ್ಕೆ ಎದುರಿರುವವನು ವೈರಿಯಲ್ಲ, ಅವನು ಕೇವಲ ಪ್ರತಿಸ್ಪರ್ಧಿ ಅಷ್ಟೆ. ಆರೋಗ್ಯಕರ ಸ್ಪರ್ಧೆಯ ಭಾವ ನಿಮ್ಮಲ್ಲಿರಲಿ. ನೆನಪಿಡಿ, ಇದು ಬದುಕು ಮಗ್ಗುಲು ಬದಲಿಸುವ ಹೊತ್ತು.