ದಿನದ ಸುದ್ದಿ

ಲಾಕ್ ಡೌನ್ ತೀರದ ಸಂಕಷ್ಟ ; ಮಂಗಳಮುಖಿಯರ ಸಮಸ್ಯೆಗೆ ಜಿ.ಪಂ ಸದಸ್ಯ ಬಸವಂತಪ್ಪ ಸ್ಪಂದನೆ

Published

on

ಶುಗರ್ ಮಾತ್ರೆ ವಿತರಣೆ ಮಾಡಿದ ಜಿಲ್ಲಾ ಪಂಚಾಯತ್‌ ಸದಸ್ಯ ಬಸವಂತಪ್ಪ.

ಸುದ್ದಿದಿನ,ದಾವಣಗೆರೆ : “ನನಗೆ ವಯಸ್ಸಾಗಿದೆ, ಶುಗರ್‌ ಇದೆ, ಕೈ,ಕಾಲು ನೋವು ಹೊರಹೋಗಲು ಆಗುತ್ತಿಲ್ಲ, ಅಂಗಡಿಗಳು ಲಾಕ್‌ಡೌನ್‌ ಆಗಿರುವುದರಿಂದ ಕಲೆಕ್ಷನ್‌ ಕೂಡ ಇಲ್ಲ. ಶುಭ ಕಾರ್ಯಗಳಲ್ಲಿ ಚೂರು-ಪಾರು ಹಣ ಸಿಗುತ್ತಿತ್ತು. ಆ ದುಡಿಮೆಯೋ ಇಲ್ಲ. ಹೇಗೋ ಹಸಿವು ನೀಗಿಸಿಕೊಳ್ಳುತ್ತೇವೆ. ಆದರೆ ಮಾತ್ರೆ ತೆಗೆದುಕೊಳ್ಳಲು ಹಣವೂ ನಮ್ಮಲ್ಲಿ ಇಲ್ಲದ ಕಾರಣ ಪರದಾಡಬೇಕಾದ ಸ್ಥಿತಿ ಇದೆ“. ಹೌದು, ಇಂತಹ ಮಾತುಗಳನ್ನು ನಗರದಿಂದ ಆರೇಳು-ಕಿಲೋ ಮೀಟರ್‌ ದೂರದಲ್ಲಿನ ಮಲ್ಲಶೆಟ್ಟಿಹಳ್ಳಿ ಹೋಗುವ ದಾರಿಯಲ್ಲಿರುವ ಮನೆಯೊಂದರಲ್ಲಿ ವಾಸವಾಗಿರುವ ಮಂಗಳಮುಖಿ ನಂದನಮ್ಮ ನೋವಿನಿಂದ ನುಡಿಯುತ್ತಾರೆ.

ಲಾಕ್‌ ಡೌನ್‌ ಒಂದು ಕಡೆ ಕೂಲಿ ಕಾರ್ಮಿಕರು, ಅಸಂಘಟಿತರ ವಲಯದ ಆರ್ಥಿಕತೆಯನ್ನು ಮಕಾಡೆ ಮಲಗಿಸಿದೆ. ಆದರೆ ಈ ವಲಯವನ್ನೇ ನಂಬಿಕೊಂಡು ಬದುಕುತ್ತಿದ್ದ ಮಂಗಳಮುಖಿಯರ ಪಾಡು ಹೇಳತೀರದ್ದಾಗಿದೆ. ಕೆಲವರಿಗೆ ಬಿಪಿ ಇದ್ದರೆ, ಇನ್ನೂ ಕೆಲವರಿಗೆ ಶುಗರ್‌ ಸೇರಿದಂತೆ ದೇಹಕ್ಕೆ ಸಂಬಂಧಿಸಿದ ಕಾಯಿಲೆಗಳು ಇದೆ. ಆದರೆ ಅವುಗಳನ್ನು ಗುಣಪಡಿಸಿಕೊಳ್ಳಲು ಅವರ ಬಳಿ ಹಣ ಇಲ್ಲ.
ನಮಗೆ ಅಂಗಡಿ ಮಾಲೀಕರೇ ಧಣಿಗಳು. ಆ ಧಣಿಗಳೇ ಈಗ ಅಂಗಡಿ ಬಾಗಿಲು ಹಾಕಿದ್ದಾರೆ.ಅವರೇ ಈಗ ಕಷ್ಟದಲ್ಲಿದ್ದಾರೆ. ಇಂತದ್ದರಲ್ಲಿ ನಮ್ಮ ಕಷ್ಟ ಯಾವ ಲೆಕ್ಕ. ಅವರು ಚೆನ್ನಾಗಿ ಇದ್ದರೇ, ನಾವು ಚೆನ್ನಾಗಿ ಇರುತ್ತೇವೆ.

ಆದರೀಗ ಅವರೂ ಚೆನ್ನಾಗಿಲ್ಲ, ನಾವೂ ಚೆನ್ನಾಗಿಲ್ಲ. ನಾವು ಕೂಡ ಮನುಷ್ಯರು, ಹೊಟ್ಟೆಪಾಡಿಗಾಗಿ ಜನರ ಬಳಿ ಭಿಕ್ಷೆ ಬೇಡುತ್ತೇವೆ. ಆದರೀಗ ಅದು ಇಲ್ಲ. ನ್ಯಾಯದ ಮೂಲಕ ದುಡಿಯುತ್ತಿದ್ದೇವೆ. ಕೆಲವರು ನಮ್ಮನ್ನು ಕೆಟ್ಟದಾಗಿ ನೋಡುತ್ತಾರೆ. ಆದ್ದರಿಂದ ಸರಕಾರ ನಮ್ಮ ಧ್ವನಿ ಕೇಳಿಸಿಕೊಂಡು ನಮಗೆ ಸೂರು, ಪಡಿತರ, ಆರೋಗ್ಯ ಕಾರ್ಡ್‌ ನೀಡಬೇಕು ಎಂದು ಮಂಗಳಮುಖಿಯರು ಒತ್ತಾಯಿಸುತ್ತಾರೆ.

ಜಿಲ್ಲೆಯಲ್ಲಿ ಅಂದಾಜು 200ಕ್ಕೂ ಹೆಚ್ಚು ಮಂಗಳಮುಖಿಯರು ಇದ್ದು, ಹಲವರು ಉಚ್ಚಂಗಿ ದುರ್ಗ, ಬಾಡಾಕ್ರಾಸ್‌, ಮಂಡಿಪೇಟೆ,ಹಳೆಪೇಟೆ, ಜಯದೇವಸರ್ಕಲ್‌, ಜನದಟ್ಟಣೆ ಪ್ರದೇಶದಲ್ಲಿ ಹೋಗಿ ಜನರು ಕೊಟ್ಟ ಹಣವನ್ನು ತೆಗೆದುಕೊಳ್ಳುತ್ತಿದ್ದರು. ಆದರೀಗ ಕೊರೊನಾ ಸೊಂಕು ಹಿನ್ನೆಲೆಯಲ್ಲಿ ಯಾರು ಕೂಡ ಹೊರಗೆ ಬರುತ್ತಿಲ್ಲದ ಕಾರಣ ಅವರ ಬಳಿ ಹಣವೇ ಇಲ್ಲವಾಗಿದೆ.

ಅಂಗಡಿಗಳು ಬಾಗಿಲು ತೆಗೆದಿದ್ದ ವೇಳೆ ಪ್ರತಿ ದಿನ 200 ರೂ. ನಿಂದ 300 ರೂ. ಸಂಪಾದಿಸುತ್ತಿದ್ದರು. ಅಲ್ಲದೇ ಶುಭಸಮಾರಂಭಗಳಲ್ಲಿಯೂ ಅವರಿಗೆ ಹೆಚ್ಚು ಹಣ ಬರುತ್ತಿತ್ತು. ಎಲ್ಲರೂ ಒಟ್ಟುಗೂಡಿ ಜೀವನ ನಡೆಸುತ್ತಿದ್ದರು. ಆದರೀಗ ಕೈಯಲ್ಲಿ ಹಣವಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಅವರ ರೋಧನೆ ಹೇಳತೀರದ್ದಾಗಿದೆ.

ಗೋಡೌನ್‌ ರೀತಿಯಲ್ಲಿ ಇರುವ ಮನೆಯಲ್ಲಿ ಏಳರಿಂದ-ಎಂಟು ಜನ ಒಟ್ಟಿಗೆ ಇದ್ದಾರೆ. ಶೌಚಾಲಯ ಒಂದೇ ಇದೆ. ಓಡಾಡುವುದಕ್ಕೆ ಸಾರಿಗೆ ಸೌಲಭ್ಯವೂ ಇಲ್ಲ. ಬಿಪಿಎಲ್‌ ಕಾರ್ಡ್‌ ಸೌಲಭ್ಯವು ಇಲ್ಲದ ಕಾರಣ ಪಡಿತರ ಸಿಗುವುದು ಕಷ್ಟವಾಗಿದೆ. ಜಿಲ್ಲಾಡಳಿತ, ಸಂಘ ಸಂಸ್ಥೆಗಳು ಕೊಡುವ ಆಹಾರವನ್ನೇ ಸದ್ಯ ಉಪಯೋಗಿಸುತ್ತಿದ್ದಾರೆ. ಇದು ಕೂಡ ಕೆಲವೇ ದಿನಗಳಲ್ಲಿ ಖಾಲಿಯಾಗಲಿದ್ದು, ಮುಂದೇನೂ ಎಂಬ ಪ್ರಶ್ನೆ ಸದ್ಯ ಉಳಿದಿದೆ.

  • ನಾವು ಮಂಗಳಮುಖಿಯರು, ಭಿಕ್ಷೆ ಬೇಡುತ್ತಿದ್ದ ನಮಗೆ ಈಗ ಕೆಲಸವಿಲ್ಲ. ನನಗೆ ಶುಗರ್‌ ಇದೆ. ಶುಗರ್‌ ಮಾತ್ರೆ ತರೋದಕ್ಕೆ ಸಾರಿಗೆ ಸೌಲಭ್ಯವೂ ಇಲ್ಲ, ಹಣವೂ ಇಲ್ಲ. ಜಿಲ್ಲಾ ಪಂಚಾಯಿತಿ ಸದಸ್ಯ ಬಸವಂತಪ್ಪ ತಂದುಕೊಟ್ಟಿದ್ದಾರೆ. ಆದರೆ ನನ್ನಂತೆಯೇ ಅನೇಕರು ಕಾಯಿಲೆಯಿಂದ ಬಳಲುತ್ತಿದ್ದು, ಅವರ ನೆರವಿಗೆ ಸರಕಾರ ಬರಲಿ.

| ನಂದನಮ್ಮ, ಮಂಗಳಮುಖಿ

  • ಮಂಗಳಮುಖಿಯರು ಹಸಿವಿನಿಂದ ಬಳಲುತ್ತಿದ್ದ ಕಾರಣ ಅವರಿಗೆ ಆಹಾರದ ಕಿಟ್‌ ನೀಡಲಾಗಿದೆ. ಮಂಗಳಮುಖಿಯೊಬ್ಬರು ಶುಗರ್‌ದಿಂದ ಬಳಲುತ್ತಿದ್ದು , ಅವರಿಗೆ ಸಿಟಿಯಿಂದ ತಂದು ಕೊಡಲಾಗಿದೆ.

| ಬಸವಂತಪ್ಪ, ಜಿಲ್ಲಾ ಪಂಚಾಯತ್‌ ಸದಸ್ಯ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version