ಅಂತರಂಗ

ಮುದ್ದೆಯಂತಾ ಊಟವಿಲ್ಲ, ಸಿದ್ದನಂತಾ ದೇವನಿಲ್ಲ..!

Published

on

ತ್ಮೀಯರೇ 12ನೇ ಶತಮಾನ ಕಂಡ ಶರಣ ಶ್ರೇಷ್ಠರಲ್ಲಿ ಮಧ್ಯ ಕರ್ನಾಟಕದಲ್ಲಿ ಜನಿಸಿದ ‘ವಿಶ್ವಬಂಧು ಮರುಳಸಿದ್ದರು’ ಸಹ ಒಬ್ಬರು, ಶರಣರೇ ಹೇಳುವಂತೆ ಮರುಳಸಿದ್ದರು ನಡೆದಂತೆ ನುಡೆದರೆ, ಬಸವಣ್ಣನವರು ನುಡಿದಂತೆ ನಡೆದವರು.

ಅಂದಿನ ಸಮಾಜದಲ್ಲಿನ ಅನೈಕ್ಯತೆ,ಜಾತೀಯತೆ,ಪ್ರಾಣಿ ಬಲಿ,ಪಟ್ಟಭದ್ರ ಹಿತಾಸಕ್ತಿಗಳ ಶೋಷಣೆ ಇತ್ಯಾದಿ ಸಾಮಾಜಿಕ ಪಿಡುಗುಗಳ ವಿರುದ್ದ ಪ್ರಭಲ ಧ್ವನಿಯನೆತ್ತಿ ಹೋರಾಡಿ ಸಂಪೂರ್ಣ ಯಶ ಕಂಡವರು ಸಿದ್ದಿಪುರುಷ ‘ಶ್ರೀ ಮರುಳಸಿದ್ದರು’.

ಸಾಮಾಜಿಕ ಮೌಲ್ಯಗಳನ್ನು ಜನಮಾನಸದಲ್ಲಿ ಭಿತ್ತಿದ ಕಾರಣದಿಂದಲೇ ಇವರಿಗೆ ‘ವಿಶ್ವಬಂಧು’ ಎಂಬ ಅನ್ವಯಿಕ ನಾಮಬಲ ದೊರೆತು ಜಗಕೆ ವಿಶ್ವಬಂಧು ಮರುಳಸಿದ್ದರೆಂದೇ ಖ್ಯಾತನಾಮರಾದರು.ಸಿದ್ದರ ಕಾರ್ಯಕ್ಷೇತ್ರ ಕೇವಲ,ಕಗ್ಗಲ್ಲುಪುರ, ಕೇತನಹಳ್ಳಿ,ಉಜ್ಜಯಿನಿಗೆ ಮಾತ್ರವೇ ಸೀಮಿತವಾಗದೇ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲೂ ಶರಣರ ಕ್ರಾಂತಿಯ ನಡೆಯು ಸೂರ್ಯ ಪ್ರಭೆಯ ರಷ್ಮಿಯಂತೆ ವಿಶ್ವವ್ಯಾಪಕತೆಯ ವಿಸ್ತಾರತೆಯನ್ನು ಹೊಂದಿತ್ತು ಎಂದರೆ ಅತಿಶಯೋಕ್ತಿ ಎನಿಸಲಾರದು.

ಮರುಳಸಿದ್ದರ ಕಾಯಕ ಸಿದ್ದಿ ಕ್ಷೇತ್ರಗಳು ಅಸಂಖ್ಯಾತವಾಗಿವೆ.ಅಂತಹುಗಳಲ್ಲಿ ಪರಮ ಪುಣ್ಯ ಕ್ಷೇತ್ರಗಳಲ್ಲಿ ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನ :ತೂಲಹಳ್ಳಿ”ಯೂ ಸಹ ಒಂದಾಗಿತ್ತು. ಮರುಳಸಿದ್ದರು ಬಾಲ್ಯಾವಸ್ಥೆಯಲ್ಲಿ ಪಶುಪಾಲನೆಯ ಸಮಯದಲ್ಲಿ ಈ ಗ್ರಾಮದ ಹುಲ್ಲುಗಾವಲಿನ ಪ್ರದೇಶದಲ್ಲಿ ಪಶುಗಳನ್ನು ಮೇಹಿಸುತ್ತಾ ಮರಗಳಿಗೆ ಉಯ್ಯಾಲೆಯನ್ನು ಕಟ್ಟಿ ವಾರಿಗೆಯ ಕೆಳೆಯರೊಂದಿಗೆ ಉಯ್ಯಾಲೆ ಆಡಿದ್ದರಿಂದ ಈ ನಮ್ಮ ಗ್ರಾಮಕ್ಕೆ ‘ಉಯ್ಯಲೆಹಳ್ಳಿ , ತೂಗಿದುಯ್ಯಾಲೆಹಳ್ಳಿ’ ಎಂತಲೂ ಕಾಲಾಂತರದಲ್ಲಿ ತೂಲಹಳ್ಳಿ ಎಂತಲೂ ಕರೆಯುವುದು ರೂಢಿಗತವಾಗಿದೆ.ವಿಶ್ವಂಧು ಮರುಳಸಿದ್ದರಿಗೆ ಆಶ್ರಯವಿತ್ತ ಕಗ್ಗಲ್ಲು ಮನೆತನದವರು (ವಂಶಿಗರು) ತೂಲಹಳ್ಳಿ ಗ್ರಾಮವೊಂದರಲ್ಲೆ 250 ರಿಂದ 350 ಮನೆಗಳು ಕಾಣ ಸಿಗುವುದು ಸೋಜಿಗದ ಸಂಗತಿಯೇ ಸರಿ.

ಈ ಗ್ರಾಮವು ಹೆಚ್ಚು ಹಸುಗಳನ್ನು ಹೊಂದಿ ಸಮೃದ್ಧವಾದ ಹಾಲು ನೀಡುತ್ತಿದ್ದರಿಂದ ‘ವಿಶ್ವಬಂಧು ಮರುಳಸಿದ್ದರು’ ಸಂಚಾರಕ್ಕೆಂದು ಹೊರಟಾಗ ಆಶೀರ್ವವದಿಸಿದರೆಂಬುದುದು ಪ್ರತೀತಿ ಇದೆ. “ಇರದೆ ಬಿಕ್ಷವ ಬೇಡಿ ವರಸುಧೆಯ ಹರಕೆಯಂ ಕೊಟ್ಟು ಹಯನ್ ಹಳ್ಳವೆನುತಾಗ ವರಮೂರ್ತಿ ನಡೆದನಂದು” ಎಂಬುದಾಗಿ ದೇವ(ದೇಪ) ಕವಿಯೇ ತನ್ನ ‘ಮರುಳಸಿದ್ದ ಕಾವ್ಯ’ ಕೃತಿಯಲ್ಲಿ ನುಡಿಗಾಣಿಸಿದ್ದಾನೆ.ಇಂದಿಗೂ ಸಹ ಗ್ರಾಮದ ಹೃದಯ ಭಾಗದಲ್ಲಿ ಶ್ರೀ ವಿಶ್ವಬಂಧು ಮರುಳಸಿದ್ದರ ದೇವಸ್ಥಾನವಿದ್ದು, ಈ ಬಗ್ಗೆ ಸ್ವಾತಂತ್ರ್ಯ ಪೂರ್ವದ ಗೆಜೆಟ್ ನಲ್ಲಿ ಈ ಬಗ್ಗೆ ಸವಿವರವಾದ ಮಾಹಿತಿಯೂ ಸಹ ಲಭ್ಯವಿದೆ.ಈ ಗ್ರಾಮವೂ ನಾಡಿನ ಸರ್ವಶ್ರೇಷ್ಠ ಮಠ ಪರಂಪರೆಯಲ್ಲಿ ಒಂದಾದ ಶ್ರೀ ತರಳಬಾಳು ಹೃಹನ್ಮಠಕ್ಕೆ ಇರ್ವ ದಿಮಂತ ಸಂತರನ್ನು ನೀಡಿದ ಕೀರ್ತಿಯು ಈ ತೂಲಹಳ್ಳಿಯದ್ದಾಗಿದೆ.

ತರಳಬಾಳು ಗುರು ಪರಂಪರೆಯ ೧೯ನೇಯ ತರಳಬಾಳು ಜಗದ್ಗುರುಗಳಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಗುರುಶಾಂತ ರಾಜದೇಶಿಕೇಂದ್ರ ಮಹಾಸ್ವಾಮಿಗಳವರನ್ನ ಹಾಗೂ ಚರಪಟ್ಟಾಧ್ಯಕ್ಷರಾಗಿದ್ದ ಪೂಜ್ಯ ಶ್ರೀ ಮನ್ನಿರಂಜನ ಪ್ರಣವ ಸ್ವರೂಪಿ ಕಾಶಿಮಹಾಲಿಂಗ ಸ್ವಾಮಿಗಳಿರ್ವರನ್ನು ಶ್ರೀ ಮಠಕ್ಕೆ ನೀಡಿದೆ. ತರುವಾಯ 20ನೇಯ ಜಗದ್ಗುರುಗಳಾದ ದಿಟ್ಟ ಹೆಜ್ಜೆಯ ಧೀರಗುರು ಜಗದ್ವಿಖ್ಯಾತ, ಸಂತರ ಸಂತ ಶ್ರೀ ಶ್ರೀ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಈ ಸಿದ್ದರ ತಪೋ ಭೂಮಿಯನ್ನು ಯಾವಾಗಲೂ ‘ಮರಿ ಉಜ್ಜಯನಿ’ ಎಂದೇ ಸಂಭೋದಿಸುತ್ತಿದ್ದರು.

ಗುರುವರ್ಯರ ನೆನವಿಗಾಗಿ ಹಾಗೂ ಇಲ್ಲಿನ ಜನತೆಗೆ ಅಕ್ಷರ ದಾಸೋಹ ನೀಡಲೂ1968 ರಲ್ಲಿಯೇ ಭವ್ಯವಾದ “ಶ್ರೀ ತರಳಬಾಳು ಸಿದ್ದೇಶ್ವರ ಪ್ರೌಢಶಾಲೆ” ಎಂಬ ಹೆಸರಿನಲ್ಲಿ ಪ್ರೌಢಶಾಲೆಯನ್ನು ಸಹ ತೆರೆದರು…ಇಂದಿಗೆ ಈ ಶಾಲೆಯು 50ವರ್ಷಗಳನ್ನು ಪೂರೈಸಿರುವುದು ಸಂತಸದ ಸಂಗತಿ. ಶ್ರೀ ಶ್ರೀ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಲಿಂಗೈಕ್ಯರಾದಗ ಪೂಜ್ಯರ ಪ್ರಥಮ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಗುರುವರ್ಯರ ಪ್ರಿಯವಾದ ಮರಿ ಉಜ್ಜಯಿನಿ ಖ್ಯಾತಿಯ ತೂಲಹಳ್ಳಿಯಲ್ಲಿ 1993ರಲ್ಲಿ ಜಗದ್ವಂದ್ಯ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಪಾವನ ಸಾನಿಧ್ಯದಲ್ಲಿ ನೆರವೇರಿಸಿದ್ದು ಇಲ್ಲಿನ ಸ್ಥಳ ಮಹಿಮೆಯನ್ನು ಸೂಚಿಸುತ್ತದೆ.

ಈ ಸಿದ್ದರ ಪರಮ ಪವಿತ್ರ ಭೂಮಿಯಲಿ ಪ್ರತಿವರ್ಷದ ಸಂಪ್ರದಾಯದಂತೆ ಈ ವರ್ಷವೂ ಶ್ರೀ ವಿಶ್ವಬಂಧು ಮರುಳಸಿದ್ದ ಸ್ವಾಮಿಯ ಮಹಾರಥೋತ್ಸವವು ಶಿವರಾತ್ರಿಯ ನಂತರದ ಪಂಚಮಿಯ ದಿನದಂದು (ಈ ವರ್ಷ 11-03-2019)ರ ಸಂಜೆ ಗೋಧೂಳಿಯ ಸುಸಮಯದಿ ಸೂರ್ಯನ ಹೊಂಬಣ್ಣದ ರಷ್ಮಿಯ ಸಕೋಮಲ ಸ್ಪರ್ಶದಲಿ.ನಾದ ನಿನಾದದ ಸಮ್ಮಿಲನದ ಝೇಂಕಾರದೊಂದಿಗೆ ಸಕಲ ಸದ್ಭಕ್ತಾಧಿಗಳ ಭಕ್ತಿ ಪರವಶತೆಯ ಉದ್ಗೋಘೋಷದಲಿ ಸರ್ವಾಲಂಕೃತಗೊಂಡ ಶ್ರೀ ಸ್ವಾಮಿಯ ಮಹಾರಥೋತ್ಸವವು ಅಮೃತ ಘಳಿಗೆಯಲಿ ಜರುಗಲಿದೆ, ಸಕಲರಯ ಈ ಭಕ್ತಿ ಪೂರ್ವಕ ರಸಾನಂದದ ರಸಾನೂಭೂತಿಯ ಭಕ್ತಿಯ ಮಹಾ ಸಂಗಮದಲಿ ತಮ್ಮ ತನು.ಮನಗಳಿಂದ ಉಪಸ್ಥಿತಿರಿದ್ದು ಸಾರ್ಥಕತೆಯನು ತಂದುಕೊಳ್ಳುವ ಸದಾವಕಾಶ ನಮ್ಮನಿಮ್ಮೆಲ್ಲರದಾಗಲಿ ಎಂಬ ಆತ್ಮೀಯ ಆಶಯದ ಕರೆಯೋಲೆಯೊಂದಿಗೆ.ಶರಣು ಶರಣಾರ್ಥಿಗಳೊಂದಿಗೆ.

ಪ್ರದೀಪ.ಎಂ. ತೂಲಹಳ್ಳಿ

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version