ಸಿನಿ ಸುದ್ದಿ

ಬುರ್ಜ್ ಖಲೀಫಾದ ಮೇಲೆ ಕನ್ನಡ ಬಾವುಟ; ‘ವಿಕ್ರಾಂತ್ ರೋಣ’ ಕಿಚ್ಚನ 25ರ ಸಿನಿ ಸಂಭ್ರಮ..!

Published

on

ಸುದ್ದಿದಿನ,ದುಬೈ: ಭಾರತೀಯ ಚಿತ್ರರಂಗವಷ್ಟೇ ಅಲ್ಲ, ಇಡೀ ವಿಶ್ವವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಕ್ಷಣವದು. ವಿಶ್ವದ ಅತಿದೊಡ್ಡ ಕಟ್ಟಡದ ಬುರ್ಜ್‌ ಖಲೀಫಾದ ಮೇಲೆ ಕಿಚ್ಚ ಅಭಿನಯದ “ವಿಕ್ರಾಂತ್ ರೋಣ” ಸಿನೆಮಾದ ಟೈಟಲ್ ಲೋಗೋ ಲೋಕಾರ್ಪಣೆ ಗೊಂಡಿತು.

ಕಿಚ್ಚನ ಅಭಿಮಾನಿಗಳಲ್ಲಿ ಭಾರೀ ಕುತೂಹಲ- ನಿರೀಕ್ಷೆ ಮೂಡಿಸಿದ್ದ ‘ವಿಕ್ರಾಂತ್ ರೋಣ’ ಸಿನಿಮಾದ ಟೈಟಲ್ ಲೋಗೋ ಜಗತ್ತಿನ ಅತ್ಯಂತ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾ್ ಮೇಲೆ ಬಿಡುಗಡೆಯಾಯಿತು. ಜತೆಗೆ ಸಿನಿಮಾ ರಂಗದಲ್ಲಿ 25 ವರ್ಷ ಪೂರೈಸಿದ ಕಿಚ್ಚ ಸುದೀಪ್ ಅವರ ಕಟೌಟ್ ಕೂಡ ಪ್ರದರ್ಶನ ಕಂಡಿತು.

ಕಿಚ್ಚ ಸುದೀಪ್ ಅವರ ಬೆಳ್ಳಿ ಮಹೋತ್ಸವದ ಹಿನ್ನೆಲೆಯಲ್ಲಿ 2000 ಅಡಿಗೂ ಎತ್ತರದ ವಿಶ್ವವಿಖ್ಯಾತ ಕಟ್ಟಡದ ಮೇಲೆ ಕಿಚ್ಚನ ಕಟೌಟ್ ಪ್ರದರ್ಶನವಾಯಿತು. ಕಿಚ್ಚ ಸುದೀಪ್ ನಟಿಸಿದ ಚಿತ್ರಗಳ ಝಲಕ್, ಕ್ರಿಕೆಟ್, ಗಾಯನ ಸೇರಿದಂತೆ ಕಿಚ್ಚ ಸಿನಿರಂಗದಲ್ಲಿ 25 ವರ್ಷ ನಡೆದು ಬಂದ ಹಾದಿಯನ್ನು ಟೀಸರ್ ನ ಮೂಲಕ ಬಿತ್ತರಿಸಲಾಯಿತು. ಇವೆಲ್ಲದರ ನಡುವೆ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಕನ್ನಡದ ಬಾವುಟ ರಾರಾಜಿಸಿದ್ದು, ಕೋಟ್ಯಾಂತರ ಕನ್ನಡಿಗರ ಹಿರಿಮೆ ಹೆಚ್ಚಿಸಿತು. ಅಭಿಮಾನಿಗಳು ಈ ಸಂಭ್ರಮವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ವಿಕ್ರಾಂತ್ ರೋಣ ಟೀಸರ್ ಕೂಡ ರಿಲೀಸ್ ಆಯಿತು. ಭಾರತದ ಹಲವು ಭಾಷೆಗಳಲ್ಲಿ ಹಾಗೂ ಜಗತ್ತಿನ ಹಲವು ದೇಶಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಪ್ರಕಟಿಸಿತು. ಬುರ್ಜ್ ಖಲೀಫಾ ಮೇಲೆ ವಿಕ್ರಾಂತ್ ರೋಣ ಝಲಕ್ ನೋಡಿದ ಅಭಿಮಾನಿಗಳು ಥ್ರಿಲ್ ಆಗಿದ್ದು, ದುಬೈನಲ್ಲಿದ್ದ ಅಭಿಮಾನಿಗಳು ಕಿಚ್ಚ ಕಿಚ್ಚ ಎಂದು ಕೂಗಿ ಜೈಕಾರ ಹಾಕಿದ ಘಳಿಗೆಗೆ ಕಿಚ್ಚ ಅಭಿಮಾನಿಗಳಿಗೆ ವಂದನೆತಿಳಿಸಿದರು. ದುಬೈನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಿರ್ಮಾಪಕ ಜ್ಯಾಕ್ ಮಂಜು, ನಿರ್ದೇಶಕ ಅನೂಪ್ ಭಂಡಾರಿ, ನಟ ನಿರೂಪ್ ಭಂಡಾರಿ, ಪ್ರಿಯಾ ಸುದೀಪ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version