ನೆಲದನಿ
ನೆಲದನಿಯ ಮಿಡಿತ : ಎಂ.ನಂಜುಂಡಸ್ವಾಮಿಯವರ ತಾತ್ವಿಕ ಶೋಧ
ಭಾರತವು ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊಂಡ ನಾಡು. ಇಲ್ಲಿ ಬಹುತ್ವದ ನೆಲೆಗಳು ಸಾಂಸ್ಕøತಿಕ ನೆಲೆಯಲ್ಲಿ ಕಂಡುಬರುತ್ತವೆ. ಆದರೆ ಇಂತಹ ಬಹುತ್ವದ ಸಾಂಸ್ಕøತಿಕ ಶ್ರೀಮಂತಿಕೆಯ ನಾಡಿನಲ್ಲಿ ವಲಸೆ ಬಂದಂತಹ ಆರ್ಯ ಸಂಸ್ಕøತಿಯೊಂದು ಇಲ್ಲಿನ ಮೂಲನಿವಾಸಿ ಸಂಸ್ಕøತಿಗಳನ್ನು ಹತ್ತಿಕ್ಕುವ ಮೂಲಕ ಏಕತ್ವದ ಸಂಸ್ಕøತಿಯ ಮೂಲಕ ದಾಳಿ ನಡೆಸಿದೆ. ಆ ಮೂಲಕ ಪುರೋಹಿತಶಾಹಿ ನೆಲೆಯ ಬ್ರಾಹ್ಮಣತ್ವ ಹಾಗೂ ತಮ್ಮ ಸಂಸ್ಕøತ ಭಾಷೆಯೇ ಶ್ರೇಷ್ಠವೆಂದು ಪ್ರತಿಪಾದಿಸುತ್ತ, ಈ ನಾಡಿನ ಬಹುತ್ವ ಸಂಸ್ಕøತಿಯ ಜೀವಪರ ಆಶಯಗಳನ್ನು ವಿಸ್ಮøತಿಗೊಳಪಡಿಸುವ ಪ್ರಯತ್ನ ನಡೆಸಿದೆ. ಬ್ರಾಹ್ಮಣಶಾಹಿಯು ರೂಪಿಸಿರುವ ಈ ನೀಚ ಪ್ರವೃತ್ತಿಯ ವಿರುದ್ಧ ಬುದ್ಧನಿಂದ ಬಾಬಾಸಾಹೇಬ ಅಂಬೇಡ್ಕರ್ ಅವರ ತನಕ ಹಲವಾರು ದಾರ್ಶನಿಕರು ಹೋರಾಟ ನಡೆಸಿದ್ದಾರೆ. ಈ ಎಲ್ಲಾ ದಾರ್ಶನಿಕರ ಹೋರಾಟದ ಫಲವಾಗಿ ದಲಿತ ಸಮುದಾಯಗಳು ಜಾಗೃತರಾಗುತ್ತ ಬಂದಿದ್ದಾರೆ. ಆ ಮೂಲಕ ತಮ್ಮ ಅಸ್ತಿತ್ವದ ಶೋಧಕ್ಕೆ ಮುಂದಾಗಿರುವುದಕ್ಕೆ ಹಲವಾರು ನಿದರ್ಶನಗಳು ನಮ್ಮ ಮುಂದಿವೆ. ಇಂತಹ ಚಾರಿತ್ರಿಕ ಅಸ್ಮಿತೆಯ ಶೋಧಕ್ಕೆ ಮುಂದಾದವರಲ್ಲಿ ಎಂ.ನಂಜುಂಡಸ್ವಾಮಿ (ಮನಂ) ಅವರು ಒಬ್ಬರಾಗಿದ್ದಾರೆ.
ಶ್ರೀಯುತ ಎಂ.ನಂಜುಂಡಸ್ವಾಮಿಯವರು ದಿನಾಂಕ: 28 ಮಾರ್ಚ್ 1970 ರಂದು ಶ್ರೀ ಮಾಳವ ಮಹದೇವಯ್ಯ, ಶ್ರೀಮತಿ ಮಾಳವ ಸರೋಜಮ್ಮ ದಂಪತಿಗಳ ಮಗನಾಗಿ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಜನ್ಮತಳೆದರು. ಇವರು ಆರಂಭಿಕ ಶಿಕ್ಷಣವನ್ನು ಧಾರವಾಡದಲ್ಲಿ ಪಡೆದರು. 1993ರಲ್ಲಿ ಗಣಿತಂತ್ರಜ್ಞಾನದಲ್ಲಿ ಬಿ.ಟೆಕ್ ಪದವಿಯನ್ನು ಸೂರತ್ಕಲ್‍ನಲ್ಲಿ ಪಡೆದರು. ಪದವಿ ಶಿಕ್ಷಣದ ತರುವಾಯದಲ್ಲಿ ಗೋವಾ ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿ ಇಂಜಿನಿಯರಾಗಿ ಸೇವೆ ಸಲ್ಲಿಸಿದರು. ರಾಂಚಿಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೋಲ್ ಮ್ಯಾನೇಜ್‍ಮೆಂಟ್ ಕೋರ್ಸ್ ಪೂರೈಸಿ, ಕಲ್ಲಿದ್ದಲು ಗಣಿಯಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ‘ಭಾರತದ ಲೋಕಸೇವಾ ಆಯೋಗ’ವು ನಡೆಸುವ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕಿನೊಂದಿಗೆ ತೇರ್ಗಡೆಯನ್ನು ಹೊಂದುವ ಮೂಲಕ ಭಾರತೀಯ ಪೊಲೀಸ್ ಸೇವೆಗೆ 1997 ಆಗಸ್ಟ್ 25ರಂದು ತಮ್ಮನ್ನು ತೆರೆದುಕೊಂಡರು. ಅಲ್ಲಿಂದ ಪ್ರಾರಂಭವಾದ ಇವರ ಸೇವೆಯು ವಿವಿಧ ಹುದ್ದೆಗಳನ್ನು ಅಲಂಕರಿಸುವ ಮೂಲಕ ಪ್ರಾಮಾಣಿಕ ಸೇವೆಯನ್ನು ಸಲ್ಲಿಸುತ್ತ ಬಂದಿದ್ದಾರೆ. ಪ್ರಸ್ತುತದಲ್ಲಿ ಬೆಂಗಳೂರು ನಗರದಲ್ಲಿ ಪ್ರಭಾರಿ ಪೊಲೀಸ್ ಕಮೀಷನರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಶ್ರೀಯುತ ಎಂ.ನಂಜುಂಡಸ್ವಾಮಿಯವರು ತಮಗಿರುವ ಉನ್ನತ ಹುದ್ದೆಯ ಆಚೆಯೂ ಸಾಧನೆ ಮಾಡುವ ಹಂಬಲವೊತ್ತವರು. ಇವರಲ್ಲಿ ಬಹುಮುಖಿ ಪ್ರತಿಭೆಯೊಂದು ಸದಾ ಕ್ರಿಯಾಶೀಲವಾಗಿದೆ. ಇದರಿಂದಾಗಿ ತಮ್ಮ ಜವಬ್ದಾರಿಯುತ ಸೇವೆಯಾಚೆ ಸಾಹಿತ್ಯ, ಸಂಶೋಧನೆಯಂತಹ ಕ್ಷೇತ್ರಗಳಲ್ಲಿಯೂ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಆ ಮೂಲಕವಾಗಿ ಬಾಬಾಸಾಹೇಬರ ವೈಚಾರಿಕ ಚಿಂತನೆಗಳಿಂದ ಪ್ರಭಾವಿತರಾಗಿ, ತಳಸಮುದಾಯಗಳ ಚಾರಿತ್ರಿಕ ಅಸ್ಮಿತೆಯ ಶೋಧಕ್ಕೂ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಶತಮಾನಗಳಿಂದ ತಳಸಮುದಾಯದ ಜನತೆಯನ್ನು ಶೋಷಣೆ ಮಾಡುತ್ತ ಬಂದಿರುವ ಸಂಸ್ಕøತ ಭಾಷೆ ಹಾಗೂ ಸಂಸ್ಕøತ ಸಾಹಿತ್ಯದಿಂದ ಯಾವುದೆ ಸತ್ಯವನ್ನು ತಿಳಿಯಲು ಸಾಧ್ಯವಿಲ್ಲ ಎಂಬುದನ್ನು ಮನಗಂಡ ಶ್ರೀಯುತರು ಒಂದು ಕಾಲದಲ್ಲಿ ಈ ನಾಡಿನ ನೆಲದ ಭಾಷೆಗಳಾಗಿದ್ದ ಸುಮೇರಿಯನ್, ಅಕ್ಕಾಡಿಯನ್ ಹಾಗೂ ಮಾಳವ ಭಾಷೆಗಳ ಮೂಲಕ ತಳಸಮುದಾಯಗಳ ಚಾರಿತ್ರಿಕ ಶೋಧಕ್ಕೆ ಮುಂದಾಗಿದ್ದಾರೆ. ಆ ಮೂಲಕ ಈ ನೆಲೆದ ಭಾಷೆಗಳನ್ನು ವಿಶೇಷವಾದ ಆಸಕ್ತಿಯಿಂದ ಅಧ್ಯಯನ ಮಾಡಿ, ತಳಸಮುದಾಯಗಳ ಸ್ವಾಭಿಮಾನದ ಬದುಕಿಗೆ ಪೂರಕವಾದ ಅಂಶಗಳನ್ನು ಧಾರೆಯೆರೆದಿದ್ದಾರೆ. ಸಂಸ್ಕøತ ಭಾಷೆಯ ಪ್ರಕಾರ ‘ಕೀಳು’ ಎಂಬುದು ಕನಿಷ್ಟ ಎಂದಾದರೆ, ಸಮೇರಿಯನ್ ಭಾಷೆಯಲ್ಲಿ ‘ಕೀಳು’ ಎಂಬುದರ ಅರ್ಥ ಹೀಗಿದೆ; ‘ಕೀ’ ಎಂದರೆ ಭೂಮಿ. ‘ಳು’ ಎಂದರೆ ವ್ಯಕ್ತಿ ಎಂದರ್ಥ. ಸುಮೇರಿಯನ್ ಭಾಷೆಯಲ್ಲಿ ‘ಕೀಳು’ ಎಂದರೆ ಭೂಮಿಯವ, ಭೂಮಿಯಲ್ಲಿ ಕೆಲಸ ಮಾಡುವವ ಅಥವಾ ರೈತ ಎಂದರ್ಥ ಎಂಬುದನ್ನು ಶ್ರೀಯುತರು ತಮ್ಮ ಅಧ್ಯಯನದ ಮೂಲಕ ಗುರುತಿಸಿದ್ದಾರೆ. ಹಾಗೆಯೇ ಪುರೋಹಿತಶಾಹಿ ವ್ಯವಸ್ಥೆಯು ಅತ್ಯಂತ ನಿಕೃಷ್ಟವಾಗಿ ನಡೆಸಿಕೊಂಡು ಬಂದಿರುವಂತಹ ‘ಹೊಲಯ’ ಮತ್ತು ‘ಮಾದಿಗ’ ಜನಾಂಗವು ಕೂಡ ಚರಿತ್ರೆಯಲ್ಲಿ ರಾಜವಂಶಗಳಾಗಿ ಬಾಳಿ ಬದುಕಿರುವ ನಿದರ್ಶನಗಳನ್ನು ಪಲ್ಲವ ರಾಜವಂಶಗಳ ಮೂಲಕ ಗುರುತಿಸಿದ ಕೀರ್ತಿಯು ಇವರಿಗೆ ಸಲ್ಲುತ್ತದೆ. ಆ ಮೂಲಕವಾಗಿ ಈ ಸಮುದಾಯಗಳಿಗೆ ನೈತಿಕ ಸ್ಥೈರ್ಯವನ್ನು ನೀಡಿದ್ದಾರೆ.
ಶ್ರೀಯುತ ಎಂ.ನಂಜುಂಡಸ್ವಾಮಿಯವರು ಸದಾ ಸಾಮಾಜಿಕ ಜಾಗೃತಿ ಮೂಡಿಸುವತ್ತ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಇವರು ಬಾಬಾಸಾಹೇಬ ಅಂಬೇಡ್ಕರ್ ರಚಿಸಿರುವ ಸಂವಿಧಾನದ ಮೇಲೆ ಅಪಾರವಾದ ನಂಬಿಕೆಯನ್ನು ಹೊಂದಿದ್ದು, “ನಾವೆಲ್ಲ ಭಾರತೀಯರು, ನಮ್ಮೆಲ್ಲರ ಧರ್ಮ ಭಾರತೀಯ ಧರ್ಮ, ನಮ್ಮ ಧರ್ಮಗ್ರಂಥ ಭಾರತದ ಸಂವಿಧಾನ” ಎಂಬ ಘೋಷವಾಕ್ಯದ ಮೂಲಕ ಸರ್ವ ಮಾನವರನ್ನು ಸಮಾನವಾಗಿ ಕಾಣಬೇಕೆಂಬ ಆಶಯವನ್ನು ಸಂವಿಧಾನದ ಅಡಿಯಲ್ಲಿ ವ್ಯಕ್ತಪಡಿಸುತ್ತ ಬಂದಿದ್ದಾರೆ. ಸಂವಿಧಾನವನ್ನು ಸುಟ್ಟಂತಹ ದುರುಳರು ಮತ್ತೇ ಸನಾತನ ವ್ಯವಸ್ಥೆಯ ಮನುವಾದವನ್ನು ಜಾರಿಗೆ ತರುವ ಮೂಲಕ ಅಸಮಾನತೆ ಮತ್ತು ಕೋಮುವಾದವನ್ನು ಬಿತ್ತಲು ತವಕಿಸುತ್ತಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಶ್ರೀಯುತರ ಈ ಹೇಳಿಕೆಯ ಆರೋಗ್ಯಪೂರ್ಣ ಸಮಾಜಕ್ಕೆ ಅತ್ಯಂತ ಮಹತ್ವದ್ದಾಗಿದೆ. ಹಾಗೆಯೇ ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವ ಯುವಜನತೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ‘ಮಾದಕ ವಸ್ತುಗಳಿಗೆ ಬೇಡ ಎನ್ನಿರಿ” ಎಂಬ ಅಭಿಯಾನದ ಮೂಲಕವಾಗಿ ಸದೃಢ ದೇಶ ನಿರ್ಮಾಣದ ಕನಸ್ಸೊತ್ತು ಶ್ರೀಯುತರು ಮುನ್ನಡೆಯುತ್ತಿದ್ದಾರೆ.
ಶ್ರೀಯುತರು ಸಾಹಿತ್ಯ ಹಾಗೂ ಸಂಶೋಧನೆಯ ವಿವಿಧ ಪ್ರಕಾರಗಳಾದ ಫಿಲೊಲಾಜಿ, ಭಾಷಶಾಸ್ತ್ರ, ಪದಶಾಸ್ತ್ರ, ಸುಮೇರಿಯನ್, ಅಕ್ಕಾಡಿಯನ್, ಮಾಳವ ಭಾಷೆ ಮತ್ತು ವಿವಿಧ ನಾಗರೀಕತೆಗಳ ಕುರಿತು ವಿಶೇಷವಾದ ಆಸಕ್ತಿಯನ್ನು ಹೊಂದಿದ್ದು, ಹಲವಾರು ಸಾಹಿತ್ಯ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಇವುಗಳಲ್ಲಿ ಭಾರತದ ಮೊದಲ ದೊರೆಗಳು, ಹೊಲೆಯರು-ಮಾದರು-ರಾಜರು, ಹುಡುಕಾಟ, ಕೊಸೊವೊದ ಜಾಣರು, ಮಿಜೆನಿಯವರ ಸಣ್ಣಕಥೆಗಳು ಇವು ಶ್ರೀಯುತರ ಪ್ರಮುಖ ಕೃತಿಗಳಾಗಿವೆ. ಇವುಗಳ ಮೂಲಕ ಕನ್ನಡ ಸಾಹಿತ್ಯ ವಲಯದ ಶ್ರೀಮಂತಿಕೆಗಾಗಿ ಶ್ರಮಿಸಿದ್ದಾರೆ. ಶ್ರೀಯುತರ ಸಾಹಿತ್ಯ ಸೇವೆಗೆ ‘ಕುವೆಂಪು ವಿಶ್ವಮಾನವ’ ಪ್ರಶಸ್ತಿ ಮತ್ತು ಹಲವಾರು ಸನ್ಮಾನಗಳು ಲಭಿಸಿವೆ. ಹಾಗೆಯೇ ಶ್ರೀಯುತರ ಸರ್ಕಾರಿ ಸೇವೆಯ ಮೂಲಕ ದೇಶಕ್ಕೆ ಮಾಡಿದ ಸೇವೆಯನ್ನು ಪರಿಗಣಿಸಿ ‘ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಾಜಿ ಕರ್ನಾಟಕ ಸೂರತ್ಕಲ್’ನವರು 2004ರಲ್ಲಿ ‘ಗ್ಲೋಬಲ್ ಅಲುಮ್ನಿ ಎಕ್ಸಲೆನ್ಸ್ ಅವಾರ್ಡ್’ ನೀಡಿ ಗೌರವಿಸಿದೆ. ಹಾಗೆಯೇ ಕೊಸೊವೊದಲ್ಲಿ ಶಾಂತಿ ಸ್ಥಾಪನಾ ಕಾರ್ಯದಲ್ಲಿ ತೋರಿದ ಮಹತ್ವಪೂರ್ಣ ಸಾಧನೆಗಾಗಿ ವಿಶ್ವಸಂಸ್ಥೆಯು ಇವರಿಗೆ ‘ವಿಶ್ವಸಂಸ್ಥೆಯ ಪದಕ’ ನೀಡಿ ಗೌರವಿಸಿದೆ.
ಶ್ರೀಯುತ ಎಂ.ನಂಜುಂಡಸ್ವಾಮಿಯವರು ಉನ್ನತವಾದ ಹುದ್ಧೆಯನ್ನು ಅಲಂಕರಿಸಿದ್ದರು ಕೂಡ ಸಾಮಾಜಿಕ ಕಳಕಳಿಯನ್ನು ಹೊಂದಿದವರಾಗಿದ್ದಾರೆ. ಆ ಮೂಲಕ ದಮನಿತ ಸಮುದಾಯಗಳ ಮತ್ತು ಯುವಜನತೆಯ ಜಾಗೃತಿಗಾಗಿ ಸದಾ ತುಡಿಯುವ ಮೂಲಕ ಆರೋಗ್ಯಪೂರ್ಣ ಸಮಾಜದ ಕನಸ್ಸೊತ್ತು ಮುನ್ನಡೆಯುತ್ತಿದ್ದಾರೆ. ಇವರ ಈ ಹೋರಾಟದ ಹಾದಿಯು ಸದಾ ಯಶಸ್ವಿನೆಡೆಗೆ ಸಾಗಲೆಂಬುದು ನಮ್ಮ ಹಾರೈಕೆ.