ದಿನದ ಸುದ್ದಿ

ಪತ್ರಿಕೋದ್ಯಮ, ಮಾನವೀಯತೆ ಹಾಗೂ ಸಲ್ಮಾನ್ ರಾವೀ ಎಂಬ ಹೃದಯವಂತ..!

Published

on

  • ಡಿ.ಕೆ. ರಮೇಶ್, ಪತ್ರಕರ್ತರು

ಸುದ್ದಿದಿನ ವಿಶೇಷ : ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಆ ಘಟನೆಯನ್ನು ತಟಸ್ಥವಾಗಿ ವರದಿ ಮಾಡಿದರೆ ಸಾಕೆ ಅಥವಾ ಆ ಘಟನೆಯಲ್ಲಿ ಸಂಕಷ್ಟಕ್ಕೀಡಾದವರ ಸಹಾಯಕ್ಕೆ ವರದಿಗಾರ/ ಛಾಯಾಗ್ರಾಹಕ ಮುಂದಾಗಬೇಕೆ? ಇದೊಂದು ಜಿಜ್ಞಾಸೆ. ಬಹಳ ಹಿಂದಿನಿಂದಲೂ ಇರುವ ಜಿಜ್ಞಾಸೆ ವರದಿಗಾರ ವರದಿ ಮಾಡಿದರಷ್ಟೇ ಸಾಕು ಅದೇ ಒಂದು ಸಹಾಯ ಎನ್ನುವುದು ಒಂದು ವಾದವಾದರೆ, ಸ್ಥಳದಲ್ಲೇ ಇದ್ದವರು ಸಹಾಯಕ್ಕೆ ಬರಬಹುದಿತ್ತಲ್ಲಾ ಎಂಬುದು ಇನ್ನೊಂದು ವಾದ. ಎರಡೂ ಬಹಳ ಮುಖ್ಯವಾದ ಆಲೋಚನೆಗಳು. ಕೊರೊನಾ ರೀತಿಯ ಸಂಕಷ್ಟದ ಸಂದರ್ಭದಲ್ಲಿ ಪತ್ರಕರ್ತರು ಇಂತಹ ಜಿಜ್ಞಾಸೆಗೆ ಮುಖಾಮುಖಿ ಆಗುವುದು, ಅದಕ್ಕೆ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುವುದು ಸಹಜ. ಅಂತಹ ಒಬ್ಬ ಪತ್ರಕರ್ತ ಸಲ್ಮಾನ್ ರಾವೀ.

ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://twitter.com/RifatJawaid/status/1260957072281096192?s=20

ರಾವೀ ಅವರ ಕತೆ ಹೇಳುವ ಮುನ್ನ ಘಟನೆಯೊಂದನ್ನು ಇಲ್ಲಿ ಪ್ರಸ್ತಾಪಿಸಿಬಿಡಬೇಕು. ಮೊದಲನೆಯದು ಸೂಡಾನಿನ ಹಸಿವಿನ ದಾರುಣತೆಯನ್ನು ಚಿತ್ರಿಸುತ್ತಿದ್ದ ಕೆವಿನ್ ಕಾರ್ಟರ್ ಎಂಬ ಛಾಯಾಗ್ರಾಹಕನ ಕುರಿತಾದದ್ದು, ಅಸ್ತಿಪಂಜರದಂತಿರುವ ಮಗುವೊಂದು ಮಣ್ಣಿಗೆ ತಲೆ ಆನಿಸಿದೆ.

ಹಿನ್ನೆಲೆಗೆ ರಣಹದ್ದೊಂದು ಕುಳಿತಿದೆ. ಅದನ್ನು ತನ್ನ ಕ್ಯಾಮೆರಾದಲ್ಲಿ ಕಾರ್ಟರ್ ಸೆರೆ ಹಿಡಿಯುತ್ತಾನೆ. ‘ದ ವಲ್ಚರ್ ಅಂಡ್ ದ ಲಿಟಲ್ ಗರ್ಲ್’ ಎಂಬ ಹೆಸರಿನಲ್ಲಿ ಛಾಯಾಚಿತ್ರ ಮನ್ನಣೆ ಪಡೆಯುತ್ತದೆ. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಅದನ್ನು ಪ್ರಕಟಿಸಿಸುತ್ತದೆ. ಮುಂದೆ ಆ ಚಿತ್ರಕ್ಕೆ ಪುಲಿಟ್ಜರ್ ಪ್ರಶಸ್ತಿ ಕೂಡ ಸಿಗುತ್ತದೆ. ಅಷ್ಟರಲ್ಲಾಗಲೇ ಅವನ ಕ್ಯಾಮೆರಾ ಅಂತಹ ಹಲವಾರು ಮಕ್ಕಳ ಚಿತ್ರಗಳನ್ನು ಸೆರೆಹಿಡಿಯುತ್ತದೆ. ಆದರೆ ಕಾರ್ಟರ್ ಖಿನ್ನತೆಗೆ ಸರಿಯುತ್ತಾನೆ. ತನ್ನ ಬಾಲ್ಯವನ್ನು ಕಳೆದಿದ್ದ ಪಾರ್ಕ್ ಮೋರ್ ಎಂಬಲ್ಲಿ ಕಡೆಗೊಂದು ದಿನ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಆಗ ಅವನ ವಯಸ್ಸು ಕೇವಲ 33.

ಕೆವಿನ್ ಕಾರ್ಟರ್ ಮತ್ತು ಆತನ ಫೋಟೋಗ್ರಫಿ

ಈಗ ಸಲ್ಮಾನ್ ರಾವೀ ವಿಚಾರಕ್ಕೆ ಬರೋಣ. ದೇಶ ಕಂಡ ಅತ್ಯುತ್ತಮ ಪತ್ರಕರ್ತ, ಸೂಕ್ಷ್ಮ ಮನಸ್ಸಿನ ವರದಿಗಾರ, ಬಿಬಿಸಿ ಹಿಂದಿ ವಾಹಿನಿಗಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ ಎಂಬ ವಿಚಾರಗಳೆಲ್ಲಾ ದೇಶಕ್ಕೆ ಗೊತ್ತಿರುವಂಥದ್ದೇ. ಆದರೆ ಕೊರೊನಾ ಸಂದರ್ಭದಲ್ಲಿ ಅವರು ನಡೆದುಕೊಳ್ಳುತ್ತಿರುವ ರೀತಿಯಿಂದಾಗಿ ಪತ್ರಿಕಾ ಲೋಕ ಎದೆಯುಬ್ಬಿಸುವಂತಾಗಿದೆ. ಜಗತ್ತೇ ಅವರ ಕೆಲಸವನ್ನು ಕೊಂಡಾಡುತ್ತಿದೆ.

ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://twitter.com/salmanravi/status/1261201617522737152?s=19

ಕೊರೊನಾ ದಿಗ್ಬಂಧನದಿಂದಾಗಿ ದೆಹಲಿಯಿಂದ ಸಾವಿರಾರು ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳಲು ಬೀದಿಗೆ ಬಂದಿರುತ್ತಾರೆ. ಅಂತಹ ಒಂದು ಕುಟುಂಬ ಸುಮಾರು 250 ಕಿಮೀ ದೂರದ ತನ್ನೂರಿಗೆ ಮರಳಲು ಸಿದ್ಧವಾಗಿರುತ್ತದೆ. ಕುಟುಂಬದ ಹಿರಿಯ ಮಲಗಿರುವ ಮಗುವನ್ನು ಹೆಗಲಿಗೆ ಆನಿಸಿಕೊಂಡಿದ್ದಾನೆ. ಆತನ ಕಾಲಲ್ಲಿ ಚಪ್ಪಲಿ ಇಲ್ಲ ಎಂಬ ಸಂಗತಿ ಸಲ್ಮಾನ್ ಗಮನಕ್ಕೆ ಬರುತ್ತದೆ.

ಸಲ್ಮಾನ್ ಸಹಜವಾಗಿಯೇ ಆ ವ್ಯಕ್ತಿಗೆ ತನ್ನ ಬೂಟುಗಳನ್ನು ಕೊಡುತ್ತಾರೆ. ಕಾರ್ಮಿಕ ಅದನ್ನು ತೊಡಲು ಹಿಂದೇಟು ಹಾಕಿದಾಗ ‘ಇಲ್ಲ ಇಲ್ಲ ನೀವು ಹಾಕಿಕೊಳ್ಳಬೇಕು. ನೀವು ಕ್ರಮಿಸಬೇಕಾದ ಹಾದಿ ಬಹುದೂರದ್ದು. ನನ್ನದು ಹೇಗೋ ನಡೆಯುತ್ತದೆ’ ಎಂದು ಹೇಳಿ ಆತನಿಗೆ ಶೂ ಹಾಕಿಕೊಳ್ಳಲು ಅನುವು ಮಾಡಿಕೊಟ್ಟು ಮತ್ತೊಬ್ಬ ಕಾರ್ಮಿಕನನ್ನು ಮಾತನಾಡಿಸಲು ಹೋಗುತ್ತಾರೆ.

ಬಾಲಿವುಡ್ ನಟರಿಂದ ಹಿಡಿದು ಜನಸಾಮಾನ್ಯರ ತನಕ ಈ ಘಟನೆ ಗಮನ ಸೆಳೆದಿದೆ. ಘಟನೆಗೆ ಪ್ರತಿಕ್ರಿಯೆ ನೀಡಿರುವ ಆಲಿಯಾ ಭಟ್ ಸಹೋದರಿ ಪೂಜಾ ಭಟ್ ‘ಈ ಘಟನೆ ನನ್ನಲ್ಲಿ ಕಣ್ಣೀರು ತರಿಸಿತು’ ಎಂದಿದ್ದಾರೆ. ಟ್ವಿಟರ್, ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಲ್ಮಾನ್ ಕೆಲಸಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿಯುತ್ತಿದೆ.

ಅಷ್ಟೇ ಆಗಿದ್ದರೆ ಅದೊಂದು ಘಟನೆ ಎಂದು ಸುಮ್ಮನಾಗಬಹುದಿತ್ತು. ಆದರೆ ಸಲ್ಮಾನ್ ಅವರೊಳಗಿನ ಅಂತಃಕರಣ ಆ ಘಟನೆಗೆ ಮಾತ್ರ ಸೀಮಿತವಾಗುವುದಿಲ್ಲ. ಕಾಲ್ನಡಿಗೆಯಲ್ಲಿ ಸಾಗುತ್ತಿದ್ದ ವಲಸೆ ಕಾರ್ಮಿಕರ ಒಂದು ತಂಡಕ್ಕೆ ಪೊಲೀಸರ ಸಹಾಯ ಪಡೆದು ಫರೀದಾಬಾದಿನ ಶಾಲೆಯೊಂದರಲ್ಲಿ ತಾತ್ಕಾಲಿಕ ವಸತಿ ಕಲ್ಪಿಸುತ್ತಾರೆ ಸಲ್ಮಾನ್. ಈ ಕೆಲಸವೂ ಅಪಾರ ಮೆಚ್ಚುಗೆ ಗಳಿಸಿದೆ.

ಸಲ್ಮಾನ್ ರಾವೀ, ಪತ್ರಕರ್ತ, ಬಿಬಿಸಿ ನ್ಯೂಸ್

ಇನ್ನೊಂದು ಘಟನೆ ಇವೆರಡಕ್ಕೂ ಹೊರತಾದದ್ದು, ಅದು ಭಾರತದಲ್ಲಿಯೇ ನಡೆದದ್ದು. ‘ಸುದ್ದಿ ಇಲ್ಲದಿದ್ದರೆ ಅದನ್ನು ಸೃಷ್ಟಿಸಿದರಾಯಿತು’ ಎಂಬ ಧೋರಣೆಗೆ ಸಂಬಂಧಿಸಿದ್ದು. ಸ್ಥಳ ಘಟನೆ ನಡೆದ ದಿನ ನೆನಪಿಲ್ಲ. ಆದರೆ ಆ ಘಟನೆಯನ್ನು ಮನುಷ್ಯರಾದವರಾರೂ ಮರೆಯಲು ಸಾಧ್ಯ ಇಲ್ಲ. ರೈತನೋ ಮತ್ತಾರೋ ಆತ್ಮಹತ್ಯೆಗೆ ಮುಂದಾಗಿರುತ್ತಾರೆ. ತಡವಾಗಿ ಅಲ್ಲಿಗೆ ಬರುವ ವೀಡಿಯೊಗ್ರಾಫರ್ ಇನ್ನೊಮ್ಮೆ ಬೆಂಕಿ ಹಚ್ಚಿಕೊಳ್ಳುವಂತೆ ಪ್ರೇರೇಪಿಸುತ್ತಾನೆ. ಆತ ಬೆಂಕಿ ಹಚ್ಚಿಕೊಳ್ಳುತ್ತಾನೆ. ಆತನ ಮೈ ಸುಟ್ಟು ಹೋಗುತ್ತದೆ.

ಮೇಲೆ ವಿವರಿಸಿದ ಮೂರೂ ಘಟನೆಗಳು ಪತ್ರಿಕೋದ್ಯಮ, ನೈತಿಕತೆ, ಮಾನವೀಯತೆಯ ಸುತ್ತ ಹೆಣೆದುಕೊಂಡಿರುವಂತಹವು. ಉಳಿದೆರಡು ಘಟನೆಗಳಿಗಿಂತಲೂ ಸಲ್ಮಾನ್ ರಾವೀ ಅವರ ಕೆಲಸಗಳಿಗೆ ಹೆಚ್ಚು ತೂಕ ಇರುವಂತಿದೆ. ಆ ಕಾರಣಕ್ಕೆ ರಾವೀ ಅಂತಹ ಪತ್ರಕರ್ತರ ಸಂಖ್ಯೆ ಹೆಚ್ಚಲಿ ಎಂದು ಹಾರೈಸಬೇಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version