ದಿನದ ಸುದ್ದಿ

ಪೆಟ್ರೋಲ್‌ನಲ್ಲಿ ಶೇಕಡ 10 ರಷ್ಟು ಎಥೆನಾಲ್ ಬಳಕೆಗೆ ಕ್ರಮ : ಪ್ರಧಾನಿ ನರೇಂದ್ರ ಮೋದಿ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ಡೆಸ್ಕ್ : ವಿಶ್ವ ಪರಿಸರ ದಿನದ ಅಂಗವಾಗಿ ದೆಹಲಿಯ ವಿಜ್ಞಾನ ಭವನದಲ್ಲಿಂದು ಏರ್ಪಡಿಸಲಾಗಿರುವ ಮಣ್ಣಿನ ರಕ್ಷಣೆ ಕುರಿತ ಆಂದೋಲನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಪೆಟ್ರೋಲ್‌ನಲ್ಲಿ ಎಥೆನಾಲ್ ಬಳಕೆ ಪ್ರಮಾಣವನ್ನು ಶೇಕಡ 10ರಷ್ಟು ಹೆಚ್ಚಿಸುವ ಮೂಲಕ, ಭಾರತ ನಿಗದಿತ ಅವಧಿಗೂ 5ತಿಂಗಳು ಮುಂಚಿತವಾಗಿ ಈ ಗುರಿ ಸಾಧಿಸಿದೆ ಎಂದರು.

ಇಂಧನ ಆಮದು ಪ್ರಮಾಣ ಕಡಿತಗೊಳಿಸಿ, ಎಥೆನಾಲ್ ಮಿಶ್ರಣದಿಂದ ತೈಲದ ಹೊರೆ ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು. ಪರಿಸರ ಸಂರಕ್ಷಣೆಯ ಜತೆಗೆ ಹವಾಮಾನ ವೈಪರಿತ್ಯದಿಂದಾಗುವ ಹಾನಿ ತಡೆಗೆ ಅಗತ್ಯವಾದ ಸುಧಾರಣಾ ಕ್ರಮಗಳನ್ನು ಜಾರಿಗೆ ತರಲಾಗುವುದು; ನೈಸರ್ಗಿಕ ಸಂಪತ್ತು ರಕ್ಷಣೆಯ ಜತೆಗೆ ಅದನ್ನು ಉಳಿಸುವುದು ಎಲ್ಲರ ಕರ್ತವ್ಯವಾಗಿದೆ. ಈಗಾಗಲೇ ಆರಂಭವಾಗಿರುವ ಸ್ವಚ್ಛ ಭಾರತ್ ಮಿಷನ್, ನಮಾಮಿ ಗಂಗಾ, ಒನ್ ಸನ್ ಒನ್ ಗ್ರಿಡ್ ಸಂದೇಶವನ್ನು ಸಾರುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

ದೇಶಾದ್ಯಂತ ಇದುವರೆಗೆ 22 ಕೋಟಿ ಮಣ್ಣು ಆರೋಗ್ಯ ಕಾರ್ಡ್‌ಗಳನ್ನು ರೈತ ಸಮುದಾಯಕ್ಕೆ ವಿತರಿಸಲಾಗಿದೆ. ಗಂಗಾ ನದಿಯ ತಟದಲ್ಲಿರುವ ಗ್ರಾಮಗಳಲ್ಲಿ ಪರಿಸರ ಸಂರಕ್ಷಣೆ ಮತ್ತು ಜಲಮಾಲಿನ್ಯ ತಡೆಗೆ ಅನೇಕ ಯೋಜನೆಗಳನ್ನು ಕಾರ್ಯಗತಗೊಳಿಸಿ, ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಪ್ರಧಾನಿ ತಿಳಿಸಿದರು.

ಮಣ್ಣಿನ ಆರೋಗ್ಯ ಕ್ಷೀಣಿಸುತ್ತಿರುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ’ಮಣ್ಣು ಉಳಿಸಿ ಚಳವಳಿ ಎಂಬುದನ್ನು ಜಾಗತಿಕ ಆಂದೋಲನವನ್ನಾಗಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಆಂದೋಲನವನ್ನು ಸದ್ಗುರು ಜಗ್ಗಿ ವಾಸುದೇವ್ ಇದೇ ವರ್ಷದ ಮಾರ್ಚ್‌ನಲ್ಲಿ, 27 ದೇಶಗಳಿಗೆ, 100 ದಿನಗಳ ಕಾಲ ಮೋಟಾರ್ ಸೈಕಲ್‌ನಲ್ಲಿ ಸಂಚರಿಸುವ ಮೂಲಕ ಆರಂಭಿಸಿದ್ದರು.

ದೇಶದಲ್ಲಿ ಮಣ್ಣಿನ ಫಲವತ್ತತೆ ವೃದ್ಧಿಸುವ ನಿಟ್ಟಿನಲ್ಲಿ ಜಗತ್ತಿನಾದ್ಯಂತ ವ್ಯಕ್ತವಾಗುತ್ತಿರುವ ಕಳಕಳಿ ಮತ್ತು ಬದ್ಧತೆಯನ್ನು ಪ್ರತಿಬಿಂಬಿಸುವ ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಪಾಲ್ಗೊಳ್ಳುತ್ತಿರುವುದಕ್ಕೆ ವಿಶೇಷ ಮಹತ್ವ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಸದ್ಗುರು ಜಗ್ಗಿ ವಾಸುದೇವ್ ಮಣ್ಣು ಸಂರಕ್ಷಣೆ ಕುರಿತ ವಸ್ತು ಪ್ರದರ್ಶನವನ್ನು ವೀಕ್ಷಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version