ಭಾವ ಭೈರಾಗಿ
ಕವಿತೆ | ಅಕ್ಕ ಹೇಳಿದ್ದು
ವಾತ್ಸಲ್ಯದ ಬೆಚ್ಚನ್ನ
ಬಿಸಿಲು ಮಾಳಿಗೆಯಲ್ಲಿ
ಮಿಂದ ಕೂದಲ ಸಿಕ್ಕುಬಿಡಿಸುವ
ರತ್ನಗಂಬಳಿಯ ಹಂಸಪಾದಕ್ಕೆ
ಮುಳ್ಳು
ಸೆರೆಗೆಳೆವ ರಾಜರು
ಕೊಂಕು ನೋಟವ ಹೊದ್ದ
ತುಂಬು ಸೆರಗಿನ ಗರತಿಯರು
ಬೇನೆಯರಿಯದ
ಬಂಜೆಯರು
ಹರಿದ ಸೀರೆಯಲರ್ಧ ಕೊಟ್ಟು
ಮೈ ಮುಚ್ಚಬಂದ ತಾಯಂದಿರು
ಹಸಿದ ನಾಯಿನಾಲಗೆಯಮಾವಾಸ್ಯೆಗಳ
ಮಧ್ಯೆ
ಚುಕ್ಕೆ ಬೆಳಕು
ಅಂಗೈ ಲಿಂಗಕ್ಕೆ ಕನಸುಗಳ ನೈವೇದ್ಯ
ಉಡುತಡಿಗು ಕಲ್ಯಾಣಕ್ಕು ಎಷ್ಟು ದೂರ
ನಡೆಮಡಿಯ ಹಾಸಿದವರೂ
ಕೆದಕಿ ಕೇಳಿದರು
ಪತಿಯ ಕುರುಹ
ಹೇಳದಿರೆ ತೊಲಗೆಂದು
ನಿರ್ವಾಣದ ಬೆಳಗು
ಕೊರಳೆತ್ತಿತ್ತು
ಅಯ್ಯ ನಾನು ನೀನೆಂಬುಭಯವಳಿದ
ಪ್ರಭುವೇ
ಎನ್ನೊಡವುಟ್ಟಿದಣ್ಣಂಗಳೇ
ಕೇಳಬಹುದೇ ಪತಿಯ ಕುರುಹ
ಕುರುಹೇ ತಾನಾದ ನನ್ನನ್ನು
ಯಾರು ಹೇಳಿದರು ನಿಮಗೆ
ನಾನು ಬತ್ತಲಿದ್ದೇನೆಂದು
ಇದು ಬತ್ತಲಲ್ಲ
ಬಯಲು ಕಾಣಿರೋ
ನಮ್ಮೆದುರೆ ನಿಂತಿದ್ದೇನಲ್ಲಾ
ಬಯಲಾಗಿ
ಬತ್ತಲಾಗಿ
ಬತ್ತಲೂ ಆಗಿ
ತೊಟ್ಟು ಕಳಚಿದ ಹಣ್ಣ
ಬೇರನರಸುವ
ನುಡಿಯ ಜಾಣಂಗಳೇ
ನಾನಾದರೂ ನಿಮ್ಮ
ಎನ್ನೊಡವುಟ್ಟಿದಣ್ಣಂಗಳೇ
ಎಂದು
ಎಂತುನಂಬಲಿ ಪ್ರಭುವೇ
ಇರಲಿರಲಿ ಶೂನ್ಯಗಳು
ಸಿಂಹಾಸನಗಳು
ಗಿಳಿ ಕೋಗಿಲೆಗಳನ್ನಾದರೂ
ದಾರಿ ಕೇಳುತ್ತ
ನಿಮ್ಮ ನಡೆಮಡಿಯ ಬಿಸುಟು
ಹೋಗುತ್ತೇನೆ
ಕದಳಿಗೆ
–ಸ.ಉಷಾ
(ಈ ಕವಿತೆಯನ್ನು ‘ಡಾ.ಶ್ರೀಕಂಠ ಕೂಡಿಗೆ’ ಸಂಪಾದಕತ್ವದ ‘ ಸಮಕಾಲೀನ ಕವಿತೆಗಳು’ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243