ದಿನದ ಸುದ್ದಿ
ಪರೀಕ್ಷೆ ಬರೆದ ಎಲ್ರೂ ಫೇಲ್!; ಯಾಕೆ ಗೊತ್ತಾ?
ಸುದ್ದಿದಿನ ಡೆಸ್ಕ್: ಗೋವಾ ಸರ್ಕಾರದ ಅಕೌಂಟ್ಸ್ ನಿರ್ದೇಶನಾಲಯದ 80 ಅಕೌಂಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ಅಂದಾಜು 8ಸಾವಿರಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದಿದ್ದರು. ಆದರೆ, ಎಲ್ಲ ಅಭ್ಯರ್ಥಿಗಳು ಅನುತ್ತೀರ್ಣಗೊಂಡಿರುವ ಅಚ್ಚರಿಯ ಫಲಿತಾಂಶ ಆಗಸ್ಟ್ 21ರಂದು ಹೊರಡಿಸಿದ ಪ್ರಕಟಣೆಯಲ್ಲಿ ಹೊರಬಿದ್ದಿದೆ.
ಗೋವಾ ರಾಜ್ಯ ಸರ್ಕಾರ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅಕೌಂಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ಅಂದಾಜು 8ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಉದ್ಯೋಗ ಬಯಸಿ ಅರ್ಜಿ ಸಲ್ಲಿಸಿದ್ದರು. ನಿಯಮಾವಳಿಯಂತೆ ಅರ್ಹರಾದ ಎಲ್ಲ ಅಭ್ಯರ್ಥಿಗಳನ್ನು ಜನವರಿ ೭ರಂದು ಪರೀಕ್ಷೆ ಬರೆಯಲು ಆಹ್ವಾನಿಸಿತ್ತು. ೧೦೦ ಅಂಕದಲ್ಲಿ ೫೦ ಅಂಕ ಪಡೆದವರು ಹುದ್ದೆಗೆ ನೇಮಜಾತಿಗೊಳ್ಳಲು ಅರ್ಹರು ಎಂದು ತಿಳಿಸಿತ್ತು.
ಐದು ತಾಸಿನ ೧೦೦ ಅಂಕದ ಪರೀಕ್ಷಾ ಪ್ರಶ್ನೆ ಪತ್ರಿಕೆಯಲ್ಲಿ ಇಂಗ್ಲಿಷ್, ಸಾಮಾನ್ಯ ಜ್ಞಾನ, ಅಕೌಂಟ್ಸ್ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಆದರೆ, ಯಾವೊಬ್ಬ ಅಭ್ಯರ್ಥಿಯೂ ಉತ್ತೀರ್ಣಗೊಂಡಿಲ್ಲ. ಹಾಗಂತ ಯಾರೂ ದಡ್ಡರಲ್ಲ. ಯಾವುದೋ ಎಡವಟ್ಟಿನಿಂದ ವ್ಯತಿರಿಕ್ತ ಫಲಿತಾಂಶ ಬಂದಿದ್ದು, ಮರುಮೌಲ್ಯಮಾಪನ ಮಾಡುವಂತೆ ಅಕೌಂಟ್ಸ್ ನಿರ್ದೇಶನಾಲಯ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ. ವಿವಿಧ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಜೀವನದ ಜತೆಗೆ ಸರ್ಕಾರ ಆಟವಾಡುತ್ತಿದೆ ಎಂದು ಟೀಕಿಸಿವೆ.