ಬಹಿರಂಗ
ಕನ್ನಡಿಗರ ಮನ ಮನೆಗೆ ಮಹಾನಾಯಕ
- ರಘೋತ್ತಮ ಹೊ.ಬ
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆರವರ ಮಗಳು ಉದ್ಯಮಿ ಸ್ಮೃತಿ ಸುಶೀಲ್ ಕುಮಾರ್ ಶಿಂಧೆ ತಮ್ಮ “ಸೋಬೋ ಫಿಲಂಸ್” ಲಾಂಛನದಡಿಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನ ಚರಿತ್ರೆ ಕುರಿತು ಹಿಂದಿಯಲ್ಲಿ “ಏಕ್ ಮಹಾನಾಯಕ್” ಧಾರಾವಾಹಿ ನಿರ್ಮಿಸಿದ್ದಾರೆ.
ಅದು ಕಳೆದ ಅಂದರೆ 2019 ಡಿಸೆಂಬರ್ 17ರಿಂದ ಹಿಂದಿಯ ಅಂಡ್ ಟಿವಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8:30 ಕ್ಕೆ ಯಶಸ್ವಿಯಾಗಿ ಪ್ರಸಾರ ಕೂಡ ಆಗುತ್ತಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಾಲ್ಯದ ಜೀವನದಿಂದ ಹಿಡಿದು ಅಂತ್ಯದವರೆಗೆ ಅವರ ಸಮಗ್ರ ಹೋರಾಟದ ಜೀವನದ ಚಿತ್ರಣವನ್ನು ಧಾರಾವಾಹಿ ಕಟ್ಟಿಕೊಡುತ್ತಿದೆ.
ಧಾರಾವಾಹಿಯ ನಿರ್ದೇಶಕರು ಇಮ್ತಿಯಾಜ್ ಪಂಜಾಬಿ. ಕಥೆ ಶಾಂತಿಭೂಷಣ್ ಅವರದು. ಅಂದಹಾಗೆ ಧಾರಾವಾಹಿಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಇಂಗ್ಲಿಷ್ ಬರಹಗಳ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಖ್ಯಾತ ಇತಿಹಾಸಕಾರ ಅವರ ಹರಿ ನರ್ಕೆ ಅವರ ಮಾರ್ಗದರ್ಶನವಿದೆ. ಮಹಾರಾಷ್ಟ್ರದಲ್ಲಿ ಲಭ್ಯವಿರುವ ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುರಿತ ವಿಪುಲ ಮರಾಠಿ ಸಾಹಿತ್ಯ ವಿಶೇಷವಾಗಿ ಸಿ.ಆರ್.ಖೈರ್ಮೋಡೆಯವರ ಬರಹಗಳನ್ನು ಈ ಧಾರವಾಹಿ ಆಧರಿಸಿದೆ.
ಧಾರಾವಾಹಿಯ ಪಾತ್ರವರ್ಗದ ಬಗ್ಗೆ ಹೇಳುವುದಾದರೆ ಬಾಲಕ ಭೀಮರಾವ್ ಪಾತ್ರಧಾರಿಯಾಗಿ ಆಯುಧ್ ಬನ್ಸಾಲಿ ಅಭಿನಯಿಸಿದ್ದಾರೆ. ಬಾಲಕ ಭೀಮನ ತಾಯಿ ಭೀಮಬಾಯಿಯಾಗಿ ನೇಹ ಜೋಶಿ ನಟಿಸಿದ್ದಾರೆ. ಇನ್ನು ಭೀಮನ ತಂದೆ ರಾಮ್ ಜಿ ಸಕ್ಪಾಲ್ ಪಾತ್ರದಲ್ಲಿ ಜಗನ್ನಾಥ್ ನಿವಾಂಗನೆ, ಬಾಲಕ ಭೀಮನ ದೊಡ್ಡಣ್ಣನ ಪಾತ್ರದಲ್ಲಿ ಸವದ್ ಮನ್ಸೂರಿ, ಚಿಕ್ಕಣ್ಣನ ಪಾತ್ರದಲ್ಲಿ ಅತ್ತಾರ್ ಖಾನ್, ಅತ್ತೆಯ ಪಾತ್ರದಲ್ಲಿ ಖುಷ್ಬು ಕಮಾಲ್ ನಟಿಸಿದ್ದರೆ, ಸಹೋದರಿ ಯರ ಪಾತ್ರದಲ್ಲಿ ತುಳಸಿ ಮತ್ತು ವಂಶಿಕಾ ಯಾದವ್ ನಟಿಸಿದ್ದಾರೆ.
ಅಂದಹಾಗೆ ಅಂಬೇಡ್ಕರರ ಬಾಲ್ಯದ ಜೀವನದ ನಂತರ ಅಂದರೆ ಯುವಕ ಅಂಬೇಡ್ಕರ್ ಪಾತ್ರಧಾರಿಯಾಗಿ ಪ್ರಸಾದ್ ಜಾವಡೆ ಕಾಣಿಸಿಕೊಳ್ಳಲಿದ್ದಾರೆ. ಸಂತಸದ ವಿಷಯ ಹಿಂದಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ ಇದೀಗ ಕನ್ನಡಕ್ಕೆ ಡಬ್ ಆಗಿ ಕನ್ನಡಿಗರಿಗಾಗಿ ಜೀ ಕನ್ನಡದಲ್ಲಿ ಪ್ರಸಾರ ಮಾಡುತ್ತಿದೆ. ಅದರ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಈ ನಿಟ್ಟಿನಲ್ಲಿ ಅಕ್ಷರಶಃ ಅಭಿನಂದನಾರ್ಹರು.
ಹಾಗೆಯೇ ವಿಶೇಷವಾಗಿ ಈಗಾಗಲೇ ಭಾರಿ ಜನಪ್ರಿಯತೆ ಪಡೆದಿರುವ ಧಾರಾವಾಹಿಯ ಟೈಟಲ್ ಸಾಂಗ್ “ರಾಷ್ಟ್ರ ಸಂವಿಧಾನಕ್ಕೆ ನೀನೇ ಶಿಲ್ಪಿಯು... ” ಗೀತೆಯನ್ನು ಅಶ್ವಿನ್ ಶರ್ಮಾ ಹಾಡಿದ್ದರೆ, ಹರ್ಷಪ್ರಿಯ ಅದಕ್ಕೆ ಸಾಹಿತ್ಯ ಒದಗಿಸಿದ್ದಾರೆ. ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 6 ಕ್ಕೆ ಇದು ಪ್ರಸಾರವಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕನ್ನಡಿಗ ಮಹಾನಾಯಕನನ್ನು ನೋಡಲಿ ಬಾಬಾಸಾಹೇಬ್ ಅಂಬೇಡ್ಕರರನ್ನು ಕಣ್ತುಂಬಿಕೊಳ್ಳಲಿ ಎಂಬುದೇ ಕಳಕಳಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243