ದಿನದ ಸುದ್ದಿ

ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಮಹಿಳೆ

Published

on

  • ಸಿದ್ದರಾಜು, ಶಿಕ್ಷಕರು, ಹಿರಿಸಾವೆ

ಬಾಬಾ ಸಾಹೇಬ್ ಡಾಕ್ಟರ್ ಅಂಬೇಡ್ಕರ್ ಶತಮಾನದ ಮಹಾಚೇತನ. ಅನೀತಿ, ಅನ್ಯಾಯ, ಅಜ್ಞಾನ, ಮೂಢನಂಬಿಕೆ ಇವುಗಳ ವಿರುದ್ಧ ಹೋರಾಟ ನಡೆಸುವವರಿಗೆ ಪ್ರೇರಕ ಶಕ್ತಿಯಾಗಿದ್ದಾರೆ, ಸ್ಫೂರ್ತಿಯಾಗಿದ್ದಾರೆ.

ಸಾವಿರಾರು ವರ್ಷಗಳಿಂದ ಸಮಾಜದಲ್ಲಿ ಬೇರು ಬಿಟ್ಟಿದ್ದ, ಸಾಮಾಜಿಕ ಪಿಡುಗಿನ ವಿರುದ್ಧ ಜನರಲ್ಲಿ ಜಾಗೃತಿಯನ್ನು, ಕ್ರಾಂತಿಯ ಕಿಡಿಯನ್ನು ಹಾಗೂ ಆತ್ಮಾಭಿಮಾನವನ್ನು ಮೂಡಿಸಲು ತಮ್ಮ ಜೀವನವನ್ನೇ ಸವೆಸಿದ ಮಹಾ ಪುರುಷರಲ್ಲಿ ಅಂಬೇಡ್ಕರ್ ಅವರ ಹೆಸರು ಹಚ್ಚ ಹಸಿರಾಗಿ ಉಳಿದಿದೆ.

ಜಾತಿ-ಕುಲ, ಸ್ತ್ರೀ-ಪುರುಷ ಎಂಬ ಭೇದಭಾವವಿಲ್ಲದೆ ಭಾರತೀಯರೆಲ್ಲರಿಗೂ ಮೂಲಭೂತ ಹಕ್ಕುಗಳನ್ನು ಕೊಡಬೇಕು, ಮಹಿಳೆಯರಿಗೆ ತಂದೆಯ ಆಸ್ತಿಯಲ್ಲಿ ಸಮಪಾಲು ದೊರೆಯಬೇಕು ಎಂದು ಪ್ರಪ್ರಥಮವಾಗಿ ಘೋಷಿಸಿದ ಮೊಟ್ಟಮೊದಲ ಭಾರತದ ರಾಜಕೀಯ ನೇತಾರ ಡಾಕ್ಟರ್ ಬಿಆರ್ ಅಂಬೇಡ್ಕರ್. ಹೆಣ್ಣು ಮಕ್ಕಳಿಗೆ, ಗಂಡು ಮಕ್ಕಳಂತೆಯೇ ಆಸ್ತಿಯಲ್ಲಿ ಸಮಪಾಲು ನೀಡಬೇಕು. ಮಹಿಳೆಯರು ದೈಹಿಕವಾಗಿ ಮಾನಸಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕ ವಾಗಿ ಉದ್ಧಾರವಾಗಿ, ಸಮಾಜದಲ್ಲಿ ತಲೆ ಎತ್ತಿ ನಡೆಯುವಂತೆ ಮಾಡಬೇಕೆಂದು ಕನಸುಕಂಡವರಲ್ಲಿ ಬಾಬಾ ಸಾಹೇಬರು ಮೊದಲಿಗರು.

ಮಹಿಳೆಯರ ಉದ್ಧಾರಕ್ಕಾಗಿ ಹಲವಾರು ಅನುಚ್ಛೇದಗಳನ್ನು ಸೇರಿಸಿ ಸಂವಿಧಾನಬದ್ಧವಾಗಿ ಮಹಿಳೆಗೆ ಸಿಗಬೇಕಾದ ಮಾನ್ಯತೆ ಸಿಗುವಂತೆ ನೋಡಿಕೊಂಡರು. ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಲು ಒದ್ದಾಡುತ್ತಿರುವ ಇಂದಿನ ಸರ್ಕಾರಗಳು ಡಾಕ್ಟರ್ ಅಂಬೇಡ್ಕರಿಂದ ಪಾಠ ಕಲಿಯಬೇಕು.

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಕಾಣೆಯಾಗಿರುವುದನ್ನು ನೋಡಿದರೆ ನಮ್ಮ ಪುರುಷ ರಾಜಕಾರಣಿಗಳು ಈಗಲೂ ಮಹಿಳೆಯರನ್ನು ತಮ್ಮ ಸಮಾನಳೆಂದು ಒಪ್ಪಿಕೊಂಡಿಲ್ಲ. ಡಾಕ್ಟರ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸಾರಿದ್ದು ಈಗಲೂ ಮಹಿಳೆಯರಿಗೆ ಅರ್ಥವಾಗದೆ ಇರುವುದು ದುರಂತ.

ಮಹಿಳೆಯ ಮೂಲಭೂತ ಹಕ್ಕುಗಳನ್ನು ಹಾಗೂ ಸಮಾನ ಬದುಕನ್ನು ಕಾನೂನುಬದ್ಧವಾಗಿ ನೀಡಲು ಸರ್ವ ಪ್ರಯತ್ನ ಮಾಡಿದ ಮಾನವತಾವಾದಿ, ತಮ್ಮ ಜೀವನ ಪರ್ಯಂತ ಮಾನವ ಹಕ್ಕುಗಳಿಗಾಗಿ ಹೋರಾಟ ನಡೆಸಿದರು.

ಎಲ್ಲ ವರ್ಗಗಳಿಂದ ತುಳಿತಕ್ಕೊಳಗಾದ ಮಹಿಳೆಯರ ಉದ್ಧಾರದ ಬಗ್ಗೆ ಅವರು ಮುಕ್ತಮನಸ್ಸು ಹೊಂದಿದ್ದರು. ಅದಕ್ಕಾಗಿ ಶತಶತಮಾನಗಳಿಂದ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರನ್ನು ಸ್ವತಂತ್ರ ಸಹಜ ಬದುಕಿಗೆ ತರಲು, ಮಹಿಳೆ ಪುರುಷನಿಗಿಂತ ಕಡಿಮೆಯೇನೂ ಇಲ್ಲ ಪುರುಷರಷ್ಟೇ ಸಬಲರು, ಬುದ್ಧಿವಂತರು ಆಗಿದ್ದಾರೆ ಎಂದು ಸಾರಿದರು.

ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಹಲವಾರು ಅವಕಾಶಗಳನ್ನು ಕಲ್ಪಿಸಿ ಕೊಡುವುದಕ್ಕಾಗಿ ಹಗಲಿರುಳು ಶ್ರಮಿಸಿದರು. ಪ್ರಾಮಾಣಿಕ ಪ್ರಯತ್ನದಿಂದ ಭಾರತೀಯ ಮಹಿಳೆಗೆ ಸಂವಿಧಾನಬದ್ಧವಾಗಿ ಅನೇಕ ಅಧಿಕಾರಗಳನ್ನು ಅನುಚ್ಛೇದ ಗಳ ಮೂಲಕ ದೊಕಿಸಿಕೊಟ್ಟಿದ್ದಾರೆ.

ಅನುಚ್ಛೇದ 14: ಸ್ತ್ರೀ-ಪುರುಷ ಕುಲ ಜಾತಿ ಭೇದ ಭಾವ ಮಾಡದೆ ಭಾರತದಲ್ಲಿ ವಾಸಿಸುವ ಎಲ್ಲಾ ಪ್ರಜೆಗಳು ಕಾನೂನಿನ ಮುಂದೆ ಸಮಾನರು.

ಅನುಚ್ಛೇದ 15: ಜಾತಿ, ಮತ, ಲಿಂಗ ಮತ್ತು ಹುಟ್ಟಿನ ಆಧಾರದ ಮೇಲೆ ಯಾವುದೇ ರೀತಿಯ ತಾರತಮ್ಯ ಮಾಡತಕ್ಕದ್ದಲ್ಲ.

ಅನುಚ್ಛೇದ 39: ಸ್ತ್ರೀ ಪುರುಷರಿಗೆ ಸರಿಸಮಾನವಾಗಿ ಜೀವನವನ್ನು ಒದಗಿಸತಕ್ಕದ್ದು ಪುರುಷ ಸ್ತ್ರೀ ಸೇವೆಗೆ ಸಮಾನ ವೇತನ ನೀಡಬೇಕು.

ಅನುಚ್ಛೇದ 42: ಉದ್ಯೋಗಸ್ಥ ಮಹಿಳೆಯರಿಗೆ ಹೆರಿಗೆ ಸಂದರ್ಭದಲ್ಲಿ ವೇತನ ಸಹಿತ ರಜೆ ಹಾಗೂ ಇನ್ನಿತರ ಸೌಲಭ್ಯ ಒದಗಿಸುವುದು. ಸರ್ಕಾರದ ಕರ್ತವ್ಯವಾಗಿದೆ.

ಡಾಕ್ಟರ್ ಅಂಬೇಡ್ಕರ್ ಅಸ್ಪೃಷ್ಯತೆ ನಿವಾರಣೆಯಷ್ಟೆ ಮಹತ್ವವನ್ನು ಮಹಿಳೆಯರ ಅಭಿವೃದ್ಧಿಗಾಗಿಯೂ ಸಹ ಕೊಟ್ಟಿದ್ದರು.

ಅವರ ಸುಧಾರಣೆಯಲ್ಲಿ ಅವರು ಮಾಡಿದ ಮತ್ತೊಂದು ಸಾಧನೆಯೆಂದರೆ ಮಹಿಳಾಪರ ನಾಲ್ಕು ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸಿ ಅವು ಸ್ವೀಕೃತವಾಗಿದ್ದು, ಮಹಿಳಾ ಸ್ವಾತಂತ್ರಕ್ಕೆ ಸಂಬಂಧಪಟ್ಟ ಪ್ರಮುಖ ಕಾಯ್ದೆಗಳು
1: ಹಿಂದೂ ವಿವಾಹ ಕಾಯ್ದೆ 1955.

2:ಹಿಂದೂ ಉತ್ತರಾಧಿಕಾರ ಕಾನೂನು 1956. ಮತ್ತು ಈ ಕಾಯ್ದೆ ಪ್ರಕಾರ ದತ್ತುಸ್ವೀಕಾರ ಸಂಬಂಧದಲ್ಲಿ ಹೆಣ್ಣು ಮತ್ತು ಗಂಡಿನ ನಡುವೆ ಯಾವುದೇ ತಾರತಮ್ಯ ಇರುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ಈ ಮೊದಲು ಹೆಣ್ಣುಮಕ್ಕಳಿಗೆ ಅವಕಾಶ ಇರಲಿಲ್ಲ.

3:ಪೋಷಕತ್ವ ಕಾನೂನು 1956 ಇವರಿಗೆ ಸಲ್ಲುತ್ತದೆ.

4: 1956 ಹಿಂದೂ ದತ್ತಕ ಕಾಯ್ದೆ ಗಂಡುಮಗನಷ್ಟೆ ಹೆಣ್ಣು ಮಗುವನ್ನು ದತ್ತು ಸ್ವೀಕರಿಸುವ ಆಕಾಶವನ್ನು ನೀಡಲಾಯಿತು. ಅಲ್ಲದೆ ಗಂಡ-ಹೆಂಡತಿಯರಿಬ್ಬರೂ ದತ್ತು ಸ್ವೀಕರಿಸುವ ಸಂಬಂಧದಲ್ಲಿ ಪರಸ್ಪರ ಒಪ್ಪಿಕೊಳ್ಳಬೇಕು.

ಹೀಗೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಹಾಗೂ ಕಾನೂನುಬದ್ಧವಾಗಿ ಮಹಿಳೆಯರಿಗೆ ಸಮಾನತೆ ಹಾಗೂ ಸ್ವಾತಂತ್ರ್ಯವನ್ನು ನೀಡುವುದರ ಮೂಲಕ ಶತಶತಮಾನಗಳಿಂದ ಶೋಷಣೆಗೊಳಗಾಗುತ್ತಾ ಬಂದಿದ್ದ ಮಹಿಳೆಯರಿಗೆ ಹೊಸ ಜೀವನ ನೀಡಿದರು. ಹೊಸ ಸ್ಪೂರ್ತಿ ತುಂಬಿದರು

ಮಾನ್ಯ ಅಂಬೇಡ್ಕರ್ ರವರ ಪರಿಶ್ರಮದಿಂದ ಭಾರತೀಯ ಮಹಿಳೆ ಸಂವಿಧಾನದ ಅವಕಾಶಗಳು ಹಕ್ಕುಗಳು ದೊರೆತಿರುವುದರಿಂದ ಮಹಿಳೆ ಇಷ್ಟೊಂದು ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಅಮೇರಿಕಾದ ನ್ಯೂಯಾರ್ಕ್ ನ ಕೊಲಂಬಿಯಾ ವಿಶ್ವವಿದ್ಯಾಲಯವು ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರಿಗೆ ಡಾಕ್ಟರೇಟ್ 1952ರಲ್ಲಿ ನೀಡಿ ಗೌರವಿಸಿದೆ.

ಸಮಾಜ ಸುಧಾರಕರು, ಮಾನವೀಯ ಹಕ್ಕುಗಳ ದಿಟ್ಟ ಪ್ರತಿಪಾದಕರು ಅವರು ದೇಶಕ್ಕೆ ಅತ್ಯುತ್ತಮ ಸಂವಿಧಾನವನ್ನು ನೀಡಿದ್ದಾರೆ, ಅಲ್ಲದೆ ತನ್ಮೂಲಕ ರಾಷ್ಟ್ರದ ಅಖಂಡತೆಯನ್ನು ಎತ್ತಿ ಹಿಡಿದು ಮಹಿಳೆಯನ್ನು ಸಮಾನ ಸ್ಥಾನದಲ್ಲಿ ಪ್ರತಿಷ್ಠಾಪಿಸುವ ಮೂಲಕ ಈ ನೆಲಕ್ಕೆ ಅಪೂರ್ವ ಸಮಾನತೆಯ ಹರಿಕಾರರಾಗಿ ನಿಂತಿದ್ದಾರೆ.

ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ 131ನೇ ಹುಟ್ಟುಹಬ್ಬದ ಶುಭಾಶಯಗಳನ್ನು ಹೃದಯತುಂಬಿ ಇಡೀ ಪ್ರಪಂಚದಾದ್ಯಂತ ಕೋರಲಾಗುತ್ತಿದೆ.

ಜೈ ಭೀಮ್ ಜೈ ಭಾರತ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version