ದಿನದ ಸುದ್ದಿ
ಯಾರ ವಿರುದ್ಧ ದನಿ ಎತ್ತಬೇಕು ಸಂಸದರೇ..?
- ನಾ ದಿವಾಕರ
ಮುಂಬಯಿಯಲ್ಲಿರುವ ಡಾ ಬಿ ಆರ್ ಅಂಬೇಡ್ಕರ್ ಅವರ ರಾಜಗೃಹದ ಮೇಲೆ ಇತ್ತೀಚೆಗೆ ನಡೆದ ಆಕ್ರಮಣ ಬದಲಾಗುತ್ತಿರುವ ಭಾರತದ ಸೂಚನೆಯನ್ನು ನೀಡುತ್ತಿದೆ. ಈ ಕುರಿತು ಸ್ವಲ್ಪ ತಡವಾದರೂ ಮೌನ ಮುರಿದಿರುವ ದಲಿತ ಪ್ರತಿನಿಧಿಗಳು ತಮ್ಮ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಸಂಸದರಾದ ಸನ್ಮಾನ್ಯ ಶ್ರೀನಿವಾಸ ಪ್ರಸಾದ್ ಅವರು ಈ ದಾಳಿಯನ್ನು ಖಂಡಿಸಿದ್ದು “ ಅಂಬೇಡ್ಕರ್ ಮನೆ ಮೇಲೆ ಕಲ್ಲು ತೂರಿ ವಿಧ್ವಂಸಕ ಕೃತ್ಯ ಎಸಗಿರುವ ವಿಚಾರದಲ್ಲಿ ದಲಿತೇತರ ರಾಜಕಾರಣಿಗಳು ಮತ್ತು ಸಂಘ ಸಂಸ್ಥೆಗಳು ದನಿ ಎತ್ತದಿರುವುದು ಶೋಚನೀಯ ” (ಪ್ರವಾ 14-7-20) ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ದಲಿತರ ಮೇಲೆ ಯಾವುದೇ ರೀತಿಯ ದಾಳಿ ನಡೆದಾಗಲೂ ಈ ವಿಷಾದ ಇದ್ದೇ ಇರುತ್ತದೆ.
ಊನ, ಖೈರ್ಲಾಂಜಿ, ಕಂಬಾಲಪಲ್ಲಿ ನಡೆದಾಗಲೇ ಎಷ್ಟೋ ದಲಿತೇತರ ಸಂಘಟನೆಗಳು ಮೌನಕ್ಕೆ ಶರಣಾಗಿದ್ದವು. ಇಲ್ಲಿ ಯಾರು ಪ್ರತಿಭಟಿಸಬೇಕು ಎನ್ನುವುದಕ್ಕಿಂತಲೂ ಯಾವ ಶಕ್ತಿಗಳ ವಿರುದ್ಧ ದನಿ ಎತ್ತಬೇಕು ಎನ್ನುವುದು ಮುಖ್ಯವಾಗುತ್ತದೆ.
ಇದೇ ಪತ್ರಿಕಾಗೋಷ್ಠಿಯಲ್ಲಿ ಮಾನ್ಯ ಶ್ರೀನಿವಾಸ್ ಪ್ರಸಾದ್ ಅವರು ಈ ಕೃತ್ಯದ ಹಿಂದೆ ಕೆಲವು “ಕಿಡಿಗೇಡಿಗಳನ್ನು” ಗುರುತಿಸಿದ್ದಾರೆ. ಹಾಗಾಗಿ ದಲಿತ ಸಂಘಟನೆಗಳು ಪುರಾವೆ ಇಲ್ಲದೆ ಯಾರ ಮೇಲೂ ಆರೋಪ ಮಾಡಕೂಡದು, ರಾಜಕೀಯ ಬೆರೆಸಬಾರದು ಎಂದೂ ಹೇಳಿದ್ದಾರೆ. ಇದು ಸರಿಯೇ. ಈ ದೇಶದಲ್ಲಿ ಶಂಕಿತರನ್ನು ಗುರುತಿಸಲೂ ಅಸ್ಮಿತೆಗಳು ಮುಖ್ಯವಾಗುತ್ತವೆ.
ರಾಜಗೃಹದ ಮೇಲೆ ನಡೆದ ದಾಳಿಯಲ್ಲಿ ಅಲ್ಪಸಂಖ್ಯಾತರು ಯಾರಾದರೂ ಇದ್ದಿದ್ದರೆ “ ಪುರಾವೆ ಇಲ್ಲದೆ ಆರೋಪ ಮಾಡಕೂಡದು” ಎನ್ನುವ ಉಪದೇಶ ಬರುತ್ತಿರಲಿಲ್ಲ. ಶಂಕಿತರು, ಉಗ್ರರು, ಕಿಡಿಗೇಡಿಗಳು, ದುಷ್ಕರ್ಮಿಗಳು, ಮಾನಸಿಕ ಅಸ್ವಸ್ಥರು, ತಿಳಿಗೇಡಿಗಳು ಈ ಎಲ್ಲ ಪದಗಳೂ ಸಾಪೇಕ್ಷ ನೆಲೆಯಲ್ಲಿ ರಾಜಕೀಯ ಅನುಕೂಲತೆಗೆ ತಕ್ಕಂತೆ ಬಳಕೆಯಾಗುತ್ತಿರುವುದನ್ನು ದಶಕಗಳಿಂದ ಗಮನಿಸುತ್ತಲೇ ಬಂದಿದ್ದೇವೆ.
ಇರಲಿ, ರಾಜಗೃಹದ ಮೇಲೆ ದಾಳಿ ನಡೆಸಿದವರು ಯಾರು ಎನ್ನುವುದು ವ್ಯಕ್ತಿಗತ ಪ್ರಶ್ನೆ. ಅಪರಾಧಿಗಳಿಗೆ ಶಿಕ್ಷೆಯಾಗುವುದೋ ಇಲ್ಲವೋ ಕಾದು ನೋಡೋಣ. ಆದರೆ ರಾಜಗೃಹದ ಘಟನೆ ಏಕಾಏಕಿ ನಡೆದ ವಿಕ್ಷಿಪ್ತ ಘಟನೆ ಅಲ್ಲ ಎನ್ನುವುದು ಸಂಸದರ ಗಮನಕ್ಕೆ ಬರಬೇಕಿತ್ತಲ್ಲವೇ ? ದಲಿತೇತರ ರಾಜಕಾರಣಿಗಳು, ಸಂಘಟನೆಗಳು ಈ ಘಟನೆಯನ್ನು ಖಂಡಿಸಿಲ್ಲ , ನಿಜ.
ಇದೇನೂ ಅಚ್ಚರಿಯ ವಿಚಾರ ಅಲ್ಲ. ರಾಜಗೃಹ ಬಾಬ್ರಿ ಮಸೀದಿಯಂತೆ, ರಾಮಮಂದಿರಂತೆ ಮತಗಳಿಕೆಯ ಸ್ಥಾವರ ಅಲ್ಲ. ಅದು ದಲಿತ ಸಮುದಾಯದ ಅಸ್ಮಿತೆಯನ್ನು ಬಿಂಬಿಸುವ ಸ್ಥಾವರ. ಈ ಅಸ್ಮಿತೆಯ ಮೇಲೆ ದಾಳಿ ನಡೆದಾಗ ದಲಿತ ರಾಜಕಾರಣಿಗಳಾದರೂ ಎಲ್ಲಿದ್ದಾರೆ ? ಕರ್ನಾಟಕದ ದಲಿತ ಸಂಸದರ ಮತ್ತು ಶಾಸಕರ ಒಕ್ಕೊರಲ ದನಿ ಏಕೆ ಕೇಳಿಸಿಯೇ ಇಲ್ಲ.
ಈ ದಾಳಿ ಏಕೆ ನಡೆದಿದೆ, ಅಂಬೇಡ್ಕರ್, ಪೆರಿಯಾರ್ ಮೇಲೆ ಈ ರೀತಿಯ ದಾಳಿ ಏಕೆ ನಡೆಯುತ್ತಿದೆ ಎನ್ನುವುದು ನುರಿತ ರಾಜಕಾರಣಿಯಾದ ಮಾನ್ಯ ಶ್ರೀನಿವಾಸಪ್ರಸಾದ್ ಅವರಿಗೆ ತಿಳಿದಿರಬೇಕಲ್ಲವೇ ? ಈ ದೇಶದ ಮತೀಯ ಮೂಲಭೂತವಾದಿಗಳಿಗೆ ಪ್ರೇರಣೆ ನೀಡುವ ಒಂದು ಸಿದ್ಧಾಂತ ಮತ್ತು ತತ್ವವನ್ನು ಅಪ್ಪಿಕೊಂಡು, ಈ ಮತೀಯ ಶಕ್ತಿಗಳು ನಿರಂತರವಾಗಿ ಭಾರತದ ಶೋಷಿತ, ದಮನಿತ ಜನಸಮುದಾಯಗಳ ಮೇಲೆ ನಡೆಸುತ್ತಿರುವ ದಾಳಿಯನ್ನು “ಕಿಡಿಗೇಡಿಗಳ” ಕೃತ್ಯ ಎಂದು ಬಣ್ಣಿಸುವುದರ ಔಚಿತ್ಯವನ್ನು ಪ್ರಶ್ನಿಸಲೇಬೇಕಾಗುತ್ತದೆ.
ರಾಜಗೃಹದ ಮೇಲಿನ ದಾಳಿಗೂ, ತಮಿಳುನಾಡಿನಲ್ಲಿ ಪೆರಿಯಾರ್ ಅಂಬೇಡ್ಕರ್ ಗ್ರಂಥಾಲಯದ ಮೇಲೆ ನಡೆದ ದಾಳಿಗೂ, ಹಲವೆಡೆ ಅಂಬೇಡ್ಕರ್ ಪ್ರತಿಮೆಗಳ ಮೇಲೆ ನಡೆಯುತ್ತಿರುವ ದಾಳಿಗೂ ಮತ್ತು ಅಂಬೇಡ್ಕರ್ ಅವರ ಸಾಂವಿಧಾನಿಕ ಮೌಲ್ಯಗಳ ವಿರುದ್ಧ ಆಡಳಿತ ನೀತಿಗಳನ್ನು ಜಾರಿಗೊಳಿಸುತ್ತಿರುವುದಕ್ಕೂ ಪರಸ್ಪರ ಸಂಬಂಧ ಇರುವುದನ್ನು ಮಾನ್ಯ ಶ್ರೀನಿವಾಸ ಪ್ರಸಾದ್ ಅವರಿಗೆ ತಿಳಿಸಿ ಹೇಳಬೇಕಿಲ್ಲ. ಅಲ್ಲವೇ ?
ತಮ್ಮ ಅಂತರಂಗದ ಅವ್ಯಕ್ತ ಭಾವನೆಯನ್ನು ರಾಜಕೀಯ ಅನಿವಾರ್ಯಗಳಿಂದ ಅದುಮಿಟ್ಟು ಮಾತನಾಡುವುದು ಹಿರಿಯ ನಾಯಕರಿಗೆ ಶೋಭೆ ತರುವಂತಹುದಲ್ಲ . ಅಂಬೇಡ್ಕರ್ ಆರಾಧನೆಗೊಳಗಾದಷ್ಟೇ ದಾಳಿಗೂ ಒಳಗಾಗುತ್ತಿರುವುದನ್ನು ಕಳೆದ ಹಲವು ದಶಕಗಳಿಂದ ನೋಡುತ್ತಲೇ ಇದ್ದೇವೆ.
ಪ್ರತಿಯೊಬ್ಬ ದಲಿತ ವ್ಯಕ್ತಿಯ ಮೇಲೆ ನಡೆಯುವ ದೌರ್ಜನ್ಯ, ಅತ್ಯಾಚಾರ, ಹಲ್ಲೆ, ಆಕ್ರಮಣವೂ ಸಹ ಅಂಬೇಡ್ಕರ್ ಪ್ರತಿಪಾದಿಸಿದ ದಲಿತ ಅಸ್ಮಿತೆಯ ಮೇಲಿನ ದಾಳಿಯೇ ಅಲ್ಲವೇ ? ಇಂತಹ ಅಮಾನುಷ ದಾಳಿಗಳಿಗೆ ದಲಿತ ರಾಜಕಾರಣಿಗಳು ಹೇಗೆ ಸ್ಪಂದಿಸಿದ್ದಾರೆ ? ಇತ್ತೀಚಿನ ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ ನಿರಾಸೆ ಮೂಡುತ್ತದೆ. ಅಧಿಕಾರ ರಾಜಕಾರಣ ಮತ್ತು ರಾಜಕೀಯ ಅವಕಾಶವಾದ, ಅಸ್ಮಿತೆಗಳನ್ನು ನುಂಗಿ ವ್ಯಕ್ತಿಗತ ಅಸ್ತಿತ್ವವನ್ನು ಕಾಪಾಡಿಕೊಳ್ಳುವ ನೆಲೆಗಳಾಗಿ ರೂಪುಗೊಂಡು ದಶಕಗಳೇ ಕಳೆದಿವೆ.
ಈ ರಾಜಕಾರಣದ ರಾಡಿಯಲ್ಲಿ ನಿಂತು ವಾಸ್ತವಕ್ಕೆ ಬೆನ್ನು ತಿರುಗಿಸಿ ಅನುಕಂಪದ ಮಾತುಗಳನ್ನಾಡುವುದು ಬೇಕಿಲ್ಲ. ಅಂಬೇಡ್ಕರ್ ಅವರಿಗಾಗಲೀ, ದಲಿತ ಸಮುದಾಯಗಳಿಗಾಗಲೀ ಅನುಕಂಪ, ಮರುಕ ಅಗತ್ಯವಿಲ್ಲ. ಇದು ಶತಮಾನಗಳಿಂದಲೂ ವ್ಯಕ್ತವಾಗುತ್ತಲೇ ಇದೆ. ಈಗ ಬೇಕಿರುವುದು ಸಾಮಾಜಿಕ ಘನತೆ.
ಅಂಬೇಡ್ಕರ್ ಅವರನ್ನು ಪ್ರತಿನಿಧಿಸುವ ಸ್ಥಾವರಗಳ ಮೇಲಿನ ದಾಳಿಗಳು ಈ ಘನತೆಯನ್ನು ಪ್ರಶ್ನಿಸುವ ಒಂದು ವಿಧಾನ ಎನ್ನುವುದನ್ನು ಹೇಳಬೇಕಿಲ್ಲ. ಇದು ಅಸ್ಮಿತೆಯ ಪ್ರಶ್ನೆ. ಅಸ್ತಿತ್ವದ ಪ್ರಶ್ನೆ. ದಲಿತ ಅಸ್ಮಿತೆಯನ್ನು ನುಂಗಿಹಾಕಿ ತನ್ನದೇ ಆದ ಸಾಮ್ರಾಜ್ಯವನ್ನು ನಿರ್ಮಿಸಲು ಸಜ್ಜಾಗುತ್ತಿರುವ ಮತೀಯ ಶಕ್ತಿಗಳ ಮಡಿಲಲ್ಲಿ ಕುಳಿತು ನ್ಯಾಯ ಕೇಳುವುದು, ತೋಳದ ಬೆನ್ನ ಮೇಲೇರಿ ಸಿಂಹದ ಬಳಿ ನ್ಯಾಯ ಕೇಳಿದಂತಾಗುವುದಿಲ್ಲವೇ ? ಸಂಸದರೇ ಯೋಚಿಸಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243