ದಿನದ ಸುದ್ದಿ
ಅಂಬೇಡ್ಕರ್ ಸ್ಮರಣೆಯಿಂದ ದೇಶ ಪ್ರಗತಿಪರವಾಗಲು ಸಾಧ್ಯ : ಸಹಾಯಕ ಪ್ರಾಧ್ಯಾಪಕ ಷಣ್ಮುಖಪ್ಪ ಕೆ.ಎಚ್
ಸುದ್ದಿದಿನ,ಚನ್ನಗಿರಿ:ಶತಶತಮಾನದಿಂದಲೂ ಭಾರತ ದೇಶದಲ್ಲಿರುವ ಜಾತಿ ವ್ಯವಸ್ಥೆಯನ್ನ ಮೀರಿ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಹೊಂದಲು ಡಾ.ಬಿ.ಆರ್.ಅಂಬೇಡ್ಕರ್ ಅವರ ಶ್ರಮ ಹಾಗೂ ಹೋರಾಟವನ್ನು ನಾವುಗಳು ಸ್ಮರಿಸಿಕೊಳ್ಳಬೇಕಾಗಿದೆ ಎಂದು ಸಹಾಯಕ ಪ್ರಾಧ್ಯಾಪಕ ಷಣ್ಮುಖಪ್ಪ ಕೆ.ಎಚ್ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ (ಏ.14ರಂದು) ಭಾರತದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 134 ನೇ ದಿನಾಚರಣೆಯಲ್ಲಿ ಅವರು ಉಪನ್ಯಾಸ ನೀಡಿದರು.
ಈಗಲೂ ಜಾರಿಯಲ್ಲಿರುವ ಅಸ್ಪೃಶ್ಯತೆ ಮತ್ತು ಜಾತಿ ವ್ಯವಸ್ಥೆಯಿಂದ ನಡೆಯುತ್ತಿರುವ ಅಮಾನವೀಯವಾದ ಕೃತ್ಯಗಳು ಹಾಗೂ ದೇಶದಲ್ಲಿ ಅನುಸೂಚಿತ ಜಾತಿಗಳು, ಬುಡಕಟ್ಟುಗಳು, ಆದಿವಾಸಿಗಳು ಎದುರಿಸುತ್ತಿರುವ ಸವಾಲುಗಳು, ಹಿಂದುಳಿದ ವರ್ಗದ ಜನರ ಸಾಮಾಜಿಕ, ಆರ್ಥಿಕವಾಗಿ ಹಿಂದುಳಿರುವಿಕೆಯ ಬಗ್ಗೆ ಚರ್ಚೆ ಆಗಬೇಕಾಗಿದೆ ಎಂದರು.
ಭಾರತ ದೇಶ ಸ್ವಾತಂತ್ರ್ಯಗೊಂಡು 76 ವರ್ಷಗಳು ಕಳೆದರೂ ಗ್ರಾಮೀಣ ಹಾಗೂ ನಗರ ಪ್ರದೇಶದ ಕೊಳಗೇರಿಗಳಲ್ಲಿ ಇಂದಿಗೂ ಕೂಡ ಶೈಕ್ಷಣಿಕ ಅಭಿವೃದ್ಧಿ ಸಾಧಿಸಲು ಆಗದೇ ಇರುವುದು ಒಂದು ವಿಪರ್ಯಾಸವೇ ಸರಿ. ಈ ಕಾರಣದಿಂದಲೇ ಇಂದಿಗೂ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಸಂಪೂರ್ಣವಾಗಿ ಸಾಧಿಸಲು ಸಾಧ್ಯವಾಗಿಲ್ಲ. ದೇಶದಲ್ಲಿನ ಎಲ್ಲಾ ಸರ್ಕಾರಗಳು ಈ ನಿಟ್ಟಿನಲ್ಲಿ ತಾವು ರೂಪಿಸುವ ಯೋಜನೆಗಳು ಮತ್ತು ಕಾರ್ಯಕ್ರಮಗಳು ಅನುಷ್ಠಾನಗೊಳಿಸಿದಾಗ ಮಾತ್ರ ಅಂಬೇಡ್ಕರ್ ಅವರ ಆಶಯವನ್ನು ಈಡೇರಿಸಿದಂತಾಗುತ್ತದೆ ಹಾಗೂ ಪ್ರಗತಿಪರ ದೇಶವಾಗುತ್ತದೆ ಎಂದು ನುಡಿದರು.
ಪ್ರಾಂಶುಪಾಲರಾದ ಅಮೃತೇಶ್ವರ್ ಬಿಜಿ ಅವರು
ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಹಾಯಕ ಪ್ರಾಧ್ಯಾಪಕ ಪ್ರಸನ್ನ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹಾಯಕ ಪ್ರಾಧ್ಯಾಪಕ ದೇವರಾಜು ಸ್ವಾಗತಿಸಿದರು. ವಿದ್ಯಾರ್ಥಿ ಸಂಜಯ್ ಟಿಪಿ ಆಶಯ ಗೀತೆ ಹಾಡಿದರು. ಪವನ್ ಕುಮಾರ್ ನಿರೂಪಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243