ಬಹಿರಂಗ
ಬಾಲಕ ಅಂಬೇಡ್ಕರರ ಭವಿಷ್ಯ ಬದಲಿಸಿದ ಆ ಒಂದು ಬೆಳವಣಿಗೆ
- ರಘೋತ್ತಮ ಹೊ.ಬ
ಕೆಲವೊಮ್ಮೆ ನಮ್ಮ ಜೀವನಗಳಲ್ಲಿ ನಮಗರಿವಿಲ್ಲದಂತೆ ಕೆಲವು ಬೆಳವಣಿಗೆಗಳು ನಡೆದು ಬಿಡುತ್ತವೆ. ಆ ಕ್ಷಣಗಳಲ್ಲಿ ಅಂತಹ ಬೆಳವಣಿಗೆಗಳು ನಮಗೆ ತೀವ್ರ ನಷ್ಟ ಮತ್ತು ನೋವನ್ನು ಕೂಡ ಉಂಟುಮಾಡಬಹುದು. ಆದರೆ… ಮತ್ತೊಂದು ರೀತಿಯಲ್ಲಿ ನಮಗೆ ಅವು ಭಾರೀ ಅನುಕೂಲ ಅಥವಾ ಒಳ್ಳೆಯ ಬೆಳವಣಿಗೆಗೂ ಕಾರಣವಾಗಿಬಿಡಬಹುದು!
ಹೌದು, ಬಾಬಾಸಾಹೇಬ್ ಅಂಬೇಡ್ಕರರ ಬದುಕಿನಲ್ಲೂ ಅಂತಹದ್ದೆ ಒಂದು ಬೆಳವಣಿಗೆ ನಡೆದಿದೆ. ಅದು ಅವರು ಜನಿಸಿದ ಸಂದರ್ಭದಲ್ಲಿ. ಅಂದರೆ 1892ರಲ್ಲಿ ಬ್ರಿಟಿಷರು ಅದುವರೆಗೆ ತಮ್ಮ ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹಾರ್ ಸಮುದಾಯವನ್ನು ಇದ್ದಕ್ಕಿದ್ದ ಹಾಗೆ ಸೇನೆಗೆ ಸೇರಿಸಿಕೊಳ್ಳುವುದನ್ನು ನಿಲ್ಲಿಸಿತು.
ಸ್ವತಃ ಬಾಲಕ ಅಂಬೇಡ್ಕರರ ತಂದೆ ರಾಮ್ ಜಿ ಸಕ್ಪಾಲ್ ರು ಕೂಡ ಸೇನೆಯಲ್ಲಿ ಸುಬೇದಾರ್ ಆಗಿ ನಿವೃತ್ತರಾಗಿದ್ದರು. ಸೇನಾ ಶಾಲೆಯಲ್ಲಿ ರಾಮ್ ಜಿ ಸಕ್ಪಾಲ್ ರು ಶಿಕ್ಷಕರಾಗಿಯೂ ಕಾರ್ಯನಿರ್ವಹಿಸಿದ್ದರು. ಆದರೆ ಹೀಗೆ ಇದ್ದಕ್ಕಿದ್ದ ಹಾಗೆ ಬ್ರಿಟಿಷರು ಮಹಾರ್ ಸಮುದಾಯದವರನ್ನು ಸೇನೆಗೆ ಸೇರಿಸಿಕೊಳ್ಳುವುದನ್ನು ನಿಲ್ಲಿಸಿದ್ದರಿಂದ ಸಮುದಾಯ ಭಾರಿ ತೊಂದರೆಗೆ ಸಿಲುಕಿತು. ಉದ್ಯೋಗಕ್ಕಾಗಿ ಮಹಾರ್ ಸಮುದಾಯ ಪರದಾಡುವಂತಾಯಿತು.
ಆದರೆ ಅವರಿಗೆ ಆ ಕ್ಷಣಕ್ಕೆ ಆದ ನಷ್ಟ ಇಡೀ ಜಗತ್ತಿಗೆ ಒಂದು ದೊಡ್ಡ ಲಾಭ ತಂದುಕೊಟ್ಟಿತ್ತು! ಅದೇನೆಂದರೆ ಮಹಾರ್ ಸಮುದಾಯ ಹೀಗೆ ಮಿಲಿಟರಿ ಸೇವೆಯಲ್ಲೇ ಮುಂದುವರಿದಿದ್ದರೆ ಸುಬೇದಾರ್ ರಾಮ್ ಜಿ ಸಕ್ಪಾಲರು ತಮ್ಮ ಪುತ್ರರನ್ನು ಕೂಡ ಬ್ರಿಟಿಷ್ ಸೇನೆಗೆ ಸೇರಿಸುವ ಸಾಧ್ಯತೆ ಇರುತ್ತಿತ್ತು.
ಇದನ್ನು ಉಲ್ಲೇಖಿಸುತ್ತಾ ಬಾಬಾಸಾಹೇಬ್ ಅಂಬೇಡ್ಕರರ ಜೀವನ ಚರಿತ್ರಕಾರರು 1892 ರಲ್ಲಿ ಬ್ರಿಟಿಷರು ಮಹಾರರನ್ನು ಸೇನೆಗೆ ಸೇರಿಸಿಕೊಳ್ಳುವುದನ್ನು ನಿಲ್ಲಿಸಿದ್ದರಿಂದ ಪರಿಸ್ಥಿತಿ ಬದಲಾಗಿ ಮಹೌ (MHOW-Military Head Quarters Of War) ಅನ್ನು ತೊರೆದ ರಾಮ್ ಜಿ ಸಕ್ಪಾಲರ ಕುಟುಂಬ ಸ್ವಂತ ಜಿಲ್ಲೆ ರತ್ನಗಿರಿ, ನಂತರ ಸತಾರ, ತದನಂತರ ಮುಂಬಯಿ ಹೀಗೆ ತೆರಳುವಂತಾಯಿತು. ಆ ಮೂಲಕ ಬಾಬಾಸಾಹೇಬ್ ಅಂಬೇಡ್ಕರರು ಶಿಕ್ಷಣದ ಮೇರುಶಿಖರವೇರುಂತಾಯಿತು ಎನ್ನುತ್ತಾರೆ. (Vol.10, Pp.4).
ಅಂದಹಾಗೆ ಮುಂದೊಂದು ದಿನ ಬಾಬಾಸಾಹೇಬ್ ಅಂಬೇಡ್ಕರರು ಬ್ರಿಟಿಷರಿಗೆ “ಬ್ರಿಟಿಷರು ತನ್ನ ಜನರಿಗೆ ಮಿಲಿಟರಿ ಪ್ರವೇಶ ನಿರಾಕರಿಸಿದ್ದರ ಬಗ್ಗೆ” ಖಾರವಾಗಿ ಪತ್ರ ಬರೆಯುತ್ತಾರೆ. ಆದರೆ ಕಾಕತಾಳೀಯವೆಂದರೆ ಆ ಸಂದರ್ಭದಲ್ಲಿ ಮಹಾರ್ ಸಮುದಾಯಕ್ಕೆ ಆದ ನಷ್ಟ ಇಡೀ ಜಗತ್ತಿಗೆ ಅಂಬೇಡ್ಕರರ ರೂಪದಲ್ಲಿ ಶಿಕ್ಷಣದ ಜ್ಞಾನದ ಒಂದು ಬೃಹತ್ ಲಾಭ ತಂದುಕೊಟ್ಟಿತು ಎಂಬುದು ಖಂಡಿತ ಸುಳ್ಳಲ್ಲ!
ಸುದ್ದಿದಿನ.ಕಾಂ|ವಾಟ್ಸಾಪ್|9980346243